ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕ ಮೋಹಿಯ ‘ಲೆಕ್ಕಾಚಾರ’

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಮಾಧ್ಯಮದಲ್ಲಿ ಪ್ರಣಯ್ ರಾಯ್ ಸದ್ದು ಮಾಡತೊಡಗಿ ಹತ್ತು ವರ್ಷಗಳು ಕಳೆದಿತ್ತಷ್ಟೆ, ಅವರ ಹೆಸರು ದೂರದರ್ಶನದ ದೊಡ್ಡ ಭ್ರಷ್ಟಾಚಾರ ಹಗರಣದಲ್ಲಿ ಕೇಳಿಬಂದಿತು.

ಎನ್‌ಡಿಟಿವಿ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ಅಧ್ಯಕ್ಷ ಪ್ರಣಯ್ ಹಾಗೂ ಇನ್ನೂ ಕೆಲವರು ದೂರದರ್ಶನಕ್ಕೆ ಕನಿಷ್ಠ ಮೂರೂವರೆ ಕೋಟಿ ರೂಪಾಯಿ ನಷ್ಟ ಮಾಡಿದ್ದಾರೆ ಎಂದು ಸಿಬಿಐ 1998ರ ಜನವರಿಯಲ್ಲಿ ಪ್ರಕರಣ ದಾಖಲಿಸಿತು (ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120-ಬಿ ಅಡಿಯಲ್ಲಿ ಅಪರಾಧ ಪಿತೂರಿ ಹಾಗೂ ಭ್ರಷ್ಟಾಚಾರ ವಿರೋಧಿ ಕಾಯ್ದೆ ಅನ್ವಯ). 2013ರಲ್ಲಿ ನ್ಯಾಯಾಲಯವು ಅವರು ನಿರ್ದೋಷಿ ಎಂದು ಹೇಳಿತು.

ಇದೇ ಜೂನ್ 6ರಂದು ಅವರ ಮನೆಯಲ್ಲಿ ಸಿಬಿಐ ಶೋಧ ನಡೆಸಿತು. ದೆಹಲಿಯ ಎರಡು ಸ್ಥಳಗಳು ಮತ್ತು ಡೆಹ್ರಾಡೂನ್‌ನ ಒಂದು ಸ್ಥಳದಲ್ಲಿ ಶೋಧ ನಡೆದ ಮೇಲೆ ಸುದ್ದಿಯ ತೀವ್ರತೆ ಅರ್ಥವಾಯಿತು.

ಷೇರು ವಹಿವಾಟೊಂದನ್ನು ಅವರು ಸೆಬಿಯಿಂದ (ಭಾರತೀಯ ಷೇರು ನಿಯಂತ್ರಣ ಮಂಡಳಿ) ಮುಚ್ಚಿಟ್ಟಿದ್ದಾರೆ ಹಾಗೂ ಖಾಸಗಿ ಬ್ಯಾಂಕೊಂದಕ್ಕೆ ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪದ ಕಾರಣ ನಡೆದ ಶೋಧವಿದು.

‘ಹಳೆಯ ಹುಸಿ ಆರೋಪಗಳನ್ನೇ ನೆಚ್ಚಿಕೊಂಡು ಶೋಧದ ಹೆಸರಿನಲ್ಲಿ ದ್ವೇಷ ಸಾಧನೆ ನಡೆಯುತ್ತಿದೆ’ ಎಂದು ಎನ್‌ಡಿಟಿವಿ ಅಧಿಕಾರಿಗಳು ಇದಕ್ಕೆ ಪ್ರತಿಕ್ರಿಯಿಸಿದರು.

ರಾಯ್‌, ಅವರ ಹೆಂಡತಿ ರಾಧಿಕಾ, ಐಸಿಐಸಿಐ ಬ್ಯಾಂಕ್‌ನ ಕೆಲವು ಅಧಿಕಾರಿಗಳು, ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ಪ್ರೈ. ಲಿ. ವಿರುದ್ಧ ಅಪರಾಧ ಒಳಸಂಚು, ವಂಚನೆ ಮತ್ತು ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ದಾಖಲಿಸಿಕೊಂಡಿದೆ.

ಎನ್‌ಡಿಟಿವಿಯ ಶೇ 20ರಷ್ಟು ಷೇರುಗಳನ್ನು ಸಾರ್ವಜನಿಕರಿಂದ ಖರೀದಿಸುವುದಕ್ಕಾಗಿ ಇಂಡಿಯಾ ಬುಲ್ಸ್‌  ಪ್ರೈ.ಲಿ. ಸಂಸ್ಥೆಯಿಂದ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ₹500 ಕೋಟಿ ಸಾಲ ಪಡೆದಿತ್ತು. ಈ ಸಾಲ ಮರುಪಾವತಿ ಮಾಡಲೆಂದು ಐಸಿಐಸಿಐ ಬ್ಯಾಂಕ್‌ನಿಂದ ಶೇ 19ರ ಬಡ್ಡಿ ದರದಲ್ಲಿ ಆರ್‌ಆರ್‌ಪಿಆರ್‌ ಹೋಲ್ಡಿಂಗ್‌ ₹375 ಕೋಟಿ ಸಾಲ ಪಡೆದಿತ್ತು. ಎನ್‌ಡಿಟಿವಿಯ ಪ್ರವರ್ತಕರು ತಮ್ಮಲ್ಲಿದ್ದ ಎನ್‌ಡಿಟಿವಿಯ ಎಲ್ಲ ಷೇರುಗಳನ್ನು ಐಸಿಐಸಿಐಯಿಂದ ಪಡೆದ ಸಾಲಕ್ಕೆ ಖಾತರಿಯಾಗಿ ನೀಡಿದ್ದರು.

ಷೇರುಗಳನ್ನು ಖಾತರಿಯಾಗಿ ನೀಡಿದ ವಿಚಾರವನ್ನು ಸೆಬಿ, ಷೇರು ವಿನಿಮಯ ಕೇಂದ್ರ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ತಿಳಿಸಿಲ್ಲ ಎನ್ನುವುದು ಸಿಬಿಐಗೆ ಬಂದಿರುವ ಆರೋಪ.

ಬ್ಯಾಂಕ್‌ಗಳು ಯಾವುದೇ ಕಂಪೆನಿಯಲ್ಲಿ ಷೇರುಗಳನ್ನು ಹೊಂದುವಂತಿಲ್ಲ ಎಂದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಕಟ್ಟಿಹಾಕಿದೆ. ಈ ಕಾಯ್ದೆಯಂತೆ ಕಂಪೆನಿಯ ಶೇ 30ಕ್ಕಿಂತ ಹೆಚ್ಚಿನ ಷೇರುಗಳನ್ನು ಖಾತರಿಯಾಗಿಯೂ ಪಡೆಯುವಂತಿಲ್ಲ. ಆದರೆ, ಐಸಿಐಸಿಐ ಸಾಲ ಖಾತರಿ ರೂಪದಲ್ಲಿ ಎನ್‌ಡಿಟಿವಿಯ ಶೇ 61ರಷ್ಟು ಷೇರುಗಳನ್ನು ಪಡೆದುಕೊಂಡಿದ್ದು, ಇದನ್ನು ಮುಚ್ಚಿಡಲಾಗಿದೆ ಎಂದು ಸಿಬಿಐ ಹೇಳಿದೆ.

ಪ್ರಣಯ್ ರಾಯ್ ಮೊದಲಿನಿಂದಲೂ ಅರ್ಥಶಾಸ್ತ್ರದ ಗೀಳಿಗೆ ಬಿದ್ದವರು. ಅವರಿಗೆ ಅದರ ಒಳಸುಳಿಗಳೆಲ್ಲ ಚೆನ್ನಾಗಿ ಗೊತ್ತಿವೆ. ಅವರು 1988ರಲ್ಲಿ ‘ನ್ಯೂಡೆಲ್ಲಿ ಟೆಲಿವಿಷನ್’ ಹೆಸರಿನ ಟಿ.ವಿ. ಕಾರ್ಯಕ್ರಮಗಳ ನಿರ್ಮಾಣ ಸಂಸ್ಥೆಯನ್ನು ಪತ್ನಿಯೊಟ್ಟಿಗೆ ಪ್ರಾರಂಭಿಸಿದಾಗಲೇ ಇದು ಖಾತರಿಯಾಗಿತ್ತು.

ಭಾರತದ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳು ಹಾಗೂ ಬಜೆಟ್ ವಿಶೇಷಗಳನ್ನು ರಾಷ್ಟ್ರೀಯ ಚಾನೆಲ್ ‘ದೂರದರ್ಶನ’ಕ್ಕಾಗಿ ಮಾಡಲಾರಂಭಿಸಿದರು. ‘ಬಿಬಿಸಿ ವರ್ಲ್ಡ್‌ ನ್ಯೂಸ್’ ಚಾನೆಲ್‌ಗೆ ಅವರು ರೂಪಿಸಿಕೊಟ್ಟ ಕಾರ್ಯಕ್ರಮ ‘ಕ್ವೆಶ್ಚನ್ ಟೈಮ್ ಇಂಡಿಯಾ’.

‘ದಿ ನ್ಯೂಸ್ ಟುನೈಟ್’ ಹಾಗೂ ‘ದಿ ವಲ್ಡ್‌ ದಿಸ್ ವೀಕ್’ ಅವರಿಗೆ ಹೆಸರು ತಂದುಕೊಟ್ಟ ಕಾರ್ಯಕ್ರಮಗಳು. ಸ್ವಾತಂತ್ರ್ಯಾ ನಂತರ ಜನಪ್ರಿಯವಾದ ಐದು ಟಿ.ವಿ. ಕಾರ್ಯಕ್ರಮಗಳಲ್ಲಿ ಇವೂ ಸೇರಿವೆ ಎಂದು ವಾಹಿನಿ ಕಾರ್ಯಕ್ರಮಗಳ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದರು.

ಕೋಲ್ಕತ್ತದಲ್ಲಿ ಪ್ರಣಯ್ ಲಾಲ್ ರಾಯ್ ಹುಟ್ಟಿದ್ದು ಬ್ರಿಟಿಷ್ ಕಂಪೆನಿಯ ಭಾರತೀಯ ಘಟಕದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ಹರಿಕೇನ್ ರಾಯ್ ಮಗನಾಗಿ. ಐರಿಷ್ ಅಮ್ಮ ಶಿಕ್ಷಕಿಯಾಗಿದ್ದರು.

ಡೆಹ್ರಾಡೂನ್‌ನ ‘ದಿ ದೂನ್ ಸ್ಕೂಲ್‌’ ನಲ್ಲಿ ಕಲಿತ ಪ್ರಣಯ್ ರಾಯ್ ಅವರಿಗೆ ಯುನೈಟೆಡ್‌ ಕಿಂಗ್‌ಡಂನ ‘ಹೇಯ್ಲೆಬರಿ ಅಂಡ್ ಇಂಪೀರಿಯಲ್ ಸರ್ವಿಸ್ ಕಾಲೇಜ್’ನಲ್ಲಿ ಓದುವ ಅವಕಾಶ ಕಲ್ಪಿಸುವ ಸ್ಕಾಲರ್‌ಷಿಪ್ ಸಿಕ್ಕಿತು. ಅಲ್ಲಿ ಕಲಿತು ಬ್ರಿಟಿಷ್ ಚಾರ್ಟರ್ಡ್ ಅಕೌಂಟೆಂಟ್ ಆದ ಅವರಿಗೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್‌ನ (ಇಂಗ್ಲೆಂಡ್‌ ಹಾಗೂ ವೇಲ್ಸ್‌) ‘ಫೆಲೊ’ ಗೌರವವೂ ಸಂದಿತು.

‘ದೆಹಲಿ ಸ್ಕೂಲ್ ಆಫ್ ಇಕನಾಮಿಕ್ಸ್‌’ನಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ. ಪದವಿಯನ್ನೂ ಪಡೆದಿದ್ದಾರೆ. ಅದಕ್ಕೂ ಮೊದಲು ಲಂಡನ್‌ನ ಕ್ಷೀನ್ ಮೇರಿ ಕಾಲೇಜಿನಲ್ಲಿ ಉನ್ನತ ದರ್ಜೆಯಲ್ಲಿ ಪದವಿ ಪಾಸು ಮಾಡಿದ್ದರು. ಲೆವರ್‌ಹಲ್ಮ್‌ ಟ್ರಸ್ಟ್‌ನ ಫೆಲೋಷಿಪ್ ಕೂಡ ಅವರಿಗೆ ಸಿಕ್ಕಿತ್ತು. ಲೇಖಕಿ ಅರುಂಧತಿ ರಾಯ್ ಹಾಗೂ ಪ್ರಣಯ್ ರಾಯ್ ಸೋದರ ಸಂಬಂಧಿಗಳು (ಕಸಿನ್ಸ್). ಶಾಲೆಯಿಂದಲೂ ಗೆಳತಿಯಾಗಿದ್ದ ರಾಧಿಕಾ ಅವರನ್ನು ಮದುವೆಯಾದರು. ದಂಪತಿಗೆ ತಾರಾ ಎಂಬ ಒಬ್ಬ ಮಗಳಿದ್ದಾರೆ.

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ಸಲಹೆಗಾರರಾಗಿ ಕೆಲಸ ಮಾಡಿರುವ ಪ್ರಣಯ್, ‘ದೆಹಲಿ ಸ್ಕೂಲ್ ಆಫ್ ಇಕನಾಮಿಕ್ಸ್‌’ನಲ್ಲಿ ಪ್ರೊಫೆಸರ್‌ ಕೂಡ ಆಗಿದ್ದರು. ಅಲ್ಲಿ ಪಾಠ ಹೇಳುತ್ತಿದ್ದಾಗಲೇ ಭಾರತದ ಆರ್ಥಿಕ ಭವಿಷ್ಯವನ್ನು ಅಂದಾಜು ಮಾಡುವ ಸೂಕ್ಷ್ಮ ಮಾದರಿಯೊಂದನ್ನು ಅವರು ಅಭಿವೃದ್ಧಿಪಡಿಸಿದ್ದರು. ‘ಪ್ರೈಸ್‌ವಾಟರ್‌ಹೌಸ್ ಕೂಪರ್ಸ್’ನ ಭಾರತೀಯ ವಿಭಾಗದ ಸಲಹೆಗಾರರಾಗಿ ಕೂಡ ಅವರು ಕೆಲಸ ಮಾಡಿದ್ದಾರೆ. ‘ಅಕೌಂಟೆನ್ಸಿ’ ಅವರ ವಿಶೇಷ ಆಸಕ್ತಿಯ ವಿಷಯ ಎನ್ನುವುದಕ್ಕೆ ಇವು ಪುಷ್ಟಿ ನೀಡುತ್ತವೆ.

‘ಎ ಕಂಪೆಂಡಿಯಮ್ ಆಫ್ ಇಂಡಿಯನ್ ಎಲೆಕ್ಷನ್ಸ್‌’ ಅವರು ಬರೆದಿರುವ ಪುಸ್ತಕ. ‘ಇಂಡಿಯಾ ಡಿಸೈಡ್ಸ್‌: ಎಲೆಕ್ಷನ್ಸ್‌ 1952-1991’ ಎಂಬ ಕೃತಿಯನ್ನು ಡೇವಿಡ್ ಬಟ್ಲರ್ ಅವರ ಜೊತೆಗೂಡಿ ಹೊರತಂದರು.

ಅವರು ಸ್ಥಾಪಿಸಿದ ಎನ್‌ಡಿಟಿವಿ ವಾಹಿನಿಯು ಕೆಲವು ಜನಪ್ರಿಯ ಕಾರ್ಯಕ್ರಮಗಳಿಂದಲೂ ಹೆಸರಾಗಿದೆ. ‘ಗ್ರೀನಥಾನ್’, ‘7 ವಂಡರ್ಸ್ ಆಫ್ ಇಂಡಿಯಾ’, ‘ಸೇವ್ ಅವರ್ ಟೈಗರ್ಸ್’ನಂಥ ಸರಣಿಗಳ ಮೂಲಕ ವಾಹಿನಿ ಸದ್ದು ಮಾಡಿತು. ‘ಜೀನೆ ಕಿ ಆಶಾ’ ಎಂಬ ಮಕ್ಕಳ ಪಾಲನೆಯ ಸೂಕ್ಷ್ಮಗಳ ಮೇಲೆ ಬೆಳಕು ಚೆಲ್ಲಿದ ಕಾರ್ಯಕ್ರಮ 2011ರಲ್ಲಿ ಪ್ರಸಾರವಾಗಿ ಹೆಚ್ಚು ಜನಮನ್ನಣೆ ಗಳಿಸಿತು. ‘ಬಿಲ್ ಅಂಡ್ ಮೆಲಿಂಡಾ ಗೇಟ್ಸ್‌ ಫೌಂಡೇಷನ್’ನ ಸಹಯೋಗವಿದ್ದ ಕಾರ್ಯಕ್ರಮ ಅದು. ವಾಹಿನಿಯು ಸಾಧಕರಿಗೆ ‘ಇಂಡಿಯನ್ ಆಫ್ ದಿ ಇಯರ್’ ಪ್ರಶಸ್ತಿಯನ್ನೂ ಕೊಡಮಾಡುತ್ತಿದೆ.

ಲೆಕ್ಕ ಹಾಗೂ ಲೆಕ್ಕಾಚಾರದ ಆಳಕ್ಕಿಳಿದ ವ್ಯಕ್ತಿಯ ‘ಅರ್ಥ ವ್ಯವಸ್ಥೆ’ಯ ಕುರಿತು ಈಗ ಮತ್ತೆ ಪ್ರಶ್ನೆ ಎದ್ದಿದೆ. ‘ಅಗ್ನಿದಿವ್ಯ ನನಗೆ ಹೊಸತೇನಲ್ಲ’ ಎಂಬ ಧಾಟಿಯಲ್ಲಿ ಪ್ರಣಯ್ ಹತ್ತೊಂಬತ್ತು ವರ್ಷಗಳ ಹಿಂದೆ ಹೇಳಿದ್ದರು. ಈಗ ಅದನ್ನೇ ಪುನರುಚ್ಚರಿಸುತ್ತಾರೋ ಏನೋ? ಅವರಿಗೀಗ 68ವರ್ಷ ವಯಸ್ಸಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT