ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಸೇವೆ ವೈದ್ಯರ ಕರ್ತವ್ಯವಲ್ಲವೇ

ರಂಗದೊರೆ ಸ್ಮಾರಕ ಆಸ್ಪತ್ರೆ ಸಮಾರಂಭದಲ್ಲಿ ನ್ಯಾಯಮೂರ್ತಿ ಅರವಿಂದ ಕುಮಾರ್‌ ಪ್ರಶ್ನೆ
Last Updated 10 ಜೂನ್ 2017, 20:11 IST
ಅಕ್ಷರ ಗಾತ್ರ

ಬೆಂಗಳೂರು: ‘ವೈದ್ಯಕೀಯ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಲ್ಲಿ ಒಂದು ವರ್ಷ ಕಡ್ಡಾಯ ಸೇವೆ ಸಲ್ಲಿಸಲು ಕಾನೂನು ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸರ್ಕಾರದ ಸೌಲಭ್ಯ ಪಡೆದವರು ಹಳ್ಳಿಗಳಲ್ಲಿ ಕೆಲಸ ಮಾಡುವುದು ಕರ್ತವ್ಯವಲ್ಲವೇ’ ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್‌ ಪ್ರಶ್ನಿಸಿದರು.

ಶೃಂಗೇರಿ ಶಾರದಾಪೀಠ ಚಾರಿಟಬಲ್‌ ಟ್ರಸ್ಟ್‌ ಹಾಗೂ ಬೆಂಗಳೂರು ಕಿಡ್ನಿ ಫೌಂಡೇಷನ್‌ ಆಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ‘ರಂಗದೊರೆ ಸ್ಮಾರಕ ಆಸ್ಪತ್ರೆಯ ದಶಮಾನೋತ್ಸವ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅಮೆರಿಕದಲ್ಲಿ 18 ವರ್ಷ ತುಂಬಿದವರು ಮಿಲಿಟರಿಗೆ ಸೇರಿ ಎರಡು ವರ್ಷಗಳವರೆಗೆ ದೇಶದ ಗಡಿ ಕಾಯುತ್ತಾರೆ. ದೇಶಕ್ಕಾಗಿ ಮಾಡುವ ಸೇವೆ ಇದು. ಆದರೆ, ನಮ್ಮ ವೈದ್ಯಕೀಯ ವಿದ್ಯಾರ್ಥಿಗಳು ಹಳ್ಳಿಗಳಲ್ಲಿ ಸೇವೆ ಸಲ್ಲಿಸಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಗ್ರಾಮೀಣ ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಿರುತೆರೆ ನಿರ್ದೇಶಕ ಟಿ.ಎನ್‌. ಸೀತಾರಾಂ ಮಾತನಾಡಿ, ‘ವಕೀಲರು ಆಸ್ತಿಯನ್ನು ಕಾಪಾಡಬಹುದು. ಪೊಲೀಸರು ರಕ್ಷಣೆ ನೀಡಬಹುದು. ಆದರೆ, ರೋಗಿಯ ಜೀವ ಉಳಿಸುವುದು ಮಾತ್ರ ವೈದ್ಯ.  ಆದರೆ, ಈಗ ಆರೋಗ್ಯ ಸೇವೆ ದಂಧೆಯಾಗಿ ಬೆಳೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಾವ ರೋಗ ಇದೆ ಎಂಬುದನ್ನು ವೈದ್ಯರು ಪತ್ತೆ ಮಾಡಬೇಕು. ಆದರೆ, ಬಹುತೇಕ ವೈದ್ಯರು ಯಂತ್ರೋಪಕರಣಗಳನ್ನು ಅವಲಂಬಿಸಿದ್ದಾರೆ.
ಅನಗತ್ಯ ಪರೀಕ್ಷೆಗಳನ್ನು ಮಾಡಿಸಿ, ಸುಲಿಗೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಔಷಧ ಕಂಪೆನಿಗಳು ಆರೋಗ್ಯ ಕ್ಷೇತ್ರವನ್ನು ನಿಯಂತ್ರಿಸುತ್ತಿವೆ. ದೇಹದಲ್ಲಿ ಕೊಬ್ಬಿನಾಂಶ ಎಷ್ಟಿರಬೇಕು, ರಕ್ತದಲ್ಲಿ ಸಕ್ಕರೆ ಅಂಶ ಯಾವ
ಪ್ರಮಾಣದಲ್ಲಿ ಇರಬೇಕು ಎಂಬುದನ್ನು ಈ ಕಂಪೆನಿಗಳು ನಿರ್ಧರಿಸುತ್ತಿವೆ’ ಎಂದು  ಟೀಕಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಆರ್‌.ರಾಜ್‌ಕುಮಾರ್‌ ಮಾತನಾಡಿ, ‘ಹತ್ತು ವರ್ಷಗಳ ಹಿಂದೆ ಡಯಾಲಿಸಿಸ್‌ ಘಟಕವಾಗಿ ಆರಂಭವಾದ ನಮ್ಮ ಸಂಸ್ಥೆ ಇಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಾಗಿ ಬೆಳೆದಿದೆ. ಎಲ್ಲ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ನೀಡುತ್ತಿದೆ’ ಎಂದರು.

‘ಹತ್ತು ವರ್ಷಗಳ ಹಿಂದೆ ನಮ್ಮ ಆಸ್ಪತ್ರೆಯಲ್ಲಿ ಒಂದು ಡಯಾಲಿಸಿಸ್‌ಗೆ ₹450 ಶುಲ್ಕ ಇತ್ತು. ಈಗ ₹600 ಇದೆ.  ಎರಡು ಡಯಾಲಿಸಿಸ್‌ ಮಾಡಿಸಿ
ಕೊಂಡರೆ ಒಂದು ಉಚಿತ’ ಎಂದು ಹೇಳಿದರು.

ಅಂಕಿ–ಅಂಶ

* 210 ರಂಗದೊರೆ ಸ್ಮಾರಕ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯ

* ₹600 ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಶುಲ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT