ಮಕ್ಕಳು ದೂರು ನೀಡಿ: ನ್ಯಾಯಾಧೀಶ

7

ಮಕ್ಕಳು ದೂರು ನೀಡಿ: ನ್ಯಾಯಾಧೀಶ

Published:
Updated:
ಮಕ್ಕಳು ದೂರು ನೀಡಿ: ನ್ಯಾಯಾಧೀಶ

ಉಡುಪಿ: ‘ಬಾಲ್ಯವಿವಾಹ ಅಪರಾಧವಾಗಿದ್ದು, ಮಕ್ಕಳು ಶಾಲೆಯ ಮುಖ್ಯ ಶಿಕ್ಷಕರಿಗೆ ದೂರು ನೀಡಬಹುದು’ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಇರ್ಪಾನ್ ಹೇಳಿದರು.

ಬಾಲ್ಯವಿವಾಹ ನಿಷೇಧ ಹಾಗೂ ‘ಶಾಲೆ ಕಡೆ ನನ್ನ ನಡೆ’ ಜಾಗೃತಿ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲಾ ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಹಾಗೂ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಆಶ್ರಯದಲ್ಲಿ  ಆಯೋಜಿಸಲಾಗಿತ್ತು.

‘ಪೋಷಕರು ಬಾಲ್ಯವಿವಾಹಕ್ಕೆ ಸಿದ್ಧತೆ ನಡೆಸಿದ್ದು ಗೊತ್ತಾದರೆ ಮಕ್ಕಳು ಭಯಪಡದೆ ಜಿಲ್ಲಾ ನ್ಯಾಯಾಧೀಶರು ಅಥವಾ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ನೇರವಾಗಿ ದೂರು ಸಲ್ಲಿಸಬಹುದು. ಆ ಬಗ್ಗೆ ತಕ್ಷಣವೇ ಸೂಕ್ತ ಕ್ರಮ ಕೈಗೊಂಡು ಮಗುವನ್ನು ರಕ್ಷಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಹಪಾಠಿಯೊಬ್ಬರು ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾರೆ ಎಂದು ಗೊತ್ತಾದರೂ ಮೌಖಿಕ ಅಥವಾ ಲಿಖಿತವಾಗಿ ದೂರು ನೀಡಿ’ ಎಂದು ಅವರು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಮಾತನಾಡಿ, ‘ಜಿಲ್ಲೆಯಲ್ಲಿ ಸುಮಾರು 14,000 ವಲಸೆ ಕಾರ್ಮಿಕರಿದ್ದು, ಇವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಾಲ್ಯವಿವಾಹ ನಡೆಯುತ್ತಿದೆ, ಕಾರ್ಮಿಕರಲ್ಲಿ ಬಾಲ್ಯವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಬೇಕು.  ಮಕ್ಕಳು ಶಿಕ್ಷಣ ಪಡೆದರೆ ಬಾಲ್ಯ ವಿವಾಹ ತಡೆಗಟ್ಟಲು ಸಾಧ್ಯವಿದೆ. ಪೋಷಕರಿಗೂ ಕಾನೂನಿನ ಮಾಹಿತಿ ಇರಬೇಕು’ ಎಂದರು.

‘ಉತ್ತರ ಕರ್ನಾಟಕದ ಹಲವು ಕಡೆ ಈಗಲೂ ಬಾಲ್ಯವಿವಾಹಗಳು ನಡೆಯುತ್ತಿವೆ. ಮಕ್ಕಳ ಸೂಕ್ಷ್ಮ ಮನಸ್ಸಿನ ಮೇಲೆ ಇದು ದುಷ್ಪರಿಣಾಮ ಬೀರುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶೀಲಾ ಶೆಟ್ಟಿ ಹೇಳಿದರು. ಬಾಲ್ಯ ವಿವಾಹ ನಿಷೇಧ ಕಾನೂನಿನ ಬಗ್ಗೆ ವಕೀಲ ಗಿರೀಶ್ ಪೂಜಾರಿ ಮಾತನಾಡಿದರು.

ಪ್ರಬಂಧ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ಮುಖ್ಯಗುರು ನಿರ್ಮಲಾ ಬಿ. ಅಧ್ಯಕ್ಷತೆ ವಹಿಸಿದ್ದರು.

ನಗರಸಭೆ ಸದಸ್ಯೆ ಗೀತಾ ರವಿ ಶೇಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವಿಸ್, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಅಧಿಕಾರಿ ರಾಮಚಂದ್ರ ರಾಜೇ ಅರಸ್ , ವಳಕಾಡು ಶಾಲೆಯ ಹಳೆ ವಿದ್ಯಾಥಿ ಸಂಘದ ಅಧ್ಯಕ್ಷ ಅಮೃತ್ ಶೆಣ್ಯೆ , ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೋಭಾ , ವಿದ್ಯಾರ್ಥಿಗಳಾದ ನಚಿಕೇತ್ ಮತ್ತು ನೇಹಾ ಇದ್ದರು.

* * 

ಸಾಮೂಹಿಕ ವಿವಾಹದಲ್ಲಿ ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆಯಿದ್ದು, ಈ ಕುರಿತು ಅಧಿಕಾರಿಗಳು, ಸಂಘಟಕರು ಎಚ್ಚರಿಕೆ ವಹಿಸಬೇಕು.

ಇರ್ಫಾನ್‌,

ಪ್ರಧಾನ ಸಿವಿಲ್ ನ್ಯಾಯಾಧೀಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry