ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲಾಸ್ಟಿಕ್‌ ಅಕ್ಕಿ ನಿಜವಲ್ಲ: ಆರೋಗ್ಯ ಇಲಾಖೆ ಸ್ಪಷ್ಟನೆ

Last Updated 10 ಜೂನ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ಲಾಸ್ಟಿಕ್‌ ಅಕ್ಕಿಯಂತೆ ಕಣ್ಣಿಗೆ ಕಂಡರೂ ಅದು ವಾಸ್ತವವಾಗಿ ಪ್ಲಾಸ್ಟಿಕ್‌ ಅಲ್ಲ. ರಾಜ್ಯದ ಯಾವುದೇ ಭಾಗದಲ್ಲೂ ಪ್ಲಾಸ್ಟಿಕ್‌ ಅಕ್ಕಿ ಪತ್ತೆಯಾಗಿಲ್ಲ’ ಎಂದು ಆರೋಗ್ಯ ಇಲಾಖೆ ಆಯುಕ್ತ ಸುಬೋಧ್‌ ಯಾದವ್‌ ಸ್ಪಷ್ಟಪಡಿಸಿದರು.

‘ಪ್ರಜಾವಾಣಿ’ ಜೊತೆ ಶನಿವಾರ ಮಾತನಾಡಿದ ಅವರು, ‘ನಾವು ಸಂಗ್ರಹಿಸಿದ ಮಾದರಿಗಳ ಸೂಕ್ಷ್ಮ ಪರೀಕ್ಷೆಯನ್ನು ಇಲಾಖೆಯ ಪ್ರಯೋಗಾಲಯದಲ್ಲಿ ನಡೆಸಿದ್ದೇವೆ. ಸದ್ಯಕ್ಕೆ ಯಾವುದೇ ಮಾದರಿಯಲ್ಲೂ  ಪ್ಲಾಸ್ಟಿಕ್‌ ಅಂಶ ಪತ್ತೆ ಆಗಿಲ್ಲ. ಆದರೂ ಹೆಚ್ಚಿನ ಪರೀಕ್ಷೆಗೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾ ಕೇಂದ್ರಕ್ಕೆ (ಸಿಎಫ್‌ಟಿಆರ್‌ಐ) ಮಾದರಿಗಳನ್ನು ಕಳುಹಿಸಲಾಗಿದೆ’ ಎಂದರು.

‘ಅನಾವಶ್ಯಕವಾಗಿ ಸೃಷ್ಟಿಯಾದ ಸುದ್ದಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ದೂರು ಬಂದ ಕಡೆಗಳಿಗೆ ತೆರಳಿ ಮಾದರಿಗಳನ್ನು ಸಂಗ್ರಹಿಸುವಂತೆ ಇಲಾಖೆಯ ಜಂಟಿ ಆಯುಕ್ತರಿಗೆ ಸೂಚಿಸಿದ್ದೇನೆ’ ಎಂದರು.

‘ಪ್ಲಾಸ್ಟಿಕ್‌ ಅಕ್ಕಿ, ಸಕ್ಕರೆ, ಮೊಟ್ಟೆ ಪತ್ತೆಯಾದ ಸ್ಥಳಗಳಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತೆರಳಿ 280 ಮಾದರಿಗಳನ್ನು ಸಂಗ್ರಹಿಸಿದ್ದರು. ಅವುಗಳನ್ನು ರಾಜ್ಯದ ವಿವಿಧ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಿದಾಗ ಪ್ಲಾಸ್ಟಿಕ್‌ ಅಂಶ ಇಲ್ಲದಿರುವುದು ಪತ್ತೆಯಾಗಿದೆ’ ಎಂದು ಅವರು ವಿವರಿಸಿದರು.

‘ಈ ರೀತಿಯ ಊಹಾಪೋಹಗಳಿಗೆ ಯಾರೂ ಕಿವಿಗೊಡಬಾರದು. ಆತಂಕಕ್ಕೆ ಒಳಗಾಗುವ ಅಗತ್ಯವೂ ಇಲ್ಲ. ಇಂತಹ ಪ್ರಕರಣಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೆ, ತಕ್ಷಣ ಸ್ಥಳಕ್ಕೆ ತೆರಳಿ ಸಂದೇಹಗಳನ್ನು ನಿವಾರಿಸಲಾಗುವುದು’ ಎಂದೂ ಅವರು ತಿಳಿಸಿದರು.

‘ಅಲ್ಲದೆ, ಕೊಪ್ಪಳದ ಗಂಗಾವತಿ, ರಾಮನಗರದ ಮಾಗಡಿ ಮತ್ತು ಮಂಡ್ಯದ ಮದ್ದೂರು ತಾಲ್ಲೂಕಿನಲ್ಲಿ ಆತಂಕಕ್ಕೆ ಕಾರಣವಾದ ಪ್ಲಾಸ್ಟಿಕ್‌ ಅಕ್ಕಿ, ಸಕ್ಕರೆ, ಮೊಟ್ಟೆಯ ತಲಾ ಒಂದೊಂದು ಮಾದರಿಯನ್ನು ಹೆಚ್ಚಿನ ಪರೀಕ್ಷೆಗೆ  ಸಿಎಫ್‌ಟಿಆರ್‌ಐಗೆ ಕಳುಹಿಸಲಾಗಿದೆ. ಒಂದು ವಾರದೊಳಗೆ ಅಲ್ಲಿಂದ ವರದಿ ಬರುವ ನಿರೀಕ್ಷೆ ಇದೆ’ ಎಂದು ಆಹಾರ ಸುರಕ್ಷತಾ ವಿಭಾಗದ ಉಪ ಆಯುಕ್ತ ಡಾ. ಹರ್ಷವರ್ಧನ್‌ ತಿಳಿಸಿದರು.

‘ಆಹಾರಕ್ಕೆ ಸಂಬಂಧಿಸಿದ ಯಾವುದೇ ಒಂದು ಮಾದರಿಯ ಪರೀಕ್ಷೆ ನಡೆಸಿ ವರದಿ ಸಿದ್ಧಪಡಿಸಲು ₹ 6,000 ವೆಚ್ಚ ತಗಲುತ್ತದೆ’ ಎಂದೂ ಹೇಳಿದರು.
‘ಬೆಂಗಳೂರು, ಮೈಸೂರು, ಕಲಬುರ್ಗಿ  ಮತ್ತು ಬೆಳಗಾವಿಯಲ್ಲಿರುವ ಒಟ್ಟು ಐದು ಸರ್ಕಾರಿ ಪ್ರಯೋಗಾಲಯಗಳಲ್ಲಿ ಈ ಮಾದರಿಗಳ ಪರೀಕ್ಷೆ ನಡೆಸಲಾಗಿದೆ ಎಂದು ಅವರು ತಿಳಿಸಿದರು.

‘ಗಂಗಾವತಿಯ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿಗಳು ಪ್ಲಾಸ್ಟಿಕ್‌ ಅಕ್ಕಿ ಎನ್ನಲಾದ ಅಕ್ಕಿಯನ್ನು ಶನಿವಾರ ಅನ್ನ ಮಾಡಿ ಊಟ ಮಾಡಿದ್ದಾರೆ. ಆ ಮೂಲಕ ಜನರಲ್ಲಿ ಆತಂಕ ನಿವಾರಿಸಲು ಯತ್ನಿಸಿದ್ದಾರೆ. ಹೊಸ ಅಕ್ಕಿಯಲ್ಲಿ ಗಂಜಿ ಜಾಸ್ತಿ ಇದ್ದು, ಹೆಚ್ಚು ಅಂಟಿನ ಅಂಶ ಇರುವುದು ಪರೀಕ್ಷೆ ವೇಳೆ ಪತ್ತೆಯಾಗಿದೆ’ ಎಂದೂ ಅವರು ತಿಳಿಸಿದರು.

ಪರೀಕ್ಷೆ ಮಾಹಿತಿ

* ವಿವಿಧೆಡೆ ಸಂಗ್ರಹಿಸಿದ್ದ 280 ಮಾದರಿಗಳ ಪರೀಕ್ಷೆ
* ಹೆಚ್ಚಿನ ಪರಿಶೋಧನೆಗೆ ಸಿಎಫ್‌ಟಿಆರ್‌ಐಗೆ
* ವರದಿ ಸಿದ್ಧಪಡಿಸಲು ₹6,000 ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT