ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸಂಸತ್‌ ಚುನಾವಣೆ: ನಂದಿ ಶಾಲೆಗೆ ಎಂ.ರಂಜಿತ್ ‘ಪ್ರಧಾನಿ’!

Last Updated 10 ಜೂನ್ 2017, 9:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಿತ್ಯ ಮಕ್ಕಳ ಕಲರವದಿಂದ ತುಂಬಿರುತ್ತಿದ್ದ ಬೆಟ್ಟದ ತಪ್ಪಲಿನ ಆ ಶಾಲೆಯಲ್ಲಿ ಶುಕ್ರವಾರ ಗಂಭೀರ ಮೌನ ಮನೆ ಮಾಡಿತ್ತು. ಆಟಗಳಲ್ಲಿ ಮೈ ಮರೆಯಬೇಕಿದ್ದ ಮಕ್ಕಳೆಲ್ಲ ಮತದಾರರಾಗಿ ಬದಲಾಗಿ ಮತ ಚಲಾವಣೆಗೆ ಮತಗಟ್ಟೆ ಕೇಂದ್ರದ ಮುಂದೆ ಸಾಲುಗಟ್ಟಿ ನಿಂತಿದ್ದರು. ಶಾಲೆಯ ‘ರಾಜಕೀಯ’ಕ್ಕೆ ಧುಮುಕ್ಕಿದ್ದ ವಿದ್ಯಾರ್ಥಿಗಳೆಲ್ಲ ಥೇಟ್‌ ರಾಜಕಾರಣಿಗಳಂತೆ ಸಹಪಾಠಿ ಮತದಾರರ ಮನ ಓಲೈಸುವ ಕಸರತ್ತು ಗಮನ ಸೆಳೆಯುತ್ತಿತ್ತು.

ಭದ್ರತಾ ಸಿಬ್ಬಂದಿ ನಿಯೋಜನೆ ಇಲ್ಲದಿದ್ದರೂ ಮತದಾನ ಶಾಂತಿಯುತವಾಗಿ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ! ಇದೆಲ್ಲ ಕಂಡುಬಂದ್ದದ್ದು ತಾಲ್ಲೂಕಿನ ನಂದಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದ ಸಂಸತ್‌ ಚುನಾವಣೆಯಲ್ಲಿ. 

ಕೇಕೆ ಹಾಕಿ ಆಡುತ್ತಿದವರೆಲ್ಲ ಚುನಾವಣೆಯ ಸಂದರ್ಭದಲ್ಲಿ ಗಂಭೀರವದನರಾಗಿ ಗುಸು ಗುಸು ಮಾತನಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು. ಚುನಾವಣಾ ಕಣದಲ್ಲಿ ಒಟ್ಟು 9 ಅಭ್ಯರ್ಥಿಗಳಿದ್ದರು. ಮತದಾನಕ್ಕಾಗಿ 2 ಮತಗಟ್ಟೆಗಳನ್ನು ಸ್ಥಾಪಿಸಿ, ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. ಬೆಳಿಗ್ಗೆ 11.30 ರಿಂದ 12.30 ರವರೆಗೆ ನಡೆದ ಮತದಾನ ಬಹು ಶಿಸ್ತಿನಿಂದಲೇ ಜರುಗಿತು. ಭಾವಿ ಮತದಾರರು ಸರದಿ ಸಾಲಿನಲ್ಲಿ ನಿಂತು ಕೈಗೆ ಮಸಿ ಹಾಕಿಸಿಕೊಂಡು ತಮ್ಮ ನೆಚ್ಚಿನ ಅಭ್ಯರ್ಥಿಗೆ ಮತ ಚಲಾಯಿಸಿದರು. ಒಟ್ಟು 150 ಮತಗಳು ಚಲಾವಣೆಯಾದವು.

(ಮತದಾನಕ್ಕೆ ಸರದಿ ಸಾಲಿನಲ್ಲಿ ನಿಂತ ವಿದ್ಯಾರ್ಥಿಗಳು)

ಮತದಾನ ಮುಗಿಯುತ್ತಿದ್ದಂತೆ ಪ್ರಕಟವಾಗಬೇಕಿದ್ದ ಫಲಿತಾಂಶ ವಿದ್ಯಾರ್ಥಿ ಮತ್ತು ಶಿಕ್ಷಕ ವೃಂದದಲ್ಲಿ ತೀವ್ರ ಕುತೂಹಲ ಮೂಡಿಸಿತು, ಅಂತಿಮವಾಗಿ ಮತ ಎಣಿಕೆ ಮುಗಿದು ಫಲಿತಾಂಶ ಪ್ರಕಟವಾದಾಗ 38 ಮತಗಳನ್ನು ಪಡೆದ 7ನೇ ತರಗತಿಯ ಎಂ.ರಂಜಿತ್ ಪ್ರಧಾನಮಂತ್ರಿಯಾಗಿ ಮತ್ತು 27 ಮತಗಳನ್ನು ಪಡೆದ 8ನೇ ತರಗತಿಯ ಕೆ.ಗಗನಶ್ರೀ ಉಪ ಪ್ರಧಾನಿಯಾಗಿ ಆಯ್ಕೆಯಾಗಿ, ಕುತೂಹಲಕ್ಕೆ ತೆರೆ ಎಳೆದು ಎಲ್ಲರಿಂದ ಅಭಿನಂದನೆ ಪಡೆದರು.

ಬಳಿಕ ಪ್ರಧಾನಿ ಹಾಗೂ ಉಪ ಪ್ರಧಾನಿ ಪರಸ್ಪರ ಸಮಾಲೋಚನೆ ನಡೆಸಿ, ತಮ್ಮ ಮಂತ್ರಿಮಂಡಲಕ್ಕೆ ಸಚಿವರನ್ನು ಆಯ್ಕೆ ಮಾಡಿದರು. ಪ್ರಾರ್ಥನಾ, ಸಾಂಸ್ಕೃತಿಕ, ರಕ್ಷಣೆ, ಕ್ರೀಡೆ, ಸಹಕಾರ, ಹಣಕಾಸು, ಸ್ವಚ್ಛತೆ, ಯೋಗಾಸನ, ಕಂಪ್ಯೂಟರ್‌, ಆರೋಗ್ಯ ಖಾತೆ ಸೇರಿದಂತೆ ಒಟ್ಟು 17 ಸಚಿವರು ಸಂಪುಟದಲ್ಲಿ ಸ್ಥಾನ ಪಡೆದರು. ಈ ಮಂತ್ರಿ ಮಂಡಲವು ವರ್ಷವಿಡಿ ಕಾರ್ಯನಿರ್ವಹಿಸಲಿದೆ. ಮಕ್ಕಳ ದಿನಾಚರಣೆ ಕಾರ್ಯಕ್ರಮಕ್ಕೆ ಇಲ್ಲಿ ಸಚಿವ ಸಂಪುಟದ ಸದಸ್ಯರೇ ಅತಿಥಿ ಗಣ್ಯರಾಗುವುದು ವಿಶೇಷ.

ಈ ಶಾಲೆಯ ಸಂಸತ್ ಅಧಿವೇಶನ ಪ್ರತಿ ಮೂರು ತಿಂಗಳಿಗೊಮ್ಮೆ ನಡೆಯಲಿದ್ದು, ಸರಿಯಾಗಿ ತಮ್ಮ ಹುದ್ದೆ ನಿಭಾಯಿಸದ ಸಚಿವರನ್ನು ಅಧಿವೇಶನದಲ್ಲಿ ವಜಾ ಮಾಡಲು ಅವಕಾಶವಿದೆ. ಮಂತ್ರಿ ಮಂಡಲದ ಅವಧಿ ಮುಗಿಯುತ್ತಿದ್ದಂತೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ ಮಂತ್ರಿಗಳಿಗೆ ಸೂಕ್ತ ಬಹುಮಾನವು ಉಂಟು.

ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಮುಖ್ಯ ಶಿಕ್ಷಕಿ ಸಗಾಯ್ ಮೇರಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜ ಹಾಗೂ ದೇಶ ಮುನ್ನಡೆ ಸಾಧಿಸಬೇಕಾದರೆ ಮಕ್ಕಳಲ್ಲಿ ಚುನಾವಣೆಯ ಪರಿಕಲ್ಪನೆ ಕುರಿತು ಸ್ಪಷ್ಟತೆ ಬರಬೇಕು. ಜತೆಗೆ ಮೂಲಭೂತ ಹಕ್ಕುಗಳ ಬಗ್ಗೆ ಅರಿವು ಮೂಡಬೇಕು. ಆ ದಿಸೆಯಲ್ಲಿ ಇಂತಹದೊಂದು ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ’ ಎಂದು ಹೇಳಿದರು.

‘ಚುನಾವಣೆಗಳಲ್ಲಿ ಜನಸಾಮಾನ್ಯರು ಕಣದಲ್ಲಿರುವ ಭ್ರಷ್ಟ ಅಭ್ಯರ್ಥಿಗಳು ಒಡ್ಡುವ ಆಮಿಷಗಳಿಗೆ ಬಲಿಯಾಗದೆ ತಮ್ಮ ಹಕ್ಕನ್ನು ಸಮರ್ಥ ವ್ಯಕ್ತಿಗೆ ಚಲಾಯಿಸಿದರೆ ಮಾತ್ರ ದೇಶ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ. ಈ ಚುನಾವಣೆಯಿಂದ ಮಕ್ಕಳಲ್ಲಿ ಚುನಾವಣೆ ಪ್ರಕ್ರಿಯೆ ಕುರಿತು ಸಾಕಷ್ಟು ತಿಳುವಳಿಕೆ ಬರಲಿದೆ’ ಎಂದು ತಿಳಿಸಿದರು. ದೈಹಿಕ ಶಿಕ್ಷಕ ಬಿ.ಆರ್‌. ವೀರಭದ್ರ ಶಾಸ್ತ್ರಿ, ಶಿಕ್ಷಕರಾದ ವೆಂಕಟೇಶ್‌, ಅಂಬರೀಶ್‌ ಇದ್ದರು.

**

ಚುನಾವಣಾ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಶಾಲೆಯಲ್ಲಿ ಪ್ರತಿ ವರ್ಷ ಚುನಾವಣೆ ನಡೆಸಿಕೊಂಡು ಬರಲಾಗುತ್ತಿದೆ.
ಜಿ.ಸಿ.ಮಂಜುನಾಥ್‌, ಸಹ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT