ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸಹಾಯಕ ಹಿರಿಯರ ‘ಸಹಾಯವಾಣಿ’

Last Updated 10 ಜೂನ್ 2017, 7:44 IST
ಅಕ್ಷರ ಗಾತ್ರ

ಬಳ್ಳಾರಿ: ನಗರದ ಕೌಲ್‌ಬಜಾರ್‌ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆಗೆ ಕೊಟ್ಟಿದ್ದ ವೃದ್ಧ ಒಂಟಿ ಮಹಿಳೆಯೊಬ್ಬರಿಗೆ ಬಾಡಿಗೆದಾರ ಕೆಲವು ತಿಂಗಳ ಬಾಡಿಗೆಯನ್ನೂ ಕೊಡದೆ, ಮನೆಯನ್ನೂ ಖಾಲಿ ಮಾಡದೆ ಜಬರದಸ್ತು ಮಾಡುತ್ತಿದ್ದ. ಆಕೆ ನೇರವಾಗಿ ಗಾಂಧಿನಗರ ಪೊಲೀಸ್‌ ಠಾಣೆಯ ಆವರಣದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕಚೇರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ನೆರವಿಗೆ ಧಾವಿಸಿದರು. ಬಾಡಿಗೆದಾರ ಮಹಿಳೆಗೆ ಬಾಕಿ ಬಾಡಿಗೆಯನ್ನೂ ಕೊಟ್ಟು, ಮನೆಯನ್ನು ಖಾಲಿ ಮಾಡಿದ..

ಮತ್ತೊಂದು ಪ್ರಕರಣದಲ್ಲಿ, ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಇಬ್ಬರು ಗಂಡುಮಕ್ಕಳು ತಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಕೋಳೂರು ಗ್ರಾಮದ ವೃದ್ಧೆಯೊಬ್ಬರು ದೂರು ನೀಡಿದ್ದರು. ಗಂಡು ಮಕ್ಕಳೊಂದಿಗೆ ಸಮಾಲೋಚನೆ ನಡೆಸಿ ತಾಯಿಯ ಮಹತ್ವವನ್ನು ಅರಿವು ಮಾಡಿ ಸಿದ ಸಹಾಯವಾಣಿ ಸಿಬ್ಬಂದಿ ವೃದ್ಧೆಯ ಕಷ್ಟವನ್ನು ದಾಖಲಿಸಿ ಉಪವಿಭಾಗಾ ಧಿಕಾರಿ ನ್ಯಾಯಾಲಯಕ್ಕೆ ಪ್ರಕರಣವನ್ನು ರವಾನಿಸಿದರು. ವಿಚಾರಣೆ ನಡೆಸಿದ ಉಪವಿಭಾಗಾಧಿಕಾರಿ ವೃದ್ಧೆಗೆ ಮಾಸಿಕ  ₹7500 ನೀಡುವಂತೆ ಆದೇಶಿಸಿದರು..

ಇನ್ನೊಂದು ಪ್ರಕರಣದಲ್ಲಿ, ಮಹಿಳೆಯ ಮಗ ಸತ್ತ ಬಳಿಕ ಸೊಸೆಯು ಆಸ್ತಿಯೆಲ್ಲವನ್ನೂ ತನ್ನ ಹೆಸರಿಗೆ ಬರೆಸಿ ಕೊಂಡು, ತವರಿಗೆ ಹೋದವರು ಮತ್ತೆ ಮಹಿಳೆಯ ಕಡೆಗೆ ಗಮನ ಹರಿಸಲೇ ಇಲ್ಲ. ಆ ಪ್ರಕರಣದಲ್ಲೂ ಸಹಾಯವಾಣಿ ಸಿಬ್ಬಂದಿಯ ಪ್ರಯತ್ನದ ಫಲವಾಗಿ ಸಂತ್ರಸ್ತ ಮಹಿಳೆಯ ಪರವಾಗಿ ಉಪ ವಿಭಾಗಾಧಿಕಾರಿ ಆದೇಶ ನೀಡಿದ್ದಾರೆ....

ನಗರದಲ್ಲಿರುವ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರವು ಹೀಗೆ ಜಿಲ್ಲೆಯ ಹಿರಿಯ ನಾಗರಿಕರ ಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಿದೆ. ಗಂಡು ಮಕ್ಕಳು, ಸೊಸೆಯಂದಿರು, ನೆರೆ–ಹೊರೆಯವರು, ಸ್ನೇಹಿತರಿಂದ ಹಿಂಸೆ, ವಂಚನೆಗೆ ಒಳಗಾದವರು, ಕೈಸಾಲ ಪಡೆದವರಿಂದ ಕಿರುಕುಳ ಅನುಭವಿಸಿದ ನಾಗರಿಕರ ಪ್ರಕರಣಗಳು ಸಹಾಯವಾಣಿಯಲ್ಲಿ ದಾಖಲಾಗಿವೆ.

ಸಹಾಯವಣಿಗೆ ಕರೆ ಮಾಡಿದ ವೃದ್ಧರು ಇರುವಲ್ಲಿಗೇ ಸಹಾಯವಾಣಿ ಸಿಬ್ಬಂದಿ ತೆರಳಿ ಸೇವೆ ನೀಡುತ್ತಾರೆ. ಅಗತ್ಯ ನೆರವು, ಕಾನೂನು ಸಲಹೆ ನೀಡಲಾಗುತ್ತಿದೆ ಎಂದು ಸಹಾಯವಾಣಿ ನಡೆಸು ತ್ತಿರುವ ಸ್ಮೈಲ್‌ ಸಂಸ್ಥೆಯ ಕಾರ್ಯದರ್ಶಿ ಕೆ.ಎಂ.ಉಮಾಪತಿಗೌಡ ತಿಳಿಸಿದರು.

ಸಹಾಯವಾಣಿ ಕಾರ್ಯವೈಖರಿ
ಸಹಾಯವಾಣಿ ಸಮಿತಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಧ್ಯಕ್ಷರಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಕಾರ್ಯದರ್ಶಿಯಾಗಿದ್ದಾರೆ. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಸದಸ್ಯರಾಗಿದ್ದಾರೆ. ಮೂರು ವರ್ಷದ ಅವಧಿಗೆ ಇಬ್ಬರು ಹಿರಿಯ ನಾಗರಿಕರನ್ನೂ ಸದಸ್ಯರಾಗಿ ನಾಮಕರಣ ಮಾಡಲಾಗುತ್ತದೆ. ಈ ಸಮಿತಿಯ ನಿರ್ದೇಶನದಲ್ಲೇ ಸಹಾಯವಾಣಿ ಕಾರ್ಯನಿರ್ವಹಿಸುತ್ತದೆ.

ಸಹಾಯವಾಣಿ ಪ್ರಕರಣಗಳ ನಿರ್ವಹಣೆಯಲ್ಲಿ ಸಿಬ್ಬಂದಿಗೆ ನೆರವು ನೀಡಲು ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ. ಸಹಾಯವಾಣಿಯಲ್ಲಿ ಕಾರ್ಯದರ್ಶಿಯೊಂದಿಗೆ ಒಬ್ಬ ಸಂಯೋಜಕರು. ಮೂವರು ಆಪ್ತಸಮಾಲೋಚಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸಹಾಯವಾಣಿಯಲ್ಲಿ ಪ್ರಕರಣ ಇತ್ಯರ್ಥಗೊಳ್ಳದಿದ್ದರೆ ಉಪವಿಭಾಗಾಧಿಕಾರಿ ನ್ಯಾಯಾಲಯಕ್ಕೆ ರವಾನಿಸಲಾಗುತ್ತದೆ.

ದಶಕದಿಂದ ಸೇವೆ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ನೀಡುವ ವಾರ್ಷಿಕ ₹ 6,00,000 ಲಕ್ಷ ಅನುದಾನದಲ್ಲಿ ಸ್ಮೈಲ್‌ ಸಂಸ್ಥೆಯು ಒಂದು ದಶಕದಿಂದ ನಿರಂತರವಾಗಿ ಸಹಾಯವಾಣಿ ಸೇವೆಯನ್ನು ನೀಡುತ್ತಿರುವುದು ವಿಶೇಷ.

ಸಹಾಯವಾಣಿ ಕೇಂದ್ರವು ನಿಯಮದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲೇ ಕಾರ್ಯನಿರ್ವಹಿಸಬೇಕು. ಆದರೆ ಗ್ರಾಮಾಂತರ ಪ್ರದೇಶಗಳಿಂದ ಬರುವ ನಾಗರಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಗಾಂಧಿನಗರ ಠಾಣೆಯಲ್ಲಿ ಸಹಾಯವಾಣಿ ಕಚೇರಿಗೆ ಸ್ಥಳಾವಕಾಶ ನೀಡಲಾಗಿದೆ ಎಂದು ಉಮಾಪತಿಗೌಡ ತಿಳಿಸಿದರು.

ಅಂಕಿ ಅಂಶ
10ವರ್ಷ ಸ್ಮೈಲ್‌ ಸಂಸ್ಥೆಯಿಂದ ಸಹಾಯವಾಣಿ ಸೇವೆ

13,000 ಇದುವರೆಗೆ ದಾಖಲಾಗಿರುವ ಹಿರಿಯ ನಾಗರಿಕರ ಪ್ರಕರಣಗಳು

1,0000 ಇತ್ಯರ್ಥಗೊಂಡಿರುವ ಪ್ರಕರಣಗಳು

* * 

ಹಿರಿಯ ನಾಗರಿಕರು ಸಹಾಯವಾಣಿ ಕೇಂದ್ರಕ್ಕೇ ಬರಬೇಕು ಎಂದೇನಿಲ್ಲ. ಅವರು ಇರುವ ಸ್ಥಳಕ್ಕೇ ಹೋಗಿ ಸಿಬ್ಬಂದಿ ನೆರವು ನೀಡುತ್ತಾರೆ.
ಕೆ.ಎಂ.ಉಮಾಪತಿಗೌಡ, ಸಹಾಯವಾಣಿ ನಡೆಸುತ್ತಿರುವ ಸ್ಮೈಲ್‌ ಸಂಸ್ಥೆಯ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT