ಮಹಾರಾಷ್ಟ್ರ: ವರ್ಷಧಾರೆಗೆ 16 ಬಲಿ

7

ಮಹಾರಾಷ್ಟ್ರ: ವರ್ಷಧಾರೆಗೆ 16 ಬಲಿ

Published:
Updated:
ಮಹಾರಾಷ್ಟ್ರ: ವರ್ಷಧಾರೆಗೆ 16 ಬಲಿ

ಮುಂಬೈ: ಮಹಾರಾಷ್ಟ್ರದ ಬಹುತೇಕ ಕಡೆಗಳಿಗೆ ನೈರುತ್ಯ ಮುಂಗಾರು ವ್ಯಾಪಿಸಿದೆ. ಶುಕ್ರವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದಲ್ಲಿ 16 ಜನರು ಮೃತಪಟ್ಟಿದ್ದಾರೆ. ಇದರಲ್ಲಿ ಬಹುತೇಕರು ಸಿಡಿಲಿಗೆ ಬಲಿಯಾಗಿದ್ದಾರೆ.

ಮುಂಬೈನ ಹೊರವಲಯದ ಮೂರು ಜಿಲ್ಲೆಗಳಾದ ಠಾಣೆ, ರಾಯಗಡ ಮತ್ತು ಪಾಲ್ಘರ್‌ ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿ  ಗಾಳಿ, ಗುಡುಗು ಸಿಡಿಲಿನಿಂದ ಕೂಡಿದ ಮಳೆಯಾಗಿದೆ. ಮಳೆಯಿಂದಾಗಿ ರೈಲು, ಬಸ್‌ಗಳ ಸಂಚಾರಕ್ಕೆ ಅಡಚಣೆಯಾದ ಬಗ್ಗೆ ವರದಿಯಾಗಿಲ್ಲ.

ಗಿರಿಧಾಮ ಪ್ರದೇಶಗಳಾಗಿರುವ ಸತಾರಾ ಜಿಲ್ಲೆಯ ಮಹಾಬಲೇಶ್ವರ ಮತ್ತು ರಾಯಗಡದ ಮಾಥೆರಾನ್‌ನಲ್ಲೂ ಭಾರಿ ಮಳೆಯಾಗಿದೆ. ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಭಾನುವಾರ ಮತ್ತು ಸೋಮವಾರದ ವೇಳೆಗೆ ಮುಂಗಾರು ರಾಜ್ಯದಾದ್ಯಂತ ವ್ಯಾಪಿಸುವ ನಿರೀಕ್ಷೆ ಇದೆ.

ಎಲ್ಲೆಲ್ಲಿ ಅವಘಡ?: ಸಿಡಿಲು ಬಡಿದು ವಿದರ್ಭ ಪ್ರಾಂತ್ಯದ ಗಡ್ಚಿರೋಲಿ ಜಿಲ್ಲೆಯಲ್ಲಿ ನಾಲ್ವರು ಮೃತಪಟ್ಟು, ಎಂಟು ಜನ ಗಾಯಗೊಂಡಿದ್ದಾರೆ. ನಾಂದೇಡ್‌ನಲ್ಲಿ ಮೂವರು, ಲಾತೂರಿನಲ್ಲಿ ಇಬ್ಬರು, ನಾಸಿಕ್‌ನಲ್ಲಿ ಒಬ್ಬರು ಅಸುನೀಗಿದ್ದಾರೆ.

ಜಾನುವಾರುಗಳನ್ನು ಕರೆತರಲು ಹೋಗಿದ್ದ ನಾಲ್ವರು ಬಾಲಕರು ಸೋಲಾಪುರ ಜಿಲ್ಲೆಯ ಚಂದ್ರಭಾಗ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಹಮದ್‌ ನಗರದ ನೆವಾಸದಲ್ಲಿ  ಶಾಲೆಗೆ ಹೋಗುತ್ತಿದ್ದ ಬಾಲಕನೊಬ್ಬ ಚರಂಡಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.

ಠಾಣೆಯ ಮುರ್ಬಾದ್‌ನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಒಬ್ಬರು ವಿದ್ಯುತ್‌ ತಂತಿ ಸ್ಪರ್ಶದಿಂದ ಜೀವ ಕಳೆದುಕೊಂಡಿದ್ದಾರೆ. ಈ ಘಟನೆಯಲ್ಲಿ ಮತ್ತೊಬ್ಬರು ಗಾಯಗೊಂಡಿದ್ದಾರೆ. ಸೋಲಾಪುರ ಮತ್ತು ನಾಂದೇಡ್‌ನಲ್ಲಿ 100ಕ್ಕೂ ಹೆಚ್ಚು ಕುರಿಗಳು ವಿದ್ಯುದಾಘಾತದಿಂದ ಸತ್ತಿವೆ.

ಕೊಂಕಣ ಪ್ರದೇಶದಲ್ಲಿ ಭಾರಿ ಮಳೆ

ಮುಂದಿನ 24 ಗಂಟೆಗಳ ಅವಧಿಯಲ್ಲಿ ಕೊಂಕಣ ಪ್ರದೇಶದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ನೈರುತ್ಯ ಮಾರುತವು ಪ್ರತಿ ಗಂಟೆಗೆ ಕನಿಷ್ಠ 45–50 ಕಿ.ಮೀ ನಿಂದ ಗರಿಷ್ಠ 60 ಕಿ.ಮೀ ವೇಗದಲ್ಲಿ ಬೀಸಲಿದೆ. ಕಡಲು ಪ್ರಕ್ಷುಬ್ಧಗೊಳ್ಳಲಿದ್ದು, 24 ಗಂಟೆಗಳ ಕಾಲ ಯಾರೂ ಸಮುದ್ರಕ್ಕೆ ಇಳಿಯದಂತೆ ಇಲಾಖೆ ಸಲಹೆ ನೀಡಿದೆ.

ಕರ್ನಾಟಕದಲ್ಲೂ ಮಳೆ: ಪಶ್ಚಿಮ ಕರಾವಳಿಯಲ್ಲಿ ಭಾರಿ ಮಳೆಯಾಗುತ್ತಿದೆ ಎಂದು ಖಾಸಗಿ ಸಂಸ್ಥೆ  ಸ್ಕೈಮೆಟ್‌ ಹೇಳಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ  ಕರ್ನಾಟಕದ ಕರಾವಳಿ, ಕೊಂಕಣ ಪ್ರದೇಶ ಮತ್ತು ಗೋವಾಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿದಿದೆ.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆ ಹರ್ನಾಯಿಯಲ್ಲಿ320 ಮಿ.ಮೀ ಮಳೆ ಬಿದ್ದಿದೆ. ಕರ್ನಾಟಕದ ಹೊನ್ನಾವರದಲ್ಲಿ 151 ಮಿ.ಮೀ ಮತ್ತು ರತ್ನಗಿರಿಯಲ್ಲಿ 133 ಮಿ.ಮೀ ಮಳೆಯಾಗಿದೆ ಎಂದು ಅದು ವಿವರಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry