ಲೋಕನಾಥನ ಪಾಂಡಿತ್ಯ

7

ಲೋಕನಾಥನ ಪಾಂಡಿತ್ಯ

Published:
Updated:
ಲೋಕನಾಥನ ಪಾಂಡಿತ್ಯ

ತೆಲುಗು ಮೂಲ: ದಾಸರಿ ವೆಂಕಟರಮಣ

ಕನ್ನಡಕ್ಕೆ: ಡಾ.ಸಿ.ಎಂ. ಗೋವಿಂದರೆಡ್ಡಿ

ತಮ್ಮ ಪಾಂಡಿತ್ಯದಿಂದ ಎದುರಿನವರನ್ನು ಪಲ್ಟಿ ಹೊಡೆಯಿಸುವವರಿಗೆ ಸರಿಯಾದ ವ್ಯವಹಾರ ಜ್ಞಾನ ಇಲ್ಲವಾದರೆ ಪ್ರಮಾದವೇ!

ಅಮಾಯಕರಾಗಿ ಕಾಣುವ ಪಾಮರರ ಕೈಯಲ್ಲಿ ಅಂಥವರು ಹೀನಾಯವಾಗಿ ಸೋತುಹೋಗುವುದು ಸತ್ಯ!

ಲೋಕನಾಥ ಎಂಬುವವನು, ಚಂಪಕವರದ ದೊಡ್ಡ ಜಮೀನ್ದಾರನ ಒಬ್ಬನೇ ಮಗ. ಒಬ್ಬನೇ ಮಗನೆಂದು ಚಿಕ್ಕಂದಿನಿಂದಲೂ ಮುದ್ದು ಮಾಡಿ ಬೆಳೆಸಿದ್ದರಿಂದ ಸೊಕ್ಕಿನಿಂದಲೂ, ಗರ್ವದಿಂದಲೂ ಅವನು ಅಯೋಗ್ಯನಾಗಿ ಬೆಳೆದ. ತಾನು ಬಹಳ ಬುದ್ಧಿವಂತನೆಂಬ ಗರ್ವದಿಂದ ಇತರರನ್ನು ಅವಹೇಳನ ಮಾಡಿ ಸಂತೋಷಿಸುತ್ತಿದ್ದ. ಇಂಥವನು ನಗರದಲ್ಲಿ ದೊಡ್ಡ ಓದು ಮುಗಿಸಿಕೊಂಡು ಚಂಪಕವರಕ್ಕೆ ಮರಳಿ ಬಂದ.

ತಾನು ಶ್ರೇಷ್ಠ ಪಂಡಿತನೆಂದೂ, ಯಾವುದೋ ಶಾಪದ ಕಾರಣದಿಂದ ಈ ಹಳ್ಳಿಗಾಡಿನಲ್ಲಿ ಇರಬೇಕಾಗಿ ಬಂದಿದೆಯೆಂದು ಅಂದುಕೊಳ್ಳುತ್ತಿದ್ದ ಲೋಕನಾಥ. ತರ್ಕ ಮಾಡುವುದರಲ್ಲೂ, ಭಾಷಾ ಪರಿಜ್ಞಾನದಲ್ಲೂ  ತನ್ನನ್ನು ಮೀರಿಸುವಂಥವನು ತನ್ನ ಊರಿನಲ್ಲಾಗಲಿ, ಅಕ್ಕಪಕ್ಕದ ಊರುಗಳಲ್ಲಾಗಲಿ ಇಲ್ಲವೆಂದೇ ಅವನ ಅಭಿಪ್ರಾಯ. ಆದ್ದರಿಂದ, ಗ್ರಾಮದಲ್ಲಿ ಯಾವೊಂದು ಸಣ್ಣ ಘಟನೆ ಜರುಗಿದರೂ ತನ್ನ ತರ್ಕದಿಂದ ಅದನ್ನು ಹಿಗ್ಗಿಸಿ ಇಲ್ಲಸಲ್ಲದ ವಿವರಣೆಗಳನ್ನು ಕೊಡುತ್ತ ಇತರರಿಗೆ ಬೇಸರವನ್ನು ಉಂಟುಮಾಡುತ್ತಿದ್ದ.

ಒಂದು ಬಾರಿ ಲೋಕನಾಥನು ಗ್ರಾಮಕ್ಕೆ ಸ್ವಲ್ಪ ದೂರದಲ್ಲಿದ್ದ ಕೆರೆಯ ದಂಡೆಯಲ್ಲಿ ಕುಳಿತುಕೊಂಡು, ಗೆಳೆಯರೊಂದಿಗೆ ಕಾಲಹರಣಕ್ಕಾಗಿ ಹರಟೆ ಹೊಡೆಯುತ್ತಿದ್ದ. ಆ ಸಮಯದಲ್ಲಿ ಹತ್ತಿರದಲ್ಲಿಯೇ ಗುರುವಯ್ಯನೆಂಬ ರೈತ ಹೋಗುತ್ತಿರಬೇಕಾದರೆ, ಅವನನ್ನು ಕರೆದು ಏನೋ ಒಂದು ವಿಧದ ಮಾತಿನಲ್ಲಿ ಸಿಲುಕಿಸಿ ಸಂತೋಷಪಡಬೇಕೆಂಬ ಉದ್ದೇಶದಿಂದ, “ಏನಯ್ಯಾ! ನಾವು ದೊಡ್ಡದೊಂದು ಕಲ್ಲನ್ನು ನೀರಿಗೆ ಹಾಕಿದ್ದೇವೆಂದುಕೋ, ಅದು ಕೂಡಲೆ ಮುಳುಗಿಹೋಗುತ್ತದೆ. ಅದು ಹಾಗೆ ಮುಳುಗಿಹೋಗಲು ಕಾರಣ ಹೇಳಬಲ್ಲೆಯಾ?” ಎಂದು ಕೇಳಿದ.

ಅದಕ್ಕೆ ಗುರುವಯ್ಯನು ನಕ್ಕು, “ದೊಡ್ಡ ಕಲ್ಲೇನು ಕರ್ಮ, ಸಣ್ಣ ಕಲ್ಲನ್ನು ಹಾಕಿದರೂ ನೀರಿನಲ್ಲಿ ಮುಳುಗಿಹೋಗುತ್ತದೆ. ಕಾರಣ – ಅದಕ್ಕೆ ಈಜು ಬರುವುದಿಲ್ಲವಾದ್ದರಿಂದ” ಎಂದನು.

ಆ ಉತ್ತರದಿಂದ ಲೋಕನಾಥ ನನ್ನೊಡಗೊಂಡು ಅವನ ಮಿತ್ರರೆಲ್ಲ ಬಿದ್ದು ಬಿದ್ದು ನಕ್ಕರು. ನಂತರ ಲೋಕನಾಥನು, ಗುರುವಯ್ಯನೊಂದಿಗೆ, “ನೀನು ಹೇಳಿದ್ದು ಶುದ್ಧ ತಪ್ಪು. ಏಕೆಂದರೆ, ಭೂಮಿಗೆ ಗುರುತ್ವಾಕರ್ಷಣ ಶಕ್ತಿ ಇದೆ. ಆದ್ದರಿಂದ ಕಲ್ಲಿಗೆ ತೂಕವಿದ್ದು ನೀರಿನಲ್ಲಿ ಮುಳುಗುತ್ತದೆ” ಎಂದನು.

ಗುರುವಯ್ಯ ಕೋಪ ತಂದುಕೊಂಡು, “ನೀವೆಲ್ಲ ಯಾಕೆ ಹೀಗೆ ನಗುತ್ತಿದ್ದೀರಿ? ನಾನು ಹೇಳಿದ್ದು ಸರಿ ಉತ್ತರ ಎಂದು ನಿಮ್ಮಿಂದಲೇ ಹೇಳಿಸಲೆ?” ಎಂದನು. “ಹೇಳಿಸು ನೋಡೋಣ!” ಎಂದನು ಲೋಕನಾಥ.

ಗುರುವಯ್ಯ ತನ್ನೆರಡೂ ಕೈಗಳನ್ನು ಮುಂದಕ್ಕೆ ಚಾಚಿ ತೋರಿಸುತ್ತ, “ಇಷ್ಟು ದೊಡ್ಡ ಮೀನನ್ನು ನೀರಿನಲ್ಲಿ ಹಾಕಿದರೆ ಮುಳುಗಿಹೋಗುವುದಿಲ್ಲ. ಯಾಕೆ?” ಎಂದು ಕೇಳಿದ.

“ಯಾಕೆ ಮುಳುಗಿಹೋಗುತ್ತೆ? ಅದು ಮೀನಲ್ಲವೆ! ಅದರಲ್ಲಿ ಪ್ರಾಣವಿರುತ್ತದೆ” ಎಂದನು ಲೋಕನಾಥ. “ಪ್ರಾಣವಿದ್ದರೆ ಏನು? ಅದು ತೂಕವಿರುತ್ತದಲ್ಲ?” ಕೇಳಿದ ಗುರುವಯ್ಯ.

“ತೂಕವಿದ್ದರೆ ಏನು? ಅದಕ್ಕೆ ಈಜು ಬರುತ್ತದಲ್ಲ, ಆದ್ದರಿಂದಲೇ ಮೀನು ಮುಳುಗದು” ಎಂದು ಹೇಳಿ ಕೂಡಲೆ ತುಟಿ ಕಚ್ಚಿಕೊಂಡ ಲೋಕನಾಥ.

“ಮತ್ತಿನ್ನೇನು! ಕಲ್ಲು ಮುಳುಗಿಹೋಗಲು ಕಾರಣ, ಅದಕ್ಕೆ ಈಜು ಬರುವುದಿಲ್ಲವೆಂಬ ನನ್ನ ಮಾತು ಸರಿಯಾದ್ದೇ” ಎಂದನು ಗುರುವಯ್ಯ.

ಲೋಕನಾಥನು ತನ್ನ ತಪ್ಪನ್ನು ಸರಿಮಾಡಿಕೊಳ್ಳುವ ಪ್ರಯತ್ನವಾಗಿ, “ಇರಬಹುದು, ಆದರೆ ಯಾವುದು ಏಕೆ ಜರುಗುತ್ತದೆ, ಎಂದು ತಿಳಿದುಕೊಳ್ಳಲು - ಪ್ರತಿಯೊಂದಕ್ಕೂ ಒಂದೊಂದು ಶಾಸ್ತ್ರವಿದೆ. ಅಂತಹ ಶಾಸ್ತ್ರಗಳಿಗೆ ಸಂಬಂಧಿಸಿದ ಪಾಂಡಿತ್ಯ ಮನುಷ್ಯನಿಗೆ ಇರಬೇಕಾದ್ದು ಅವಶ್ಯಕ” ಎಂದನು.

ಗುರುವಯ್ಯ ನಗುತ್ತ, “ಬುದ್ಧಿವಂತಿಕೆಯಿಂದ ಮಾತನ್ನು ತಿರುಗಿಸಿ ಮಾತನಾಡಲು, ನಿನ್ನಂಥವರಿಗೆ ಪಾಂಡಿತ್ಯ ಅವಶ್ಯಕವೇನೋ ಆದರೆ, ಬೆಳಿಗ್ಗೆ ಎದ್ದಾಗಲಿಂದ ಮೊದಲುಗೊಂಡು, ಹೊತ್ತು ಮುಳುಗುವವರೆಗೂ ದುಡಿಯದಿದ್ದರೆ ಹೊಟ್ಟೆ ತುಂಬದ ನನ್ನಂಥವರಿಗೆ, ಕೆಂಡ ಮುಟ್ಟಿದರೆ ಬೆರಳು ಸುಡುತ್ತದೆಂಬ ವ್ಯವಹಾರ ಜ್ಞಾನವಿದ್ದರೆ ಸಾಕು” ಎಂದು ಅಲ್ಲಿಂದ ಹೊರಟುಹೋದನು.

ಆ ಉತ್ತರದಿಂದ ಲೋಕನಾಥನು ತಲೆ ತಗ್ಗಿಸಿದ. ಆ ನಂತರ ಅವನು ತನ್ನ ನಡವಳಿಕೆಯನ್ನು ಬದಲಾಯಿಸಿಕೊಂಡು, ವ್ಯವಸಾಯದ ಕೆಲಸಗಳಲ್ಲಿ ತಂದೆಗೆ ನೆರವಾಗುತ್ತ, ತಗ್ಗಿ ಬಗ್ಗಿ ನಡೆಯುವುದನ್ನೂ, ವಿನಯವನ್ನೂ ರೂಢಿಸಿಕೊಂಡನು.    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry