ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿ ಕಾಲಿಗೆ ಗುಂಡೇಟು, ಆಸ್ಪತ್ರೆಗೆ ದಾಖಲು

ಸ್ನೇಹಿತನ ಕೊಲೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ಆರೋಪಿಯ ಬೆನ್ನಟ್ಟಿದ ಪೊಲೀಸರು
Last Updated 10 ಜೂನ್ 2017, 19:54 IST
ಅಕ್ಷರ ಗಾತ್ರ

ಬೆಂಗಳೂರು: ಸ್ನೇಹಿತನ ಕೊಲೆಗೆ ಯತ್ನಿಸಿ ಪರಾರಿಯಾಗುತ್ತಿದ್ದ ರೌಡಿ ನಕುಲ್‌ ಅಲಿಯಾಸ್‌ ನಾಯಿ ನಕುಲ್‌ ಎಂಬಾತನ ಮೇಲೆ ಶುಕ್ರವಾರ ರಾತ್ರಿ ಪೊಲೀಸರು ಗುಂಡು ಹಾರಿಸಿದ್ದಾರೆ.

ಕಾಲಿಗೆ ಗುಂಡು ತಗುಲಿ ಗಾಯಗೊಂಡಿರುವ ಆರೋಪಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕುಲ್‌ ವಿರುದ್ಧ ಈ ಹಿಂದೆಯೇ ಕೊಲೆ, ಕೊಲೆಗೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಪುರುಷೋತ್ತಮ ಎಂಬವರ ಕೊಲೆ ಪ್ರಕರಣ ಸಂಬಂಧ ಜೈಲುಪಾಲಾಗಿದ್ದ ಆತ ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ. ಬಳಿಕ ಸ್ನೇಹಿತ ಜೋಸೆಫ್‌ ಎಂಬಾತನ ಹತ್ಯೆಗೆ ಸಂಚು ರೂಪಿಸಿದ್ದ ಎಂದು ಪೊಲೀಸರು ತಿಳಿಸಿದರು.

‘ರೈನ್‌ಬೊ ಲೇಔಟ್‌ನಲ್ಲಿರುವ ಜೋಸೆಫ್‌ ಮನೆಗೆ ಶುಕ್ರವಾರ ಸಂಜೆ 6 ಗಂಟೆಯ ಸುಮಾರಿಗೆ ಸಹಚರರೊಂದಿಗೆ ಹೋಗಿದ್ದ ಆರೋಪಿಯು, ಅವರ ಮೇಲೆ ಹಲ್ಲೆ ನಡೆಸಿದ್ದ. ಮನೆಯ ಕಿಟಕಿಯ ಗಾಜುಗಳನ್ನು ಒಡೆದು ಹಾಕಿದ್ದ. ಈ ಬಗ್ಗೆ ಸ್ಥಳೀಯರು ವಿದ್ಯಾರಣ್ಯ ಠಾಣೆಗೆ ಮಾಹಿತಿ ನೀಡಿದ್ದರು.

ಪೊಲೀಸರು ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ, ಆರೋಪಿ ಹಾಗೂ ಆತನ ಸಹಚರರು ಅಲ್ಲಿಂದ ತಪ್ಪಿಸಿಕೊಂಡರು.’ ‘ಆಗ ಇನ್‌ಸ್ಪೆಕ್ಟರ್‌ ಪುನೀತ್‌ ನೇತೃತ್ವದ ತಂಡ ಆರೋಪಿಗಳನ್ನು ಬೆನ್ನಟ್ಟಿತ್ತು. ರೈನ್‌ಬೊ ಲೇಔಟ್‌ನ ನಿರ್ಜನ ಪ್ರದೇಶದಲ್ಲಿ ಆತನನ್ನು ಹಿಡಿಯಲು ಕಾನ್‌ಸ್ಟೆಬಲ್‌ ಸಿದ್ಧರಾಜು  ಪ್ರಯತ್ನಿಸಿದರು.

ಆಗ ನಕುಲ್‌ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಲು ಯತ್ನಿಸಿದ. ಅದನ್ನು ಗಮನಿಸಿದ ಇನ್‌ಸ್ಪೆಕ್ಟರ್‌ ಪುನೀತ್‌, ಆರೋಪಿಯ ಕಾಲಿಗೆ ಗುಂಡು ಹಾರಿಸಿದರು. ಸ್ಥಳದಲ್ಲೇ ಕುಸಿದು ಬಿದ್ದಿದ್ದ ಆತನನ್ನು ಪೊಲೀಸರೇ ಆಸ್ಪತ್ರೆಗೆ ದಾಖಲಿಸಿದರು’ ಎಂದು ಹಿರಿಯ ಅಧಿಕಾರಿ ತಿಳಿಸಿದರು.

‘ಘಟನೆಯಲ್ಲಿ ಕಾನ್‌ಸ್ಟೆಬಲ್‌ ಸಿದ್ಧರಾಜು ಸಹ ಗಾಯಗೊಂಡಿದ್ದಾರೆ. ಅವರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಸ್ಪಂದಿ
ಸುತ್ತಿದ್ದಾರೆ’ ಎಂದು ವಿವರಿಸಿದರು.

‘2016ರ ಫೆಬ್ರವರಿಯಲ್ಲಿ ನಡೆದಿದ್ದ  ಗ್ರಾಮ ಪಂಚಾಯ್ತಿ ಸದಸ್ಯೆಯೊಬ್ಬರ ಪತಿಯ ಕೊಲೆಯಲ್ಲೂ ನಕುಲ್‌ ಆರೋಪಿ. ಆತನ ಕೆಲ ಸಹಚರರು ಪರಾರಿಯಾಗಿದ್ದಾರೆ’ ಎಂದು ತಿಳಿಸಿದರು.

ನಾಯಿ ಛೂ ಬಿಟ್ಟು ಪೊಲೀಸರನ್ನು ಹೆದರಿಸುತ್ತಿದ್ದ: ಆರೋಪಿಯು ಮನೆಯಲ್ಲಿ ಐದು ನಾಯಿಗಳನ್ನು ಸಾಕಿದ್ದ. ಪ್ರಕರಣ ಸಂಬಂಧ ಆತನನ್ನು ವಶಕ್ಕೆ ಪಡೆಯಲು ಮನೆಗೆ ಬರುತ್ತಿದ್ದ ಪೊಲೀಸರ ಮೇಲೆಯೇ ನಾಯಿಗಳನ್ನು ಛೂ ಬಿಟ್ಟು ಹೆದರಿಸುತ್ತಿದ್ದ. ಹೀಗಾಗಿ ಆತನಿಗೆ ನಾಯಿ ನಕುಲ್ ಎಂಬ ಹೆಸರು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT