ಭಾರತಕ್ಕೆ ಜಯ ಅನಿವಾರ್ಯ

7
ಇಂದು ದಕ್ಷಿಣ ಆಫ್ರಿಕಾ ವಿರುದ್ಧ ಮಹತ್ವದ ಪಂದ್ಯ

ಭಾರತಕ್ಕೆ ಜಯ ಅನಿವಾರ್ಯ

Published:
Updated:
ಭಾರತಕ್ಕೆ ಜಯ ಅನಿವಾರ್ಯ

ಲಂಡನ್‌:  ಭರವಸೆಯೊಂದಿಗೆ ಇಲ್ಲಿಗೆ ಬಂದಿಳಿದ ಹಾಲಿ ಚಾಂಪಿಯನ್‌ ಭಾರತ ತಂಡದವರು ಈಗ ಒತ್ತಡದಲ್ಲಿದ್ದಾರೆ. ಇನ್ನೊಂದು ಕಡೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಒಂದನೇ ಸ್ಥಾನದಲ್ಲಿ ವಿರಾಜಮಾನವಾಗಿರುವ ಎಬಿ ಡಿವಿಲಿಯರ್ಸ್ ಬಳಗದ ಸ್ಥಿತಿಯೂ ಭಿನ್ನವಲ್ಲ. ಹೀಗಾಗಿ ಈ ಎರಡು ತಂಡಗಳ ನಡುವೆ ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.

ಇಲ್ಲಿನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಗೆದ್ದವರಿ ಗಷ್ಟೇ ಮುಂದಿನ ಹಾದಿಯ ಬಾಗಿಲು ತೆರೆಯಲಿದೆ. ಅಂತಿಮ ನಾಲ್ಕರ ಘಟ್ಟದಲ್ಲಿ ಆಡುವ ಗುರಿ ಇರಿಸಿ ಅಂಗಳಕ್ಕೆ ಇಳಿಯ ಲಿರುವ ಉಭಯ ತಂಡಗಳ ಪಾಲಿಗೆ ಇದು ಅಕ್ಷರಶಃ ಕ್ವಾರ್ಟರ್‌ ಫೈನಲ್‌ ಪಂದ್ಯ.

ಭಯ ತಂಡಗಳ ನಾಯಕರಿಗೆ ವೈಯಕ್ತಿಕವಾಗಿಯೂ ಈ ಪಂದ್ಯ ಅತ್ಯಂತ ಮಹತ್ವದ್ದು. ಶ್ರೀಲಂಕಾ ವಿರುದ್ಧ 300ಕ್ಕೂ ಅಧಿಕ ರನ್ ಗಳಿಸಿಯೂ ತಂಡವನ್ನು ಜಯದ ದಡ ಸೇರಿಸಲು ಸಾಧ್ಯವಾಗದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈಗ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುವ ಸಾಮರ್ಥ್ಯ ಸಾಬೀತು ಪಡಿಸಬೇಕಾಗಿದೆ.

ಎಬಿ ಡಿವಿಲಿಯರ್ಸ್‌ ಬ್ಯಾಟಿಂಗ್‌ನಲ್ಲಿ ತಮ್ಮ ಸಹಜ ಶೈಲಿಗೆ ಮರಳಿರುವುದಾಗಿ ತೋರಿಸಬೇಕಾಗಿದೆ. ಕಳೆದ ಹತ್ತು ಏಕ ದಿನ ಪಂದ್ಯಗಳಲ್ಲಿ ಕೇವಲ 390 ರನ್‌ ಗಳಿಸಿರುವ ಅವರು ಚಾಂಪಿಯನ್ಸ್‌ ಟ್ರೋಫಿಯ ಎರಡೂ ಪಂದ್ಯಗಳಲ್ಲಿ ಎರ ಡಂಕಿ ಮೊತ್ತ ಕೂಡ ತಲುಪಿಲ್ಲ. ಶ್ರೀಲಂಕಾ ವಿರುದ್ಧದ ಸೋಲಿನ ನಂತರ ಕೊಹ್ಲಿ ಪಾಳಯದಲ್ಲಿ ಈಗ ಬೌಲಿಂಗ್ ಕ್ಷೇತ್ರದ ಬಗ್ಗೆ ಚಿಂತೆ ಆರಂಭವಾಗಿದೆ.

ಕಳೆದ ಎರಡು ಪಂದ್ಯಗಳಲ್ಲಿ ಕಣಕ್ಕೆ ಇಳಿ ಯದೇ ಇದ್ದ ಆಫ್‌ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್‌ ಅವರನ್ನು ಈ ಕಾರಣದಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಂತಿಮ ಹನ್ನೊಂದರಲ್ಲಿ ಸೇರಿಸುವ ಸಾಧ್ಯತೆ ನಿಚ್ಚಳವಾಗಿದೆ. ಮೂವರು ಎಡಗೈ ಬ್ಯಾಟ್ಸ್‌ಮನ್‌ಗಳಾದ ಕ್ವಿಂಟನ್ ಡಿಕಾಕ್‌, ಜೆಪಿ ಡುಮಿನಿ ಮತ್ತು ಡೇವಿಡ್ ಮಿಲ್ಲರ್‌ ಅವರನ್ನು ಮಣಿಸಲು ಅಶ್ವಿನ್ ಅವರಿಗಿಂತ ಉತ್ತಮ ಅಸ್ತ್ರ ಇಲ್ಲ ಎಂಬದು ಕೂಡ ಇಲ್ಲಿ ಮಹತ್ತ ಪಡೆದುಕೊಂಡಿದೆ.

ಅಶ್ವಿನ್‌ಗೆ ಅವಕಾಶ ನೀಡಿದರೂ ಎಡಗೈ ಸ್ಪಿನ್ನರ್‌ ರವೀಂದ್ರ ಜಡೇಜಾ ಅವರನ್ನು ಕೈಬಿಡುವ ಸಾಧ್ಯತೆ ಕಡಿಮೆ. ದಕ್ಷಿಣ ಆಫ್ರಿಕಾದಂಥ ಬಲಿಷ್ಠ ತಂಡದ ವಿರುದ್ಧ ಆಡುವಾಗ ಇಂಥ ಆಲ್‌ರೌಂಡರ್‌ ಅಗತ್ಯ ಇದ್ದೇ ಇರುತ್ತದೆ.

ಲಂಕಾ ವಿರುದ್ಧದ ಪಂದ್ಯದ ಎರಡನೇ ಪವರ್ ಪ್ಲೇ ಅವಧಿಯಲ್ಲಿ ಭಾರತ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿತ್ತು. ಅಶ್ವಿನ್‌ ತಂಡದಲ್ಲಿ ಇದ್ದಿದ್ದರೆ ಈ ಪರಿಸ್ಥಿತಿಯನ್ನು ತಡೆಯಲು ಸಾಧ್ಯವಾಗುತ್ತಿತ್ತೇನೋ. ಯಾರ್ಕರ್‌ಗಳ ಮೂಲಕ ಅಂತಿಮ ಓವರ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸಬಲ್ಲ ಜಸ್‌ಪ್ರೀತ್ ಬೂಮ್ರಾ ಅವರನ್ನು ಉಳಿಸುವುದಕ್ಕೂ ಕೊಹ್ಲಿ ಹಿಂದೇಟು ಹಾಕಲಾರರು. ಆದ್ದರಿಂದ ಅಶ್ವಿನ್‌ಗೆ ಅವಕಾಶ ಮಾಡಿಕೊಡಲು ಭುವನೇಶ್ವರ್ ಕುಮಾರ್ ಅಥವಾ ಉಮೇಶ್‌ ಯಾದವ್ ಅವರ ಪೈಕಿ ಒಬ್ಬರು ಬೆಂಚು ಕಾಯಬೇಕಾಗಬಹುದು.

ಬ್ಯಾಟಿಂಗ್ ಬಗ್ಗೆ ಚಿಂತೆ ಇಲ್ಲ: ಮೊದಲ ಎರಡು ಪಂದ್ಯಗಳಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 300ಕ್ಕೂ ಹೆಚ್ಚು ರನ್ ಕಲೆ ಹಾಕಿತ್ತು. ಆದ್ದರಿಂದ ಈಗ ಬ್ಯಾಟ್ಸ್‌ ಮನ್‌ಗಳ ಮೇಲೆ ಹೆಚ್ಚು ಒತ್ತಡ ಇಲ್ಲ. ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್‌ ಒಳಗೊಂಡಂತೆ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಎರಡೂ ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದಾರೆ.

ಗೆಲುವು ಅನಿವಾರ್ಯವಾಗಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ ಗಳು ಇನ್ನಷ್ಟು ಬೆವರು ಸುರಿಸಬೇಕಾದ ಅಗತ್ಯವನ್ನೂ ತಳ್ಳಿ ಹಾಕುವಂತಿಲ್ಲ. ಇನ್ನೂ 20 ರನ್‌ ಅಧಿಕ ಗಳಿಸಿದ್ದರೆ ತಂಡ ಗೆಲ್ಲುವ ಸಾಧ್ಯತೆ ಇತ್ತು ಎಂದು ಲಂಕಾ ವಿರುದ್ಧದ ಪಂದ್ಯದ ನಂತರ ಸ್ವತಃ ಕೊಹ್ಲಿ ಅವರೇ ಹೇಳಿದ್ದರು.

ಎರಡು ವರ್ಷಗಳ ನಂತರ ಭಾರತದ ವಿರುದ್ಧ ಏಕದಿನ ಕ್ರಿಕೆಟ್‌ ಆಡುತ್ತಿರುವ ದಕ್ಷಿಣ ಆಫ್ರಿಕಾವನ್ನು ಮಣಿಸುವುದು ಸುಲಭದ ಮಾತಲ್ಲ. ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗಗಳೆರಡರಲ್ಲೂ ಬಲಿಷ್ಠ ವಾಗಿರುವ ತಂಡಕ್ಕೆ ಯಾವುದೇ ತಂಡ ವನ್ನು ಸೋಲಿಸುವ ಸಾಮರ್ಥ್ಯವಿದೆ. ಹಾಶಿಮ್ ಆಮ್ಲಾ, ಕ್ವಿಂಟನ್ ಡಿಕಾಕ್‌, ಫಾಫ್ ಡು ಪ್ಲೆಸಿಸ್‌ ಮತ್ತು ಡಿವಿಲಿಯರ್ಸ್ ಸ್ಫೋಟಿಸಿ ಉತ್ತಮ ತಳಪಾಯ ಹಾಕಿಕೊಟ್ಟರೆ ಅದರ ಮೇಲೆ ರನ್ ಸೌಧ ಕಟ್ಟಲು ಕೆಳ ಕ್ರಮಾಂಕದ ಡೇವಿಡ್ ಮಿಲ್ಲರ್‌ ಹಾಗೂ ಜೆಪಿ ಡುಮಿನಿ ಅವರಿಗೆ ಸಾಧ್ಯವಿದೆ.

ಬೌಲರ್‌ಗಳಾದ ಕ್ರಿಸ್ ಮಾರಿಸ್, ಮಾರ್ನೆ ಮಾರ್ಕೆಲ್ ಮತ್ತು ಕಗಿಸೊ ರಬಾಡ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚಬಲ್ಲರು. ರಬಾಡ, ವಾಯ್ನೆ ಪಾರ್ನೆಲ್‌, ಮಾರ್ಕೆಲ್‌ ಮತ್ತು ಮಾರಿಸ್ ಅವರ ಪ್ರಬಲ ದಾಳಿಗೆ ಇಮ್ರಾನ್ ತಾಹಿರ್ ಮತ್ತು ಜೆಪಿ ಡುಮಿನಿ ಅವರ ಸ್ಪಿನ್‌ ಬಲವೂ ಸೇರಿದರೆ ಈ ತಂಡದ ಬೌಲಿಂಗ್, ಶಕ್ತಿ ಪಡೆದುಕೊಳ್ಳಲಿದೆ.

ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ದಕ್ಷಿಣ ಆಫ್ರಿಕಾ ತಂಡ ಪಾಕಿಸ್ತಾನ ವಿರುದ್ಧ ಮಂಕಾಗಿತ್ತು. ಈಗ ಏಷ್ಯಾದ ಮತ್ತೊಂದು ತಂಡದ ಮುಂದೆ ಮಾಡು ಇಲ್ಲ ಮಡಿ ಸ್ಥಿತಿಯ ಪಂದ್ಯದಲ್ಲಿ ಜಯದ ನಿರೀಕ್ಷೆಯಲ್ಲಿದೆ. ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ಬೀಗಿದ ಭಾರತ ಶ್ರೀಲಂಕಾ ವಿರುದ್ಧ ಸೋಲಿನ ಕಹಿ ಉಂಡಿತ್ತು. ಹರಿಣಗಳ ನಾಡಿನ ತಂಡದ ವಿರುದ್ಧದ ಪಂದ್ಯ ಈಗ ಟೂರ್ನಿಯಲ್ಲಿ ಭಾರತದ ಭವಿಷ್ಯ ನಿರ್ಧರಿಸಲಿದೆ.

ಕೆನ್ನಿಂಗ್ಟನ್ ಓವಲ್‌ ಪಿಚ್‌ ಬಗ್ಗೆ...

ಕೆನ್ನಿಂಗ್ಟನ್ ಓವಲ್ ಪಿಚ್‌ನಲ್ಲಿ ಹೆಚ್ಚು ರನ್‌ಗಳು ಹರಿಯುವುದಿಲ್ಲ. ಆದರೆ ಈ ಬಾರಿ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯಗಳಲ್ಲಿ ಇಲ್ಲಿ ಬ್ಯಾಟ್ಸ್‌ಮನ್‌ಗಳು ಮಿಂಚಿದ್ದಾರೆ. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗಳಿಸಿದ ಸರಾಸರಿ ರನ್‌ 248. ಗುರಿ ಬೆನ್ನಟ್ಟಿದ ತಂಡ ಗಳಿಸಿದ ಸರಾಸರಿ ರನ್‌ 214. ಈ ಪಿಚ್‌ನಲ್ಲಿ ದಾಖಲಾದ ಅತ್ಯಧಿಕ ಮೊತ್ತ ಐದು ವಿಕೆಟ್‌ಗಳಿಗೆ 398 ಎಂಬುದು ಗಮನಾರ್ಹ. 103 ರನ್‌ ಇಲ್ಲಿ ದಾಖಲಾದ ಕನಿಷ್ಠ ಮೊತ್ತ. ಈ ಬಾರಿಯ ಚಾಂಪಿಯನ್ಸ್‌ ಟ್ರೋಫಿಯ ಫಲಿತಾಂಶ ಬಂದ ಮೂರು ಪಂದ್ಯಗಳಲ್ಲಿ ಇಲ್ಲಿ ಕ್ರಮವಾಗಿ 305, 299 ಮತ್ತು 321 ರನ್ ದಾಖಲಾಗಿದೆ.

ಆರಂಭ: ಮಧ್ಯಾಹ್ನ 3 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌1 .

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry