‘ಅಕ್ಷಯಪಾತ್ರ’ ಎನ್ನುವ ಅಪೂರ್ವ ಸಮೀಕರಣ

7

‘ಅಕ್ಷಯಪಾತ್ರ’ ಎನ್ನುವ ಅಪೂರ್ವ ಸಮೀಕರಣ

Published:
Updated:
‘ಅಕ್ಷಯಪಾತ್ರ’ ಎನ್ನುವ ಅಪೂರ್ವ ಸಮೀಕರಣ

ಅಂತರರಾಷ್ಟ್ರೀಯ ಶ್ರೀಕೃಷ್ಣ ಪ್ರಜ್ಞಾ ಸಂಘ’ವನ್ನು (ಇಸ್ಕಾನ್) ಸ್ಥಾಪಿಸಿದ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ಕೋಲ್ಕತ್ತ ಸಮೀಪದ ಮಾಯಾಪುರದಲ್ಲಿ ಇದ್ದಾಗ ಒಂದು ಪ್ರಸಂಗ ನಡೆಯಿತು. ಪ್ರಭುಪಾದರು ಕಿಟಕಿಯಿಂದ ಬೀದಿಯನ್ನು ನೋಡುತ್ತಿದ್ದರು. ಅಲ್ಲಿ ಯಾರೋ ತಿಂದುಂಡು ಎಸೆದ ಆಹಾರಕ್ಕಾಗಿ ಬಡಮಕ್ಕಳ ನಡುವೆ ಕಿತ್ತಾಟ ನಡೆಯುತ್ತಿತ್ತು. ತುತ್ತು ಅನ್ನ ಗಿಟ್ಟಿಸಿಕೊಳ್ಳಲು ಮಕ್ಕಳು ನಡೆಸುತ್ತಿರುವ ಕಿತ್ತಾಟಕ್ಕೆ ಬೀದಿನಾಯಿಗಳೂ ಸೇರಿಕೊಂಡವು. ಅವು ಕೂಡ ಮಕ್ಕಳ ಜೊತೆ ಆ ಆಹಾರಕ್ಕಾಗಿ ಕದನ ಆರಂಭಿಸಿದವು. ಈ ದೃಶ್ಯ ಪ್ರಭುಪಾದರ ಮನಸ್ಸನ್ನು ಕಲಕಿತು.

‘ಇಸ್ಕಾನ್‌ ಕೇಂದ್ರದ 10 ಕಿ.ಮೀ. ಸುತ್ತಳತೆಯ ಪ್ರದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ನರಳುವ ಸ್ಥಿತಿ ಎದುರಾಗದಂತೆ ನೋಡಿಕೊಳ್ಳಿ’ ಎಂಬ ಸೂಚನೆಯನ್ನು ಅವರು ತಮ್ಮ ಅನುಯಾಯಿಗಳಿಗೆ ನೀಡಿದರು.

ಈಗ ಪ್ರತಿದಿನ ಮಧ್ಯಾಹ್ನ ಶಾಲಾ ಮಕ್ಕಳಿಗೆ ಬಿಸಿ ಊಟ ಪೂರೈಸುತ್ತಿರುವ ‘ಅಕ್ಷಯಪಾತ್ರ ಪ್ರತಿಷ್ಠಾನ’ದ ಯೋಜನೆಯ ಹಿಂದಿನ ಪ್ರೇರಣಾದಾಯಿ ಕಥೆ ಇದು. ಇಷ್ಟು ಮಾತ್ರ ಹೇಳಿದರೆ ಪೂರ್ಣ ವಿವರ ನೀಡಿದಂತೆ ಆಗುವುದಿಲ್ಲ. ಪ್ರಭುಪಾದರು ನೋಡಿದ ದೃಶ್ಯ ಮುಂದೊಂದು ದಿನ ‘ಸಾಧುಗಳು ಮತ್ತು ಕಾರ್ಪೊರೇಟ್ ವಲಯ ಸರ್ಕಾರದ ಜೊತೆ ಸೇರಿ ನಡೆಸುವ ದೇಶದ ಅತಿದೊಡ್ಡ ದಾಸೋಹ ಕಾರ್ಯಕ್ರಮ’ವಾಗಿ ರೂಪುಗೊಳ್ಳುವುದಕ್ಕೂ ಕಾರಣವಾಯಿತು. ಸಾಧುಗಳು, ಕಾರ್ಪೊರೇಟ್ ವಲಯ ಮತ್ತು ಸರ್ಕಾರಗಳು (ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು) ದಾಸೋಹ ಯೋಜನೆ ನಡೆಸಲು ಒಂದುಗೂಡಿರುವುದು ‘ಅಕ್ಷಯಪಾತ್ರ ಪ್ರತಿಷ್ಠಾನ’ದ ಸೂರಿನಡಿ. 

2000ನೇ ಇಸವಿಯಲ್ಲಿ ಬೆಂಗಳೂರಿನ ಹೊರವಲಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಲು ‘ಅಕ್ಷಯಪಾತ್ರ ಪ್ರತಿಷ್ಠಾನ’ ಆರಂಭಿಸಿದ ದಿನದಿಂದಲೂ, ಇಸ್ಕಾನ್‌ನ ಸಾಧುಗಳು ಹಾಗೂ ಕಾರ್ಪೊರೇಟ್ ವಲಯವನ್ನು ಪ್ರತಿನಿಧಿಸುವವರು ಜೊತೆಯಾಗಿ ಹೆಜ್ಜೆ ಇಟ್ಟಿದ್ದಾರೆ. 2003ರಿಂದ ಸಾಧುಗಳು ಮತ್ತು ಕಾರ್ಪೊರೇಟ್ ವಲಯದ ಪ್ರತಿನಿಧಿಗಳ ಜೊತೆ ಅನ್ನದಾಸೋಹ ಕಾರ್ಯಕ್ರಮದಲ್ಲಿ ಸರ್ಕಾರವೂ ಜೊತೆಯಾಯಿತು.

2016-17ರಲ್ಲಿ ದೇಶದ 11.43 ಲಕ್ಷ ಶಾಲೆಗಳ 9.78 ಕೋಟಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಯೋಜನೆಯ ಪ್ರಯೋಜನ ಪಡೆದಿದ್ದಾರೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹೇಳಿದೆ. ಈ ಪೈಕಿ 10 ರಾಜ್ಯಗಳ ಒಟ್ಟು 16.50 ಲಕ್ಷ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿ ಊಟ ಪೂರೈಸಿದ್ದು ‘ಅಕ್ಷಯಪಾತ್ರ ಪ್ರತಿಷ್ಠಾನ’.

ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ಊಟ ಪೂರೈಸುವ ಯೋಜನೆ ಅನುಷ್ಠಾನದ ಹಿಂದೆ ಒಂದು ಕಥೆಯಿದೆ.  ಸಾಧುಗಳು ಕಾರ್ಪೊರೇಟ್ ವಲಯದ ಜೊತೆಗೂಡಿ ಆರಂಭಿಸಿದ ದಾಸೋಹ ಕಾರ್ಯಕ್ರಮದ ಒಳಗೆ ಇಣುಕಿ ನೋಡಿದರೆ, ಸೇವಾ ಕೈಂಕರ್ಯವೊಂದನ್ನು ಸಾರ್ವಜನಿಕ ಸಹಭಾಗಿತ್ವದ ಅಡಿ ನಡೆಸುವ ವಿಶಿಷ್ಟ ಮಾದರಿಯೊಂದು ಕಾಣಿಸುತ್ತದೆ.

ಸಾಧುಗಳು – ಕಾರ್ಪೊರೇಟ್ ಪ್ರಮುಖರ ಯೋಜನೆ

2000ನೇ ಇಸವಿಯಲ್ಲಿ ಬೆಂಗಳೂರಿನ ಐದು ಸರ್ಕಾರಿ ಶಾಲೆಗಳ ಒಟ್ಟು ಒಂದೂವರೆ ಸಾವಿರ ಮಕ್ಕಳಿಗೆ ಬಿಸಿಯೂಟ ಪೂರೈಸುವ ಮೂಲಕ ಚಟುವಟಿಕೆ ಆರಂಭಿಸಿದ ‘ಅಕ್ಷಯಪಾತ್ರ’ 2016ರ ಫೆಬ್ರುವರಿ ವೇಳೆಗೆ ಒಟ್ಟು 200 ಕೋಟಿ ಊಟ ಪೂರೈಸಿದೆ. 2020ರ ವೇಳೆಗೆ ಪ್ರತಿದಿನ 50 ಲಕ್ಷ ಮಕ್ಕಳಿಗೆ ಬಿಸಿಯೂಟ ಪೂರೈಸುವ ಗುರಿ ಹೊಂದಿದೆ.

ಇದೆಲ್ಲ ಸಾಧ್ಯವಾಗಿದ್ದು ಹೇಗೆ?

ಮೊದಲ 1,500 ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಕೊಡಲು ಆರಂಭಿಸಿದ್ದು ಇಸ್ಕಾನ್‌ನ ಪೂರ್ಣಾವಧಿ ಕಾರ್ಯಕರ್ತ ವೇಣುವದನ ಗೋಪಾಲ ದಾಸ ನಡೆಸಿದ ಅಧ್ಯಯನದ ನಂತರ. ‘ಬೆಂಗಳೂರು ಹೊರವಲಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ಒದಗಿಸುವ ಅವಶ್ಯಕತೆ ತೀರಾ ಇದೆ ಎಂದು ನಮಗನಿಸಿತು. ಹಾಗಾಗಿ, ಈ ಭಾಗದ ಐದು ಶಾಲೆಗಳಲ್ಲಿ ಕಾರ್ಯಕ್ರಮ ಆರಂಭಿಸಿದೆವು’ ಎಂದು ವೇಣುವದನ ದಾಸ ಹೇಳಿಕೊಂಡಿದ್ದಾರೆ.

ಇಸ್ಕಾನ್‌ನವರು ಐದು ಶಾಲೆಗಳಿಗೆ ಬಿಸಿಯೂಟ ಪೂರೈಸುತ್ತಿರುವ ವಿಚಾರ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ಹರಡಿತು. ‘ನಾವು ಪೂರೈಸುತ್ತಿದ್ದ ಊಟ ಮಕ್ಕಳಿಗೆ ಇಷ್ಟವಾಗಿತ್ತು. ತಮ್ಮ ಶಾಲೆಗಳಿಗೂ ಬಿಸಿಯೂಟ ಪೂರೈಸಬೇಕು ಎಂಬ ಅರ್ಜಿಗಳು ಕೆಲವೇ ತಿಂಗಳಲ್ಲಿ ನಮಗೆ ಬೇರೆ ಬೇರೆ ಕಡೆಗಳಿಂದ ಬಂದವು’ ಎಂದು ನೆನಪಿಸಿಕೊಳ್ಳುತ್ತಾರೆ ಇಸ್ಕಾನ್‌ ಸಂಸ್ಥೆಯ ಹಿರಿಯ ಕಾರ್ಯನಿರ್ವಾಹಕ ನವೀನ ನೀರದ ದಾಸ.

ಇಷ್ಟರಲ್ಲಾಗಲೇ, ಟಿ.ವಿ. ಮೋಹನದಾಸ್ ಪೈ ಅವರು, ‘ನೀವು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಪೂರೈಸಬಾರದೇಕೆ. ಇದರಿಂದ ಮಕ್ಕಳ ಹಸಿವು ನೀಗುತ್ತದೆ, ಕಲಿಕಾ ಮಟ್ಟವೂ ಹೆಚ್ಚುತ್ತದೆ’ ಎಂಬ ಮಾತನ್ನು ಇಸ್ಕಾನ್‌ನ ಹಿರಿಯರ ಬಳಿ ಹೇಳಿದ್ದರು. ತಮಿಳುನಾಡಿನ ಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಪೂರೈಸಲು ಆರಂಭಿಸಿದ ನಂತರ ಮಕ್ಕಳ ಹಾಜರಾತಿ ಪ್ರಮಾಣ ಹೆಚ್ಚಿದ್ದನ್ನು ಪೈ ಅವರು ಗಮನಿಸಿದ್ದರು.ಮೋಹನದಾಸ್ ಪೈ

ಈ ವಿಚಾರವನ್ನೂ ಅವರು ಇಸ್ಕಾನ್‌ ಮುಖ್ಯಸ್ಥರ ಬಳಿ ಹಂಚಿಕೊಂಡಿದ್ದರು. ದಾಸೋಹ ಆರಂಭಿಸಲು ಸಾಧುಗಳು ಹಾಗೂ ಕಾರ್ಪೊರೇಟ್ ವಲಯದವರ ಚಿಂತನೆ ಒಂದಾದ ಸಂದರ್ಭ ಇದು. ಪೈ ಅವರು ಆಗ ಇನ್ಫೊಸಿಸ್‌ ಕಂಪೆನಿಯಲ್ಲಿ ಮುಖ್ಯ ಹಣಕಾಸು ಅಧಿಕಾರಿ (ಸಿ.ಎಫ್‌.ಒ) ಆಗಿದ್ದರು.

ಇಸ್ಕಾನ್‌ ದೇವಸ್ಥಾನದ ಆವರಣದಲ್ಲೇ ಇದ್ದ (ಈಗಲೂ ಅಲ್ಲಿರುವ) ಅಡುಗೆ ಮನೆಯಿಂದ ದೂರದ ಶಾಲೆಗಳ ಮಕ್ಕಳಿಗೆ ಊಟ ಪೂರೈಸಲು ವಾಹನಗಳ ಅವಶ್ಯಕತೆ ಎದುರಾದಾಗ ನೆರವಿಗೆ ಬಂದವರು ಮೋಹನದಾಸ್ ಪೈ. ಊಟವನ್ನು ಅಡುಗೆ ಮನೆಯಿಂದ ಶಾಲೆಗಳಿಗೆ ಕೊಂಡೊಯ್ಯಲು ಮೊದಲ ವಾಹನವನ್ನು ಪೈ ದೇಣಿಗೆ ರೂಪದಲ್ಲಿ ನೀಡಿದರು.

ಅದೇ ಸಂದರ್ಭದಲ್ಲಿ ಅಭಯ್ ಜೈನ್  ‘ಈ ಯೋಜನೆ ವಿಸ್ತರಿಸಲು ನಾನು ಇನ್ನಷ್ಟು ದಾನಿಗಳನ್ನು ಒಗ್ಗೂಡಿಸುವೆ’ ಎಂಬ ಭರವಸೆ ನೀಡಿದರು. ಜೈನ್ ಅವರು ಮಣಿಪಾಲ ಶಿಕ್ಷಣ ಮತ್ತು ಮಣಿಪಾಲ ಸಮೂಹದ ಕಾರ್ಪೊರೇಟ್ ವ್ಯವಹಾರಗಳ ಸಲಹೆಗಾರರು, ಈಗ ಅಕ್ಷಯಪಾತ್ರ ಪ್ರತಿಷ್ಠಾನದ ಟ್ರಸ್ಟಿಗಳಲ್ಲಿ ಒಬ್ಬರು.

ಎರಡು ವಿಭಿನ್ನ ನೆಲೆಯ ಗುಂಪುಗಳು ಒಂದಾಗಿ ಆರಂಭಿಸಿದ ಯೋಜನೆಗೆ ಅಧಿಕೃತ ರೂಪ ನೀಡಬೇಕು ಎಂದು ಅನಿಸಿದಾಗ ಅವರು ಭೇಟಿ ಮಾಡಿದ್ದು ಅಂದಿನ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮುರಳಿ ಮನೋಹರ ಜೋಷಿ ಅವರನ್ನು. ‘ಈ ಯೋಜನೆಗೆ ಅಕ್ಷಯಪಾತ್ರ ಎಂಬ ಹೆಸರು ನೀಡಿದ್ದೇ ಜೋಷಿಯವರು’ ಎಂದು ‘ಪ್ರಜಾವಾಣಿ’ ಜೊತೆ ನೆನಪುಗಳನ್ನು ಹಂಚಿಕೊಳ್ಳುತ್ತ ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ ದಾಸ ಹೇಳಿದರು.ಮಧುಪಂಡಿತ ದಾಸ****

ಮ್ಯಾನೇಜ್‌ಮೆಂಟ್‌ ಕಥೆ

ಸಾಧುಗಳ ಆಲೋಚನಾ ಕ್ರಮವೇ ಬೇರೆ, ಕಾರ್ಪೊರೇಟ್ ವಲಯದವರ ಆಲೋಚನಾ ಕ್ರಮವೇ ಬೇರೆ. ಈ ಇಬ್ಬರೂ ಒಂದು ಯೋಜನೆಗಾಗಿ ಒಂದಾದ ನಂತರ, ಅದನ್ನು ಮುಂದುವರಿಸಿಕೊಂಡು ಬಂದಿರುವುದು ಮತ್ತೊಂದು ಕಥೆ. ಈ ಕಥೆಯಲ್ಲಿ ಇತರರೂ ಅನುಸರಿಸಬಹುದಾದ ಕೆಲವು ಪಾಠಗಳು ಇವೆ.

ಅಕ್ಷಯಪಾತ್ರ ಯೋಜನೆಯು ‘ಪಿ.ಪಿ.ಪಿ ಮಾದರಿ’ಯಲ್ಲಿ ನಡೆಯುತ್ತಿದೆ. ‘ಪಿ.ಪಿ.ಪಿ’ ಅಂದರೆ ಸಾಮಾನ್ಯವಾಗಿ ಹೊಳೆಯುವುದು – ‘ಮೂಲಸೌಕರ್ಯ ಅಭಿವೃದ್ಧಿಗಾಗಿ ಸರ್ಕಾರ ಹಾಗೂ ಖಾಸಗಿ ಕಂಪೆನಿಗಳ ನಡುವೆ ಒಪ್ಪಂದ’ ಎನ್ನುವ ಅರ್ಥ. ಆದರೆ ಅಕ್ಷಯಪಾತ್ರ ಹಾಗೂ ಸರ್ಕಾರದ ನಡುವೆ ಆಗಿದ್ದು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಒಪ್ಪಂದ.

ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಮಧ್ಯಾಹ್ನದ ಊಟ ಪೂರೈಸಬೇಕು ಎಂಬ ಕಟ್ಟಪ್ಪಣೆಯನ್ನು ಸುಪ್ರೀಂ ಕೋರ್ಟ್‌ 2001ರ ನವೆಂಬರ್ 28ರಂದು ವಿಧಿಸಿತು. ಇದನ್ನು ಎಲ್ಲ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಕ್ಕೆ ತರಬೇಕು ಎಂದು ತಾಕೀತು ಮಾಡಿತು.

‘ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ ಆದೇಶ ಈ ದೇಶದಲ್ಲಿ ಆಗಿರುವ ದೊಡ್ಡ ಸಾಮಾಜಿಕ, ಶೈಕ್ಷಣಿಕ ಬೆಳವಣಿಗೆಗಳಲ್ಲಿ ಒಂದು’ ಎಂಬ ಅನಿಸಿಕೆ ವ್ಯಕ್ತಪಡಿಸುತ್ತಾರೆ ಮಧುಪಂಡಿತ ದಾಸ ಅವರು. ಮಕ್ಕಳಿಗೆ ಬಿಸಿಯೂಟ ಪೂರೈಸಲು ಅಕ್ಷಯಪಾತ್ರ ಪ್ರತಿಷ್ಠಾನ ರಾಜ್ಯ ಸರ್ಕಾರದ ಜೊತೆ 2003ರಲ್ಲಿ ಒಪ್ಪಂದ ಮಾಡಿಕೊಂಡಿತು.

ಈ ಯೋಜನೆಯ ಅನುಷ್ಠಾನದಲ್ಲಿ ಸರ್ಕಾರದ ಜೊತೆ ಪಾಲುದಾರ ಆದ ರಾಜ್ಯದ ಮೊದಲ ಎನ್‌.ಜಿ.ಒ (ಸರ್ಕಾರೇತರ ಸಂಸ್ಥೆ) ಇದು. ಈ ಒಪ್ಪಂದದ ಮೂಲಕ ದಾಸೋಹ ಯೋಜನೆಯನ್ನು ‘ಸಾಧುಗಳು, ಕಾರ್ಪೊರೇಟ್ ವಲಯದ ಹಿರಿಯರು ಮತ್ತು ಸರ್ಕಾರ ಒಟ್ಟಾಗಿ ನಡೆಸುವ’ ಮಾದರಿಯೊಂದು ಜನ್ಮತಳೆಯಿತು.

‘ಯೋಜನೆಗೆ ಸರ್ಕಾರ, ಖಾಸಗಿ ಕಂಪೆನಿಗಳು ಹಾಗೂ ವ್ಯಕ್ತಿಗಳಿಂದ ದೇಣಿಗೆ ದೊರೆಯುತ್ತದೆ. ಕೋಟ್ಯಂತರ ರೂಪಾಯಿಗಳಷ್ಟು ಹಣದ ನಿರ್ವಹಣೆ ಮಾಡುವುದು ಸರ್ಕಾರೇತರ ಸಂಸ್ಥೆ (ಅಕ್ಷಯಪಾತ್ರ)’ ಎನ್ನುತ್ತಾರೆ ಮೋಹನದಾಸ್ ಪೈ. ಅವರು ಈಗ ಪ್ರತಿಷ್ಠಾನದ ಸ್ವತಂತ್ರ ಟ್ರಸ್ಟಿಗಳಲ್ಲೊಬ್ಬರು.

ಪೈ ಅವರು ಈ ಯೋಜನೆಗೆ ಹಣ ಒಗ್ಗೂಡಿಸಲು 2008ರಲ್ಲಿ ವಿವಿಧ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ(ಸಿ.ಇ.ಒ)ಗಳನ್ನು  ಒಂದೆಡೆ ಸೇರಿಸಿದ್ದರು.

ಈ ಸಿ.ಇ.ಒಗಳೆಲ್ಲ ಪ್ರತಿಷ್ಠಾನದ ಬಗ್ಗೆ ವಿಶ್ವಾಸ ಬೆಳೆಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಪೈ ಅವರು ನೀಡುವ ಉತ್ತರ ಸರಳವಾಗಿದೆ. ‘ನಮ್ಮ ಕೆಲಸ ಉತ್ತಮವಾಗಿದ್ದ ಕಾರಣ ಅವರೆಲ್ಲ ನಮ್ಮಲ್ಲಿಗೆ ಬಂದಿದ್ದರು. ಅಕ್ಷಯಪಾತ್ರ ಟ್ರಸ್ಟ್‌ನಲ್ಲಿ ಇರುವ ನಾವು ಕೂಡ ಬಿಸಿಯೂಟ ಯೋಜನೆಗೆ ನಮ್ಮ ದುಡಿಮೆಯ ಹಣ ಕೊಡುತ್ತೇವೆ. ನಾವೂ ಹಣ ಕೊಡುವ ಕಾರಣ, ಈ ಯೋಜನೆಗೆ ಹಣ ಕೇಳಿದಾಗ ಕಂಪೆನಿಗಳು, ಸಿ.ಇ.ಒಗಳು ನಮ್ಮನ್ನು ನಂಬುತ್ತಾರೆ. ಪ್ರತಿಷ್ಠಾನದಲ್ಲಿ ಪ್ರತಿ ರೂಪಾಯಿಗೂ ಲೆಕ್ಕ ಇರುತ್ತದೆ. ಹಣಕಾಸಿನ ವ್ಯವಹಾರ ಪಾರದರ್ಶಕವಾಗಿ ನಡೆಯುತ್ತದೆ’ ಎನ್ನುತ್ತಾರೆ ಅವರು.

ಕಾರ್ಪೊರೇಟ್‌ ಸಂಸ್ಥೆಗಳು ಅಕ್ಷಯಪಾತ್ರ ಪ್ರತಿಷ್ಠಾನವನ್ನು ನಂಬಿ ಹಣ ಕೊಡುವುದಕ್ಕೆ ಇನ್ನೊಂದು ಕಾರಣವನ್ನು ಮಧುಪಂಡಿತ ದಾಸ ಅವರು ನೀಡುತ್ತಾರೆ. ‘ನಾವು ಆರಂಭದ ದಿನದಿಂದಲೂ ನಮ್ಮ ಪ್ರತಿಷ್ಠಾನದಲ್ಲಿ ಸ್ವತಂತ್ರ ಟ್ರಸ್ಟಿಗಳನ್ನು ಹೊಂದಿದ್ದೇವೆ. ಸ್ವತಂತ್ರ ಟ್ರಸ್ಟಿಗಳು ನಮ್ಮ ದೈನಂದಿನ ಕಾರ್ಯಗಳಲ್ಲಿ ಮಧ್ಯಪ್ರವೇಶ ಮಾಡದಿದ್ದರೂ, ಅಷ್ಟೂ ವ್ಯವಹಾರಗಳನ್ನು ಸ್ವತಂತ್ರವಾಗಿ ಪರಿಶೀಲಿಸುತ್ತಿರುತ್ತಾರೆ. ನಾವು ರೂಪಿಸಿಕೊಂಡ ಈ ವ್ಯವಸ್ಥೆಯು, ಕಾರ್ಪೊರೇಟ್‌ ಸಂಸ್ಥೆಗಳಿಗೆ ನಮ್ಮ ಬಗ್ಗೆ ನಂಬಿಕೆ ಮೂಡಲು ಒಂದು ಮುಖ್ಯ ಕಾರಣ’ ಎನ್ನುವುದು ಅವರ ವಿವರಣೆ.

ಯೋಜನೆಗೆ ಹಣ ಸಂಗ್ರಹಿಸುವುದು ಅಷ್ಟೇನೂ ದೊಡ್ಡ ಸವಾಲು ಅಲ್ಲ. ಈ ದೇಶದ ಜನ ಒಳ್ಳೆಯವರು. ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡಬೇಕು ಎಂಬ ಹಂಬಲ ಪ್ರತಿಯೊಬ್ಬರಲ್ಲೂ ಇದೆ ಎನ್ನುವ ಅನುಭವ ಪೈ ಅವರದು. ‘ಇಷ್ಟೊಂದು ಅಗಾಧ ಪ್ರಮಾಣದಲ್ಲಿ ಮಕ್ಕಳಿಗೆ ಪ್ರತಿದಿನ ಬಿಸಿಯೂಟ ಪೂರೈಸಲು ಪ್ರತಿಷ್ಠಾನವು ತನ್ನದೇ ಆದ ಸಂಚಿತ ನಿಧಿ (Corpus) ಹೊಂದಿಲ್ಲ. ದಾನಿಗಳಿಂದ ಸಂಗ್ರಹಿಸಿದ ಹಣವನ್ನು ಊಟ ಸಿದ್ಧಪಡಿಸಲು, ಪೂರೈಸಲು ವೆಚ್ಚ ಮಾಡಲಾಗುತ್ತದೆ. ದಾನಿಗಳ ನೆರವಿನಿಂದಲೇ ಇಷ್ಟು ವರ್ಷಗಳಿಂದ ಇದು ನಡೆದುಬಂದಿದೆ’ ಎಂದವರು ಹೇಳುತ್ತಾರೆ.

ಹೀಗಿದ್ದರೂ ಒಂದು ಸಂದರ್ಭದಲ್ಲಿ ಬ್ಯಾಂಕ್‌ಗಳಿಂದ ಸಾಲದ ರೂಪದಲ್ಲಿ ಹಣ ತಂದು, ಊಟ ಪೂರೈಸಿದ್ದೂ ಇದೆ ಎಂದು ನೆನಪಿಸಿಕೊಳ್ಳುತ್ತಾರೆ.

ಸಂಚಿತ ನಿಧಿಯೇ ಇಲ್ಲದೆ ನಡೆಯುವ ಈ ಮಾದರಿಯ ದಾಸೋಹ ಕಾರ್ಯಕ್ರಮ ಇದೊಂದೇ ಇರಬೇಕು. ‘ದೇಶದ ಎಲ್ಲೆಡೆಯೂ ಇರುವ ದಾನಿಗಳೇ ನಮ್ಮ ಪಾಲಿನ ಸಂಚಿತ ನಿಧಿ.

ದಾನಿಗಳನ್ನು ನೆನಪಿಸಿಕೊಳ್ಳುವ ಜೊತೆಯಲ್ಲೇ ನಾವು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ ರೂಪಿಸಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಹೇಳಬೇಕು. ಈ ನೀತಿ ರೂಪುಗೊಂಡ ನಂತರ ಕಾರ್ಪೊರೇಟ್‌ ಸಂಸ್ಥೆಗಳು ನಮಗೆ ಅಡುಗೆ ಮನೆ ನಿರ್ಮಿಸುವುದಕ್ಕೂ ಹಣ ನೀಡಲಾರಂಭಿಸಿದವು’ ಎಂದು ಮಧುಪಂಡಿತ ದಾಸ ವಿವರಿಸಿದರು.

‘ಸಾಮಾಜಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಾಗ ಸರ್ಕಾರದ ಜೊತೆ ಕೆಲಸ ಮಾಡುವುದನ್ನು ಇತರರೂ ಕಲಿಯಬೇಕು. ಒಟ್ಟಾರೆ ನೋಡಿದರೆ ಸರ್ಕಾರಗಳು ಒಳ್ಳೆಯವೇ ಆಗಿರುತ್ತವೆ. ಆದರೆ ಅವುಗಳ ಜೊತೆ ಕೆಲಸ ಮಾಡುವ ಬಗೆ ಕಲಿಯಬೇಕಷ್ಟೇ’ ಎಂದು ಇಸ್ಕಾನ್‌ನ ಹಿರಿಯ ಪದಾಧಿಕಾರಿಯೊಬ್ಬರು ಹೇಳಿದರು.

ಅಂದಹಾಗೆ, ಬಿಸಿಯೂಟಕ್ಕೆ ಹಣ ಸಂಗ್ರಹಿಸಲು ಅಕ್ಷಯಪಾತ್ರ ಪ್ರತಿಷ್ಠಾನ ವೃತ್ತಿಪರ ಟೆಲಿಮಾರ್ಕೆಟಿಂಗ್ ವಿಭಾಗ ಹೊಂದಿದೆ. ಈ ವಿಭಾಗದ ಸಿಬ್ಬಂದಿ ಜನರಿಗೆ ಕರೆ ಮಾಡಿ, ದೇಣಿಗೆ ಪಡೆಯುವುದೂ ಇದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್. ರಾಜೇಂದ್ರ ಬಾಬು ಅಧ್ಯಕ್ಷತೆಯ ಸಲಹಾ ಮಂಡಳಿಯನ್ನು ಅಕ್ಷಯಪಾತ್ರ ಪ್ರತಿಷ್ಠಾನ ಹೊಂದಿದೆ. ‘ಸಲಹಾ ಮಂಡಳಿಯು ನಮ್ಮ ಚಟುವಟಿಕೆಗಳಲ್ಲಿ ಪಾರದರ್ಶಕತೆ ಹಾಗೂ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ’ ಎಂದು ನವೀನ ನೀರದ ದಾಸ ಹೇಳುತ್ತಾರೆ.

‘ಅನ್ನದಾನ ಶ್ರೇಷ್ಠ ಎಂದು ನಂಬಿರುವವರು ಭಾರತೀಯರು. ಅಕ್ಷಯಪಾತ್ರ ಪ್ರತಿಷ್ಠಾನವು ಹಣವಂತರಿಂದ ಪಡೆಯುವ ಹಣವನ್ನು ಸೇವಾ ರೂಪಕ್ಕೆ ಪರಿವರ್ತಿಸುತ್ತಿದೆ. ನಮ್ಮ ಸರ್ಕಾರಿ ಶಾಲೆಗಳಿಗೆ ಹೋಗುವ ಮಕ್ಕಳಿಗೆ ಒಳ್ಳೆಯ, ರುಚಿಯಾದ ಊಟ ಸಿಗದಿದ್ದರೆ ನಾಳೆ ಅವರು ದೇಶದ ಆಸ್ತಿಯಾಗುವ ಬದಲು, ಹೊರೆಯಾಗುತ್ತಾರೆ. ಹಾಗಾಗಿ, ಮಕ್ಕಳಿಗೆ ಒಳ್ಳೆಯ ಊಟ ಕೊಡುವುದು ಎಂದರೆ ದೇಶಕ್ಕೆ ಆಸ್ತಿ ಸೃಷ್ಟಿಸುವುದು (asset creation)’ ಎನ್ನುವ ಮಾತನ್ನು ಮಧುಪಂಡಿತ ದಾಸ ಅವರು ಆಧುನಿಕ ಅರ್ಥಶಾಸ್ತ್ರದ ಪರಿಭಾಷೆ ಬಳಸಿ ಹೇಳುತ್ತಾರೆ.

‘ಒಂದು ಕುಟುಂಬದ ಮಗುವೊಂದು ಸುಶಿಕ್ಷಿತವಾದರೆ, ಮುಂದೆ ಆ ಇಡೀ ಕುಟುಂಬ ಬಡತನದ ಸುಳಿಯಿಂದ ಹೊರಬರುತ್ತದೆ. ಅಕ್ಷಯಪಾತ್ರಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ಕಾರ್ಪೊರೇಟ್‌ ಪ್ರಮುಖರ ಎದುರು ನಿಲ್ಲಲು ಇದೇ ನಮಗೆ ಪ್ರೇರಣೆ’ ಎಂದೂ ಅವರು ಹೇಳುತ್ತಾರೆ.

****

ವೆಚ್ಚ ನಿರ್ವಹಣೆ

ಅಕ್ಷಯಪಾತ್ರ ಪ್ರತಿಷ್ಠಾನವು ಬಿಸಿಯೂಟ ಪೂರೈಸಲು 2015–16ನೇ ಸಾಲಿನಲ್ಲಿ ಮಾಡಿದ ಒಟ್ಟು ವೆಚ್ಚಗಳಲ್ಲಿ, ನಿರ್ವಹಣಾ ವೆಚ್ಚದ ಪಾಲು ಶೇ 12ರಷ್ಟು ಮಾತ್ರ. ಒಟ್ಟು ವೆಚ್ಚದಲ್ಲಿ ಶೇ 83ರಷ್ಟನ್ನು ಬಿಸಿಯೂಟ ಯೋಜನೆಗೆಂದೇ ಬಳಸಲಾಗಿದೆ. ನಿಧಿ ಸಂಗ್ರಹಕ್ಕೆ ಮಾಡಿದ ವೆಚ್ಚ ಶೇ 5ರಷ್ಟು.

‘ವೇತನ ವೆಚ್ಚ ಕಡಿಮೆ ಇರುವುದು ಹಾಗೂ ಊಟ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡಿರುವುದು ಯೋಜನೆಯ ಒಟ್ಟು ವೆಚ್ಚವನ್ನು ತಗ್ಗಿಸಿದೆ ಎಂದು ನವೀನ ನೀರದ ದಾಸ ತಿಳಿಸಿದರು.

ಪ್ರತಿಷ್ಠಾನದ ಅಧ್ಯಕ್ಷರು ಸೇರಿದಂತೆ ಅನೇಕ ಕಾರ್ಯಕರ್ತರು ತಮ್ಮ ಕೆಲಸಕ್ಕೆ ವೇತನ ಪಡೆದುಕೊಳ್ಳುವುದಿಲ್ಲ. ಇದು ಕೂಡ ಯೋಜನೆಗೆ ಮಾಡುವ ಒಟ್ಟು ವೆಚ್ಚ ಕಡಿಮೆಯಾಗಲು ಕಾರಣ ಎಂದು ಅವರು ಹೇಳುತ್ತಾರೆ.

‘ಸಾಧು – ಸರ್ಕಾರ – ಕಾರ್ಪೊರೇಟ್ ವಲಯದವರ ದಾಸೋಹ ಮಾದರಿ’ಯನ್ನು ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡವೊಂದು ಅಧ್ಯಯನದ ವಸ್ತುವಾಗಿಸಿದೆ. ‘ಹಾರ್ವರ್ಡ್ ವಿಶ್ವವಿದ್ಯಾಲಯದ 10 ವಿದ್ಯಾರ್ಥಿಗಳು ನಮ್ಮ ಅಡುಗೆಮನೆಗಳ ಬಗ್ಗೆ, ಅಲ್ಲಿನ ಕಾರ್ಯಕ್ಷಮತೆ, ಹಣದ ನಿರ್ವಹಣೆ ಹೇಗಿದೆ ಎಂಬ ಬಗ್ಗೆ ಅಧ್ಯಯನ ನಡೆಸಿದ್ದಾರೆ’ ಎಂದು ನವೀನ ನೀರದ ದಾಸ ತಿಳಿಸಿದರು.

****

‘ಸುಧಾಮ ಸೇವೆ’

ತಂತ್ರಜ್ಞಾನದ ಬಳಕೆ, ಪರಿಣಾಮಕಾರಿ ಆಡಳಿತ ನಿರ್ವಹಣೆ, ಹಣದ ಬಳಕೆಯಲ್ಲಿ ದಕ್ಷತೆ... ‘ಅಕ್ಷಯಪಾತ್ರ’ ಪ್ರತಿಷ್ಠಾನ ಅಳವಡಿಸಿಕೊಂಡಿರುವ, ರೂಪಿಸಿರುವ ಹಲವು ಮಾದರಿಗಳನ್ನು ಹೇಳುವ ಮಧುಪಂಡಿತ ದಾಸ ಮತ್ತು ಮೋಹನದಾಸ್ ಪೈ ಸೇರಿದಂತೆ ಈ ಯೋಜನೆಯಲ್ಲಿ ಭಾಗಿಯಾಗಿರುವ ಅನೇಕರು ಹೇಳುವ ಮಾತುಗಳಲ್ಲಿ ಸಮಾನ ಎಳೆಯೊಂದು ಇದೆ. ಅದನ್ನು ಒಂದೇ ಪದದಲ್ಲಿ ‘ಸೇವೆ’ ಎನ್ನಬಹುದು. 

‘ನಾವು ಊಟ ಪೂರೈಸುವ ವ್ಯಕ್ತಿಗಳು ಎಂಬ ಭಾವಕ್ಕಿಂತ ಹೆಚ್ಚಾಗಿ, ಮಕ್ಕಳಿಗೆ ಸೇವೆ ಸಲ್ಲಿಸುವವರು ಎಂಬ ಭಾವನೆ ನಮ್ಮಲ್ಲಿದೆ’ ಎಂದು ಮಧುಪಂಡಿತ ದಾಸ ಹೇಳುತ್ತಾರೆ. ಇದನ್ನೇ ಮೋಹನದಾಸ್ ಪೈ ಅವರು ಶ್ರೀಕೃಷ್ಣ – ಸುಧಾಮರ ಕಥೆಯನ್ನು ಉಲ್ಲೇಖಿಸಿ, ‘ನಮ್ಮದು ಒಂದು ರೀತಿಯಲ್ಲಿ ಸುಧಾಮ ಸೇವೆ’ ಎನ್ನುತ್ತಾರೆ. ಈ ‘ಸುಧಾಮ ಸೇವೆ’ಯಲ್ಲಿ ಸರ್ಕಾರ, ಸಾಧುಗಳು ಮತ್ತು ಕಾರ್ಪೊರೇಟ್‌ ವಲಯ ಕೈಜೋಡಿಸಿರುವುದು, ಈ ಮೂವರು ಸೇರಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಅದನ್ನು ‘ಅನ್ನ’ದ ರೂಪಕ್ಕೆ ಪರಿವರ್ತಿಸುವುದು ‘ಅಕ್ಷಯಪಾತ್ರ’ದ ವೈಶಿಷ್ಟ್ಯ ಎನ್ನಬಹುದು.

****

ಸವಾಲುಗಳೇನು?


2020ರ ವೇಳೆಗೆ 50 ಲಕ್ಷ ಮಕ್ಕಳಿಗೆ ಪ್ರತಿದಿನ ಊಟ ಪೂರೈಸುವ ಗುರಿ ಮುಟ್ಟಲು ಎದುರಾಗಬಹುದಾಗ ಸವಾಲುಗಳೇನು ಎಂಬ ಪ್ರಶ್ನೆಗೆ ಪೈ ಹಾಗೂ ಮಧುಪಂಡಿತ ದಾಸ ವಿಭಿನ್ನ ಉತ್ತರ ನೀಡುತ್ತಾರೆ. ‘ಅಡುಗೆಮನೆ ನಿರ್ಮಾಣಕ್ಕೆ ಬೇರೆ ಬೇರೆ ಕಡೆ ಜಮೀನು ಹೊಂದಿಸಿಕೊಳ್ಳುವುದು ಸವಾಲಿನ ಕೆಲಸ. ಕೆಲವೆಡೆ, ಸರ್ಕಾರಿ ಶಾಲೆಯ ಜಮೀನಿನಲ್ಲೇ ಒಂದೆಡೆ ಅಡುಗೆಮನೆ ಕಟ್ಟಲು ಅನುಮತಿ ಕೊಡಿ ಎಂದು ಕೇಳುತ್ತೇವೆ. ದೇವರ ಬೆಂಬಲ ನಮಗೆ ಯಾವತ್ತೂ ಇರುತ್ತದೆ. ಇದು ನಮ್ಮ ನಂಬಿಕೆ. ಸವಾಲುಗಳು ಎದುರಾದಾಗ ನಾವು ದೇವರ ನೆರವು ಬೇಡಿದ್ದೇವೆ’ ಎನ್ನುತ್ತಾರೆ ಮಧುಪಂಡಿತ ದಾಸ.

‘ಭ್ರಷ್ಟ ಅಧಿಕಾರಿಗಳ ಜೊತೆ ಹೆಣಗುವುದು ದೊಡ್ಡ ಸವಾಲು’ ಎನ್ನುವುದು ಪೈ ಅವರ ಅನಿಸಿಕೆ. ‘ಅಧಿಕಾರಿಗಳ ಭ್ರಷ್ಟಾಚಾರವೂ ಕೆಲವು ಪ್ರದೇಶಗಳಲ್ಲಿ ನಮ್ಮ ಗಮನಕ್ಕೆ ಬಂದಿದೆ’ ಎಂದು ಪೈ ಹೇಳಿದರು.

****

ಸಾಮರಸ್ಯದ ಊಟ


ಅಡುಗೆಮನೆಯ ಮೇಲ್ವಿಚಾರಕರು, ಸರ್ಕಾರಿ ಅಧಿಕಾರಿಗಳು ಮತ್ತು ಶಾಲೆಗಳ ಮುಖ್ಯ ಶಿಕ್ಷಕರು ಕಂಡುಕೊಂಡಿರುವ ಅಂಶವೊಂದನ್ನು ಇಲ್ಲಿ ಉಲ್ಲೇಖಿಸಬೇಕು.

ಇವರ ಪ್ರಕಾರ, ಬಹುತೇಕ ಕಡೆ ‘ಅಕ್ಷಯಪಾತ್ರೆ’ ಸಂಸ್ಥೆ ಪೂರೈಸುವ ಬಿಸಿಯೂಟವನ್ನು ಎಲ್ಲ ಜಾತಿ, ಧರ್ಮ ಹಾಗೂ ಆರ್ಥಿಕ ಹಿನ್ನೆಲೆಗಳ ಮಕ್ಕಳು ಒಟ್ಟಿಗೆ ಕುಳಿತು ಸೇವಿಸುತ್ತಾರೆ. ಇದು ಸಾಮಾಜಿಕ ಸಾಮರಸ್ಯ ಸಾಧಿಸಲು ಸಹಕಾರಿಯಾಗುತ್ತಲಿದೆ. ಎಲ್ಲರೂ ಒಟ್ಟಾಗಿ ಕುಳಿತು ಊಟ ಮಾಡುವುದನ್ನು ಪಾಲಕರು ಕೂಡ ವಿರೋಧಿಸಿಲ್ಲ.

****

ಊಟದ ಹೊತ್ತಲ್ಲೊಂದು ಸುತ್ತು...

ಅದು ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ವಿದ್ಯೆ ಅರಸಿ ಅಲ್ಲಿಗೆ ಬರುವ ಮಕ್ಕಳಲ್ಲಿ ಬಹುತೇಕರು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದವರು ಎಂಬುದನ್ನು ಆ ಶಾಲೆಯ ಕಟ್ಟಡ ನೋಡಿಯೇ ಊಹಿಸಬಹುದು. ಒಂದು ಮಧ್ಯಾಹ್ನದ ವೇಳೆಗೆ ಅಲ್ಲಿಗೆ ಹೋದಾಗ, ಮಕ್ಕಳು ಬಿಸಿ–ಬಿಸಿ ಊಟವನ್ನು (ಅನ್ನ ಮತ್ತು ತರಕಾರಿ ಸಾರು) ತಟ್ಟೆಯಲ್ಲಿ ಹಾಕಿಸಿಕೊಂಡು, ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದ ದೃಶ್ಯ ಕಂಡುಬಂತು.

‘ಇಲ್ಲಿಗೆ ಬರುವ ಬಹುತೇಕ ಮಕ್ಕಳಿಗೆ ಮಧ್ಯಾಹ್ನದ ಬುತ್ತಿ ತರುವುದು ತುಸು ಕಷ್ಟ. ಬುತ್ತಿಯಲ್ಲಿ ಪ್ರತಿನಿತ್ಯ ಊಟ ಕಟ್ಟಿಕೊಡುವುದು ಮಕ್ಕಳ ಪಾಲಕರಿಗೆ ಕಷ್ಟಸಾಧ್ಯವೂ ಆಗಿರಬಹುದು. ಅಥವಾ ಇನ್ನಿತರ ಕಾರಣಗಳೂ ಇರಬಹುದು’ ಎಂದರು ಶಾಲೆಯ ಮುಖ್ಯ ಶಿಕ್ಷಕ ಎಚ್.ಎ. ಹನುಮಂತಯ್ಯ ಅವರು.

ಸಾಲಾಗಿ ಊಟಕ್ಕೆ ಕುಳಿತಿದ್ದ ಮಕ್ಕಳನ್ನು ಉದ್ದೇಶಿಸಿ, ‘ನಾಳೆಯಿಂದ ಊಟ ಎಷ್ಟು ಜನರಿಗೆ ಬೇಡ, ಕೈ ಎತ್ತಿ’ ಎಂದಾಗ ಒಬ್ಬನೂ ಕೈ ಎತ್ತಲಿಲ್ಲ. ಊಟ ಮಾಡುತ್ತಿದ್ದ ತುಂಟನೊಬ್ಬ ಒಮ್ಮೆ ಕೈಎತ್ತಿ, ‘ಹಿಹಿ’ ಎಂದು ನಕ್ಕು ಕೈ ಇಳಿಸಿದ. ‘ಮಧ್ಯಾಹ್ನದ ಬಿಸಿಯೂಟ ಎಷ್ಟು ಜನರಿಗೆ ಬೇಕು’ ಎಂದು ಕೇಳಿದಾಗ ಎಲ್ಲರೂ ಕೈ ಎತ್ತಿದರು.

‘ಮಧ್ಯಾಹ್ನದ ಬಿಸಿಯೂಟ ಯೋಜನೆ ಕಳೆದ ದಶಕದ ಆರಂಭದಲ್ಲಿ ಶುರುವಾದಾಗ ನಾನು ಮಾಗಡಿ ತಾಲ್ಲೂಕಿನ ಶಾಲೆಯೊಂದರಲ್ಲಿ ಕರ್ತವ್ಯದಲ್ಲಿದ್ದೆ. ಬಿಸಿಯೂಟ ಯೋಜನೆ ಆರಂಭವಾದ ನಂತರ, ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿದ್ದನ್ನು, ಕಾಯಿಲೆ ಬೀಳುವ ಮಕ್ಕಳ ಸಂಖ್ಯೆ ಕಡಿಮೆ ಆಗಿದ್ದನ್ನು ಗಮನಿಸಿದ್ದೇನೆ’ ಎಂದರು ಹನುಮಂತಯ್ಯ.

ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಾದ ಕುಸುಮಾ, ಸ್ನೇಹಾ, ಅರುಣ್ ಮತ್ತು ಕುಮಾರಸ್ವಾಮಿ ಅವರಲ್ಲಿ ಊಟದ ಬಗ್ಗೆ ಪ್ರಶ್ನಿಸಿದಾಗ, ‘ಪುಲಾವ್ ಮತ್ತು ಮೊಸರು ನಮಗೆ ಇಷ್ಟ’ ಎಂದರು!

****

ಹತ್ತು ರೂಪಾಯಿಗೆ ಒಂದು ಊಟ

ಅಕ್ಷಯಪಾತ್ರ ಪ್ರತಿಷ್ಠಾನ ಸಿದ್ಧಪಡಿಸುವ ಒಂದು ಊಟಕ್ಕೆ ₹ 10.23 ಖರ್ಚಾಗುತ್ತದೆ. ಇದರಲ್ಲಿ ₹ 6.05 ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ ಬರುತ್ತದೆ. ಇನ್ನುಳಿದ ಮೊತ್ತವನ್ನು (₹ 4.18) ಅಕ್ಷಯಪಾತ್ರ ಕಾರ್ಪೊರೇಟ್ ಸಂಸ್ಥೆಗಳಿಂದ, ದಾನಿಗಳಿಂದ ಸಂಗ್ರಹಿಸುತ್ತದೆ.

****

ಅಡುಗೆಮನೆ, ಸ್ವಚ್ಛತೆ ಇತ್ಯಾದಿ...

ಲಕ್ಷಗಳ ಸಂಖ್ಯೆಯಲ್ಲಿ ಮಕ್ಕಳಿಗೆ ಊಟ ಪೂರೈಸಲು ಅಕ್ಷಯಪಾತ್ರ ಪ್ರತಿಷ್ಠಾನ ತನ್ನದೇ ಆದ ಅಡುಗೆ ಮನೆಗಳನ್ನು ನಿರ್ಮಿಸಿದೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು, ಮೈಸೂರು, ಹುಬ್ಬಳ್ಳಿ, ಬಳ್ಳಾರಿಗಳಲ್ಲಿ ಅಡುಗೆ ಮನೆಗಳು ಇವೆ.

ಬೃಹತ್ ಪ್ರಮಾಣದಲ್ಲಿ ಊಟ ಸಿದ್ಧಪಡಿಸುವುದು ಹೇಗೆ, ಸ್ವಚ್ಛತೆ ಕಾಯ್ದುಕೊಳ್ಳುವುದು ಹೇಗೆ ಎಂಬ ಬಗ್ಗೆ ಮಧುಪಂಡಿತ ದಾಸ ಅವರು ‘ಪ್ರಜಾವಾಣಿ’ಗೆ ನೀಡಿದ ವಿವರಗಳು ಹೀಗಿವೆ:

‘‘ದೊಡ್ಡ ಪ್ರಮಾಣದಲ್ಲಿ ಊಟ ಸಿದ್ಧಪಡಿಸಲು ಹಾಗೂ ಸ್ವಚ್ಛತೆ ಕಾಯ್ದುಕೊಳ್ಳಲು ಸಾಧ್ಯವಾಗಿರುವುದಕ್ಕೆ ಒಂದು ಕಾರಣ ನಾವು ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆದಿರುವುದು. ಮನೆಗಳಲ್ಲಿ ನಾವು ಹತ್ತು–ಇಪ್ಪತ್ತು ಜನರಿಗೆ ಅಡುಗೆ ಮಾಡಬಲ್ಲೆವು. ಆದರೆ ತಂತ್ರಜ್ಞಾನದ ನೆರವಿಲ್ಲದೆ ನೂರು ಜನರಿಗೆ ಅಡುಗೆ ಮಾಡುವುದು ಕಷ್ಟ.

ನಾವು ಬಳಸುವ ಒಂದು ಕಡಾಯಿಯಲ್ಲಿ ಒಂದೇ ಬಾರಿಗೆ 900 ಮಕ್ಕಳಿಗೆ ಸಾಕಾಗುವಷ್ಟು ಅನ್ನ ಮಾಡಬಹುದು. ಇದಕ್ಕೆ ಬೇಕಾಗುವ ಸಮಯ ಅಂದಾಜು ಹತ್ತು ನಿಮಿಷಗಳು! ಹುಬ್ಬಳ್ಳಿಯಲ್ಲಿರುವ ನಮ್ಮ ಅಡುಗೆ ಮನೆಗೆ 2 ಲಕ್ಷ ಮಕ್ಕಳಿಗೆ ಊಟ ಸಿದ್ಧಪಡಿಸುವ ಸಾಮರ್ಥ್ಯ ಇದೆ!!

ನಿಮಗೊಂದು ಕುತೂಹಲದ ಸಂಗತಿ ಹೇಳಬೇಕು. ನಮ್ಮ ಅಡುಗೆ ಮನೆಗಳಲ್ಲಿ ಬಾಣಸಿಗರೇ ಇಲ್ಲ! ಆಡಳಿತ ನಿರ್ವಹಣಾ ಶಾಲೆಗಳು ಹೇಳಿಕೊಡುವ ಕ್ರಮಬದ್ಧ ಪ್ರಕ್ರಿಯೆಯೊಂದನ್ನು (Standard Operating Procedure) ರೂಢಿಸಿಕೊಂಡಿದ್ದೇವೆ.

ನಮ್ಮ ಅಡುಗೆ ಮನೆಗಳಲ್ಲಿ ಕೆಲಸ ಮಾಡುವವರಿಗೆ, ಇಂತಿಷ್ಟು ಕೆ.ಜಿ. ಅಕ್ಕಿ, ಇಂತಿಷ್ಟು ಕೆ.ಜಿ. ಬೇಳೆ ಹಾಗೂ ಇಂತಿಷ್ಟು ಪ್ರಮಾಣದ ಮಸಾಲೆಯನ್ನು ನಿಗದಿತ ಕಡಾಯಿಗಳಿಗೆ ಹಾಕಲು ಹೇಳಿರುತ್ತೇವೆ. ಅವರು ಆ ಕೆಲಸ ಮಾಡಿದರೆ ರುಚಿಯಾದ ಅನ್ನ ಮತ್ತು ಸಾರು ಸಿದ್ಧವಾಗಿರುತ್ತದೆ. ನಮ್ಮ ಅಡುಗೆಮನೆಗೆ ಹೊಸದಾಗಿ ನೇಮಕಗೊಂಡವರಿಗೆ ಈ ಪ್ರಕ್ರಿಯೆಗಳನ್ನು ಹೇಳಿಕೊಡುತ್ತೇವೆ. ಅವರು ಆ ಪ್ರಕ್ರಿಯೆಗಳನ್ನು ಪಾಲಿಸಿಕೊಂಡು ಹೋದರೆ ಸಾಕು.

ಕೆಲವೊಂದು ಸಂಗತಿಗಳು ನಡೆಯದಂತೆ ತಡೆಯುವುದೇ ಸ್ವಚ್ಛತೆ ಕಾಯ್ದುಕೊಳ್ಳಲು ಇರುವ ಬಹುದೊಡ್ಡ ಅಸ್ತ್ರ. ನಮ್ಮ ಉಗ್ರಾಣ ಹಾಗೂ ಅಡುಗೆ ಮನೆಗೆ ಇಲಿ, ಹೆಗ್ಗಣ, ಕ್ರಿಮಿ–ಕೀಟಗಳು ಬರದಂತೆ ನಿರಂತರ ನಿಗಾ ಇಟ್ಟಿರುತ್ತೇವೆ. ಈ ಕೆಲಸಕ್ಕೆಂದೇ ವೃತ್ತಿಪರರನ್ನು ನಿಯೋಜಿಸಿದ್ದೇವೆ. ನಮ್ಮಲ್ಲಿ ಅಡುಗೆ ಸಿದ್ಧಪಡಿಸುವ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ಮುಟ್ಟುವ ಅಗತ್ಯ ಹೆಚ್ಚು ಇಲ್ಲ. ಅಡುಗೆಮನೆಯ ವಿನ್ಯಾಸವೇ ಹಾಗಿದೆ. ಆಹಾರವನ್ನು ಶಾಲೆಗಳಿಗೆ ಸಾಗಿಸುವ ಪಾತ್ರೆಗಳು ಕುದಿಯುವ ನೀರಿನಿಂದ ಬರುವ ಹಬೆಯಿಂದ ಸ್ವಚ್ಛಗೊಳ್ಳುತ್ತವೆ.

ಆಹಾರವನ್ನು ಶಾಲೆಗೆ ಸಾಗಿಸುವ ಸಮಯದಲ್ಲಿ ನೋಡಿಕೊಳ್ಳಲು ಒಬ್ಬ ಮೇಲ್ವಿಚಾರಕ ಇರುತ್ತಾನೆ. ವಾಹನದಲ್ಲಿ ಆಹಾರದ ಪಾತ್ರೆಗಳನ್ನು ಇಟ್ಟ ನಂತರ ಆತ ವಾಹನವನ್ನು ಲಾಕ್ ಮಾಡುತ್ತಾನೆ. ನಂತರ ಅದನ್ನು ಶಾಲೆಯಲ್ಲಿ ಶಿಕ್ಷಕರ ಸಮಕ್ಷಮದಲ್ಲಿಯೇ ತೆರೆಯುವುದು. ಆಹಾರ ಯಾವ ವಾಹನದಲ್ಲಿ ಶಾಲೆ ತಲುಪಿದೆ, ಯಾವ ಬ್ಯಾಚ್‌ನ ಆಹಾರ ಅದು ಎಂಬುದರ ದಾಖಲೆ ಇರುತ್ತದೆ.

ಒಮ್ಮೆ ಬೆಂಗಳೂರಿನ ಒಂದು ಶಾಲೆಯ ಮಕ್ಕಳು ನಮ್ಮ ಊಟ ಮಾಡಿದ ನಂತರ ವಾಂತಿ ಮಾಡಿಕೊಂಡರು. ಆದರೆ ಆ ಶಾಲೆಗೆ ಪೂರೈಕೆಯಾದ ಬ್ಯಾಚ್‌ನ ಊಟ ಇತರ ಅನೇಕ ಶಾಲೆಗಳಿಗೂ ಪೂರೈಕೆಯಾಗಿತ್ತು. ಅಲ್ಲೆಲ್ಲೂ ಮಕ್ಕಳಿಗೆ ಸಮಸ್ಯೆ ಆಗಲಿಲ್ಲ. ಹಾಗಾಗಿ ಸಮಸ್ಯೆ ಇರುವುದು ಶಾಲೆಯಲ್ಲಿ ಪೂರೈಸಿದ ನೀರಿನಲ್ಲಿ ಎಂದು ನಾವು ಹೇಳಿದೆವು. ಅದನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿ.ಬಿ.ಎಂ.ಪಿ) ಪರಿಶೀಲಿಸಿತು. ನಾವು ಹೇಳಿದ್ದು ನಿಜವಾಯಿತು.

ಅಡುಗೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ಮನುಷ್ಯನ ಪಾತ್ರ ಕಡಿಮೆ ಇರುವುದು ಸ್ವಚ್ಛತೆ ಕಾಯ್ದುಕೊಳ್ಳುವುದರ ಹಿಂದಿನ ಪ್ರಮುಖ ಸೂತ್ರ. ದೊಡ್ಡ ಪ್ರಮಾಣದಲ್ಲಿ ಊಟ ಸಿದ್ಧಪಡಿಸುವ ಕಾರಣ ಅದರ ವೆಚ್ಚ ಕಡಿಮೆ ಆಗಿದೆ. ಊಟ ಸಿದ್ಧಪಡಿಸಲು ಬೇಕಿರುವ ಬೇಳೆ, ಮಸಾಲೆ ಪದಾರ್ಥಗಳನ್ನು ಸಗಟು ದರದಲ್ಲಿ ಖರೀದಿಸುತ್ತೇವೆ. ಇದಕ್ಕೆಂದೇ ಅಖಿಲ ಭಾರತ ಮಟ್ಟದ ತಂಡವೊಂದಿದೆ.

ತರಕಾರಿಯನ್ನು ಮಾತ್ರ ಸ್ಥಳೀಯ ಮಾರುಕಟ್ಟೆಯಿಂದ ಖರೀದಿಸುತ್ತೇವೆ. ಖಾದ್ಯತೈಲ, ಮಸಾಲೆ, ಬೇಳೆಗಳನ್ನು ಈ ತಂಡ, ಅತ್ಯಂತ ಕಡಿಮೆ ಬೆಲೆಗೆ ಸಿಗುವ ಮಾರುಕಟ್ಟೆಯಿಂದ ಖರೀದಿ ಮಾಡುತ್ತದೆ. ಇಲ್ಲಿ ಹಣ ಉಳಿತಾಯವಾಗುತ್ತದೆ. ಇದರಿಂದಾಗಿ ಊಟದ ಒಟ್ಟಾರೆ ವೆಚ್ಚ ಕೂಡ ಕಡಿಮೆ ಆಗುತ್ತದೆ. ನಾವು ನಮ್ಮ ಮಾದರಿಯನ್ನು ದೇಶದ ಯಾವುದೇ ಎನ್‌.ಜಿ.ಒ ಜೊತೆ ಹಂಚಿಕೊಳ್ಳಲೂ ಸಿದ್ಧರಿದ್ದೇವೆ’.

****

2030ಕ್ಕೆ ಸ್ಥಗಿತ!


ಬಿಸಿಯೂಟ ಪೂರೈಸುವ ಯೋಜನೆಯನ್ನು ಅಕ್ಷಯಪಾತ್ರ ಪ್ರತಿಷ್ಠಾನವು 2030ರ ವೇಳೆಗೆ ಸ್ಥಗಿತಗೊಳಿಸಲಿದೆ ಎಂಬ ಹುಬ್ಬೇರಿಸುವ ಮಾತನ್ನು ಮೋಹನದಾಸ್ ಪೈ ಹೇಳುತ್ತಾರೆ.

‘ಏಕೆ’ ಎಂದು ಪ್ರಶ್ನಿಸಿದಾಗ, ‘ಆ ವೇಳೆಗೆ ನಾವು ಈ ಯೋಜನೆ ಆರಂಭಿಸಿ ಮೂವತ್ತು ವರ್ಷಗಳು, ಅಂದರೆ ಎರಡು ತಲೆಮಾರುಗಳು, ಕಳೆದಿರುತ್ತವೆ. ಹಸಿವಿನ ಸಮಸ್ಯೆಯನ್ನು ಎರಡು ತಲೆಮಾರುಗಳಲ್ಲಿ ನಿವಾರಿಸಲು ಆಗದು ಎಂದಾದರೆ, ಮುಂದೆಂದೂ ಅದು ಆಗಲಿಕ್ಕಿಲ್ಲ’ ಎಂದು ಉತ್ತರಿಸಿದರು.

ಇಷ್ಟು ಹೇಳಿದ ಪೈ, ‘2030ರ ವೇಳೆಗೆ ನಮಗೂ ವಯಸ್ಸಾಗಿರುತ್ತದಲ್ಲವೇ?’ ಎಂದು ಮುಗುಳ್ನಕ್ಕರು. ‘2030ರ ವೇಳೆಗೆ ದೇಶದಲ್ಲಿ ಹಸಿವಿನ ಸಮಸ್ಯೆ ಪರಿಹಾರ ಆಗಿರುತ್ತದೆ ಎಂಬ ಆಶಾಭಾವ ನಮ್ಮದು’ ಎಂದು ಇಸ್ಕಾನ್ ಪದಾಧಿಕಾರಿಯೊಬ್ಬರು ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry