ಅಧಿಕಾರಿಗಳ ಬದಲಾವಣೆ– ಅಭಿವೃದ್ಧಿಗೆ ಧಕ್ಕೆ

7
ಯಲಿಯೂರು ಗ್ರಾಮದಲ್ಲಿ ಆಯೋಜಿಸಿದ್ದ ಮೊದಲ ಹಂತದ ಗ್ರಾಮಸಭೆಯಲ್ಲಿ ನಾಗರಿಕರ ಆಕ್ರೋಶ

ಅಧಿಕಾರಿಗಳ ಬದಲಾವಣೆ– ಅಭಿವೃದ್ಧಿಗೆ ಧಕ್ಕೆ

Published:
Updated:
ಅಧಿಕಾರಿಗಳ ಬದಲಾವಣೆ– ಅಭಿವೃದ್ಧಿಗೆ ಧಕ್ಕೆ

ವಿಜಯಪುರ: ಮೂರು ಮೂರು ತಿಂಗಳಿಗೆ ಒಬ್ಬೊಬ್ಬ ಅಧಿಕಾರಿಗಳನ್ನು ಬದಲಾವಣೆ ಮಾಡುತ್ತಿರುವುದರಿಂದ ಪಂಚಾಯಿತಿಯಲ್ಲಿ ನಾಗರಿಕರ ಕೆಲಸ ಕಾರ್ಯಗಳು ಕುಂಠಿತಗೊಂಡಿರುವುದರ ಜೊತೆಗೆ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲವೆಂದು ಯಲಿಯೂರು ಗ್ರಾಮದ ನಾಗರಿಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚನ್ನರಾಯಪಟ್ಟಣ ಹೋಬಳಿ ಯಲಿಯೂರು ಗ್ರಾಮದಲ್ಲಿ ಆಯೋಜಿಸಿದ್ದ 2017–18 ನೇ ಸಾಲಿನ ಮೊದಲ ಹಂತದ ಗ್ರಾಮಸಭೆಯಲ್ಲಿ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳಾಗಿ ಬರುವವರನ್ನು ಮೂರು ಮೂರು ತಿಂಗಳಿಗೊಬ್ಬರಂತೆ ಬದಲಾಯಿಸಲಾಗುತ್ತಿದೆ. ನಾಗರಿಕರು ಪರಿಚಯ ಮಾಡಿಕೊಳ್ಳುವಷ್ಟರಲ್ಲಿ ಬೇರೆ ಅಧಿಕಾರಿಗಳು ಬಂದಿರುತ್ತಾರೆ. ಸಾಮಾನ್ಯ ಜನರು ಪಂಚಾಯಿತಿಗೆ ಕೊಡುತ್ತಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಿಕ್ಕೆ ಸಾಧ್ಯವಾಗುತ್ತಿಲ್ಲ ಎಂದರು.

ಇದು ಸರ್ಕಾರದ ವೈಫಲ್ಯವೇ ಅಥವಾ ಆಡಳಿತ ನಡೆಸುತ್ತಿರುವ ಜನಪ್ರತಿನಿಧಿಗಳ ವೈಫಲ್ಯವೇ ಎಂದು ಪ್ರಶ್ನಿಸಿದರು.

ಪಿಳ್ಳಪ್ಪ ಮಾತನಾಡಿ, ನರೇಗಾ ಯೋಜನೆಯಡಿ ದನದ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡು ಬಿಲ್‌ ಹಣಕ್ಕೆ ಸುತ್ತಾಡಿ ಸಾಕಾಗಿಹೋಗಿದೆ, ಬೇಕೆಂದೇ ಅನ್ಯಾಯ ಮಾಡ್ತಿದ್ದೀರಿ ಎಂದು ಅಧ್ಯಕ್ಷೆ ಯಶೋಧಮ್ಮ ಕಡೆಗೆ ಕೈ ತೋರಿಸಿ ಬೇಸರ ವ್ಯಕ್ತಪಡಿಸಿದರು.

ಹಳೆಯ ಶೆಡ್ ನಿರ್ಮಾಣಕ್ಕೆ ತಾಲ್ಲೂಕು ಪಂಚಾಯಿತಿಯಿಂದಲೇ ಹಣ ಕೊಡುವುದಿಲ್ಲ. ಹೊಸದಾಗಿ ನಿರ್ಮಾಣ ಮಾಡಿಕೊಂಡಿದ್ದರೆ ಅನುದಾನ ಸಿಗುತ್ತದೆ. ಹೊಸದಾಗಿ ಶೆಡ್ ಆಗಿದ್ದರೆ, ಅನುದಾನ ಕೊಡಿಸೊಣ ಎಂದು ಸಮಾಧಾನ ಪಡಿಸುವ ಯತ್ನ ಮಾಡಿದರು.

ಪಿಳ್ಳಪ್ಪ ಜತೆ ಧ್ವನಿಗೂಡಿಸಿದ ಗ್ರಾಮದ ಜಗದೀಶ್, ಅಜೇಯ್, ನರೇಗಾ ಯೋಜನೆಯಡಿ ಕಾಮಗಾರಿ ಮಾಡಿಕೊಂಡಿರುವ ಫಲಾನುಭವಿಗಳನ್ನು ಯಾಕೆ ಅಲೆದಾಡಿಸುತ್ತೀರಿ. ಕಾಮಗಾರಿ ಆದಮೇಲೆ ಎಂಜಿನಿಯರ್ ಅವರನ್ನು ಕರೆದುಕೊಂಡು ಬಂದು ಕೆಲಸ ವೀಕ್ಷಣೆ ಮಾಡುವ ಕೆಲಸ ಅಧಿಕಾರಿಗಳದ್ದು. ಆದರೆ ಎಂಜಿನಿಯರ್ ಕರೆದುಕೊಂಡು ಬನ್ನಿ ಎಂದು ನಾಗರಿಕರಿಗೆ ಹೇಳುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.

ಅಂಗನವಾಡಿ ಕೇಂದ್ರಕ್ಕೆ ನೀರಿನ ವ್ಯವಸ್ಥೆಯಿಲ್ಲ, ಶೌಚಾಲಯವಿದೆ, ಸಂಪರ್ಕವಿಲ್ಲ, ಕಾಂಪೌಂಡಿಲ್ಲ ಇದೆಲ್ಲಾ ಅನುಕೂಲ ಮಾಡಿಕೊಡಿ ಎಂದು ಮನವಿ ಮಾಡಿದರು.

ಕೃಷಿ ಅಧಿಕಾರಿಗಳು ಸೇರಿದಂತೆ ಬಹುತೇಕ ಇಲಾಖೆಗಳ ಅಧಿಕಾರಿಗಳು ಗ್ರಾಮಸಭೆಗೆ ಬಾರದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಕಾರ್ಯಾಲಯದ ಸುತ್ತಮುತ್ತಲು  ಚರಂಡಿಗಳು ತುಂಬಿ ಹೋಗಿ ಗಬ್ಬು ನಾರುತ್ತಿದೆ. ಮತ್ತೆಲ್ಲಿ ಚರಂಡಿ ಸ್ವಚ್ಚ ಮಾಡಿದ್ದೀರಿ. ಸ್ಚಚ್ಛ ಭಾರತ ಯೋಜನೆಯಡಿ ಬಿಡುಗಡೆಯಾಗುತ್ತಿರುವ ಅನುದಾನ ಏನು ಮಾಡುತ್ತೀದ್ದೀರಿ ಎಂದು ಎಂದು ಪ್ರಶ್ನಿಸಿದರು.

ಕೆರಳಿದ ಅಧ್ಯಕ್ಷೆ ಯಶೋಧಮ್ಮ, ಸ್ವಚ್ಛತೆಗೆ ಮುಂದಾದಾಗ ಕೆಲವರು ಉದ್ದೇಶಪೂರ್ವಕವಾಗಿ ಕಲ್ಲುಚಪ್ಪಡಿ ತೆಗೆಯಲು ಅವಕಾಶ ನೀಡಿಲ್ಲ, ಊರೆಲ್ಲಾ ಸ್ವಚ್ಛವಾಗಿರಲು ಸಹಕಾರ ಕೊಡಿ ಎಂದರು.

ಉಪಾಧ್ಯಕ್ಷ ರಾಮಾಂಜಿನಯ್ಯ, ಸದಸ್ಯರು, ಸಿಬ್ಬಂದಿ ಹಾಜರಿದ್ದರು.

**

ರಾಜಕಾಲುವೆ ತೆರವುಗೊಳಿಸಿ

ಕೆರೆಗಳಿಗೆ ನೀರು ಬರುವಂತಹ ರಾಜಕಾಲುವೆಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಹಿಪ್ಪುನೇರಳೆ ಬೆಳೆದುಕೊಂಡಿದ್ದಾರೆ ಸ್ಥಳೀಯ ಮುಖಂಡ ಶಾಂತ್ ಕುಮಾರ್  ಆರೋಪಿಸಿದರು.

ಮೊದಲು ಸರ್ವೆ ಮಾಡಿ ತೆರವುಗೊಳಿಸಿ. ಮಳೆಗಾಲದಲ್ಲಿ ನೀರು ಬರುವಂತೆ ಮಾಡಿ ಎಂದು ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry