ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬರ್ಖಾಸ್ತು?

7
ವಾರ್ಷಿಕೋತ್ಸವ ಆಚರಿಸುವ ಮುನ್ನವೇ ತನ್ನ ಚಟುವಟಿಕೆ ಅಂತ್ಯ

ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬರ್ಖಾಸ್ತು?

Published:
Updated:
ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ ಬರ್ಖಾಸ್ತು?

ಬೆಂಗಳೂರು: ಹಿಂದುಳಿದವರು, ದಲಿತರನ್ನು ಸಂಘಟಿಸಲು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಕಟ್ಟಿದ್ದ ‘ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌’ ಕೊನೆಗೂ ಬರ್ಖಾಸ್ತು ಆಗುವ ಹಂತಕ್ಕೆ ಬಂದು ನಿಂತಿದೆ.

ಬ್ರಿಗೇಡ್‌ನ ರಾಜ್ಯ ಪದಾಧಿಕಾರಿ ಸ್ಥಾನದಲ್ಲಿದ್ದ ಬಹುತೇಕರು ಬಿಜೆಪಿ ಸೇರಲು ತೀರ್ಮಾನಿಸಿದ್ದಾರೆ. 2016ರ ಅಕ್ಟೋಬರ್‌ನಲ್ಲಿ ಹಾವೇರಿಯಲ್ಲಿ ಉದ್ಘಾಟನೆಯಾಗಿದ್ದ ‘ಬ್ರಿಗೇಡ್‌’ ಮೊದಲ ವಾರ್ಷಿಕೋತ್ಸವ ಆಚರಿಸುವ ಮುನ್ನವೇ ತನ್ನ ಚಟುವಟಿಕೆಗೆ ಕೊನೆ ಹಾಡುವ ಸ್ಥಿತಿ ತಲುಪಿದೆ.

ಇತ್ತೀಚೆಗೆ ನಡೆದ ಬ್ರಿಗೇಡ್ ಪ್ರಮುಖರ ಸಭೆಯಲ್ಲಿ, ಬಿಜೆಪಿ ಸೇರಲು ಒಲವು ಇರುವವರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

ಮೊದಲು ಬಿಜೆಪಿಯಲ್ಲಿಯೇ ಇದ್ದು ಬಳಿಕ ದೂರವಾಗಿದ್ದ  ಬ್ರಿಗೇಡ್‌ ಅಧ್ಯಕ್ಷ ಕೆ. ವಿರೂಪಾಕ್ಷಪ್ಪ, ಗೌರವಾಧ್ಯಕ್ಷ ಎಸ್‌. ಪುಟ್ಟಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಿ. ವೆಂಕಟೇಶಮೂರ್ತಿ ಪಕ್ಷಕ್ಕೆ ಮರಳಲಿದ್ದಾರೆ.

ಬ್ರಿಗೇಡ್‌ ಮೂಲಕವೇ ಗುರುತಿಸಿಕೊಂಡಿದ್ದ ಉಪಾಧ್ಯಕ್ಷ ಬಿ.ಎಸ್‌.ಸೋಮಶೇಖರ್‌, ಖಜಾಂಜಿ ಟಿ.ಬಿ. ಬಳಗಾವಿ ಬಿಜೆಪಿ ಸೇರಲು ಸಮ್ಮತಿ ಸೂಚಿಸಿದ್ದಾರೆ. ಇವರೆಲ್ಲರ ಪಟ್ಟಿಯನ್ನು ತೆಗೆದುಕೊಂಡು ಹೋಗಿರುವ  ಈಶ್ವರಪ್ಪ, ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

‘ಬಿಜೆಪಿ ಸೇರಲು ಆಸಕ್ತಿ ಇರುವ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳಾಗಿದ್ದವರು ಪಟ್ಟಿ ಸಿದ್ಧಪಡಿಸಿಕೊಡಿ’ ಎಂದೂ ಈಶ್ವರಪ್ಪ ಸೂಚಿಸಿದ್ದಾರೆ.

ಬಿಜೆಪಿ ಕಲಹ ಶಮನ: ರಾಯಣ್ಣ ಬ್ರಿಗೇಡ್‌ ಚಟುವಟಿಕೆ ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಹುಟ್ಟಿಸಿತ್ತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ          ಬಿ.ಎಸ್‌.ಯಡಿಯೂರಪ್ಪ ಮತ್ತು ಈಶ್ವರಪ್ಪ ಮಧ್ಯೆ ಭಿನ್ನಮತವನ್ನೂ ಹೆಚ್ಚಿಸಿತ್ತು.

ಉಭಯ ನಾಯಕರ ಮಧ್ಯೆ ಸಂಧಾನ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ, ಯಾವುದೇ ಕಾರಣಕ್ಕೂ ರಾಯಣ್ಣ ಬ್ರಿಗೇಡ್‌ ಚಟುವಟಿಕೆಯಲ್ಲಿ ಗುರುತಿಸಿಕೊಳ್ಳದಂತೆ  ಈಶ್ವರಪ್ಪಗೆ ತಾಕೀತು ಮಾಡಿದ್ದರು. ಹಾಗಿದ್ದರೂ ಬ್ರಿಗೇಡ್‌ ಚಟುವಟಿಕೆ ನಿಂತಿರಲಿಲ್ಲ.

ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿದ್ದ ಪಕ್ಷದ ರಾಜ್ಯ ಉಸ್ತುವಾರಿ ಮುರುಳೀಧರರಾವ್, ಈಶ್ವರಪ್ಪ ಹಾಗೂ ‘ಸಂಘಟನೆ ಉಳಿಸಿ’ ಹೆಸರಿನಲ್ಲಿ ಗುರುತಿಸಿಕೊಂಡಿದ್ದ  ಎಂ.ಬಿ. ಭಾನುಪ್ರಕಾಶ್‌, ನಿರ್ಮಲಕುಮಾರ ಸುರಾನ ಅವರನ್ನು ಕರೆಯಿಸಿಕೊಂಡು ಚರ್ಚೆ ನಡೆಸಿದ್ದರು. ಪಕ್ಷದ ವೇದಿಕೆ ಬಿಟ್ಟು ಬೇರೆ ಯಾವುದೇ ಸಂಘಟನೆಗಳಲ್ಲಿ  ಪಾಲ್ಗೊಳ್ಳದಂತೆ ಆದೇಶಿಸಿದ್ದರು.

ಮತ್ತೊಂದು ಸಭೆ ನಡೆಸಿದ್ದ ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ್ಯದ ಉಸ್ತುವಾರಿ ಹೊತ್ತಿರುವ ಮುಕುಂದ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಮುರುಳೀಧರರಾವ್, ಬ್ರಿಗೇಡ್‌ ನಿಲ್ಲಿಸುವಂತೆ ಈಶ್ವರಪ್ಪ  ಅವರಿಗೆ ಸೂಚಿಸಿದ್ದರು.

ಹಿಂದುಳಿದ ಮೋರ್ಚಾದ ಸಂಪೂರ್ಣ  ಜವಾಬ್ದಾರಿಯನ್ನು ಈಶ್ವರಪ್ಪಗೆ ವಹಿಸಲು ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದೇ ಸಭೆಯಲ್ಲಿ ಬ್ರಿಗೇಡ್‌ ಸ್ಥಗಿತಗೊಳಿಸಲು ಹಾಗೂ ಅಲ್ಲಿ ಗುರುತಿಸಿಕೊಂಡವರನ್ನು ಹಿಂದುಳಿದ ಮೋರ್ಚಾದಲ್ಲಿ ತೊಡಗಿಸಿಕೊಳ್ಳುವ ಕುರಿತೂ ತೀರ್ಮಾನವಾಗಿತ್ತು.

ಮುಖ್ಯಾಂಶಗಳು

* ಬ್ರಿಗೇಡ್‌ನ ರಾಜ್ಯ ಪದಾಧಿಕಾರಿಗಳು ಬಿಜೆಪಿಯತ್ತ

* ಬಿಜೆಪಿ ಕಲಹ ಶಮನ ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry