ಸಂದಿಗ್ಧತೆಯಲ್ಲೂ ಛಲದಿಂದ ಆಡುವುದು ನನ್ನ ಗುಣ

7
ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಗೆದ್ದ ಕರ್ನಾಟಕದ ಬೋಪಣ್ಣ ಮನದ ಮಾತು

ಸಂದಿಗ್ಧತೆಯಲ್ಲೂ ಛಲದಿಂದ ಆಡುವುದು ನನ್ನ ಗುಣ

Published:
Updated:
ಸಂದಿಗ್ಧತೆಯಲ್ಲೂ ಛಲದಿಂದ ಆಡುವುದು ನನ್ನ ಗುಣ

ಬೆಂಗಳೂರು: ‘ಪರಿಸ್ಥಿತಿ ಎಷ್ಟೇ ಕಠಿಣ ವಾಗಿದ್ದರೂ ಎದೆಗುಂದದೆ, ಛಲದಿಂದ ಹೋರಾಡಿ ಎದುರಾಳಿಗಳ ಸವಾಲು ಮೀರಿನಿಲ್ಲುವ ಗುಣ ಮೈಗೂಡಿಸಿಕೊಂಡಿ ದ್ದೇನೆ. ಹೀಗಾಗಿಯೇ ಫ್ರೆಂಚ್‌ ಓಪನ್‌ ನಲ್ಲಿ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿದೆ. ಇದು ನನ್ನ ಜೀವನ ಅವಿಸ್ಮರಣೀಯ ಕ್ಷಣ’...

ಹೀಗೆ ಖುಷಿ ಹಂಚಿಕೊಂಡವರು ಭಾರತದ ಟೆನಿಸ್‌ ಆಟಗಾರ ರೋಹನ್‌ ಬೋಪಣ್ಣ.

ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯ ಮಿಶ್ರ ಡಬಲ್ಸ್‌ ವಿಭಾಗದಲ್ಲಿ ಕೆನಡಾದ ಗೇಬ್ರಿಯೆಲಾ ದಬ್ರೌಸ್ಕಿ ಜೊತೆಗೂಡಿ ಆಡಿದ್ದ ರೋಹನ್‌ ಟ್ರೋಫಿ ಎತ್ತಿಹಿಡಿದಿದ್ದರು. 37 ವರ್ಷದ ರೋಹನ್‌ ಅವರು ಈ ಸಾಧನೆ ಮಾಡಿದ ಕರ್ನಾಟಕದ ಮೊದಲ ಮತ್ತು ಭಾರತದ ನಾಲ್ಕನೇ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿ ಕೊಂಡಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು ‘ಎಳವೆಯಲ್ಲಿಯೇ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಗೆಲ್ಲಬೇಕೆಂಬ ಮಹದಾಸೆ ಹೊತ್ತಿದ್ದೆ. 14 ವರ್ಷಗಳ ನಂತರ ಈ ಕನಸು ಕೈಗೂಡಿದೆ. ಇದರಿಂದ ಅತೀವ ಖುಷಿಯಾಗಿದೆ. ಇದು ಇನ್ನಷ್ಟು ಸಾಧನೆಗೆ ಪ್ರೇರಣೆಯಾಗಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

‘ಕಠಿಣ ಪರಿಶ್ರಮ, ಶಿಸ್ತು ಮತ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಬಂದಿದ್ದರಿಂದ ಈ ಸಾಧನೆ ಮೂಡಿ ಬಂದಿದೆ. 2010ರ ಅಮೆರಿಕ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ಪಾಕಿಸ್ತಾನದ ಐಸಾಮ್‌ ಉಲ್‌ ಹಕ್‌ ಖುರೇಷಿ ಜೊತೆ ಗೂಡಿ ಆಡಿ ಫೈನಲ್‌ ಪ್ರವೇಶಿಸಿದ್ದೆ. ಆದರೆ ಆಗ ಪ್ರಶಸ್ತಿ ಜಯಿಸಲು ವಿಫಲನಾಗಿದ್ದೆ. ಹೀಗಾಗಿ ನಿರಾಸೆಯಾಗಿತ್ತು. ಆ ಟೂರ್ನಿಯ ಬಳಿಕ ಆಟದಲ್ಲಿ ಸಾಕಷ್ಟು ಸುಧಾರಣೆಗಳನ್ನು ಮಾಡಿಕೊಂಡಿದ್ದೆ’ ಎಂದರು.

‘ಸೋಲು ಎದುರಾದಾಗ ಹತಾಶನಾಗಲಿಲ್ಲ. ಬದಲಾಗಿ ಅವು ಗಳಿಂದ ಹೊಸ ಪಾಠಗಳನ್ನು ಕಲಿತೆ. ನಾನು ಗಟ್ಟಿಮಣ್ಣಿನಂಕಣದಲ್ಲಿ ಹೆಚ್ಚು ಆಡಿಲ್ಲ. ಹೀಗಿದ್ದರೂ ಈ ಬಾರಿ ವಿಶೇಷ ಸಿದ್ಧತೆಗಳನ್ನು ಮಾಡಿಕೊಂಡು ಕಣಕ್ಕಿಳಿ ದಿದ್ದೆ. ಸಹ ಆಟಗಾರ್ತಿ ಗೇಬ್ರಿಯೆಲಾ ಕೂಡ ತುಂಬಾ ಚೆನ್ನಾಗಿ ಆಡಿದರು.

ನಮ್ಮ ನಡುವೆ ಉತ್ತಮ ಹೊಂದಾಣಿಕೆ ಇತ್ತು. ಹೀಗಾಗಿ ಒಂದೂ ಸೆಟ್‌ ಸೋಲದೆ ಫೈನಲ್‌ ತಲುಪಿದ್ದೆವು. ಫೈನಲ್‌ ಪಂದ್ಯದ ಮೊದಲ ಸೆಟ್‌ನಲ್ಲಿ ಸೋತಾಗ ಆತಂಕ ಕ್ಕೊಳಗಾಗದೆ ಎದುರಾಳಿಗಳಿಗೆ ಪ್ರತ್ಯುತ್ತರ ನೀಡಿದೆವು. ‘ಟೈ ಬ್ರೇಕರ್‌’ನಲ್ಲೂ ನಮಗೆ ಆರಂಭಿಕ ಹಿನ್ನಡೆ ಎದುರಾಗಿತ್ತು. ಸಂದಿಗ್ಧ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ  ಹೋರಾಡಿದೆವು’ ಎಂದು ಅವರು ವಿವರಿಸಿದರು.

‘ವೃತ್ತಿ ಬದುಕಿನಲ್ಲಿ ಮೊದಲ ಬಾರಿ ಗ್ರ್ಯಾನ್‌ಸ್ಲಾಮ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರಿಂದ ಹೆಮ್ಮೆಯ ಭಾವ ಮೂಡಿದೆ. ಕೋಚ್‌ ಮತ್ತು ಕುಟುಂಬದವರ ಸಹಕಾರ, ಸ್ನೇಹಿತರ ಬೆಂಬಲ, ಸಹ ಆಟಗಾರ ಮತ್ತು ಆಟಗಾರ್ತಿಯರ ಶ್ರಮ ಮತ್ತು ಅಭಿಮಾನಿ ಗಳ ಹಾರೈಕೆಯಿಂದ ಈ ಸಾಧನೆ ಆಗಿದೆ’ ಎಂದು ಹೇಳಿದರು.

‘ಅಮೆರಿಕ ಓಪನ್‌ನ ಫೈನಲ್‌ನಲ್ಲಿ ಎದುರಾಗಿದ್ದ ಸೋಲು ಎಡಬಿಡದೆ ಕಾಡುತ್ತಿತ್ತು. ಮತ್ತೆ ಆ ತಪ್ಪು ಮರುಕಳಿಸ ದಿರಲಿ ಎಂಬ ಉದ್ದೇಶದಿಂದ ಫ್ರೆಂಚ್‌ ಓಪನ್‌ ಟೂರ್ನಿಯ ಫೈನಲ್‌ಗೂ ಮುನ್ನ ಕಠಿಣ ಅಭ್ಯಾಸ ನಡೆಸಿದ್ದೆ. ಎಂತಹುದೇ ಸನ್ನಿವೇಶದಲ್ಲೂ ವಿಶ್ವಾಸ ಕಳೆದುಕೊಳ್ಳ ಬಾರದು ಎಂದು ದೃಢವಾಗಿ ನಿಶ್ಚಯಿ ಸಿದ್ದೆ. ಎಲ್ಲವೂ ಅಂದುಕೊಂಡಂತೆಯೇ ಆಯಿತು’ ಎಂದು ತಿಳಿಸಿದರು.

‘ಅಖಿಲ ಭಾರತ ಟೆನಿಸ್‌ ಸಂಸ್ಥೆ ಈ ಬಾರಿ ನನ್ನ ಹೆಸರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿರುವುದಕ್ಕೆ ಖುಷಿಯಾ ಗಿದೆ. 2014–15ರಲ್ಲೂ ಪ್ರಶಸ್ತಿಗೆ ಎಐ ಟಿಎ ನನ್ನ ಹೆಸರು ಕಳುಹಿಸಿಕೊಟ್ಟಿತ್ತು. ಆಗ ಗೌರವ ಒಲಿದಿರಲಿಲ್ಲ. ಈ ಬಾರಿ ಯಾದರೂ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕು’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry