ವಿದ್ಯಾರ್ಥಿ ನಿಲಯಕ್ಕೆ ಬೇಕಿದೆ ರಸ್ತೆ ಸಂಪರ್ಕ

7

ವಿದ್ಯಾರ್ಥಿ ನಿಲಯಕ್ಕೆ ಬೇಕಿದೆ ರಸ್ತೆ ಸಂಪರ್ಕ

Published:
Updated:
ವಿದ್ಯಾರ್ಥಿ ನಿಲಯಕ್ಕೆ ಬೇಕಿದೆ ರಸ್ತೆ ಸಂಪರ್ಕ

ಚಾಮರಾಜನಗರ: ನಗರದ ಡಾ.ಬಿ.ಆರ್.ಅಂಬೇಡ್ಕರ್‌ ಜಿಲ್ಲಾ ಕ್ರೀಡಾಂಗಣದ ಪಕ್ಕದಲ್ಲಿರುವ ಬಾಲಕರ ಮೂರು ಹಾಸ್ಟೆಲ್‌ಗಳಿಗೆ ಸಮರ್ಪಕ ರಸ್ತೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳು ಪ್ರತಿನಿತ್ಯ ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ.ಜಿಲ್ಲಾ ಕ್ರೀಡಾಂಗಣದ ಬಳಿ ಅಲ್ಪ ಸಂಖ್ಯಾತರ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯವನ್ನು ಸಚಿವರಾಗಿದ್ದ ಎಚ್.ಎಸ್‌. ಮಹದೇವಪ್ರಸಾದ್‌ ಅವರು 2013ರಲ್ಲಿ ಉದ್ಘಾಟಿಸಿದ್ದರು.

ಎರಡು ವರ್ಷದ ಹಿಂದೆ ಇದರ ಪಕ್ಕದಲ್ಲಿಯೇ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮತ್ತು ವೃತ್ತಿಪರ ತರಗತಿಯ ಮೆಟ್ರಿಕ್‌್ ನಂತರದ ಬಾಲಕರ ವಿದ್ಯಾರ್ಥಿನಿಲಯ ಆರಂಭಿಸಲಾಗಿದೆ. ಆದರೆ, ಈ ಮೂರೂ ಹಾಸ್ಟೆಲ್‌ಗಳಿಗೆ ಇನ್ನೂ ರಸ್ತೆ ವ್ಯವಸ್ಥೆ ಕಲ್ಪಿಸಿಲ್ಲ.

ವಿವಿಧ ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿದ್ದಾರೆ. ಈ ವಿದ್ಯಾರ್ಥಿಗಳು ಕ್ರೀಡಾಂಗಣದ ಒಳಗಿನಿಂದ ಓಡಾಡುವಂತಾಗಿದೆ. ಮಳೆ ಬಂದಾಗ ಕ್ರೀಡಾಂಗಣದಲ್ಲಿ ನೀರು ತುಂಬಿಕೊಳ್ಳುವುದರಿಂದ ಕಾಲೇಜಿಗೆ ಹೋಗಲು ಹರಸಾಹಸ ಪಡಬೇಕಾಗುತ್ತದೆ.

ಹಾಸ್ಟೆಲ್‌ ಮುಖ್ಯದ್ವಾರದ ಎದುರೇ ಪೊಲೀಸ್‌ ವಸತಿ ನಿಲಯ ಇದೆ. ಹಾಸ್ಟೆಲ್‌ ಸುತ್ತ ಕಾಂಪೌಂಡ್‌ ನಿರ್ಮಿಸಿ ಇಲ್ಲಿಂದ ಮುಖ್ಯರಸ್ತೆಗೆ ಇದ್ದ ಸಂಪರ್ಕ ಕಡಿತಗೊಳಿಸಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹಾಸ್ಟೆಲ್ ಹಿಂಬದಿಯಿಂದ ಕ್ರೀಡಾಂಗಣವನ್ನು ಸುತ್ತಿ ಬಳಸಿ ಹೋಗುವಂತಾಗಿದೆ. ಹಾಸ್ಟೆಲ್‌ ಮುಂಭಾಗ ಸಮರ್ಪಕ ಚರಂಡಿ ವ್ಯವಸ್ಥೆಯೂ ಇಲ್ಲ. ಮಳೆ ಬಂದಾಗ ಓಡಾಡುವ ಜಾಗವೆಲ್ಲ ನೀರಿನಿಂದ ಆವೃತವಾಗುತ್ತದೆ.

ತಡೆಗೋಡೆ: ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಸುತ್ತ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗುತ್ತಿದೆ. ರಸ್ತೆಗೆ ಸಂಪರ್ಕ ಕಲ್ಪಿಸುವ ಜಾಗ ಮಾತ್ರ ಓಡಾಟಕ್ಕೆ ಮುಕ್ತವಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ, ಕ್ರೀಡಾಂಗಣದೊಳಗೆ ಓಡಾಡಲು ಕ್ರೀಡಾ ಇಲಾಖೆ ಅವಕಾಶ ನೀಡುತ್ತದೆಯೇ ಎಂಬ ಪ್ರಶ್ನೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ‘ವಿದ್ಯಾರ್ಥಿ ನಿಲಯಕ್ಕೆ ಈವರೆಗೆ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ.

ಮಳೆ ಬಂದಾಗ ಕಾಲೇಜಿಗೆ ಹೋಗಲು ಕಷ್ಟವಾಗುತ್ತದೆ. ರಾತ್ರಿ ವೇಳೆ ಹೈ ವೋಲ್ಟೆಜ್‌ ಕರೆಂಟ್‌ ಬಂದು ವಿದ್ಯುತ್‌ ಸಂಪರ್ಕ ಕಡಿತವಾಗುತ್ತದೆ. ಇದರಿಂದ ಓದಲು ತುಂಬಾ ತೊಂದರೆಯಾಗುತ್ತಿದೆ. ರಜೆ ಇರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ. ಎಲ್ಲರೂ ಬಂದರೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ’ ಎಂದು ವಿದ್ಯಾರ್ಥಿಗಳು ಸಮಸ್ಯೆ ಬಿಚ್ಚಿಟ್ಟರು.

‘ಹಾಸ್ಟೆಲ್‌ ನಿರ್ಮಾಣದ ವೇಳೆ ಇಟ್ಟಿಗೆ, ಮರಳು ಮುಂತಾದ ಸಾಮಗ್ರಿಗಳನ್ನು ಈ ಹಿಂದೆಯಿದ್ದ ಮಾರ್ಗದಲ್ಲಿ ಸಾಗಾಣಿಕೆ ಮಾಡಲು ಪೊಲೀಸ್‌ ಇಲಾಖೆ ಅನುಮತಿ ನೀಡಿತು. ಅದು ಬಾಲಕರ ವಿದ್ಯಾರ್ಥಿನಿಲಯ ಎಂದು ತಿಳಿದ ಬಳಿಕ ಸಂಚಾರಕ್ಕೆ ಅವಕಾಶ ನೀಡಲಿಲ್ಲ. ಹಾಗಾಗಿ, ರಸ್ತೆ ನಿರ್ಮಾಣ ವಿಳಂಬವಾಗಿದೆ’ ಎಂದು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ವಿಶ್ವನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಸ್ತುತ ಅಲ್ಪಸಂಖ್ಯಾತರ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ 70, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ 110 ಮತ್ತು ವೃತ್ತಿಪರ ತರಗತಿಯ ಮೆಟ್ರಿಕ್‌ ನಂತರದ ಬಾಲಕರ ಹಾಸ್ಟೆಲ್‌ನಲ್ಲಿ 99 ವಿದ್ಯಾರ್ಥಿಗಳಿದ್ದಾರೆ.

ಅಧಿಕಾರಿಗಳ ದಿಢೀರ್‌ ಭೇಟಿ

ಚಾಮರಾಜನಗರ: ವಿದ್ಯಾರ್ಥಿ ನಿಲಯದ ರಸ್ತೆ ಹಾಗೂ ಇತರೆ ಸಮಸ್ಯೆಗಳ ಕುರಿತು ‘ಪ್ರಜಾವಾಣಿ’ ಪ್ರತಿನಿಧಿ ಮಾಹಿತಿ ಸಂಗ್ರಹಿಸಿದ ಬಳಿಕ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ದಿಢೀರ್‌್ ಭೇಟಿ ನೀಡಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿ ಶೀಘ್ರ ಪರಿಹರಿಸುವ ಭರವಸೆ ಕೊಟ್ಟರು.

* * 

ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆಗೆ ಮನವಿ ಮಾಡ ಲಾಗಿದೆ. ಸಮಸ್ಯೆ ಬಗೆಹರಿಸುವ ಭರವಸೆ ಯನ್ನು ಅಧಿಕಾರಿಗಳು ನೀಡಿದ್ದಾರೆ

ಲಿಂಗಣ್ಣ ನಿಲಯಪಾಲಕ

 

* * 

ಕ್ರೀಡಾಂಗಣದೊಳಗೆ ರಸ್ತೆ ನಿರ್ಮಿಸಲು ಕ್ರೀಡಾ ಇಲಾಖೆ ಅನುಮತಿ ನೀಡಿದೆ. ಶೀಘ್ರವೇ ಪೂರ್ವ ಯೋಜನೆ ತಯಾರಿಸಿ ಜಂಟಿ ನಿರ್ದೇ ಶಕರಿಗೆ ವರದಿ ನೀಡಲಾಗುವುದು

ವಿಶ್ವನಾಥ್‌, ಜಿಲ್ಲಾ ಅಧಿಕಾರಿ, ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry