ತುರ್ತು ಕರೆಗೆ 15 ಸೆಕೆಂಡ್‌ನಲ್ಲೇ ಸ್ಪಂದನೆ

7
ಸುಸಜ್ಜಿತ ಕಮಾಂಡ್ ಸೆಂಟರ್ ಹಾಗೂ ‘ನಮ್ಮ 100’ಗೆ ಚಾಲನೆ

ತುರ್ತು ಕರೆಗೆ 15 ಸೆಕೆಂಡ್‌ನಲ್ಲೇ ಸ್ಪಂದನೆ

Published:
Updated:
ತುರ್ತು ಕರೆಗೆ 15 ಸೆಕೆಂಡ್‌ನಲ್ಲೇ ಸ್ಪಂದನೆ

ಬೆಂಗಳೂರು: ನಗರ ಪೊಲೀಸರ ನೂತನ ‘ನಮ್ಮ 100’  ಹಾಗೂ  ಸುಸಜ್ಜಿತ ಕಮಾಂಡ್ ಸೆಂಟರ್ ಸೇವೆಗೆ ಶನಿವಾರ ಚಾಲನೆ ಸಿಕ್ಕಿದೆ. ಇನ್ನು ಮುಂದೆ ಸಾರ್ವಜನಿಕರ ತುರ್ತು ಕರೆಗಳಿಗೆ 15 ಸೆಕೆಂಡ್‌ನಲ್ಲೇ ಪೊಲೀಸರಿಂದ ಸ್ಪಂದನೆ ಸಿಗಲಿದೆ.

ಈ ಹಿಂದೆ ದೂರು ಸ್ವೀಕರಿಸಲು ಕೇವಲ 20 ಲೈನ್‌ಗಳು ಮಾತ್ರ ಲಭ್ಯವಿದ್ದವು. ಹಾಗಾಗಿ ತುರ್ತು ಕರೆಗಳಿಗೆ  ಸ್ಪಂದಿಸುವಾಗ ತಡವಾಗುತ್ತಿತ್ತು. ಇದನ್ನು ಮನಗಂಡ ಪೊಲೀಸ್‌ ಅಧಿಕಾರಿಗಳು, ಲಂಡನ್‌ ಮಾದರಿಯಲ್ಲಿ ‘ನಮ್ಮ 100’ ಸೇವೆ ಆರಂಭಿಸಿದ್ದಾರೆ.

‘ಬಿವಿಜಿ ಕಂಪೆನಿಯ ಸಹಯೋಗದಲ್ಲಿ ಈ ಸೇವೆ ಒದಗಿಸಲಾಗುತ್ತದೆ. ನುರಿತ ಸಿಬ್ಬಂದಿ ಇಲ್ಲಿ ಕೆಲಸ ಮಾಡಲಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಪೊಲೀಸರು ಮತ್ತಷ್ಟು ಹತ್ತಿರವಾಗಲಿದ್ದಾರೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಪ್ರವೀಣ್‌ ಸೂದ್‌ ತಿಳಿಸಿದರು.

ನಗರದಲ್ಲಿ 752 ಗುಣಮಟ್ಟದ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಸೆರೆಯಾಗುವ ದೃಶ್ಯವನ್ನು ಕಮಾಂಡ್ ಸೆಂಟರ್‌ನಲ್ಲೇ ವೀಕ್ಷಿಸುವ ವ್ಯವಸ್ಥೆ ಇದೆ. ಇದರಿಂದ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಹಲವು ಬಗೆಯ ಅಪರಾಧಗಳ ಪತ್ತೆ ಸುಲಭವಾಗಲಿದೆ.

ಕಾರ್ಯ ನಿರ್ವಹಣೆ ಹೇಗೆ: ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ‘ನಮ್ಮ 100’ ಸಹಾಯವಾಣಿಗೆ ಕರೆ ಮಾಡಿದರೆ,  ಅದನ್ನು ಸ್ವೀಕರಿಸುವ ಸಿಬ್ಬಂದಿ ತಕ್ಷಣ ದೂರುದಾರರು ಇರುವ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ರವಾನಿಸಲಿದ್ದಾರೆ.15 ನಿಮಿಷದ ಒಳಗೆ ಹೊಯ್ಸಳ ವಾಹನವು ಘಟನಾ ಸ್ಥಳಕ್ಕೆ ಹಾಜರಾಗಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಸುರಕ್ಷತೆ ಹೊಣೆ ಪೊಲೀಸರದ್ದು: ‘ನಿಮ್ಮ ದೂರು ನಮ್ಮ ನೂರು’ ಘೋಷವಾಕ್ಯದಡಿ ಆರಂಭಿಸಿರುವ ಈ ಸೇವೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು.

‘ನಗರದಲ್ಲಿ 1.10 ಕೋಟಿ ಜನಸಂಖ್ಯೆ ಇದೆ. ಎಲ್ಲರ ಸುರಕ್ಷತೆಯ ಹೊಣೆ ಪೊಲೀಸರದ್ದು. ಯಾರೇ ತೊಂದರೆಯಲ್ಲಿದ್ದರೂ ಅವರ ಸಹಾಯಕ್ಕೆ ಪೊಲೀಸರು ಧಾವಿಸಬೇಕು’ ಎಂದು ಮುಖ್ಯಮಂತ್ರಿ ತಿಳಿಸಿದರು.

ಅನುಯಾಯಿಗಳ ನೇಮಕ ಶೀಘ್ರ: ‘ಆರ್ಡರ್ಲಿ ಪದ್ಧತಿ ರದ್ದುಪಡಿಸಲಾಗಿದ್ದು, ಅದೇ ಜಾಗದಲ್ಲಿ ಅನುಯಾಯಿಗಳ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’  ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ 3000 ಸಿಬ್ಬಂದಿ ಆರ್ಡರ್ಲಿಗಳಾಗಿ ಕೆಲಸ ಮಾಡುತ್ತಿದ್ದಾರೆ.  ಅವರನ್ನು ಆ ಹುದ್ದೆಯಿಂದ ತೆಗೆಯುವ ಕೆಲಸ ಮಾಡುತ್ತಿದ್ದೇವೆ’ ಎಂದರು. 

ಮೊದಲ ಕರೆ ಸ್ವೀಕರಿಸಿದ ಮುಖ್ಯಮಂತ್ರಿ

‘ನಮ್ಮ 100’ಕ್ಕೆ ಕಲಾಸಿಪಾಳ್ಯ ಪ್ರದೇಶದಿಂದ ಬಂದ ಮೊದಲ ಕರೆಯನ್ನು ಮುಖ್ಯಮಂತ್ರಿ ಅವರು ಸ್ವೀಕರಿಸಿದರು. ‘ಪಾಸ್‌ಪೋರ್ಟ್ ಕಳೆದುಹೋಗಿದೆ’ ಎಂದು ಮಹಿಳೆ ದೂರಿದರು. ಅದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ, ‘ಪೊಲೀಸರು ನಿಮ್ಮ ದೂರಿಗೆ ಸ್ಪಂದಿಸುತ್ತಾರೆ’  ಎಂದು ಭರವಸೆ ನೀಡಿದರು.

ಬೆಂಗಳೂರೇ ಪ್ರಥಮ: ‘ದೇಶದಲ್ಲೇ ಪ್ರಥಮ ಬಾರಿಗೆ ಇಂತಹ ಸೇವೆಯನ್ನು ಅಳವಡಿಸಿಕೊಂಡ ನಗರ ಎಂಬ ಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ್  ಹೇಳಿದರು.

ನಮ್ಮ 100 ಹೊಸ ಸೌಲಭ್ಯಗಳು

* ದಿನದ 24 ಗಂಟೆಯು ಸೇವೆ

* ತರಬೇತಿ ಹೊಂದಿದ 100 ಸಿಬ್ಬಂದಿಯಿಂದ ಕರೆ ಸ್ವೀಕಾರ

*  ಕರೆ ಸ್ವೀಕರಿಸಿದ ಬಳಿಕ ದೂರುದಾರರ ಮೊಬೈಲ್‌ಗೆ ಸಂದೇಶ ರವಾನೆ

*  ಪ್ರತಿ ಮಿಸ್ಡ್ ಕಾಲ್‌ಗಳಿಗೆ ಸಿಬ್ಬಂದಿಯಿಂದ ವಾಪಸ್‌ ಕರೆ

*  ಜಿಪಿಎಸ್ ಮೂಲಕ ದೂರುದಾರರ ಸ್ಥಳ ಪತ್ತೆ

* ಕನ್ನಡ, ಇಂಗ್ಲಿಷ್‌, ಹಿಂದಿ, ತಮಿಳು, ತೆಲುಗು ಭಾಷೆಯಲ್ಲಿ ದೂರುದಾರರ ಜತೆ ಸಂವಹನ

*

ಕಲಬುರ್ಗಿ, ಮಂಗಳೂರು, ಮೈಸೂರು, ಹುಬ್ಬಳ್ಳಿ–ಧಾರವಾಡ ಕಮಿಷನರೇಟ್ ವ್ಯಾಪ್ತಿಯಲ್ಲೂ ತುರ್ತು ಸ್ಪಂದನೆಗೆ ಹೊಸ ವ್ಯವಸ್ಥೆ ಜಾರಿಗೆ ತರುತ್ತೇವೆ.

-ಜಿ.ಪರಮೇಶ್ವರ್, ಗೃಹ ಸಚಿವ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry