ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವೀಯತೆ ಕಾನೂನು ಮೀರಿದಾಗ...

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಒಂದು ಅಪರಾಧದ ತೀವ್ರತೆಯನ್ನು ಅದಕ್ಕೆ ವಿಧಿಸಲಾಗುವ ಶಿಕ್ಷೆಯ ಪ್ರಮಾಣದಿಂದ ಗುರುತಿಸಬಹುದು. ಕೆಲವು ಅಪರಾಧಗಳಿಗೆ ಒಂದೆರಡು ವರ್ಷಗಳ ಜೈಲು ಅಥವಾ ದಂಡ ಹಾಕುವಷ್ಟು ಶಿಕ್ಷೆ ಇರಬಹುದು. ಆದರೆ ಕೊಲೆಯಂತಹ ಘೋರ ಅಪರಾಧಗಳಿಗೆ ಗಲ್ಲು ಇಲ್ಲವೆ ಜೀವಾವಧಿ ಶಿಕ್ಷೆಯೇ ಬೇಕು. ಹೀಗೆ ಶಿಕ್ಷೆಯ ಪ್ರಮಾಣ ಮತ್ತು ಸ್ವರೂಪವನ್ನು ಗಮನದಲ್ಲಿರಿಸಿಕೊಂಡು ಘೋರ ಅಪರಾಧಗಳ ತನಿಖೆ ಮಾಡುವ ಪ್ರಕ್ರಿಯೆಯಲ್ಲಿ ತನಿಖಾಧಿಕಾರಿ ಕೆಲವು ವಿಶೇಷ ಕಾನೂನು ಪ್ರಕ್ರಿಯೆಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕು.

ಅವುಗಳಲ್ಲೊಂದು ಅಪರಾಧ ದಂಡ ಸಂಹಿತೆಯ 154ನೇ ಕಲಮು. ‘ಕೊಲೆಯಂಥ ಘೋರ ಅಪರಾಧದ ಪ್ರಕರಣ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆಯೇ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್‌) ಸಂಬಂಧಪಟ್ಟ ಮ್ಯಾಜಿಸ್ಟ್ರೇಟ್‌ ಅವರಿಗೆ ಕೂಡಲೇ ತಲುಪಿಸಬೇಕಾದ್ದು ಕಡ್ಡಾಯ’ ಎಂದು ಕರ್ನಾಟಕ ಹೈಕೋರ್ಟ್ ಸಿದ್ಧಪಡಿಸಿರುವ ‘ಕರ್ನಾಟಕ ಕ್ರಿಮಿನಲ್ ರೂಲ್ಸ್ ಆಫ್ ಪ್ರಾಕ್ಟೀಸ್‌’ನಲ್ಲಿ ಹೇಳಿದೆ.

ಈ ಎಫ್ಐಆರ್ ಅನ್ನು ತಮಗೆ ತಲುಪಿಸುವ ಪೊಲೀಸ್ ಸಿಬ್ಬಂದಿಯ ಮಾಹಿತಿ ಹಾಗೂ ವೇಳೆಯನ್ನು ಮ್ಯಾಜಿಸ್ಟ್ರೇಟ್‌ ಅವರು ನಮೂದಿಸಬೇಕು. ಅದು ಒಂದು ರೀತಿಯಲ್ಲಿ 24/7 ಕೆಲಸ. ಅರ್ಥಾತ್‌ ಅವೇಳೆಯಾದರೂ ಜರುಗಲೇಬೇಕಾದ ಪ್ರಕ್ರಿಯೆ. ಎಫ್ಐಆರ್ ಅನ್ನು ಮ್ಯಾಜಿಸ್ಟ್ರೇಟ್‌ ಅವರಿಗೆ ತಲುಪಿಸುವಲ್ಲಿ ವಿಳಂಬವಾದರೆ ಆರೋಪಿಯು ಪ್ರಕರಣದಲ್ಲಿ ಬಿಡುಗಡೆ ಹೊಂದಲು ನೆರವಾಗುತ್ತದೆ.

ನಾನೀಗ ಹೇಳಹೊರಟಿರುವುದು ಕೊಲೆ ಪ್ರಕರಣ ಒಂದರಲ್ಲಿ ಎಫ್ಐಆರ್ ಅನ್ನು ಮ್ಯಾಜಿಸ್ಟ್ರೇಟ್‌ ಅವರಿಗೆ ತಲುಪಿಸುವಲ್ಲಿ ಆದ ವಿಳಂಬದ ಘಟನೆಯೊಂದು ಹೇಗೆ ತಿರುವು ಪಡೆದುಕೊಂಡಿತು ಎಂಬುದನ್ನು.

***
1989ರಲ್ಲಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದು  ರಾತ್ರಿ ಎಂಟು ಗಂಟೆಗೆ ದಾಖಲಾಯಿತು. ಠಾಣಾಧಿಕಾರಿಯು ಅದರ ಎಫ್ಐಆರ್ ಅನ್ನು ಪೊಲೀಸ್‌ ಕಾನ್‌ಸ್ಟೆಬಲ್‌ ಮಹಾನಿಧಿ ಎನ್ನುವವರ ಕೈಗಿತ್ತರು. ಇದನ್ನು ಮ್ಯಾಜಿಸ್ಟ್ರೇಟ್‌ ಅವರ ಮನೆಗೆ ಹೋಗಿ ತಲುಪಿಸಿ ಬಂದು ವರದಿ ಸಲ್ಲಿಸುವಂತೆ ಆದೇಶಿಸಿದರು.

ಎಫ್ಐಆರ್‌ನೊಂದಿಗೆ ಠಾಣೆ ಬಿಟ್ಟ ಮಹಾನಿಧಿ ಬೆಂಗಳೂರು - ತುಮಕೂರು ಮುಖ್ಯರಸ್ತೆಯ ಕಡೆ ಹೋಗುತ್ತಿದ್ದರು. ಒಬ್ಬ ಬೈಕ್‌ ಸವಾರ ಅತಿ ವೇಗವಾಗಿ ಬಂದು ಮಹಾನಿಧಿ ಅವರನ್ನು ಅಣಕಿಸುವಂತೆ ಹಿಂದಿಕ್ಕಿ ಹೋದ. ಮಹಾನಿಧಿ ಸ್ವಲ್ಪ ದೂರ ಹೋದಾಗ ಒಬ್ಬ ವ್ಯಕ್ತಿ ಬೈಕ್‌ನಿಂದ ಕೆಳಗೆ ಬಿದ್ದಿದ್ದು ಕಾಣಿಸಿತು.

ಅನೇಕ ಜನರು ತಮ್ಮ ವಾಹನಗಳನ್ನು ದೂರದಲ್ಲಿ ನಿಲ್ಲಿಸಿಕೊಂಡು ಗಾಯಾಳು ಕಡೆ ನೋಡುತ್ತಿದ್ದರು. ಮಹಾನಿಧಿ ನೋಡಿದಾಗ ತನ್ನನ್ನು ಹಿಂದಿಕ್ಕಿದ್ದವನೇ ಈ ವ್ಯಕ್ತಿ ಎಂದು ತಿಳಿಯಿತು. ಅವನನ್ನು ಆಸ್ಪತ್ರೆಗೆ ಸೇರಿಸಲು ಅಲ್ಲಿದ್ದವರನ್ನು ಸಹಾಯಕ್ಕೆ ಕರೆದ.

ಒಬ್ಬೊಬ್ಬರು ತಲೆಗೊಂದರಂತೆ ಮಾತಾಡಿದರು. ಒಬ್ಬ ‘ಅಲ್ಲಾ ಸ್ವಾಮಿ, ಇವ ನಮಗೆ ಎರಡು ಮೂರು ಕಡೆ ಅಡ್ಡ ಬಂದು ಕಿಚಾಯಿಸಿ, ಸರ್ಕಸ್‌
ನಲ್ಲಿ ಬೈಕ್ ಓಡಿಸೋ ಹಾಗೆ ಶಿಳ್ಳೆ ಹೊಡ್ಕೊಂಡು, ಮೆರ್ಕೊಂಡು ಬಂದ, ಅದಕ್ಕೆ ಸರಿಯಾಗಿ ಅನುಭವಿಸ್ತಿದ್ದಾನೆ ಬಿಡಿ. ಇವನಿಗೆ ಸಹಾಯ ಮಾಡೋಕೆ ನಮ್ ಕೈಲಾಗಲ್ಲ’ ಎಂದರು. ಇನ್ನು ಕೆಲವರು ‘ಇವರು ಹೇಳಿದ್ದರಲ್ಲಿ ಅರ್ಥ ಇದೆ ಸಾರ್, ಇಂತಹ ದುರಹಂಕಾರಿಗಳಿಗೆ ಸಹಾಯ ಮಾಡಿದರೆ ದೇವರೂ ಮೆಚ್ಚೊಲ್ಲ’ ಎನ್ನುತ್ತಾ ಸಹಾಯಕ್ಕೆ ಬರಲಿಲ್ಲ.

ಅಲ್ಲಿದ್ದವರೊಂದಿಗೆ ಮಾತಾಡಿ ಪ್ರಯೋಜನವಿಲ್ಲ ಎಂದುಕೊಂಡ ಮಹಾನಿಧಿ  ಗಾಯಾಳುವಿನ ನೆರವಿಗೆ ಮುಂದಾದರು. ಆ ದಾರಿಯಲ್ಲಿ ಹೋಗು
ತ್ತಿದ್ದ ಆಟೊರಿಕ್ಷಾವೊಂದನ್ನು ನಿಲ್ಲಿಸಿ, ಅದರಲ್ಲಿದ್ದ ಪ್ರಯಾಣಿಕರಿಗೆ ಗಾಯಾಳುವನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಬೇಕಾದ ಅಗತ್ಯ ವಿವರಿಸಿದರು.

ಪ್ರಯಾಣಿಕರು ಹಿಂದೆ ಮುಂದೆ ನೋಡದೆ ಆಟೊದಿಂದ ಇಳಿದು ಗಾಯಾಳುವಿಗಾಗಿ ಆಟೊ ಬಿಟ್ಟುಕೊಟ್ಟರು. ಚಾಲಕ ಒಂದು ಪ್ರಶ್ನೆಯನ್ನೂ ಕೇಳದೆ ಗಾಯಾಳುವನ್ನು ಆಟೊದಲ್ಲಿ ಕೂರಿಸಿಕೊಂಡ. ಬೈಕ್‌ನಲ್ಲಿದ್ದ ಮಹಾನಿಧಿ ಅವರನ್ನು  ಚಾಲಕ ಹಿಂಬಾಲಿಸಿದ.

ಬೆಂಗಳೂರಿನ ಹೊರವಲಯ ಪೀಣ್ಯದ ಸಮೀಪ ಹೋದಾಗ ಒಂದು ಕ್ಲಿನಿಕ್‌ ಕಂಡು ಅಲ್ಲಿ ಗಾಯಾಳುವನ್ನು ಕರೆದೊಯ್ದರು. ಅಲ್ಲಿದ್ದ  ಡಾಕ್ಟರ್, ‘ನಾನು ಅಪಘಾತದಂತಹ ಕೇಸಿನಲ್ಲಿ (ಮೆಡಿಕೊ ಲೀಗಲ್ ಕೇಸ್‌) ಚಿಕಿತ್ಸೆ ನೀಡುವುದಿಲ್ಲ, ಪದೇಪದೇ  ಕೋರ್ಟ್‌ಗೆ ಅಲೆಯಲು ನನಗೆ ಸಮಯವಿಲ್ಲ’ ಎಂದು ಚಿಕಿತ್ಸೆ ನೀಡಲು ನಿರಾಕರಿಸಿಬಿಟ್ಟರು.

ಅಲ್ಲಿಂದ ಹೊರಟು ಯಶವಂತಪುರದಲ್ಲಿದ್ದ ‘ನರ್ಸಿಂಗ್ ಹೋಂ’ ತಲುಪಿದಾಗ ಅಲ್ಲಿಯ ವೈದ್ಯರದ್ದೂ ಅದೇ ಧೋರಣೆ. ‘ನಮ್ಮದು ಖಾಸಗಿ ನರ್ಸಿಂಗ್ ಹೋಂ, ವಾಹನ ಅಪಘಾತ ಕೇಸಿನ  ಗಾಯಾಳುಗಳಿಗೆ  ಚಿಕಿತ್ಸೆ  ನೀಡುವುದಿಲ್ಲ, ಕೊಡಲೇಬೇಕು ಅಂತ ಕಾನೂನಿಲ್ಲ, ಅದೇನಿದ್ದರೂ ಸರ್ಕಾರಿ ಆಸ್ಪತ್ರೆಗಳಿಗಷ್ಟೇ’ ಎಂದು ನಿರ್ದಾಕ್ಷಿಣ್ಯವಾಗಿ ಹೇಳಿಬಿಟ್ಟರು. ನಿರ್ವಾಹವಿಲ್ಲದೆ  ಮಹಾನಿಧಿ  ಅಲ್ಲಿಂದ ಬಹುದೂರವಿದ್ದ ಮಲ್ಲೇಶ್ವರದ  ಕೆ.ಸಿ.ಜನರಲ್ ಆಸ್ಪತ್ರೆಯವರೆಗೆ ಗಾಯಾಳುವನ್ನು  ಕರೆತಂದು ದಾಖಲು ಮಾಡಿದರು.

ವೈದ್ಯರು ಗಾಯಾಳುವನ್ನು ತಕ್ಷಣವೇ ಪರೀಕ್ಷೆಗೆ ಒಳಪಡಿಸಿದರು. ವೈದ್ಯರಿಗೆ ವಿವರ ಹೇಳಿದ ನಂತರ ಮಹಾನಿಧಿ ಅವರು, ಮಾರನೆ ದಿನ ಬರುವುದಾಗಿ ಹೇಳಿ ಹೊರಟರು. ಹೊರಬಂದು ಆಟೊ ಚಾಲಕನಿಗೆ ಹಣ ಕೊಡಲು ಹೋದಾಗ ಚಾಲಕ ಅದನ್ನು ವಿನಯದಿಂದ ನಿರಾಕರಿಸಿ ‘ನಿಮ್ಮ ಸೇವೆಯಲ್ಲಿ  ನನ್ನದೂ ಒಂದು  ಭಾಗ  ಇರಲಿ  ಸಾ...’ ಎಂದು ಹೇಳಿ ಹೊರಟುಬಿಟ್ಟ. ಮಹಾನಿಧಿಯವರ ಮನಸ್ಸು ಒಂದು ಕ್ಷಣ ಧನ್ಯತೆಯಿಂದ ಕುಪ್ಪಳಿಸಿತು.

ತಕ್ಷಣ ಅವರ ಕರ್ತವ್ಯಪ್ರಜ್ಞೆ ಜಾಗೃತವಾಯಿತು. ಮ್ಯಾಜಿಸ್ಟ್ರೇಟ್ ಅವರಿಗೆ ಸಮಯಕ್ಕೆ ಸರಿಯಾಗಿ ತಲುಪಿಸಲೇಬೇಕಿದ್ದ ಎಫ್ಐಆರ್ ಕೈಯಲ್ಲಿತ್ತು. ಅಲ್ಲಿಂದ ಎದ್ದೆನೋ ಬಿದ್ದೆನೋ ಎಂದುಕೊಳ್ಳುತ್ತಾ ಮಹಾನಿಧಿ ಮ್ಯಾಜಿಸ್ಟ್ರೇಟ್‌ ಅವರ ಮನೆ ತಲುಪುವ ಹೊತ್ತಿಗೆ ಬೆಳಗಿನಜಾವ ನಾಲ್ಕು ಗಂಟೆಯಾಗಿತ್ತು. ಗಾಢ ನಿದ್ದೆಯಿಂದ ಎದ್ದು ಬಂದ ಮ್ಯಾಜಿಸ್ಟ್ರೇಟ್‌ ಅವರು ಮಹಾನಿಧಿ ಅವರನ್ನು ಕೋಪದಿಂದ ನೋಡುತ್ತಾ ‘ನಿಮ್ಮ ಸರ್ಕಲ್ ಇನ್‌ಸ್ಪೆಕ್ಟರ್‌ ಇದನ್ನು ನಿನ್ನ ಕೈಗೆ ಎಷ್ಟು ಗಂಟೆಗೆ ಕೊಟ್ಟಿದ್ದು?’ ಎಂದು ಗದರಿ ಕೇಳಿದರು.

‘8 ಗಂಟೆಗೆ ಸ್ವಾಮಿ’ ಎಂದರು ಮಹಾನಿಧಿ. ದಾರಿಯುದ್ದಕ್ಕೂ ಅವಾಂತರಗಳನ್ನೇ ಎದುರಿಸಿ ಮ್ಯಾಜಿಸ್ಟ್ರೇಟ್‌ ಅವರ ಮನೆ ತಲುಪುವ ಹೊತ್ತಿಗೆ ಸುಸ್ತಾಗಿ ಕುಡಿದವರಂತೆ ಕಾಣುತ್ತಿದ್ದ ಮಹಾನಿಧಿ ಅವರನ್ನು ದಿಟ್ಟಿಸಿ ನೋಡಿದ ಮ್ಯಾಜಿಸ್ಟ್ರೇಟ್‌, ‘ನನ್ನಲ್ಲಿಗೆ ಬರಲು ಎಂಟು ತಾಸು ಬೇಕಾಯಿತೇನು? ಎಲ್ಲೆಲ್ಲೋ ಸುತ್ತಾಡಿಕೊಂಡು ಬಂದಿದ್ದೀಯ. ನಿನ್ನಂತಹ ಬೇಜವಾಬ್ದಾರಿ ಪೇದೆಗಳನ್ನ ನಾನು ತುಂಬಾ ನೋಡಿದ್ದೇನೆ’ ಎಂದು ಖಾರವಾಗಿ ಬೈದರು. ನಡೆದದ್ದನ್ನು ಮಹಾನಿಧಿ ಅವರು ವಿವರಿಸಲು ಮುಂದಾದರೂ ಮ್ಯಾಜಿಸ್ಟ್ರೇಟ್ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.

‘ನಿನ್ನ  ವಿವರಣೆ  ನನಗೆ  ಬೇಕಿಲ್ಲ. ಪೊಲೀಸ್‌ ಪೇದೆಗಳನ್ನೆಲ್ಲಾ ವಿವರ ಕೇಳುತ್ತಾ ಕೂತರೆ ಅದ್ಭುತ ಉಪಕಥೆಗಳನ್ನು ಹೇಳ್ತೀರಾ ಅಂತ ನನಗೆ ಗೊತ್ತು’   ಎನ್ನುತ್ತಾ ಮಹಾನಿಧಿಯವರ ಮುಖಕ್ಕೆ  ಬಾರಿಸಿದಂತೆ ಬಾಗಿಲು ಮುಚ್ಚಿಕೊಂಡರು. ಮಹಾನಿಧಿಗೆ ಒಂದು ವಿಕ್ಷಿಪ್ತ ಸಂದರ್ಭದಲ್ಲಿ ಸಿಕ್ಕಿ
ಕೊಂಡಂತಾಗಿತ್ತು. ಆದರೂ, ಒಬ್ಬ ಗಾಯಾಳುವಿಗೆ ನೆರವಾದೆ ಎಂಬ ತೃಪ್ತಿ ಮತ್ತು ಧನ್ಯತೆ ಮನದೊಳಗಿತ್ತು.

ಮಹಾನಿಧಿ ಠಾಣೆಗೆ ಹಿಂದಿರುಗಿ ವರದಿ ಸಲ್ಲಿಸುವ ಹೊತ್ತಿಗೆ ಬೆಳಗಿನ ಜಾವ ಐದು ಗಂಟೆಯಾಗಿತ್ತು. ಮನೆಗೆ ವಾಪಸಾಗಿ ಮಲಗಿ ಅರೆಬರೆ ನಿದ್ದೆ ಮಾಡಿ ಬೆಳಿಗ್ಗೆ  ಯಾಂತ್ರಿಕವಾಗಿ ಸಿದ್ಧರಾಗಿ ಠಾಣೆಯಲ್ಲಿ ಸರ್ಕಲ್ ಇನ್‌ಸ್ಟೆಕ್ಟರ್‌ ಮುಂದೆ ಹಾಜರಾದರು. ಹಿಂದಿನ ರಾತ್ರಿ ವಿಳಂಬ ಆಗಿದ್ದು ಅದಾಗಲೇ ಇನ್‌ಸ್ಟೆಕ್ಟರ್‌ ಕಿವಿ ತಲುಪಿತ್ತು.

‘ಮ್ಯಾಜಿಸ್ಟ್ರೇಟರಿಗೆ ಎಫ್ಐಆರ್ ಸಲ್ಲಿಸಿದಾಗ ಎಷ್ಟು ಹೊತ್ತಾಗಿತ್ತೋ ಅಲ್ಪನಿಧಿ...?’ ಎಂದು ಹೀಯಾಳಿಸಿ ಕೇಳಿದರು. ‘ಬೆಳಗಿನ ಜಾವ ನಾಲ್ಕು ಗಂಟೆಯಾಗಿತ್ತು  ಸ್ವಾಮಿ, ಅದೇನಾಯಿತೆಂದರೆ...’ ಎಂದು ಮಹಾನಿಧಿ ಬಾಯಿ ತೆರೆಯುತ್ತಿದ್ದಂತೆಯೇ, ಕರ್ತವ್ಯಲೋಪದ ಆರೋಪದ ಮೇಲೆ ಇಲಾಖೆ ವಿಚಾರಣೆ ಮುಗಿಯುವವರೆಗೆ ಮಹಾನಿಧಿ ಅವರನ್ನು ಅಮಾನತ್ತಿನಲ್ಲಿಟ್ಟು ಆದೇಶ ಹೊರಬಂತು...!

***
ಮಹಾನಿಧಿ ಅಂದು ಎಫ್‌ಐಆರ್‌ ತಲುಪಿಸಿದ್ದು ಮುತ್ತುಕುಮಾರ್‌ ಎಂಬ ವ್ಯಕ್ತಿ ಆರೋಪಿಯಾಗಿದ್ದ ಕೊಲೆ ಕೇಸಿನಲ್ಲಿ.  ಕೊಲೆಯಾದ ವ್ಯಕ್ತಿಯ ಹೆಂಡತಿಯ ಪರವಾಗಿ ನಾನು ವಕಾಲತ್ತು ವಹಿಸಿದ್ದೆ.

ಎಫ್‌ಐಆರ್‌, ಮ್ಯಾಜಿಸ್ಟ್ರೇಟ್‌ ಅವರಿಗೆ ತಲುಪುವಲ್ಲಿ ವಿಪರೀತ ವಿಳಂಬವಾಗಿದೆ ಎಂಬ ಕಾರಣವನ್ನೇ ಮುಂದುಮಾಡಿ ಲಾಭ ಪಡೆಯಲು ಆರೋಪಿ ಪರ ವಕೀಲರು ಕಾತರರಾಗಿದ್ದರು. ಅದೊಂದೇ ಆಧಾರದ ಮೇಲೆ ಕೇಸನ್ನು ಗೆಲ್ಲಲು ಸಾಧ್ಯವಿದೆ ಎಂದು ಅವರು ಭಾವಿಸಿದಂತಿತ್ತು. ಒಂದು ರೀತಿಯಲ್ಲಿ ಇದು ವಾಸ್ತವವೂ, ಕಾನೂನು ಸಮ್ಮತವೂ ಆಗಿತ್ತು.

ಈ ಅಂಶವನ್ನು ಸರ್ಕಾರದ ಪರವಾಗಿ ವಾದಿಸುತ್ತಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರೊಂದಿಗೆ ಸಾಕಷ್ಟು ಸಮಾಲೋಚಿಸಿದ್ದೆ. ನಡೆದ ಎಲ್ಲಾ ಘಟನಾವಳಿಗಳನ್ನು ಕೋರ್ಟ್ ಮುಂದೆ ಹೇಳಿಸಿಬಿಡಲು ನಾವು ನಿರ್ಧರಿಸಿದೆವು. ಒಬ್ಬ ಗಾಯಾಳುವಿನ ಪ್ರಾಣ ಉಳಿಸಲು ಮಹಾನಿಧಿ ಮಾಡಿದ ಪ್ರಯತ್ನಗಳು ಮೆಚ್ಚತಕ್ಕವು ಮತ್ತು ಎಫ್‌ಐಆರ್‌ ಅನ್ನು ಸಲ್ಲಿಸುವಲ್ಲಿ ಮಹಾನಿಧಿ ಮಿತಿಮೀರಿದ ವಿಳಂಬವೇನೂ ಮಾಡಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸಾಧ್ಯವಿದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್‌ ಅವರಿಗೆ ವಿವರಿಸಿದೆ.

ನಮ್ಮ ನಿರೀಕ್ಷೆಯಂತೆ ಮಹಾನಿಧಿ ಅವರ ಹೇಳಿಕೆಯನ್ನು ಕೋರ್ಟ್‌ ದಾಖಲಿಸಿತು. ಘಟನೆ ನಡೆದ ದಿನ ರಸ್ತೆಯಲ್ಲಿ ಬಿದ್ದಿದ್ದ ಗಾಯಾಳು ಉಗ್ರೇಶನನ್ನು ತನಿಖಾಧಿಕಾರಿಯು ಆರೋಪ ಪಟ್ಟಿಯಲ್ಲಿ ಸಾಕ್ಷಿದಾರನನ್ನಾಗಿಸಿರಲಿಲ್ಲ. ಅವನನ್ನು ವಿಚಾರಣೆಗೆ ಒಳಪಡಿಸುವುದು ಈ ಕೇಸಿಗೆ ಬಹಳ ಮುಖ್ಯವಾದ ಕಾರಣ ಕಟಕಟೆಗೆ ತರುವಲ್ಲಿ ಪ್ರಾಸಿಕ್ಯೂಟರ್ ಮುಖಾಂತರ ಯಶಸ್ವಿಯಾದೆ.

ನ್ಯಾಯಾಲಯಕ್ಕೆ ಬಂದ ಉಗ್ರೇಶ, ಆವತ್ತು ತಾನು   ಮಾಡಿಕೊಂಡ ಅವಘಡದಲ್ಲಿ ಮಹಾನಿಧಿ ಅವರ ನೆರವಿನಿಂದ ಜೀವ ಉಳಿದ ಬಗೆಯನ್ನು  ವಿಸ್ತಾರವಾಗಿ ವಿವರಿಸುವ ಜೊತೆಗೆ ಚಿಕಿತ್ಸೆಗೆ ಸಂಬಂಧಿಸಿದ ದಾಖಲೆಗಳನ್ನೂ ಹಾಜರುಪಡಿಸಿದ. ಪಾಟಿ ಸವಾಲಿನಲ್ಲಿ ಕೊಲೆ ಆರೋಪಿ ಪರ ವಕೀಲರು ಇದಾವುದನ್ನೂ ಅಲ್ಲಗಳೆಯಲು ಸಾಧ್ಯವಾಗಲಿಲ್ಲ.

ಸಾಮಾನ್ಯವಾಗಿ ದೂರುದಾರರ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಅವರೇ ವಕಾಲತ್ತು ವಹಿಸುತ್ತಾರೆ. ನಾನು ದೂರುದಾರರ ಪರ ಖಾಸಗಿ ವಕೀಲ
ನಾದ್ದರಿಂದ ನ್ಯಾಯಾಲಯವನ್ನು ಉದ್ದೇಶಿಸಿ ನೇರವಾಗಿ ವಾದ ಮಾಡುವಂತಿರಲಿಲ್ಲ. ಹಾಗಾಗಿ ಲಿಖಿತ ರೂಪದಲ್ಲಿ ನನ್ನ ವಾದವನ್ನು ಹೀಗೆ ಮಂಡಿಸಿದೆ:

‘... ಮಹಾನಿಧಿ  ಅವರು ಎಫ್ಐಆರ್ ಅನ್ನು  ಮ್ಯಾಜಿಸ್ಟ್ರೇಟ್‌ ಅವರಿಗೆ  ತಲುಪಿಸುವಲ್ಲಿ ವಿಳಂಬ ಮಾಡಿದ್ದು ಅದರ ಮಹತ್ವವನ್ನು  ಗೊತ್ತಿಲ್ಲದ  ಕಾರಣಕ್ಕಲ್ಲ. ಒಂದು  ವಿಚಿತ್ರ ಸಂವೇದನೆಯ ಕಾರಣಕ್ಕಾಗಿ. ಅವರ ಕಣ್ಣಮುಂದೆ ಕೇವಲ ಕಾನೂನು ಇದ್ದಿದ್ದರೆ ಉಗ್ರೇಶನ ಪ್ರಾಣಪಕ್ಷಿ ಹಾರಿ
ಹೋಗುತ್ತಿತ್ತು. ಮಹಾನಿಧಿ ಅವರದ್ದು ಕಾನೂನು ಮೀರಿದ  ಮಾನವೀಯತೆ ಎಂದು ಉಲ್ಲೇಖಿಸಿದೆ.

‘ನಿಯಮ ಪಾಲನೆಯಾಗದೆ ಅಪವಾದವಾಯಿತು; ಮನುಷ್ಯತ್ವದ ಮೆರವಣಿಗೆ ಧರ್ಮವಾಯಿತು’...  ಎಂದು ಬರೆಯುತ್ತಾ... ‘ಮಹಾನಿಧಿ ಪೊಲೀಸ್‌ ಕಾನ್‌ಸ್ಟೆಬಲ್‌ ಮಾತ್ರವಲ್ಲದೇ ಒಬ್ಬ ನಾಗರಿಕನೂ ಹೌದು. ಘಟನೆಯ ಸ್ಥಳದಲ್ಲಿ ಗಾಯಾಳುವಿನ ನೆರವಿಗೆ ಬಾರದವರೂ ನಾಗರಿಕರೇ. ಚಿಕಿತ್ಸೆಕೊಡಲು ನಿರಾಕರಿಸಿದ ಡಾಕ್ಟರ್‌ಗಳೂ, ಮಹಾನಿಧಿಯನ್ನು ಅಮಾನತಿನಲ್ಲಿಟ್ಟ ವರಿಷ್ಠ ಪೊಲೀಸ್‌ ಅಧಿಕಾರಿಗಳೂ ನಾಗರಿಕರೇ... ಗಾಯಾಳುವನ್ನು ಸಾಗಿಸಲು  ಆಟೊರಿಕ್ಷಾದಿಂದ ಇಳಿದ ಪ್ರಯಾಣಿಕರು ಮತ್ತು  ಶುಲ್ಕವನ್ನು ನಿರಾಕರಿಸಿದ ಚಾಲಕನೂ ಕೂಡ ನಾಗರಿಕರೇ...’ ಎಂಬ ಒಕ್ಕಣೆ ಬರೆದೆ.

‘ಪಂಡಿತ ಪರಮಾನಂದ ಕಟಾರ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ 1989ರಲ್ಲಿ ಸುಪ್ರೀಂಕೋರ್ಟ್‌, ಅಪಘಾತಗಳಲ್ಲಿ ಹಾನಿಗೊಳಗಾದವರಿಗೆ ಸಂಬಂಧಿಸಿದಂತೆ ರೂಪಿಸಿರುವ ಮಾರ್ಗದರ್ಶನ ಸೂತ್ರಗಳನ್ನು ವಿವರಿಸಿದೆ. ಅದರಲ್ಲಿ ಜೀವರಕ್ಷಕನ ಹಕ್ಕುಗಳು, ವೈದ್ಯಕೀಯ ವೃತ್ತಿನಿರತರಿಗೆ ಲಭ್ಯವಿರುವ ರಕ್ಷಣೆ, ಆಸ್ಪತ್ರೆಗಳ ಕರ್ತವ್ಯ  ಇತ್ಯಾದಿಗಳನ್ನು ಉಲ್ಲೇಖಿಸಿರುವುದು ನಾನು ನಮೂದಿಸಿದೆ. ಇದರ ಜೊತೆಗೆ, ‘ಗಾಯಾಳುಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುವ ಖಾಸಗಿ ಅಥವಾ ಸರ್ಕಾರಿ ವೈದ್ಯರು ಶಿಕ್ಷಾರ್ಹರಾಗುತ್ತಾರೆ’ ಎಂಬ ಬಗ್ಗೆ ಹೈಕೋರ್ಟ್‌ಗಳು ನೀಡಿರುವ ಮಾರ್ಗದರ್ಶನ ಸೂತ್ರಗಳನ್ನೂ ಉಲ್ಲೇಖಿಸಿದೆ.

ಕೊನೆಯಲ್ಲಿ ‘ಕಾನೂನು ಮನುಷ್ಯರಿಗಾಗಿಯೇ ಹೊರತು, ಮನುಷ್ಯರು ಕಾನೂನಿಗಾಗಿ ಅಲ್ಲ’ ಎನ್ನುವ ತತ್ವವನ್ನು ಆಧಾರವಾಗಿಟ್ಟುಕೊಂಡು ಮಹಾನಿಧಿ ಅವರಿಂದ ಆಗಿರುವ ‘ಅತಿ’ ಎನಿಸುವ  ವಿಳಂಬಕ್ಕೆ ಸಕಾರಣಗಳನ್ನು ಒದಗಿಸಿದೆ.

ನ್ಯಾಯಾಧೀಶರಿಗೆ ನನ್ನ ಈ ಲಿಖಿತ ವಾದ ಸಮರ್ಥನೀಯ ಎನ್ನಿಸಿತು. ಪ್ರಸ್ತುತ ಸಂದರ್ಭದಲ್ಲಿ ಮಹಾನಿಧಿ ಅವರಿಂದ ಆಗಿರುವುದು ವಿಳಂಬವೇ ಅಲ್ಲ ಎಂದು ನಿರ್ಣಯಿಸಿದರು. ‘ಇವರೊಬ್ಬ ಜೀವರಕ್ಷಕ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾನಿಧಿ ಅವರನ್ನು ಅಮಾನತ್ತಿನಲ್ಲಿಟ್ಟ  ಪೊಲೀಸ್‌ ಅಧಿಕಾರಿಗಳ ಕ್ರಮಕ್ಕೆ ಛೀಮಾರಿ  ಹಾಕಿದರು. ಕರ್ತವ್ಯಲೋಪವೆಸಗಿದ ವೈದ್ಯರ ವಿರುದ್ಧ ಕ್ರಮ ಜರುಗಿಸಲು ವೈದ್ಯಕೀಯ ಪರಿಷತ್ತಿಗೆ ಆದೇಶಿಸಿದರು. ಘಟನೆಯ ಸ್ಥಳದಲ್ಲಿ ಸಹಾಯಕ್ಕೆ ಬಾರದ ಪೂರ್ವಗ್ರಹಪೀಡಿತ ನಾಗರಿಕರು ನರಸತ್ತವರೆಂದೂ, ಅಂತಹವರು ಸಮಾಜಕ್ಕೆ ಭಾರವೆಂದು ತೀರ್ಪಿನಲ್ಲಿ ದಾಖಲಿಸಿದರು.

ಇವೆಲ್ಲವುಗಳ ಮಧ್ಯೆ, ಮಾನವೀಯತೆಯ ವಿಳಂಬದ ದುರ್ಲಾಭ ಪಡೆಯಲು ಹೊರಟ ಕೊಲೆ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ...!
ಲೇಖಕ ಹೈಕೋರ್ಟ್‌ ವಕೀಲ(ಹೆಸರುಗಳನ್ನು ಬದಲಾಯಿಸಲಾಗಿದೆ)

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT