ದಲಿತರಿಗೆ ಸಂವಿಧಾನವೇ ದೇವರು

7
‘ಶೋಷಿತರ ಐಕ್ಯತಾ ದಿನ’ದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಅಭಿಮತ

ದಲಿತರಿಗೆ ಸಂವಿಧಾನವೇ ದೇವರು

Published:
Updated:
ದಲಿತರಿಗೆ ಸಂವಿಧಾನವೇ ದೇವರು

ತುಮಕೂರು: ‘ಹೋರಾಟಗಳು ಇಂದು ಮಾರಾಟದ ಸರಕಾಗುತ್ತಿವೆ. ಚಳವಳಿಗಳು ನಾಶವಾಗುತ್ತಿವೆ. ದಲಿತರನ್ನು ಸಂವಿಧಾನದ ಹೊರತು ಯಾವ ದೇವರೂ ಕಾಪಾಡುವುದಿಲ್ಲ. ಇದನ್ನು ಸಮುದಾಯ ಸೂಕ್ಷ್ಮವಾಗಿ ಮನಗಾಣಬೇಕು’ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಪ್ರತಿಪಾದಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿಯು (ಪರಿವರ್ತನಾವಾದ) ಪ್ರೊ.ಬಿ.ಕೃಷ್ಣಪ್ಪ ಅವರ 79ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಶೋಷಿತರ ಐಕ್ಯತಾದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ದಲಿತ ಸಂಘಟನೆಗಳಲ್ಲಿ ಭೀಮವಾದ, ಅಂಬೇಡ್ಕರ್‌ವಾದ, ಪರಿವರ್ತನಾವಾದ ಹೀಗೆ ಹಲವು ವಾದಗಳು ಇವೆ. ಈ ವಾದಗಳು ಭೇದಗಳಾದರೆ ದಲಿತ ಸಮುದಾಯದ ಛಿದ್ರವಾಗುತ್ತದೆ. ವಾದಗಳ ನಡುವೆಯೂ ಏಕತೆ ಅಗತ್ಯ’ ಎಂದು ಅಭಿಪ್ರಾಯಪಟ್ಟರು.

‘ಮದ್ಯಪಾನ ಮೊದಲಾದ ಚಟಗಳನ್ನು ಮೊದಲು ತೊರೆದು ಬುದ್ಧನ ಪಂಚಶೀಲ ತತ್ವಗಳನ್ನು ಅನುಸರಿಸಬೇಕು. ಇದರಿಂದ ಬಾಹ್ಯ ಮತ್ತು ಆಂತರೀಕ ಉದ್ಧಾರ ಸಾಧ್ಯ’ ಎಂದು ವಿವರಿಸಿದರು.

‘ಒಂದು ವೇಳೆ ಪಾಕಿಸ್ತಾನದವರು ಗೋವುಗಳನ್ನು ಮುಂದೆ ಬಿಟ್ಟು ಯುದ್ಧಕ್ಕೆ ಬಂದರೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಡ್ಡ ಬೀಳುತ್ತದೆಯೇ? ವಿಶ್ವದ ನಾನಾ ರಾಷ್ಟ್ರಗಳಲ್ಲಿ ದನದ ಮಾಂಸವನ್ನು ಆಹಾರವಾಗಿ ಬಳಸಲಾಗುತ್ತಿದೆ. ಹಾಗಿದ್ದರೆ ಭಾರತೀಯ ಗೋವುಗಳಲ್ಲಿ ಮಾತ್ರವೇ ದೇವರು ಇರುವುದು. ಗೋಮಾಂಸ ಸೇವಿಸುವ ಉಳಿದ ರಾಷ್ಟ್ರಗಳು ಅಭಿವೃದ್ಧಿಯ ಪಥದಲ್ಲಿಯೇ ಇವೆ’ ಎಂದು ಪ್ರತಿಪಾದಿಸಿದರು.

‘ಶೋಷಿತ ಮತ್ತು ದಲಿತ ಸಮುದಾಯದ ನ್ಯಾಯಾಧೀಶರ ಸಂಖ್ಯೆ ದೇಶದಲ್ಲಿ ಕಡಿಮೆ ಇದೆ. ಕೇಂದ್ರ ಸರ್ಕಾರ ಮತ್ತು ಆರ್‌ಎಸ್‌ಎಸ್ ನ್ಯಾಯಾಧೀಶರ ಮೂಲಕ ಸಂವಿಧಾನವನ್ನು ದುರ್ಬಲಗೊಳಿಸುವ ಯತ್ನ ನಡೆಸುತ್ತಿವೆ. ಆದ್ದರಿಂದ ಶೋಷಿತ ಸಮುದಾಯಗಳು ಒಂದೇ ವೇದಿಕೆಯಡಿ ಒಗ್ಗೂಡುವುದು ತುರ್ತಾಗಿ ಆಗಬೇಕು’ ಎಂದು ತಿಳಿಸಿದರು.

‘ಅಂಬೇಡ್ಕರ್ ಅವರನ್ನು ಅರ್ಥ ಮಾಡಿಕೊಳ್ಳದಿದ್ದರೆ ಅಭಿವೃದ್ಧಿ ಸಾಧ್ಯವಿಲ್ಲ. ಮತ ನಮ್ಮ ಮಗಳಿದ್ದಂತೆ. ಯಾವುದೇ ಕಾರಣಕ್ಕೂ ಮತವನ್ನು ಮಾರಾಟ ಮಾಡಿಕೊಳ್ಳಬಾರದು’ ಎಂದು ಕಿವಿಮಾತು ಹೇಳಿದರು.

‘ಈ ಹಿಂದೆ ದಲಿತರು ತಳಮಟ್ಟದ ಜೀತಗಾರಿಕೆಗೆ ತುತ್ತಾಗಿದ್ದರು. ಆದರೆ ಈಗ ದಲಿತ ರಾಜಕಾರಣಿಗಳು ಮತ್ತು ಅಧಿಕಾರಿಗಳೇ ಹೈಟೆಕ್ ಜೀತಗಾರಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ’ ಎಂದು ವಿಷಾದಿಸಿದರು.

ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ದೇವನಂದಿ ಸನದಿ ಅಧ್ಯಕ್ಷತೆ ವಹಿಸಿದ್ದರು. ದಸಂಸ ಪದಾಧಿಕಾರಿಗಳು ಹಾಗೂ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಇದ್ದರು.

**

ದಲಿತರಲ್ಲಿ ಎಡ–ಬಲ ಎನ್ನುವ ತಾರತಮ್ಯ ಇವೆ. ಈ ಕಾರಣಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿಯಾಗಲು ಸಾಧ್ಯವಾಗಿಲ್ಲ. ಈ ಭೇದ ಬ್ರಾಹ್ಮಣರ ಮನುಸ್ಮೃತಿಯಂತೆಯೇ ಅಪಾಯಕಾರಿ.

-ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry