ಅರಣ್ಯ–ಲೋಕೋಪಯೋಗಿ ಇಲಾಖೆ ಜಟಾಪಟಿ!

7
ಗಾಳಿ, ಮಳೆಗೆ ರಸ್ತೆಗೆ ಉರುಳುವ ಮರಗಳ ತೆರವಿನ ಹೊಣೆಗಾರಿಕೆ ವಿಚಾರದಲ್ಲಿ ಇಬ್ಬರ ನಡುವೆ ಜಂಜಾಟ

ಅರಣ್ಯ–ಲೋಕೋಪಯೋಗಿ ಇಲಾಖೆ ಜಟಾಪಟಿ!

Published:
Updated:
ಅರಣ್ಯ–ಲೋಕೋಪಯೋಗಿ ಇಲಾಖೆ ಜಟಾಪಟಿ!

ಶಿವಮೊಗ್ಗ: ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದಂತೆ ಗಾಳಿ, ಮಳೆಗೆ ರಸ್ತೆ ಬದಿಯ ಹಲವು ಮರಗಳು ನೆಲಕ್ಕುರುಳುತ್ತಿವೆ. ಬಿದ್ದ ಮರ ತೆರವುಗೊಳಿಸಲು ಪ್ರತಿ ಬಾರಿಯೂ ಅರಣ್ಯ ಹಾಗೂ ಲೋಕೋಪಯೋಗಿ ಇಲಾಖೆಗಳ ನಡುವೆ ತಿಕ್ಕಾಟ ಆರಂಭವಾಗುತ್ತದೆ.

ಸ್ವಾತಂತ್ರ್ಯಾನಂತರ ವಿವಿಧ ಇಲಾಖೆಗಳ ನಡುವೆ ನಡೆದಿದ್ದ ಅಧಿಕಾರ ಹಂಚಿಕೆ ಅನ್ವಯ ರಾಜ್ಯದ ಎಲ್ಲ ಪ್ರಮುಖ ರಸ್ತೆಗಳ ಎರಡೂ ಬದಿಯ ಮರಗಳ ಮಾಲೀಕತ್ವ ಹಾಗೂ ನಿರ್ವಹಣೆ ಹೊಣೆಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿತ್ತು. ಪ್ರತಿ ವರ್ಷ ಹಣ್ಣು ಕೀಳಲು ಮರಗಳ ಹರಾಜು ಹಾಕುವುದು, ಗಾಳಿ, ಮಳೆಗೆ ಧರೆಗುರುಳಿದ ಮರಗಳನ್ನು ತೆರವುಗೊಳಿಸುವುದು. ತೆರವುಗೊಂಡ ಮರಗಳ ಜಾಗದಲ್ಲಿ ಹೊಸ ಗಿಡನೆಡುವ ಕಾರ್ಯವನ್ನು ಲೋಕೋಪಯೋಗಿ ಇಲಾಖೆ ಮಾಡುತ್ತಿತ್ತು.

ರಾಜ್ಯ ಸರ್ಕಾರ 1984ರಲ್ಲಿ ಹೊಸ ಆದೇಶ ಹೊರಡಿಸಿ, ರಾಜ್ಯದ ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ರಾಜ್ಯ ಹೆದ್ದಾರಿ ಬದಿಯ ಮರಗಳ ಒಡೆತನ ಹಾಗೂ ನಿರ್ವಹಣೆಯ ಹೊಣೆಗಾರಿಕೆಯನ್ನು ಅರಣ್ಯ ಇಲಾಖೆಗೆ ವಹಿಸಿತ್ತು. ಕೆಲವು ಮಾರ್ಗಗಳ ಮರಗಳ ಒಡೆತನ ಅರಣ್ಯ ಇಲಾಖೆಗೆ ದೊರೆತರೆ, ಕೆಲವು ಮಾರ್ಗ ಸಾಮಾಜಿಕ ಅರಣ್ಯ ಇಲಾಖೆಗೆ ನೀಡಲಾಗಿತ್ತು.

ರಾಜ್ಯದಲ್ಲಿ 19,721 ಕಿ.ಮೀ. ರಾಜ್ಯ ಹೆದ್ದಾರಿ, 49, 928 ಕಿ.ಮೀ ಜಿಲ್ಲಾ ರಸ್ತೆ, 1,77,542 ಕಿ.ಮೀ. ಗ್ರಾಮೀಣ ರಸ್ತೆಗಳಿವೆ. ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳಲ್ಲೇ ಲಕ್ಷಾಂತರ ಮರಗಳಿವೆ.

ಮರ ಬಿದ್ದರೂ, ಸುಳಿಯದ ಅರಣ್ಯ ಇಲಾಖೆ ಸಿಬ್ಬಂದಿ: ರಸ್ತೆ ಬದಿಯ ಮರಗಳ ಮಾಲೀಕತ್ವ ಅರಣ್ಯ ಇಲಾಖೆಗೆ ಸೇರಿದ್ದರೂ ಗಾಳಿ, ಮಳೆಗೆ ಮರಗಳು ರಸ್ತೆಗೆ ಉರುಳಿದಾಗ ಆ ಇಲಾಖೆ ಸಿಬ್ಬಂದಿ ಅತ್ತ ಸುಳಿಯುವುದೇ ಇಲ್ಲ. ಆದರೆ ವಾಹನ ಸಂಚಾರಕ್ಕೆ ಅಡಚಣೆಯಾಗುವ ಕಾರಣ ಲೋಕೋಪಯೋಗಿ ಇಲಾಖೆಯೇ ತೆರವು ಮಾಡುತ್ತದೆ.

ಈಚೆಗೆ ಜಿಲ್ಲೆಯ ಹೊಸನಗರ ಸಮೀಪ ರಾಜ್ಯ ಹೆದ್ದಾರಿ–26ರಲ್ಲಿ ಭಾರಿ ಗಾತ್ರದ ಬಿದಿರು ಮೆಳೆ ರಸ್ತೆಗೆ ಉರುಳಿತ್ತು. ಆ ಮಾರ್ಗದ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದರೂ, ಅರಣ್ಯ ಇಲಾಖೆ ತೆರವಿಗೆ ಮುಂದಾಗಲಿಲ್ಲ. ಕೊನೆಗೆ ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ಗಳೇ ಮೆಳೆ ತೆರವುಗೊಳಿಸಿದ್ದರು. 12 ತಾಸುಗಳ ನಂತರ ಸಂಚಾರ ಮತ್ತೆ ಆರಂಭವಾಗಿತ್ತು.

‘ಮರಗಳ ಸಂಪೂರ್ಣ ಮಾಲೀಕತ್ವ ಅರಣ್ಯ ಇಲಾಖೆಗೆ ಸೇರಿದೆ. ರಸ್ತೆ ವಿಸ್ತರಣೆಗಾಗಿ ಮರ ಕಡಿಯಲು, ಸಂಚಾರಕ್ಕೆ ಅಡ್ಡಿಯಾಗುವ ಮರಗಳ ಕೊಂಬೆ ಕತ್ತರಿಸಲೂ ಅರಣ್ಯ ಇಲಾಖೆ ಅನುಮತಿ ಪಡೆಯಬೇಕು. ತೆರವುಗೊಳಿಸುವ ಮರದ ಬದಲು ಹೊಸ ಗಿಡ ನೆಟ್ಟು ಬೆಳೆಸಲು ಪರಿಹಾರವನ್ನೂ ತುಂಬಿಕೊಡುತ್ತೇವೆ. ಆದರೆ, ಗಾಳಿ ಮಳೆಗೆ ಬಿದ್ದ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದೆ ಬರುವುದಿಲ್ಲ. ತೆರವುಗೊಳಿಸಿದ ನಂತರ ಮರದ ತುಂಡುಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರ ಮಾಡುವಂತೆ ತಾಕೀತು ಮಾಡುತ್ತಾರೆ’ ಎಂದು ದೂರುತ್ತಾರೆ ಲೋಕೋಪಯೋಗಿ ಇಲಾಖೆ ಸೂಪರಿಂಟೆಂಡೆಂಟ್ ಎಂಜಿನಿಯರ್ ಬಿ.ಎಸ್‌.ಬಾಲಕೃಷ್ಣ.

‘ರಸ್ತೆ ಮೇಲೆ ಬಿದ್ದ ಮರಗಳನ್ನು ತುರ್ತು ಸಮಯಗಳಲ್ಲಿ ಗ್ರಾಮಸ್ಥರೇ ಸೇರಿ ತೆರವುಗೊಳಿಸುತ್ತಾರೆ. ಕೆಲವು ತುಂಡುಗಳನ್ನು ಯಾರಾದರೂ ತೆಗೆದುಕೊಂಡು ಹೋದರೆ ನಮ್ಮ ಮೇಲೆಯೇ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸುತ್ತಾರೆ’ ಎಂದು ದೂರುತ್ತಾರೆ ರಿಪ್ಪನ್‌ಪೇಟೆಯ ಶಂಕರಪ್ಪ.

ರಸ್ತೆಗೆ ಉರುಳಿ ಬಿದ್ದ ಮರಗಳನ್ನು  ಅವುಗಳನ್ನು ತೆರವುಗೊಳಿಸುವ ಜವಾಬ್ದಾರಿಯನ್ನು ಅರಣ್ಯ ಇಲಾಖೆಗೆ ನೀಡಿ  ಆದೇಶ ಹೊರಡಿಸಬೇಕು ಎಂದು    ತಮ್ಮ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಗೆ ಬಾಲಕೃಷ್ಣ ಪತ್ರವನ್ನೂ ಬರೆದಿದ್ದಾರೆ.

* ರಸ್ತೆ ಬದಿಯ ಮರಗಳು ಉರುಳಿದರೆ ಅವುಗಳನ್ನು ತೆರವುಗೊಳಿಸುವುದು ಲೋಕೋಪಯೋಗಿ ಇಲಾಖೆ ಜವಾಬ್ದಾರಿ. ಅದು ಅರಣ್ಯ ಇಲಾಖೆ ಕೆಲಸವಲ್ಲ.

–ಮೋಹನ್‌ಕುಮಾರ್, ಉಪ ಅರಣ್ಯಸಂರಕ್ಷಣಾಧಿಕಾರಿ,ಶಿವಮೊಗ್ಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry