ಹತ್ತನೇ ಪ್ರಶಸ್ತಿ ಮೇಲೆ ನಡಾಲ್ ಕಣ್ಣು

7

ಹತ್ತನೇ ಪ್ರಶಸ್ತಿ ಮೇಲೆ ನಡಾಲ್ ಕಣ್ಣು

Published:
Updated:
ಹತ್ತನೇ ಪ್ರಶಸ್ತಿ ಮೇಲೆ ನಡಾಲ್ ಕಣ್ಣು

ಪ್ಯಾರಿಸ್‌: 14 ಗ್ರ್ಯಾಂಡ್‌ ಸ್ಲಾಮ್‌ ಪ್ರಶಸ್ತಿಗಳ ಒಡೆಯ ಸ್ಪೇನ್‌ನ ರಫೆಲ್‌ ನಡಾಲ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಭಾನುವಾರ ಹತ್ತನೇ ಪ್ರಶಸ್ತಿ ಎತ್ತಿಹಿಡಿಯುವ ಕನಸಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿಯಲ್ಲಿ ಒಂಬತ್ತು ಪ್ರಶಸ್ತಿಗಳನ್ನು ಗೆದ್ದಿರುವ ನಡಾಲ್ 2014ರಲ್ಲಿ ಕೊನೆಯ ಬಾರಿ ಚಾಂಪಿಯನ್ ಆಗಿದ್ದರು.

ಭಾನುವಾರ ನಡೆಯುವ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯದಲ್ಲಿ ಸ್ವಿಟ್ಜರ್‌ಲೆಂಡ್‌ನ ಸ್ಟಾನಿಸ್ಲಾನ್‌ ವಾವ್ರಿಂಕಾ ಅವರೊಂದಿಗೆ ನಡಾಲ್ ಸೆಣಸಲಿದ್ದಾರೆ.

2005ರಲ್ಲಿ ಮೊದಲ ಬಾರಿಗೆ ಫ್ರೆಂಚ್‌ ಓಪನ್ ಗೆದ್ದುಕೊಂಡಿರುವ ವಾವ್ರಿಂಕಾ ಎರಡನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಗ್ರ್ಯಾಂಡ್‌ಸ್ಲಾಮ್‌ ಟೂರ್ನಿಗಳಲ್ಲಿ ಫೈನಲ್ ತಲುಪಿದ ಮೂರೂ ಪಂದ್ಯಗಳನ್ನು ಗೆದ್ದಿರುವ ಸಾಧನೆ ಸ್ವಿಸ್ ಆಟಗಾರನದು. ನಡಾಲ್‌ ಫ್ರೆಂಚ್ ಓಪನ್‌ ಫೈನಲ್‌ನಲ್ಲಿ ಒಮ್ಮೆಯೂ ಸೋಲು ಕಂಡಿಲ್ಲ.

ವಾವ್ರಿಂಕಾ ಇಲ್ಲಿ ಗೆಲುವು ದಾಖಲಿಸಿದರೆ ಫ್ರೆಂಚ್ ಓಪನ್ ಗೆದ್ದ ಎರಡನೇ ಹಿರಿಯ ಆಟಗಾರ ಎಂಬ ಶ್ರೇಯ ತಮ್ಮದಾಗಿಸಿಕೊಳ್ಳಲಿದ್ದಾರೆ. 1972ರಲ್ಲಿ 34 ವರ್ಷದ ಆಂಡ್ರೆಸ್ ಜಿಮೆನೊ ಇಲ್ಲಿ ಪ್ರಶಸ್ತಿ ಗೆದ್ದು ವಿಶ್ವ ರ್‍ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದರು.

ನಡಾಲ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆರನೇ ಶ್ರೇಯಾಂಕದ ಆಟಗಾರ ಡೊಮಿನಿಕ್ ಥೀಮ್ ಅವರನ್ನು ಮಣಿಸಿ ಫೈನಲ್ ತಲುಪಿದ್ದಾರೆ.

ಆದರೆ ವಾವ್ರಿಂಕಾ ಫೈನಲ್ ಹಾದಿಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಆ್ಯಂಡಿ ಮರ್ರೆಗೆ ಆಘಾತ ನೀಡಿದ್ದರು.

ಒಂದೇ ಗ್ರ್ಯಾಂಡ್‌ಸ್ಲಾಮ್ ಟೂರ್ನಿಯಲ್ಲಿ ಒಬ್ಬ ಸ್ಪರ್ಧಿ ಇದುವರೆಗೂ ಹತ್ತು ಪ್ರಶಸ್ತಿಗಳನ್ನು ಗೆದ್ದ ಉದಾಹರಣೆ ಇಲ್ಲ. ಭಾನುವಾರ ನಡಾಲ್  ಗೆದ್ದರೆ ಈ ಹೆಗ್ಗಳಿಕೆಯನ್ನು ತಮ್ಮ ಹೆಸರಿಗೆ ಸೇರಿಸಿಕೊಳ್ಳಲಿದ್ದಾರೆ.

ಮೂರು ವರ್ಷದ ಹಿಂದೆ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ವಾವ್ರಿಂಕಾ, ನಡಾಲ್ ಎದುರು ಗೆದ್ದು ಪ್ರಶಸ್ತಿ ಎತ್ತಿಹಿಡಿದಿದ್ದರು. ಆ ಪಂದ್ಯದ ವೇಳೆ ನಡಾಲ್ ಗಾಯಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry