ಸಂಸ್ಕೃತ ಕಲಿಕೆ: ವಿದ್ಯಾರ್ಥಿಗಳಿಗೆ ಸಲಹೆ

7

ಸಂಸ್ಕೃತ ಕಲಿಕೆ: ವಿದ್ಯಾರ್ಥಿಗಳಿಗೆ ಸಲಹೆ

Published:
Updated:
ಸಂಸ್ಕೃತ ಕಲಿಕೆ: ವಿದ್ಯಾರ್ಥಿಗಳಿಗೆ ಸಲಹೆ

ಶ್ರವಣಬೆಳಗೊಳ: ಶ್ರೇಷ್ಠರಾದವರು ಯಾವುದನ್ನು ಆಚರಿಸುತ್ತಾರೋ ಅದನ್ನು ಎಲ್ಲರೂ ಅನುಸರಿಸುತ್ತಾರೆ. ಹಾಗಾಗಿ ನಾವೂ ಉತ್ತಮ ಕಾರ್ಯಗಳನ್ನು ಮಾಡಿದರೆ, ಉಳಿದವರು ನಮ್ಮನ್ನು ಅನುಸರಿಸುತ್ತಾರೆ ಎಂದು ಉತ್ತರಾಖಂಡ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿಯೂಷ್ ದೀಕ್ಷಿತ್ ಶುಕ್ರವಾರ ಹೇಳಿದರು.

ಅವರು ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ 3 ದಿನಗಳ ಕಾಲ ಆಯೋಜಿಸಿದ್ದ ಅಖಿಲ ಭಾರತೀಯ ಸಂಸ್ಕೃತ ವಿದ್ವತ್ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಈ ದೇಶದ ಸಾಧು–ಸಂತರು ಸನಾತನ ಸಂಸ್ಕೃತಿಯ ಉಳಿವಿಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ಅದೇ ರೀತಿ ಜೈನಧರ್ಮದ ಆಚಾರ್ಯರು, ಜೈನ ಕವಿಗಳು ಆಚಾರ ವಿಚಾರ, ಸನ್ನಡತೆ, ತ್ಯಾಗ, ಅಹಿಂಸೆ ಇವುಗಳ ಬಗ್ಗೆ ದೇಶದಾದ್ಯಂತ ಸಂಚರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದು ಹೇಳಿದರು.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಪ್ರೊ.ಉಪೇಂದ್ರರಾವ್‌ ಮಾತನಾಡಿ, ‘ಜೈನ ಧರ್ಮದಲ್ಲಿ ಜೈನ ಆಚಾರ್ಯರು ಸ್ವತಃ ಹಿಂಸೆಯನ್ನು ತ್ಯಜಿಸಿ ಜೀವಿಸುತ್ತಿರುವುದು ಇಂದಿಗೂ ಮುಂದುವರಿದಿರುವುದು ಶ್ಲಾಘನೀಯ’ ಎಂದರು.

ಸಾನ್ನಿಧ್ಯ ವಹಿಸಿದ್ದ  ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ‘ಸಮ್ಮೇಳನದಲ್ಲಿ ಮಂಡನೆಯಾದ 35 ವಿಷಯಗಳನ್ನು ಗ್ರಂಥದ ರೂಪದಲ್ಲಿ ಮಹಾಮಸ್ತಕಾಭಿಷೇಕದ ವೇಳೆ ಪ್ರಕಟಿಸಲಾಗುವುದು’ ಎಂದು ಹೇಳಿದರು.

‘ಸಂಸ್ಕೃತ ಭಾರತಿ’ಯ ಸಹಯೋಗದಲ್ಲಿ ಈ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. 2006ರ ಮಹಾಮಸ್ತಕಾಭಿಷೇಕದಲ್ಲಿ ಆಕಾಶವಾಣಿಯಲ್ಲಿ ಪ್ರಾಕೃತದಲ್ಲಿ ವೀಕ್ಷಕ ವಿವರಣೆ ನೀಡಲಾಗಿತ್ತು. ಈ ಬಾರಿ ಸಂಸ್ಕೃತ, ಪ್ರಾಕೃತ, ಇಂಗ್ಲಿಷ್‌, ಕನ್ನಡ, ಹಿಂದಿ ಭಾಷೆಗಳಲ್ಲಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ನೇರ ವೀಕ್ಷಕ ವಿವರಣೆ ನೀಡಲಾಗುವುದು’ ಎಂದು ಹೇಳಿದರು.

‘ಕನ್ನಡದ ಆದಿಕವಿ ಪಂಪ ಆದಿಪುರಾಣದಲ್ಲಿ ಬಾಹುಬಲಿಯ ವರ್ಣನೆಯನ್ನು ಅದ್ಭುತವಾಗಿ ಮಾಡಿದ್ದಾರೆ. ಅದಕ್ಕೂ ಮೊದಲು ಸಂಸ್ಕೃತ ಸಾಹಿತ್ಯದಲ್ಲಿ ಬಾಹುಬಲಿಯ ಬಗ್ಗೆ ವಿಸ್ತೃತ ವರ್ಣನೆ ಇದೆ’ ಎಂದು ಅವರು ಹೇಳಿದರು.

‘ವಿದ್ಯಾರ್ಥಿಗಳು ಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಓದಬೇಕು. ಸಂಸ್ಕೃತದ ಶ್ಲೋಕಗಳನ್ನು ಪಠಿಸುವುದರಿಂದ ಉಚ್ಚಾರಣೆ ಶುದ್ಧವಾಗುತ್ತದೆ. ಈ ಭಾಷೆಯ ಸಂರಕ್ಷಣೆ, ಸಮೃದ್ಧಿಗಾಗಿ ನಾವೆಲ್ಲರೂ ಶ್ರಮಿಸೋಣ’ ಎಂದು ಹೇಳಿದರು. ಸಂಸ್ಕೃತ ಭಾರತಿಯ ಪುಸ್ತಕ ಪ್ರದರ್ಶನದ ಮುಖ್ಯ ರೂವಾರಿಗಳಾದ ವಿಶ್ವನಾಥ ದೀಕ್ಷಿತ ಅವರನ್ನು ಸನ್ಮಾನಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry