‘ರಾಜಧಾನಿಯ ಸಾರಿಗೆ ಚಿತ್ರಣ ಬದಲಿಸಲಿದೆ ಮೆಟ್ರೊ’

7

‘ರಾಜಧಾನಿಯ ಸಾರಿಗೆ ಚಿತ್ರಣ ಬದಲಿಸಲಿದೆ ಮೆಟ್ರೊ’

Published:
Updated:
‘ರಾಜಧಾನಿಯ ಸಾರಿಗೆ ಚಿತ್ರಣ ಬದಲಿಸಲಿದೆ ಮೆಟ್ರೊ’

ರಾಜ್ಯದ ರಾಜಧಾನಿಯ ಸಂಚಾರ ದಟ್ಟಣೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಲುವಾಗಿ ಆರಂಭಿಸಿದ ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತ ಕೊನೆಗೂ ಉದ್ಘಾಟನೆಗೆ ಸಜ್ಜಾಗಿದೆ.

3.42 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗ ಹಾಗೂ 8.9  ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಹೊಂದಿರುವ ಒಟ್ಟು 43.3 ಕಿ.ಮೀ ಉದ್ದದ ಮೆಟ್ರೊ ಜಾಲವನ್ನು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಜೂನ್‌ 17ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಮಾಲಿನ್ಯರಹಿತ ಸಾರಿಗೆ ರೂಪಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಇದು.

ಭೂಸ್ವಾಧೀನ ಪ್ರಕ್ರಿಯೆಯ ಗೋಜಲುಗಳನ್ನು ನಿವಾರಿಸುತ್ತಾ,  ಸುರಂಗ ಮಾರ್ಗ ನಿರ್ಮಾಣ ಸಂದರ್ಭದಲ್ಲಿ ಎದುರಾದ ಅಡ್ಡಿ ಆತಂಕಗಳನ್ನು ಒಂದೊಂದಾಗಿ ಬಗೆಹರಿಸುತ್ತಾ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್‌) ಯಶಸ್ಸಿನ ಒಂದು ಪ್ರಮುಖ ಘಟ್ಟವನ್ನು ದಾಟಿದೆ.

‘ನಮ್ಮ ಮೆಟ್ರೊ’ ಮೊದಲ ಹಂತದ ಪಯಣದ ಅನುಭವವನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ. ಭವಿಷ್ಯದಲ್ಲಿ ಮೆಟ್ರೊ ಸಾಗಬೇಕಾದ ಹಾದಿಯಲ್ಲಿರುವ ಸವಾಲುಗಳ ಬಗ್ಗೆಯೂ ಅವರು ಬೆಳಕು ಚೆಲ್ಲಿದ್ದಾರೆ.

* ‘ನಮ್ಮ ಮೆಟ್ರೊ’ ಮೊದಲ ಹಂತ ಸಾಗಿ ಬಂದ ಹಾದಿ ಹೇಗಿತ್ತು?

ಈ ಯೋಜನೆಯ  ಕಾಮಗಾರಿ ಆರಂಭವಾಗಿದ್ದು 2008ರ ಕೊನೆಯಲ್ಲಿ.  ನನಗಿಂತ ಮೊದಲು ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದವರು   ಯೋಜನೆಗೆ ಭದ್ರ ಬುನಾದಿ ಹಾಕಿದ್ದರು. ನಾನು 2013ನಲ್ಲಿ ಅಧಿಕಾರ ವಹಿಸಿಕೊಂಡೆ. ಆವಾಗ  ರೀಚ್‌ 1 ಮಾರ್ಗದಲ್ಲಿ (ಎಂ.ಜಿ. ರಸ್ತೆಯಿಂದ ಬೈಯಪ್ಪನಹಳ್ಳಿ) ರೈಲು ಸಂಚಾರ ಆರಂಭವಾಗಿತ್ತು.

ನನಗಿದ್ದ ಸವಾಲು ಸುರಂಗ  ಮಾರ್ಗಗಳನ್ನು (ಎಂ.ಜಿ. ರಸ್ತೆ– ಮಾಗಡಿ ರಸ್ತೆ, ಸಂಪಿಗೆ ರಸ್ತೆ– ನ್ಯಾಷನಲ್‌ ಕಾಲೇಜು) ಹಾಗೂ ನೆಲದಡಿಯ ನಿಲ್ದಾಣಗಳನ್ನು ಪೂರ್ಣಗೊಳಿಸುವುದು. ಅದರಲ್ಲೂ  ಮುಖ್ಯವಾಗಿ ಮೆಜೆಸ್ಟಿಕ್‌ನ ಇಂಟರ್‌ಚೇಂಜ್‌ ನಿಲ್ದಾಣದ ಕಾಮಗಾರಿ ಅಚ್ಚುಕಟ್ಟಾಗಿ ನಡೆಯುವಂತೆ ನೋಡಿಕೊಳ್ಳುವುದು. ಈ ಸವಾಲನ್ನು ಯಶಸ್ವಿಯಾಗಿ ಮುಗಿಸಿದ ತೃಪ್ತಿ ಇದೆ.

ಯೋಜನೆ ರೂಪಿಸುವುದು, ವಿನ್ಯಾಸ ಸಿದ್ಧಪಡಿಸುವುದು, ಭೂಸ್ವಾಧೀನ, ಗುತ್ತಿಗೆ ನೀಡುವುದು, ಕಾಮಗಾರಿಯ ಮೇಲ್ವಿಚಾರಣೆ... ಹೀಗೆ ಎಲ್ಲ ಹಂತಗಳಲ್ಲೂ ಅನೇಕ ಇಲಾಖೆಗಳ ಜೊತೆ ಸಮನ್ವಯ ಸಾಧಿಸುವುದು ಸವಾಲಿನ ಕೆಲಸ. ಅದಕ್ಕಿಂತಲೂ ಮುಖ್ಯವಾಗಿ ಜನನಿಬಿಡ ನಗರದಲ್ಲಿ ನಾವು ಈ ಕಾಮಗಾರಿ ನಡೆಸಿದ್ದೇವೆ. ಅನೇಕ ತೊಂದರೆಗಳು ಎದುರಾದವು. ಇದು ಸಹಜ ಕೂಡಾ. ಅವುಗಳಿಂದ ಅನುಭವ ಪಡೆದುಕೊಂಡು ಪ್ರಮುಖ ಸಾರಿಗೆ ಜಾಲವನ್ನು ರೂಪಿಸಿದ್ದೇವೆ.

*  ಕಾಮಗಾರಿ ಅನುಷ್ಠಾನ ಹಾಗೂ  ಮೆಟ್ರೊ ಸಂಚಾರ ನಿರ್ವಹಣೆ... ಇವೆರಡನ್ನೂ ಏಕಕಾಲದಲ್ಲಿ ನಿಭಾಯಿಸುವುದು ಕಷ್ಟವಾಗಲಿಲ್ಲವೇ?

ಯೋಜನೆ ಅನುಷ್ಠಾನ ಹಂತದಿಂದ  ಸಂಚಾರ ನಿರ್ವಹಣೆಯ ಹಂತಕ್ಕೆ ಬರುವುದು ಒಂದು ರೀತಿ ಸಂಕ್ರಮಣ ಕಾಲವಿದ್ದಂತೆ. ರೈಲು ಸಂಚಾರ ನಿರ್ವಹಣೆಯನ್ನು ನೋಡಿಕೊಳ್ಳುವ ಜೊತೆಗೆ ಕಾಮಗಾರಿಯನ್ನೂ ಗಮನಿಸಬೇಕಾದ ಮಹತ್ತರ ಜವಾಬ್ದಾರಿ ನನ್ನ ಮೇಲಿತ್ತು. ನನ್ನ ಅವಧಿಯಲ್ಲಿ ರೀಚ್‌ 3 ಮಾರ್ಗದಲ್ಲಿ ಮೆಟ್ರೊ ಸಂಚಾರ ಪ್ರಾರಂಭವಾಯಿತು. 11 ಕಿ.ಮೀ. ಉದ್ದದ ಈ (ಸಂಪಿಗೆ ರಸ್ತೆ–ಪೀಣ್ಯ) ಮಾರ್ಗದಲ್ಲಿ  ಸಂಚಾರ ಆರಂಭವಾದ ಬಳಿಕ, ಮೆಟ್ರೊ ಜಾಲದ ಉದ್ದ 18 ಕಿ.ಮೀಗೆ ಹೆಚ್ಚಳವಾಯಿತು.   ಈ ಜಾಲಕ್ಕೆ ಮತ್ತೆ 3 ಕಿ.ಮೀ. ಮಾರ್ಗವನ್ನು (ಪೀಣ್ಯ–ನಾಗಸಂದ್ರ) ಸೇರಿಸಿದೆವು.

ರೈಲು ಸಂಚಾರ ನಿರ್ವಹಣೆಗೆ ತರಬೇತಾದ ಮಾನವ ಸಂಪನ್ಮೂಲದ ಅಗತ್ಯವಿತ್ತು. ಮಾನವ ಸಂಪನ್ಮೂಲ ಭರ್ತಿ ಮಾಡಿಕೊಳ್ಳುವಾಗ ಪಾರದರ್ಶಕತೆ ಕಾಪಾಡಲು ಹೊಸ ಪದ್ಧತಿ ಅನುಸರಿಸಿದೆವು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮೂಲಕ  ಪರೀಕ್ಷೆ ನಡೆಸಿ, ಅದರ ಅಂಕವನ್ನೇ ಮಾನದಂಡವನ್ನಾಗಿ ಇಟ್ಟುಕೊಂಡು ನೇಮಕಾತಿ ನಡೆಸುತ್ತಿದ್ದೇವೆ. ಮೆಟ್ರೊ ಸೇವೆಯ ನಿರ್ವಹಣೆಗೆ ಯುವಜನರ ಪಡೆ ಸಿದ್ಧವಾಗಿದೆ. ನಿಗಮದ ನೌಕರರ ಪೈಕಿ ಮಹಿಳೆಯರಿಗೆ ಶೇ 33 ಮೀಸಲಾತಿ ಒದಗಿಸಿದ್ದೇವೆ. ಹೊಸ ಸಿಬ್ಬಂದಿಯನ್ನು ಸಜ್ಜುಗೊಳಿಸುವ ಸಲುವಾಗಿ  ತರಬೇತಿ ಕೇಂದ್ರವನ್ನೂ ಬಲಪಡಿಸಿದ್ದೇವೆ.

* ಸುರಂಗ ಮಾರ್ಗ ನಿರ್ಮಿಸುವ ವೇಳೆ ಅನೇಕ ಅಡ್ಡಿ ಆತಂಕಗಳು ಎದುರಾದವು. ಇವುಗಳನ್ನು ಮೊದಲೇ ನಿರೀಕ್ಷಿಸಿದ್ದಿರಾ?

ಮೆಟ್ರೊ ಕಾಮಗಾರಿ ನಮಗೆಲ್ಲರಿಗೂ ಹೊಸ ಅನುಭವ. ಸಂಪಿಗೆ ರಸ್ತೆ– ಮೆಜೆಸ್ಟಿಕ್‌ ನಡುವೆ ಸುರಂಗ ಕೊರೆಯುತ್ತಿದ್ದ  ಗೋದಾವರಿ ಯಂತ್ರ ಏಕಾಏಕಿ ಹದಗೆಟ್ಟಿತು. ಅದನ್ನು ಹೊರಗೆ ತೆಗೆಯುವುದೇ ಒಂದು ದೊಡ್ಡ ಸವಾಲಾಯಿತು. ಕಾವೇರಿ ಮತ್ತು ಕೃಷ್ಣ ಯಂತ್ರಗಳು ದಕ್ಷಿಣ ಭಾಗದಲ್ಲಿ ಸುರಂಗ ಕೊರೆಯುತ್ತಿದ್ದವು. ಚಿಕ್ಕಪೇಟೆ ಹಾಗೂ ಕೆ.ಆರ್‌.ಮಾರುಕಟ್ಟೆ ಪ್ರದೇಶದಲ್ಲಿ ಹಳೆಯ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಹಾಗಾಗಿ ಸುರಂಗ ಕೊರೆಯುವಾಗ ಅನೇಕ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿತು. ಬಹಳ ಎಚ್ಚರಿಕೆಯಿಂದ ಕೆಲಸವನ್ನು ಮುಂದುವರಿಸಬೇಕಾಗಿ ಬಂತು. ಹೆಚ್ಚು ವೇಗವಾಗಿ ಸುರಂಗ ಕೊರೆದರೆ ಕಟ್ಟಡಗಳು ಮತ್ತಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇತ್ತು. ಹಾಗಾಗಿ ನಿರೀಕ್ಷಿತ ವೇಗದಲ್ಲಿ ಕಾಮಗಾರಿ ನಡೆಸಲು ಸಾಧ್ಯವಾಗಲಿಲ್ಲ.

* ಸುರಂಗದ ಕಾಮಗಾರಿ ಮುಗಿದ ಬಳಿಕವೂ ಸಂಪಿಗೆ ರಸ್ತೆ ಮತ್ತು ಯಲಚೇನಹಳ್ಳಿ ಮಾರ್ಗದಲ್ಲಿ ರೈಲು ಸಂಚಾರ ಆರಂಭ ವಿಳಂಬವಾಯಿತು ಎಂಬ ದೂರುಗಳಿವೆಯಲ್ಲ?

ಕಾವೇರಿ ಹಾಗೂ ಕೃಷ್ಣ ಯಂತ್ರಗಳು 2016ರ ಅಕ್ಟೋಬರ್‌ ಕೊನೆಯ ವೇಳೆಗೆ ಹೊರಗೆ ಬಂದವು. ಇದಾಗಿ ಆರೇ ತಿಂಗಳುಗಳಲ್ಲಿ ಈ ಮಾರ್ಗದ ಇತರ ಕೆಲಸಗಳನ್ನು ಮುಗಿಸಿದ್ದೇವೆ. ಇಷ್ಟು ಕೆಲಸ ನಡೆಸಲು ಸಾಮಾನ್ಯವಾಗಿ ಒಂದೂವರೆ ವರ್ಷ ಬೇಕು. ನಮ್ಮ ಎಂಜಿನಿಯರ್‌ಗಳು ಯೋಜಿತ ರೀತಿ ಕಾರ್ಯ ನಡೆಸಿದ್ದರಿಂದ ಇದು ಸಾಧ್ಯವಾಗಿದೆ.

* ಕಾಮಗಾರಿಗಳು ವಿಳಂಬವಾಗುವಾಗ ಅತ್ಯಂತ ಕ್ಲಿಷ್ಟಕರ ನಿರ್ಧಾರ ತಳೆಯುವ ಪ್ರಸಂಗ ಎದುರಾಗಿತ್ತೇ?

ಗುತ್ತಿಗೆ  ಹಾಗೂ ಕಾಮಗಾರಿ ನಿರ್ವಹಣೆಗೆ ಸಂಬಂಧಿಸಿದಂತೆ ಅನೇಕ ಬಾರಿ ತೀರಾ ನಿಷ್ಠುರವಾಗಿ ನಡೆದುಕೊಂಡಿದ್ದೇನೆ. ಅನೇಕ ಗುತ್ತಿಗೆದಾರರ ವಿರುದ್ಧವೂ ಕಠಿಣ ಕ್ರಮ ತೆಗೆದುಕೊಂಡಿದ್ದೇನೆ. ಆದರೆ, ಅದನ್ನೆಲ್ಲ ಬಹಿರಂಗ ಪಡಿಸುವುದು ಸಮಂಜಸವಲ್ಲ. ಕಠಿಣ ನಿರ್ಧಾರಗಳನ್ನು ತಳೆದಿದ್ದರಿಂದಾಗಿಯೇ ಮೊದಲ  ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. ಇಂತಹ ನಿರ್ಧಾರ ತೆಗೆದುಕೊಂಡಿದ್ದು ಸರಿ ಎಂದು ಈಗ ಎನಿಸುತ್ತಿದೆ.

* ಮೊದಲ ಹಂತದ ಕಾಮಗಾರಿಯ ಅನುಭವಗಳು ಎರಡನೇ ಹಂತದ ಕಾಮಗಾರಿಗೆ ಪಾಠ ಆಗಲಿವೆಯೇ?

ಖಂಡಿತಾ, ನೂರಾರು ಎಂಜಿನಿಯರ್‌ಗಳು, ಹತ್ತಾರು ಸಾವಿರ ಕಾರ್ಮಿಕರು ಮೊದಲ ಬಾರಿ ಮೆಟ್ರೊ ನಿರ್ಮಾಣ ಕಾರ್ಯಲ್ಲಿ ತೊಡಗಿದ್ದರು.  ನನಗೂ ಈ ಹೊಣೆ ಹೊಸತು. ಮೊದಲ ಹಂತದಿಂದ ಅನೇಕ ಅನುಭವಗಳಾಗಿವೆ. ಅದರಿಂದಾಗಿಯೇ ಎರಡನೇ ಹಂತದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ರೀಚ್‌ 2 ಮಾರ್ಗದ ವಿಸ್ತರಣೆ ಹಾಗೂ ಯಲಚೇನಹಳ್ಳಿಯಿಂದ ಕನಕಪುರ ರಸ್ತೆವರೆಗಿನ ರೀಚ್‌ 4 ಮಾರ್ಗದ ವಿಸ್ತರಣೆ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ.  ಈ ಕಾಮಗಾರಿಗಳಿಂದ  ಜನರಿಗೆ ಆಗುವ ತೊಂದರೆಯ ಪ್ರಮಾಣ ಅತಿ ಕಡಿಮೆ.

* ಸುರಂಗ ಕಾಮಗಾರಿ ವಿಳಂಬವಾಗಿದ್ದರಿಂದ ಮೊದಲ ಹಂತ ತಡವಾಯಿತು. ಎರಡನೆ ಹಂತದಲ್ಲಿ ಸುರಂಗ ಮಾರ್ಗ ಮೊದಲು ಆರಂಭಿಸಬೇಕಿತ್ತಲ್ಲವೇ?

ಆದಷ್ಟು ಬೇಗ  ಕಾಮಗಾರಿ ಪೂರ್ಣಗೊಳಿಸುವ ಸಲುವಾಗಿ ನಾವು ವ್ಯವಸ್ಥಿತ ಯೋಜನೆ ಹಾಕಿಕೊಂಡಿರುತ್ತೇವೆ. ಅದಕ್ಕೆ ಅನುಗುಣವಾಗಿಯೇ  ಕಾಮಗಾರಿ ಅನುಷ್ಠಾನಗೊಳಿಸುತ್ತೇವೆ. ಈ ಪ್ರಕ್ರಿಯೆಯಲ್ಲಿ ಭೂಸ್ವಾಧೀನ ಅತ್ಯಂತ ಪ್ರಮುಖ ಘಟ್ಟ. ಕಾಯ್ದೆ ಪ್ರಕಾರವೇ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕು. ರೀಚ್‌ 2 ವಿಸ್ತರಣೆ ಮತ್ತು ರೀಚ್‌ 4 ವಿಸ್ತರಣೆಗೆ ಜಮೀನು ಬೇಗ ಸಿಕ್ಕಿದ್ದರಿಂದ ಮೊದಲು ಅಲ್ಲಿ ಕಾಮಗಾರಿಗೆ ಟೆಂಡರ್‌ ಕರೆದೆವು. ಈ ಎರಡೂ ಮಾರ್ಗಗಳ ಕೆಲಸ ಅರ್ಧದಷ್ಟು ಪೂರ್ಣಗೊಂಡಿದೆ.

ಬೈಯಪ್ಪನಹಳ್ಳಿಯಿಂದ–ವೈಟ್‌ಫೀಲ್ಡ್‌ ವರೆಗಿನ ಮಾರ್ಗಕ್ಕೂ ಭೂಸ್ವಾಧೀನ ಪ್ರಕ್ರಿಯೆ ನಾವು ನಿರೀಕ್ಷಿಸಿದಂತೆಯೇ ನಡೆಯುತ್ತಿದೆ. ಇಲ್ಲಿ ಸಿವಿಲ್‌  ಕಾಮಗಾರಿಗಳಿಗೆ ಟೆಂಡರ್‌ ಆಹ್ವಾನಿಸಲಾಗಿದೆ. ಆರ್‌.ವಿ.ರಸ್ತೆಯಿಂದ ಎಲೆಕ್ಟ್ರಾನಿಕ್ಸ್‌ ಸಿಟಿಗೆ ಸಂಪರ್ಕ ಕಲ್ಪಿಸುವ ಮಾರ್ಗದ ಭೂಸ್ವಾಧೀನವೂ ಪ್ರಗತಿಯಲ್ಲಿದೆ.

ಎರಡನೇ ಹಂತದಲ್ಲಿ 13.79 ಕಿ.ಮೀ ಉದ್ದದ ಸುರಂಗ ಮಾರ್ಗದ (ಡೇರಿ ವೃತ್ತದಿಂದ ನಾಗವಾರ) ಕಾಮಗಾರಿಗೆ ಟೆಂಡರ್‌ ಆಹ್ವಾನಿಸಲು  ದಾಖಲೆ ಪತ್ರಗಳು ಸಿದ್ಧವಾಗಿವೆ. ಯೋಜನೆಗೆ ಹಣ ಹೊಂದಿಸುವುದೂ ಪ್ರಮುಖ ಅಂಶ. ಯೂರೋಪಿಯನ್‌ ಇನ್ವೆಸ್ಟ್‌ಮೆಂಟ್‌ ಬ್ಯಾಂಕ್‌ (ಇಐಬಿ) ಸಾಲ ಕೊಡಲು ತಾತ್ವಿಕವಾಗಿ ಒಪ್ಪಿದೆ. ಅವರಿಗೆ ದಾಖಲೆ ಪತ್ರಗಳನ್ನು ಕಳುಸಿದ್ದೇವೆ. ಅವುಗಳನ್ನು ಪರಿಶೀಲಿಸಿ ಶೀಘ್ರವೇ ಅವರು ಹಸಿರು ನಿಶಾನೆ ತೋರುತ್ತಾರೆ ಎಂಬ ವಿಶ್ವಾಸವಿದೆ.

* 2020ರ ಗಡುವಿನೊಳಗೆ ಎರಡನೇ ಹಂತವನ್ನು ಪೂರ್ಣಗೊಳಿಸಲು ಸಾಧ್ಯವೇ?

ಎರಡನೇ ಹಂತಕ್ಕೆ ಇನ್ನಷ್ಟು ಉತ್ತಮ ರೀತಿಯಲ್ಲಿ ಯೋಜನೆ ಹಾಕಿಕೊಂಡಿದ್ದೇವೆ. ಮೊದಲ ಹಂತಕ್ಕೆ ಹೋಲಿಸಿದರೆ ಎರಡನೇ ಹಂತದ ಯೋಜನಾ ಗಾತ್ರ ಎರಡುಪಟ್ಟು ಇದೆ. ಆದರೂ, ನಿಗದಿತ ಗುರಿಯ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಆತ್ಮವಿಶ್ವಾಸ ಎಂಜಿನಿಯರ್‌ಗಳು ಹಾಗೂ ಕಾರ್ಮಿಕರಲ್ಲಿದೆ. ಅವರು ಉತ್ತಮ ರೀತಿಯಲ್ಲಿ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಹಾಗಾಗಿ 2020ರ ಒಳಗೆ ಎರಡನೇ ಹಂತ  ಪೂರ್ಣಗೊಳ್ಳಲಿವೆ ಎಂಬ ವಿಶ್ವಾಸ ಇದೆ.

ಈ ಹಂತದಲ್ಲಿ ಮತ್ತೆ 72 ಕಿ.ಮೀ. ಮೆಟ್ರೊ ಜಾಲ ಸೇರ್ಪಡೆ ಆಗಲಿದೆ. ಇದಾದ ಬಳಿಕ  ನಗರಕ್ಕೆ 114 ಕಿ.ಮೀ ಮೆಟ್ರೊ ಜಾಲ ಲಭಿಸಲಿದೆ. ಇದು ಇಡೀ ನಗರದ ಸಾರಿಗೆ ವ್ಯವಸ್ಥೆ ಚಿತ್ರಣವನ್ನೇ ಬದಲಾಯಿಸಲಿದೆ.

* ಮೂರನೇ ಹಂತದ ಸಿದ್ಧತೆ ಆರಂಭವಾಗಿದೆಯೇ?

ಮೂರನೇ ಹಂತದ ವಿಸ್ತರಣೆ ಚರ್ಚೆ ಹಂತದಲ್ಲಿದೆ. ಅದಕ್ಕೆ ಮುನ್ನ, ಕೆ.ಆರ್‌.ಪುರ–ಸಿಲ್ಕ್‌ಬೋರ್ಡ್‌ ಮಾರ್ಗವನ್ನು ರೀಚ್‌ 2ಎ ಎಂದು ಗುರುತಿಸಿ ಅನುಷ್ಠಾನಗೊಳಿಸುತ್ತಿದ್ದೇವೆ. ಇದಕ್ಕೆ  ನವೀನ ಹಣಕಾಸು ವಿಧಾನ (ಇನೊವೇಟಿವ್‌  ಫೈನಾನ್ಸಿಂಗ್‌) ಬಳಸಿ ಬಂಡವಾಳ ಕ್ರೋಢೀಕರಿಸಲಾಗುತ್ತಿದೆ. ಜೊತೆಗೆ ದೇವನಹಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸಲು ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುತ್ತಿದ್ದೇವೆ. ಸರ್ಕಾರದ ಒಪ್ಪಿಗೆ ಸಿಗುತ್ತಿದ್ದಂತೆಯೇ ಇದರ ಕಾಮಗಾರಿ ಪ್ರಕ್ರಿಯೆಗಳೂ ಆರಂಭವಾಗಲಿವೆ.

*  ಮೊದಲ ಹಂತದ ಮೆಟ್ರೊ ನಿಲ್ದಾಣಗಳು ಇತರ ಸಾರಿಗೆ ಸೇವೆಗೆ (ಬಸ್‌, ಟ್ಯಾಕ್ಸಿ) ಪೂರಕವಾಗಿ ನಿರ್ಮಾಣಗೊಂಡಿಲ್ಲ ಎಂಬ ದೂರು ಇದೆಯಲ್ಲಾ?

ಹೌದು. ಎರಡನೇ ಹಂತದ ಮೆಟ್ರೊ ನಿಲ್ದಾಣಗಳಲ್ಲಿ ಈ ಕೊರತೆ ನೀಗಿಸಿದ್ದೇವೆ. ಕೊನೆಯ ಘಟ್ಟದವರೆಗೆ ಸಂಪರ್ಕ ಕಲ್ಪಿಸುವುದಕ್ಕೆ ಮೆಟ್ರೊ ಪೂರಕವಾಗಿರಬೇಕು ಎಂಬುದು ನಮ್ಮ ಉದ್ದೇಶ. ಎರಡನೇ ಹಂತದ ಮೆಟ್ರೊ ನಿಲ್ದಾಣಗಳಲ್ಲಿ ಬಸ್‌, ಟ್ಯಾಕ್ಸಿ, ಆಟೊ ರಿಕ್ಷಾ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಿದ್ದೇವೆ. ಸೈಕಲ್‌, ಬೈಕ್‌, ಸ್ಕೂಟರ್‌ ನಿಲುಗಡೆಗೂ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಸೈಕಲ್ ಬಳಸಿ  ಮೆಟ್ರೋ ನಿಲ್ದಾಣ ತಲುಪುವವರಿಗೆ ಉತ್ತೇಜನ ನೀಡಲಿದ್ದೇವೆ.

* ಮೆಟ್ರೊ ಸಂಚಾರದ ಅವಧಿಯನ್ನು ರಾತ್ರಿ 12 ಗಂಟೆಯವರೆಗಾದರೂ ವಿಸ್ತರಿಸಬೇಕೆಂಬ ಬೇಡಿಕೆ ಇದೆ. ಇದನ್ನು ಈಡೇರಿಸುತ್ತೀರಾ?

ಬೇಡಿಕೆ ಇರುವುದು ನಿಜ. ಮೊದಲ ಹಂತದಲ್ಲಿ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭವಾದ ಬಳಿಕ ರಾತ್ರಿ ವೇಳೆ ಸಂಚಾರದ ಅವಧಿ ವಿಸ್ತರಿಸುವುದಕ್ಕೆ ಸಿದ್ಧತೆ ಮಾಡಿಕೊಂಡಿದ್ದೇವೆ.

* ಮೆಟ್ರೋ ಜೊತೆಗೆ ಮಾನೊ ರೈಲು ಸಂಪರ್ಕ ಕಲ್ಪಿಸುವುದಿಲ್ಲವೇ?

ಸದ್ಯಕ್ಕಂತೂ ಅಂತಹ ಯಾವುದೇ ಪ್ರಸ್ತಾವ ಇಲ್ಲ.

* ಗಡುವಿನ ಒಳಗೆ ಕಾಮಗಾರಿ ಮುಗಿಯದ ಕಾರಣ ಯೋಜನೆಯ ವೆಚ್ಚ ಹೆಚ್ಚಳ ಆಗಿದೆ ಎಂಬ ಆರೋಪವಿದೆಯಲ್ಲಾ?

ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದಿದ್ದರೆ, ಗುತ್ತಿಗೆದಾರರಿಗೆ ಹೆಚ್ಚು ಕಾಲಾವಕಾಶ ನೀಡಲು ಅವಕಾಶ ಇದೆ. ಅದರ ಪ್ರಕಾರವೇ ನಡೆದುಕೊಂಡಿದ್ದೇವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry