ಶುಂಠಿ ಗದ್ದೆಯಾಗಿ ಮಾರ್ಪಟ್ಟ ಅಡಿಕೆ ತೋಟ

7

ಶುಂಠಿ ಗದ್ದೆಯಾಗಿ ಮಾರ್ಪಟ್ಟ ಅಡಿಕೆ ತೋಟ

Published:
Updated:
ಶುಂಠಿ ಗದ್ದೆಯಾಗಿ ಮಾರ್ಪಟ್ಟ ಅಡಿಕೆ ತೋಟ

ಶಿರಸಿ: ನೀರಿನ ಅಭಾವದಿಂದ ಅಡಿಕೆ ಮರಗಳು ಒಣಗಿ ನಾಶವಾಗು ತ್ತಿರುವುದನ್ನು ನೋಡಲಾರದೇ ರೈತರೊಬ್ಬರು ಒಂದು ಎಕರೆ ತೋಟವನ್ನು ಕಡಿದು, ಪರ್ಯಾಯ ಬೆಳೆಯೆಡೆಗೆ ಮುಖ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಚನ್ನಯ್ಯನ ಹಟ್ಟಿಯಲ್ಲಿ ನೀರಿಲ್ಲದೇ ಒಣಗಿದ ಅಡಿಕೆ ತೋಟ ಕಡಿದು, ಮರಗಳಿಗೆ ಬೆಂಕಿ ಹಾಕಿದ ಪ್ರಕರಣ ಮಾಸುವ ಮುನ್ನವೇ ಮಲೆನಾಡಿನ ಗಡಿಯಲ್ಲಿರುವ ಬನವಾಸಿ ಹೋಬಳಿ ಯಲ್ಲಿ ಇಂಥದೇ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ತಾಲ್ಲೂಕಿನ ಗುಡ್ನಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಧುರವಳ್ಳಿಯ ರೈತ ಯೋಗೀಂದ್ರ ನಾಯ್ಕ ಏಳು ವರ್ಷಗಳ ಹಿಂದೆ ಒಂದೂವರೆ ಎಕರೆ ಭೂಮಿಯಲ್ಲಿ ಅಡಿಕೆ ಸಸಿ ನಾಟಿ ಮಾಡಿದ್ದರು. ಫಲ ಬಿಡುವ ಹಂತಕ್ಕೆ ಬಂದಿದ್ದ ಅಡಿಕೆ ಮರಗಳು ಈ ಬಾರಿಯ ಬರಗಾಲಕ್ಕೆ ಸಿಲುಕಿ ಒಣಗಿವೆ. ಇದನ್ನು ನೋಡಲಾಗದೇ ಸಂಕಟಪಟ್ಟ ರವೀಂದ್ರ ನಾಯ್ಕ ಹಾಗೂ ನಾಗೇಂದ್ರ ನಾಯ್ಕ ಸಹೋದರರು ಅಡಿಕೆ ಮರಗಳನ್ನು ಕಡಿದು ನಾಶಪಡಿಸಿದ್ದಾರೆ.

‘ಎರಡು ವರ್ಷಗಳ ನಿರಂತರ ಬರಗಾಲ ನಮ್ಮ ಬದುಕನ್ನು ಕಸಿದುಕೊಂಡಿದೆ. ಜಮೀನಿನಲ್ಲಿದ್ದ ತೆರೆದ ಬಾವಿ ಸಂಪೂರ್ಣ ಒಣಗಿತ್ತು. ಹೀಗಾಗಿ ಎರಡು ಕೊಳವೆ ಬಾವಿ ತೆಗೆಸಿದೆವು. ಎರಡನೇ ಕೊಳವೆ ಬಾವಿಯಲ್ಲಿ ನೀರು ಸಿಕ್ಕಿದ್ದರಿಂದ, ಹೊಸ ಪಂಪ್‌ಸೆಟ್ ತಂದು ಹಾಕಿದೆವು. ಸ್ವಲ್ಪ ದಿನಗಳಲ್ಲಿ ನೀರು ಬತ್ತಿಹೋಯಿತು.

ಮತ್ತೊಂದು ಕೊಳವೆ ಬಾವಿ ತೆಗೆಸಿದರೆ ಅದರಲ್ಲಿಯೂ ನೀರು ಸಿಗಲಿಲ್ಲ. ನೀರಿಗಾಗಿ ₹1.60 ಲಕ್ಷ ಹಣ ತೆತ್ತರೂ ಪ್ರಯೋಜನವಾಗಿಲ್ಲ. ನೀರಿಲ್ಲದೇ ಅಡಿಕೆ ಮರಗಳು ಸತ್ತು ಹೋದವು. ಅವುಗಳ ಸ್ಥಿತಿ ನೋಡಲಾಗದೇ 15 ದಿನಗಳ ಹಿಂದೆ ಮರಗಳನ್ನು ಕಡಿಸಿ ಬೆಂಕಿ ಹಾಕಿದೆವು’ ಎಂದು ಯೋಗೀಂದ್ರ ನಾಯ್ಕ ಬೇಸರ ವ್ಯಕ್ತಪಡಿಸಿದರು.

‘500ಕ್ಕೂ ಅಧಿಕ ಮರಗಳನ್ನು ತೆಗೆಯಲು ₹ 50 ಸಾವಿರಕ್ಕೂ ಅಧಿಕ ವೆಚ್ಚವಾಯಿತು. ಈಗ ಅದೇ ಜಾಗದಲ್ಲಿ ಶುಂಠಿ ನಾಟಿ ಮಾಡುತ್ತಿದ್ದೇವೆ. ನಮ್ಮ ಭಾಗದಲ್ಲಿ ಈ ಬಾರಿ ಮುಂಗಾರು ಪೂರ್ವ ಮಳೆಯೂ ಆಗಿಲ್ಲ. ಪಕ್ಕದ ಜಮೀನಿನ ಕೊಳವೆ ಬಾವಿ ನೀರನ್ನು ತೆರೆದ ಬಾವಿಗೆ ತುಂಬಿಸಿ, ಶುಂಠಿ ಬಿತ್ತನೆ ನಡೆದಿದೆ’ ಎಂದು  ವಿವರಿಸಿದರು.

‘ಸರ್ಕಾರ ನೆರವಿಗೆ ಬರಲಿ’

‘ಬನವಾಸಿ ಹೋಬಳಿಯ ಗುಡ್ನಾಪುರ, ಅಂಡಗಿ, ಬದನಗೋಡ, ಬಾಶಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ತೀವ್ರ ಬರಗಾಲವಿದೆ. ಜೂನ್ ಮೊದಲ ವಾರ ಕಳೆದರೂ ಭೂಮಿ ನೆನೆಯುವಷ್ಟು ಮಳೆಯಾಗಿಲ್ಲ. ಅಲ್ಪಾವಧಿ ಬೆಳೆಗಳು ಕೈತಪ್ಪಿವೆ. ದೀರ್ಘಾವಧಿ ಬೆಳೆಯಾದ ಅಡಿಕೆ ಸಹ ಕೈತಪ್ಪಿ ಹೋಗುವ ಸ್ಥಿತಿ ತಲುಪಿದೆ.

ನೂರಾರು ಎಕರೆ ಅಡಿಕೆ ತೋಟ ಬಿಸಿಲಿನ ತೀವ್ರತೆಗೆ ಒಣಗಿವೆ. ಕೊಳವೆ ಬಾವಿಗಳಲ್ಲೂ ನೀರಿಲ್ಲ. ಒಣಗಿದ ಅಡಿಕೆ ಮರಗಳನ್ನು ಕಡಿಯದೇ ರೈತರಿಗೆ ಬೇರೆ ದಾರಿ ಇಲ್ಲದಂತಾಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕು’ ಎಂದು ರೈತ ಮುಖಂಡ ಆನಂದ ಗೌಡರ್ ಆಗ್ರಹಿಸಿದರು.

* * 

ಸರ್ಕಾರ ರೈತರಿಗೆ ಬೆಳೆ ಪರಿಹಾರ ಪ್ಯಾಕೇಜ್ ನೀಡಬೇಕು. ಕೃಷಿ ಇಲಾಖೆ ಹಾನಿಯಾದ ಪ್ರದೇಶಗಳಲ್ಲಿ ಸರಿಯಾದ ಸರ್ವೆ ನಡೆಸಿ ವರದಿ ಸಿದ್ಧಪಡಿಸಬೇಕು

ಯೋಗೀಂದ್ರ ನಾಯ್ಕ

ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry