ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ವಿದ್ಯಾರ್ಥಿನಿಯರ ಸಮವಸ್ತ್ರ ವಿವಾದ: ಛಾಯಾಗ್ರಾಹಕ ಬೋಸ್‌ ವಿರುದ್ಧ ಪೋಕ್ಸೊ ಪ್ರಕರಣ

ವಿವಾದಕ್ಕೆ ಕಾರಣವಾಗಿದ್ದ ಆಫ್‌ ಜಾಕೆಟ್‌
Last Updated 10 ಜೂನ್ 2017, 13:44 IST
ಅಕ್ಷರ ಗಾತ್ರ

ಕೊಟ್ಟಾಯಂ: ಕೇರಳದ ಕೊಟ್ಟಾಯಂ ಜಿಲ್ಲೆಯ ಎರತ್ತುಪೇಟಾ ಪಟ್ಟಣದ ಸೇಂಟ್‌ ಆಲ್ಫೋನ್ಸಾ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿನಿಯರ ಸಮವಸ್ತ್ರದ ಛಾಯಾಚಿತ್ರ ಸೆರೆಹಿಡಿದಿದ್ದ ಛಾಯಾಗ್ರಾಹಕ ಬೋಸ್‌ ಏಪೇಸ್‌ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಲೆಯು 5ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರ ಸಮವಸ್ತ್ರವನ್ನು ಇತ್ತೀಚೆಗೆ ಬದಲಾಯಿಸಿತ್ತು. ಸಮವಸ್ತ್ರದ ಮೇಲೆ ಆಫ್‌ ಜಾಕೆಟ್‌ನಂಥ ಹೊಸ ಉಡುಪನ್ನು ಧರಿಸುವಂತೆ ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿನಿಯರಿಗೆ ಸೂಚಿಸಿತ್ತು. ಈ ಹೊಸ ಸಮವಸ್ತ್ರ ಅಸಭ್ಯವಾಗಿದೆ ಕೆಲ ಪೋಷಕರು ಆಕ್ಷೇಪಿಸಿದ್ದರು.

ಈ ಹೊಸ ಸಮವಸ್ತ್ರ ಧರಿಸಿದ್ದ ಶಾಲೆಯ ಮೂವರು ವಿದ್ಯಾರ್ಥಿನಿಯರ ಚಿತ್ರವನ್ನು ಬೋಸ್‌ ಸೆರೆಹಿಡಿದಿದ್ದರು. ಈ ಚಿತ್ರವನ್ನು ಮತ್ತೊಬ್ಬ ಛಾಯಾಗ್ರಾಹಕ ಝಚಾರೈ ಪೊನ್ಕುನ್ನಮ್‌ ಎಂಬುವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ಚಿತ್ರ ವೈರಲ್‌ ಆಗುತ್ತಿದ್ದಂತೆ ಈ ಸಮವಸ್ತ್ರ ಅಸಭ್ಯವಾಗಿದೆ ಎಂದು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದರು.

ಸಮವಸ್ತ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಶಾಲೆಯ ಆಡಳಿತ ಮಂಡಳಿಯು ಆ ಸಮವಸ್ತ್ರವನ್ನು ಬದಲಿಸಿತ್ತು. ಅಲ್ಲದೆ, ಸಮವಸ್ತ್ರ ವಿವಾದದ ಬಗ್ಗೆ ಪೋಷಕರು ಮತ್ತು ಶಿಕ್ಷಕರ ಸಂಘಟನೆಯು ಎರತ್ತುಪೇಟಾ ಠಾಣೆಗೆ ದೂರು ನೀಡಿತ್ತು.

‘ಈ ಘಟನೆಯಿಂದ ವಿದ್ಯಾರ್ಥಿಗಳು ಮಾನಸಿಕವಾಗಿ ಹಿಂಸೆ ಅನುಭವಿಸಿದ್ದಾರೆ. ಹೀಗಾಗಿ ಶಾಲಾ ಆಡಳಿತ ಮಂಡಳಿ ಸಮವಸ್ತ್ರವನ್ನು ಬದಲಿಸಿದೆಯೇ ಹೊರತು ತಮ್ಮಿಂದ ತಪ್ಪಾಗಿದೆ ಎಂಬ ಕಾರಣಕ್ಕಲ್ಲ. ಈ ಘಟನೆಯ ಹಿಂದಿರುವವರ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು’ ಎಂದು ಪೋಷಕರು ಮತ್ತು ಶಿಕ್ಷಕರ ಸಂಘಟನೆಯ ಅಧ್ಯಕ್ಷ ಸಾಬು ಸೈರಿಕ್‌ ತಿಳಿಸಿದ್ದಾರೆ.

‘ಸಮವಸ್ತ್ರದ ಬಗ್ಗೆ ಕೆಲ ಪೋಷಕರು ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದರು. ಹೊಸ ಸಮವಸ್ತ್ರ ಅಸಭ್ಯವಾಗಿದೆ ಎಂದು ಅವರು ದೂರಿದ್ದರು. ಹೀಗಾಗಿ ನಾನು ವಿದ್ಯಾರ್ಥಿನಿಯರ ಚಿತ್ರ ಸೆರೆಹಿಡಿದಿದ್ದೆ. ಈ ಚಿತ್ರ ವಿವಾದ ಸೃಷ್ಟಿಸಿದ್ದರಿಂದ ನನ್ನ ಮೇಲೆ ಕೋಪಗೊಂಡಿರುವ ಶಾಲಾ ಆಡಳಿತ ಮಂಡಳಿ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದೆ’ ಎಂದು ಬೋಸ್‌ ಹೇಳಿದ್ದಾರೆ.

ನಿರೀಕ್ಷಣಾ ಜಾಮೀನು ಪಡೆದಿರುವ ಬೋಸ್‌, ‘ಶಾಲಾ ಆಡಳಿತ ಮಂಡಳಿ ಹಾಗೂ ಪೋಷಕರು ಮತ್ತು ಶಿಕ್ಷಕರ ಸಂಘಟನೆಯು ನನ್ನ ವಿರುದ್ಧ ಮಾಡಿರುವ ಆರೋಪಗಳು ನಿರಾಧಾರ. ಶಾಲೆಯ ತಪ್ಪನ್ನು ಎತ್ತಿ ತೋರಿಸಿದ್ದಕ್ಕೆ ಅವರು ನನ್ನ ಮೇಲೆ ಈ ರೀತಿಯ ಪ್ರತೀಕಾರ ಕ್ರಮಕ್ಕೆ ಮುಂದಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT