ಜಿಲ್ಲೆಯಲ್ಲಿ ಚಿಕುನ್‌ ಗುನ್ಯಾ– ಡೆಂಗಿ ಪತ್ತೆ

7
ಜನರಲ್ಲಿ ಆತಂಕ: ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದ ಕಾಯಿಲೆಗಳು

ಜಿಲ್ಲೆಯಲ್ಲಿ ಚಿಕುನ್‌ ಗುನ್ಯಾ– ಡೆಂಗಿ ಪತ್ತೆ

Published:
Updated:
ಜಿಲ್ಲೆಯಲ್ಲಿ ಚಿಕುನ್‌ ಗುನ್ಯಾ– ಡೆಂಗಿ ಪತ್ತೆ

ಕೋಲಾರ: ಮಳೆಗಾಲ ಆರಂಭವಾಗುತ್ತಿದ್ದಂತೆ ಜಿಲ್ಲೆಯ ವಿವಿಧೆಡೆ ಡೆಂಗಿ, ಚಿಕುನ್‌ ಗುನ್ಯಾ ಹಾಗೂ ಇಲಿ ಜ್ವರ (ಲೆಪ್ಟೊಸ್ಪೈರೊಸಿಸ್‌) ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವ ಕಾರಣ ಗುಂಡಿ, ಚರಂಡಿ ಹಾಗೂ ಕೊಳಚೆ ಪ್ರದೇಶದಲ್ಲಿ ನೀರು ನಿಂತು ನೈರ್ಮಲ್ಯ ಸಮಸ್ಯೆ ಎದು ರಾಗಿದೆ. ಇದರಿಂದ ಸೊಳ್ಳೆ ಕಾಟ ಹೆಚ್ಚಿದ್ದು, ಜನರಿಗೆ ಜ್ವರ, ಶೀತ, ತಲೆ ನೋವು, ಮಾಂಸಖಂಡ ಮತ್ತು ಕೀಲು ಗಳಲ್ಲಿ ನೋವಿನ ಲಕ್ಷಣ ಕಾಣಿಸಿಕೊಂಡಿದೆ.

ಜ್ವರದಿಂದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಕೋಲಾರ ತಾಲ್ಲೂಕಿನ ಹೊದಲವಾಡಿ ಗ್ರಾಮದಲ್ಲಿ ತಲಾ ಇಬ್ಬರಿಗೆ ಡೆಂಗಿ ಮತ್ತು ಚಿಕುನ್‌ ಗುನ್ಯಾ, ಜಿಲ್ಲಾ ಕೇಂದ್ರದ ಕಾರಂಜಿಕಟ್ಟೆ ಬಡಾವಣೆ ಯಲ್ಲಿ ಒಬ್ಬರಿಗೆ ಡೆಂಗಿ, ಬಾರಂಡಹಳ್ಳಿ ಗ್ರಾಮದಲ್ಲಿ ನಾಲ್ಕು ಮಂದಿಗೆ ಇಲಿಜ್ವರ ಹಾಗೂ ಮುಳಬಾಗಿಲು ಪಟ್ಟಣದ ಬೂಸಾಲ ಕುಂಟೆ ಬಡಾವಣೆಯಲ್ಲಿ ಒಬ್ಬರಿಗೆ ಡೆಂಗಿ ಜ್ವರ ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ.

95 ಮನೆಗಳಿರುವ ಹೊದಲವಾಡಿ ಗ್ರಾಮದಲ್ಲಿ ಜನಸಂಖ್ಯೆ ಸುಮಾರು 400 ಇದೆ. ಕಳೆದ 10 ದಿನಗಳಲ್ಲಿ ಗ್ರಾಮದ 90ಕ್ಕೂ ಹೆಚ್ಚು ಮಂದಿಗೆ ಜ್ವರ, ಶೀತ ಹಾಗೂ ತಲೆನೋವಿನ ಲಕ್ಷಣ ಕಾಣಿಸಿಕೊಂಡಿದೆ. ದಿನದಿಂದ ದಿನಕ್ಕೆ ಜ್ವರಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲಾ ವಯೋಮಾನ ದವರಲ್ಲೂ ಕಾಯಿಲೆ ಕಾಣಿಸಿಕೊಂಡಿದೆ.

ವರದಿ ಸಲ್ಲಿಕೆ: ಈ ವಿಷಯ ತಿಳಿದ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ವೈದ್ಯರು ಕಳೆದ ವಾರ ಹೊದಲವಾಡಿಗೆ ಭೇಟಿ ನೀಡಿ ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿದ್ದರು. ಅಲ್ಲದೇ, 20ಕ್ಕೂ ಹೆಚ್ಚು ಮಂದಿಯ ರಕ್ತ ಮಾದರಿ ಸಂಗ್ರಹಿಸಿ ಹೆಚ್ಚಿನ ಪರಿಶೀಲನೆಗಾಗಿ ಜಿಲ್ಲಾ ಕಣ್ಗಾವಲು ಘಟಕಕ್ಕೆ ಕಳುಹಿಸಿದ್ದರು. ಕಣ್ಗಾವಲು ಘಟಕದ ತಜ್ಞರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ವರದಿ ಸಲ್ಲಿಸಿದ್ದು, ಗ್ರಾಮದ ತಲಾ ಇಬ್ಬರಿಗೆ ಡೆಂಗಿ ಮತ್ತು ಚಿಕುನ್‌ ಗುನ್ಯಾ ಇರುವುದನ್ನು ವರದಿಯಲ್ಲಿ ಖಚಿತಪಡಿಸಿದ್ದಾರೆ.

ಹೀಗಾಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆರೋಗ್ಯ ತಪಾಸಣಾ ಶಿಬಿರ ಆರಂಭಿಸಲಾಗಿದೆ. ಜಿಲ್ಲಾ ಸರ್ವೇಕ್ಷಣಾಧಿಕಾರಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಅಣ್ಣಿಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಕಾಯಿಲೆ ಲಕ್ಷಣ: ಈಡಿಸ್‌ ಇಜಿಫ್ಟ್‌ ಎಂಬ ಸೊಳ್ಳೆಯಿಂದ ಡೆಂಗಿ ಜ್ವರ ಬರುತ್ತದೆ. ಸೋಂಕುಪೀಡಿತವಾದ ಈ ಸೊಳ್ಳೆಯು ಕಚ್ಚುವುದರಿಂದ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುವ ಈ ಸೊಳ್ಳೆಯು ಮನುಷ್ಯರಿಗೆ ಹಗಲು ವೇಳೆಯಲ್ಲಿ ಕಚ್ಚುತ್ತದೆ. ಇನ್ನು ಚಿಕುನ್‌ ಗುನ್ಯಾ ಕಾಯಿಲೆಯು ವೈರಸ್‌ನಿಂದ ಬರುತ್ತದೆ. ತೀವ್ರ ಜ್ವರ, ತಲೆನೋವು, ಶೀತ, ಮಾಂಸಖಂಡ ಮತ್ತು ಕೀಲುಗಳಲ್ಲಿ ವಿಪರೀತ ನೋವು ಈ ಕಾಯಿಲೆಗಳ ಪ್ರಮುಖ ಲಕ್ಷಣಗಳಾಗಿವೆ. ಜ್ವರದ ತೀವ್ರತೆ ಜಾಸ್ತಿಯಾದರೆ ಬಾಯಿ, ಮೂಗು, ಚರ್ಮ ಮತ್ತು ಒಸಡುಗಳಲ್ಲಿ ರಕ್ತಸ್ರಾವ ವಾಗುತ್ತದೆ.

ನಿಯಂತ್ರಣ ಹೇಗೆ: ಸೊಳ್ಳೆಗಳ ನಿಯಂತ್ರಣವು ಡೆಂಗಿ ಮತ್ತು ಚಿಕುನ್‌ ಗುನ್ಯಾ ಕಾಯಿಲೆ ಹತೋಟಿಗೆ ಮುಖ್ಯ ವಿಧಾನ. ಮನೆಯ ಸಿಮೆಂಟ್‌ ತೊಟ್ಟಿ, ಡ್ರಮ್‌ ಹಾಗೂ ಮಡಿಕೆಯಲ್ಲಿ ಶೇಖರಿಸಿ ಟ್ಟಿರುವ ನೀರಿನಲ್ಲಿ ಸೊಳ್ಳೆಗಳು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ. ಜತೆಗೆ ಮನೆಯ ಸುತ್ತಲಿನ ಚರಂಡಿ ಹಾಗೂ ಗುಂಡಿಗಳಲ್ಲಿ ನಿಂತಿರುವ ನೀರಿನಲ್ಲೂ ಸೊಳ್ಳೆಗಳು ಸಂತಾನಾ ಭಿವೃದ್ಧಿ ನಡೆಯುತ್ತದೆ. ಆದ ಕಾರಣ ಸಿಮೆಂಟ್‌ ತೊಟ್ಟಿ, ಡ್ರಮ್‌ ಮತ್ತು ಮಡಿಕೆಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಒಣಗಿಸಿ ನಂತರ ನೀರು ತುಂಬಿಸಬೇಕು. ಅದೇ ರೀತಿ ಚರಂಡಿ ಹಾಗೂ ಗುಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಸ್ಚಚ್ಛತೆಗೆ ಪತ್ರ: ಡೆಂಗಿ, ಚಿಕುನ್‌ ಗುನ್ಯಾ ಹಾಗೂ ಇಲಿ ಜ್ವರ ಪ್ರಕರಣಗಳ ಹೆಚ್ಚಳದಿಂದ ಕಂಗೆಟ್ಟಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ, ಪುರಸಭೆ ಹಾಗೂ ನಗರಸಭೆಗಳಿಗೆ ಪತ್ರ ಬರೆದು ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ, ರಾಸಾಯನಿಕ ಹೊಗೆ ಸಿಂಪಡಣೆ (ಫಾಗಿಂಗ್‌) ಮತ್ತು ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಿದ್ದಾರೆ.

**

ಎಲ್ಲೆಡೆ ಜಾಥಾ

ಹೊದಲವಾಡಿಯಲ್ಲಿ ಡೆಂಗಿ ಮತ್ತು ಚಿಕುನ್‌ ಗುನ್ಯಾ ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಶಿಬಿರ ಆರಂಭಿಸಿ ಗ್ರಾಮಸ್ಥರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಲಾಗಿದೆ. ಜತೆಗೆ ಕಾಯಿಲೆ ತಡೆಗಾಗಿ ಎಲ್ಲೆಡೆ ಜಾಗೃತಿ ಜಾಥಾ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್‌.ವಿಜಯ್‌ ಕುಮಾರ್‌ ತಿಳಿಸಿದ್ದಾರೆ.

**

ಕುಟುಂಬದ ಇಬ್ಬರು ಸೇರಿ  ಹಲವರಿಗೆ ಜ್ವರ ಬಂದಿದೆ. ವೈದ್ಯರು ಅಂಗನವಾಡಿ ಯಲ್ಲಿ 10 ದಿನಗಳಿಂದ ತಪಾಸಣೆ ಮಾಡುತ್ತಿದ್ದಾರೆ. ಅನಾರೋಗ್ಯಪೀಡಿತರ ಸಂಖ್ಯೆ ಹೆಚ್ಚುತ್ತಿದೆ ಆತಂಕವಾಗಿದೆ.

-ಕೃಷ್ಣಮೂರ್ತಿ, ಗ್ರಾಮಸ್ಥ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry