ಕಾರಹುಣ್ಣಿಮೆ: ಕರಿ ಹರಿವ ಸಂಭ್ರಮ

7

ಕಾರಹುಣ್ಣಿಮೆ: ಕರಿ ಹರಿವ ಸಂಭ್ರಮ

Published:
Updated:
ಕಾರಹುಣ್ಣಿಮೆ: ಕರಿ ಹರಿವ ಸಂಭ್ರಮ

ಬಾಗಲಕೋಟೆ: ಉತ್ತರ ಕರ್ನಾಟಕದ ಗ್ರಾಮೀಣರ ಕೃಷಿ ಸಂಸ್ಕೃತಿಯ ಅಸ್ಮಿತೆಯಾದ ಕಾರ ಹುಣ್ಣಿಮೆ ಆಚರಣೆ ಶುಕ್ರವಾರ ಜಿಲ್ಲೆಯಾದ್ಯಂತ ಕಳೆಗಟ್ಟಿತ್ತು. ಮುಂಗಾರು ಹಂಗಾಮಿಗೆ ಮುನ್ನುಡಿ ಬರೆಯುವ ಹಬ್ಬದ ಸಂಭ್ರಮಕ್ಕೆ ಜೂನ್ ಮೊದಲ ವಾರ ಬಿದ್ದ ಉತ್ತಮ ಮಳೆಯೂ (ರೋಹಿಣಿ) ಇಂಬು ಮೂಡಿಸಿದ್ದು, ಸಂಜೆ ಬಹುತೇಕ ಹಳ್ಳಿಗಳಲ್ಲಿ ಕರಿ ಹರಿಯುವ ಸೊಬಗು ಕಂಡುಬಂದಿತು.

ಹಬ್ಬದ ಕಾರಣ ಮಣ್ಣೆತ್ತುಗಳನ್ನು ಪೂಜಿಸಿ ಹೋಳಿಗೆ–ಸೀಕರಣಿ ಮಾಡಿ ಕಟುಂಬದ ಸದಸ್ಯರು, ಬಂಧು–ಬಾಂಧವರು, ನೆರೆಹೊರೆ ಯವರೊಂದಿಗೆ ಕುಳಿತು ಸಿಹಿ ಊಟ ಸವಿದದ್ದು ವಿಶೇಷವಾಗಿತ್ತು. ಮಾವಿನ ಹಣ್ಣಿನ ಹಂಗಾಮು ಕೊನೆಯ ಹಂತದ ಕಾರಣ ಕಡಲೆಬೇಳೆ, ಎಳ್ಳು, ಶೇಂಗಾ ಹೋಳಿಗೆಗೆ ಹಣ್ಣಿನ ಸೀಕರಣೆ ಜೊತೆಯಾಗಿತ್ತು. ಗೋಧಿ ಹುಗ್ಗಿ (ಪಾಯಸ), ಖಡಕ್ ರೊಟ್ಟಿ, ಚಪಾತಿ, ಹೆಣಗಾಯಿ ಪಲ್ಲೆ ಸೇರಿದಂತೆ ವಿವಿಧ ಬಗೆಯ ಭಕ್ಷ್ಯಗಳು ಊಟದ ತಟ್ಟೆ ಅಲಂಕರಿಸಿದ್ದವು.

ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ಎತ್ತುಗಳನ್ನು ಸಜ್ಜುಗೊಳಿಸುವ ಜೊತೆಗೆ ಹಬ್ಬದಲ್ಲಿ ಕಿಚ್ಚು ಹಾಯಿಸಿ ಕರಿ ಹರಿಯುವ ಕಾರಣ ಮುಂಜಾನೆಯೇ ಅವುಗಳ ಮೈ ತೊಳೆದು, ಕೋಡುಗಳಿಗೆ ಬಣ್ಣ ಬಳಿದು, ಬಣ್ಣ ಬಣ್ಣದ ಗೆಜ್ಜೆ ಸರ, ಲಡ್ಡು, ಹಣೆಕಟ್ಟು, ಮಗಡ, ಮೂಗುದಾರ, ಪಟಕಾಣಿ, ಗೊಂಡೆ, ಟೇಪುಗಳಿಂದ ಅಲಂಕರಿಸಲಾಗಿತ್ತು.

ಹಳೆಯ ಬಾಗಲಕೋಟೆಯ ವೆಂಕಟಪೇಟೆಯಿಂದ ಪೈಪೋಟಿ ಆರಂಭಿಸಿದ ಎತ್ತುಗಳು ವಲ್ಲಭಬಾಯ್‌ ಚೌಕದಲ್ಲಿ ಕರಿಹರಿದವು.

ಎತ್ತುಗಳು ಕರಿ ಹರಿಯುವ ಈ ಸಾಂಪ್ರದಾಯಿಕ ಕಾರ್ಯಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಬೀಳಗಿ ಪಟ್ಟಣದಲ್ಲಿ ಚಾವಡಿಯಿಂದ ಎತ್ತು ಓಡಿಸುವ ಮೂಲಕ ಶಿವಾಜಿ ವೃತ್ತದಲ್ಲಿರುವ ಅಗಸಿ ಬಾಗಿಲಿನಲ್ಲಿ ಕರಿಹರಿಯಲಾಯಿತು.

ಕಾರ ಹುಣ್ಣಿಮೆಯ ಸಂಭ್ರಮಕ್ಕೆ ಜಿಲ್ಲೆಯಾದ್ಯಂತ ಬಾನಾಡಿಗಳಂತೆ ಗೋಚರಿಸಿದ ಗಾಳಿಪಟಗಳು ಮೆರುಗು ನೀಡಿದವು. ಮುಂಗಾರಿನ ಗಾಳಿಯ ಅಬ್ಬರಕ್ಕೆ ಹೊಯ್ದಾಡುತ್ತಾ ಚಿಣ್ಣರು, ದೊಡ್ಡವರು ಎನ್ನದೇ ಎಲ್ಲ ಕೈಕೂಸುಗಳಾಗಿದ್ದ ಬಣ್ಣ ಬಣ್ಣದ ಗಾಳಿಪಟಗಳು ಆಕಾಶದಲ್ಲಿ ಹಾರಾಡಿದವು. ಮನೆಯ ಮಾಳಿಗೆ, ಬಯಲು, ಆಟದ ಮೈದಾನ, ಹೊಲಗಳ ಅಂಗಳದಲ್ಲಿ ಗುಂಪು ಗುಂಪಾಗಿ ನಿಂತು ಗಾಳಿ ಪಟ ಹಾರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry