ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗಮಂಚದ ನೇಪಥ್ಯದಲ್ಲಿ ಕೊನೆಯುಸಿರು!

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ನಮ್ಮ ಊರು ಒಂದು ತಾಲ್ಲೂಕು. ವಾಣಿಜ್ಯ ಕೇಂದ್ರವೆನಿಸಿದ್ದರೂ ವ್ಯವಸಾಯವೇ ಇಲ್ಲಿಯ ಮುಖ್ಯ ಉದ್ಯೋಗ. ರೈತರು ತಮ್ಮ ಮನರಂಜನೆಗಾಗಿ ರಚಿಸಿಕೊಂಡು ಆಡುವ ‘ಕೃಷ್ಣ ಪಾರಿಜಾತ’ ಬಯಲಾಟ, ‘ಸಂಗ್ಯಾ ಬಾಳ್ಯಾ’ ದಪ್ಪಿನಾಟ ಹಾಗೂ ಭಜನಿ ಮೇಳಗಳು ಇಲ್ಲಿ ಪ್ರಸಿದ್ಧವಾದವು. ಆಗಾಗ ನಾಟಕ ಕಂಪನಿಗಳು ಇಲ್ಲಿ ಬಂದು ಪ್ರದರ್ಶನ ನೀಡುತ್ತಿರುತ್ತವೆ. ಸಿನಿಮಾ, ಟಿ.ವಿ., ಈಗ ಮೊಬೈಲ್ ಹಾವಳಿಯಿಂದ ನಾಟಕಗಳಲ್ಲಿ  ಜನರು ಆಸಕ್ತಿ ಕಳೆದುಕೊಂಡಿದ್ದಾರೆ.

ಇತ್ತೀಚೆಗೆ ನಮ್ಮ ಊರಿನಲ್ಲಿ ಒಂದು ನಾಟಕ ಕಂಪನಿ ಕ್ಯಾಂಪ್ ಮಾಡಿತ್ತು. ಬಹಳ ದಿನಗಳ ನಂತರದಲ್ಲಿ ಕಂಪನಿ ನಾಟಕ ನಮ್ಮೂರಿಗೆ ಬಂದಿರುವುದು ನಾಟಕಪ್ರೇಮಿಗಳಿಗೆ ಸಂತಸದ ಸಂಗತಿಯಾಗಿತ್ತು. ನಾನು ನನ್ನ ಮಿತ್ರರು ಕೂಡಿ ರವಿವಾರ ರಜೆಯ ದಿನದಂದು ನಾಟಕ ನೋಡಲು ಹೋಗಿದ್ದೆವು.

ನಾಟಕ ನಾಂದಿಯೊಂದಿಗೆ ಪ್ರಾರಂಭವಾಯಿತು. ಮೊದಲ ಸನ್ನಿವೇಶದಲ್ಲಿ ಒಬ್ಬ ಕಲಾವಿದ ಮುದುಕನ ವೇಷದಲ್ಲಿ ಬಂದ. ವರದಕ್ಷಿಣೆ ಭೂತದ ಕೈಯಲ್ಲಿ ಸಿಲುಕಿ ಮಗಳ ಮದುವೆಗಾಗಿ ಪಡುತ್ತಿರುವ ಕಷ್ಟವನ್ನು ವ್ಯಕ್ತಪಡಿಸಿ ಬಹಳ ಮನೋಜ್ಞವಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿ ಚಪ್ಪಾಳೆ ಗಿಟ್ಟಿಸಿಕೊಂಡನು. ಅವನು ಹಾಡಿದ ಹಾಡು ಕೂಡ ಬಹಳ ಇಂಪಾಗಿತ್ತು. ನಾಟಕ ಮುಂದುವರೆದು ಪ್ರೇಕ್ಷಕರ ಮನ ಸೂರೆಗೊಂಡಿತು.

ನಂತರದ ಸನ್ನಿವೇಶದಲ್ಲಿ ಮತ್ತೆ ಆ ತಂದೆಯ ಪಾತ್ರದ ಆಗಮನವಾಯಿತು. ಪ್ರೇಕ್ಷಕರಲ್ಲಿ ಗುಸುಗುಸು, ಸಣ್ಣಗೆ ಗದ್ದಲ. ಮುದುಕನ ವೇಷದ ಮೊದಲಿನ ಕಲಾವಿದನ ಬದಲಾಗಿ ಬೇರೆ ಕಲಾವಿದ ಅದೇ ತಂದೆಯ ಪಾತ್ರವನ್ನು ಮಾಡಲು ಬಂದಿದ್ದು ಈ ಗದ್ದಲಕ್ಕೆ ಕಾರಣವಾಗಿತ್ತು.

ನಾಟಕ ಯಾರಿಗೂ ಕೇಳಿಸದಂತಾಯಿತು. ಆಗ ನಾಟಕದ ಮಾಲೀಕರು ವೇದಿಕೆಗೆ ಬಂದು – ‘ಅನಿವಾರ್ಯ ಕಾರಣದಿಂದ ಬೇರೆ ಕಲಾವಿದ ತಂದೆಯ ಪಾತ್ರ ನಿರ್ವಹಿಸುತ್ತಿದ್ದಾರೆ. ಆ ಕಾರಣವನ್ನು ನಾಟಕ ಮುಗಿದ ನಂತರ ಹೇಳುತ್ತೇನೆ. ದಯವಿಟ್ಟು ಪ್ರೇಕ್ಷಕರು ಸಹಕರಿಸಬೇಕು’ ಎಂದು ಹೇಳಿ ನಿರ್ಗಮಿಸಿದರು. ಮತ್ತೆ ನಾಟಕ ಪ್ರಾರಂಭವಾಯಿತು.

ಮೊದಲಿನ ಕಲಾವಿದನಷ್ಟೇ ಚೆನ್ನಾಗಿ ಎರಡನೆಯ ಕಲಾವಿದನೂ ಪಾತ್ರ ನಿರ್ವಹಿಸುತ್ತಿದ್ದುದರಿಂದ ಪ್ರೇಕ್ಷಕರು ಸುಮ್ಮನಾಗಿ ನಾಟಕ ವೀಕ್ಷಿಸಿದರು. ನಾಟಕದ ಅಂತಿಮ ಭಾಗ ಮುಗಿದು ಅಂಕದ ಪರದೆ ಜಾರಬೇಕು, ಅಷ್ಟರಲ್ಲಿ ನಾಟಕದ ಮಾಲೀಕರು ಬಂದು – ‘ಪ್ರೇಕ್ಷಕ ತಂದೆತಾಯಿಗಳಲ್ಲಿ ಒಂದು ವಿಜ್ಞಾಪನೆ. ತಂದೆಯ ಪಾತ್ರವನ್ನು ಇನ್ನೊಬ್ಬರಿಂದ ಮಾಡಿಸುವ ಅನಿವಾರ್ಯತೆ ಏನಿತ್ತು ಎಂಬ ಪ್ರಶ್ನೆ ತಮ್ಮೆಲ್ಲರಿಗೂ ಕಾಡಿರಬಹುದು.

ಮೊದಲು ಪಾತ್ರ ನಿರ್ವಹಿಸಿದ ಕಲಾವಿದ ತನ್ನ ಮೊದಲ ಸನ್ನಿವೇಶ ಮುಗಿಸಿ ವಿಶ್ರಾಂತಿ ಪಡೆಯಲು ಮಲಗಿದಲ್ಲಿಯೇ ಇಹಲೋಕ ತ್ಯಜಿಸಿದ್ದಾರೆ. ಇಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ಬೇರೆ ಕಲಾವಿದನನ್ನು ರಂಗಕ್ಕೆ ಕಳಿಸಲಾಗಿದೆ. ತಾವು ಅನ್ಯಥಾ ಭಾವಿಸದೇ ನಾಟಕವನ್ನು ವೀಕ್ಷಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ಅನಂತ ಧನ್ಯವಾದಗಳು, 2ನೇ ಷೋ ಇರುವುದಿಲ್ಲ’ ಎಂದು ಅತಿ ದುಃಖದಿಂದ ಹೇಳಿದರು.

ಜನರಲ್ಲಿ ಆಶ್ಚರ್ಯ ಮತ್ತು ದುಃಖದಭಾವ ಒಮ್ಮೆಲೇ ಉಂಟಾಗಿ ‘ಅಯ್ಯೋ ಪಾಪ’ ಎಂದು ಹೊರನಡೆದರು. ಕೆಲವರು ಗ್ರೀನ್‌ ರೂಮಿನತ್ತ ಧಾವಿಸಿದರು. ಕಲಾವಿದ ತನ್ನ ಜೀವನನಾಟಕದ ಅಂತಿಮಯಾತ್ರೆ ಮುಗಿಸಿದ್ದ. ಹಾವೇರಿ ಜಿಲ್ಲೆಯ ಹತ್ತಿರದ ಕಲಾವಿದನ ಹಳ್ಳಿಗೆ ಪಾರ್ಥಿವ ಶರೀರ ಸಾಗುತ್ತಿದ್ದಂತೆ ನಾವೆಲ್ಲ ತದೇಕಚಿತ್ತದಿಂದ ಗಾಡಿಯನ್ನೇ ನೋಡುತ್ತಿದ್ದೆವು.

ಕಲಾವಿದ ತೀರಿಕೊಂಡಾಗ ನಾಟಕವನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ತಿ ಮುಗಿಸಿದ, ನಾಟಕ ಕಂಪನಿಯ ಕರ್ತವ್ಯಪ್ರಜ್ಞೆ ಮತ್ತು ಕಾರ್ಯತತ್ಪರತೆ ನಮ್ಮನ್ನೆಲ್ಲ ಮೂಕವಿಸ್ಮಿತಗೊಳಿಸಿತು. ‘ಆಧುನಿಕ ಯುಗದಲ್ಲಿ ಇಂಥ ಜನ ಇರುವರೆಂದು ಅಲ್ಪಸ್ವಲ್ಪ ಮಳೆ ಬೆಳೆ ಆಗುತ್ತಿದೆ’ ಎಂದು ಹಳ್ಳಿಯ ಅಜ್ಜನೊಬ್ಬ ಗೊಣಗುತ್ತಿದ್ದ.

ಕೆ.ಪಿ. ರಾಮಗುಂಡಿ, ಬೈಲಹೊಂಗಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT