ವಾಣಿಜ್ಯ ವಿಷಯದ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಭಾರತೀಯರಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು: ವರದಿ

7

ವಾಣಿಜ್ಯ ವಿಷಯದ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಭಾರತೀಯರಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು: ವರದಿ

Published:
Updated:
ವಾಣಿಜ್ಯ ವಿಷಯದ ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ತೆರಳುವ ಭಾರತೀಯರಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳೇ ಹೆಚ್ಚು: ವರದಿ

ಬೆಂಗಳೂರು: ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದಂತೆ ಉನ್ನತ ವ್ಯಾಸಂಗ ಮಾಡಲು ವಿದೇಶಗಳಿಗೆ ತೆರಳುವ ಭಾರತೀಯ ವಿದ್ಯಾರ್ಥಿಗಳಲ್ಲಿ ಬೆಂಗಳೂರಿನವರ ಸಂಖ್ಯೆಯೇ ಹೆಚ್ಚು ಎಂದು ಇಂಗ್ಲೆಂಡಿನ ಚಾರ್ಟರ್ಡ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಅಕೌಂಟ್ಸ್‌(ಸಿಐಎಂಎ) ವರದಿ ಮಾಡಿದೆ.

ವಾಣಿಜ್ಯ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆಯಲು 2017ರಲ್ಲಿ ಸುಮಾರು 4500 ವಿದ್ಯಾರ್ಥಿಗಳು ಭಾರತದಿಂದ ವಿದೇಶಗಳಿಗೆ ತೆರಳಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 2000 ವಿದ್ಯಾರ್ಥಿಗಳು ದಕ್ಷಿಣ ಭಾರತದವರಾಗಿದ್ದು, ಅದರಲ್ಲಿ ಶೇ60–80 ರಷ್ಟು ವಿದ್ಯಾರ್ಥಿಗಳು ಬೆಂಗಳೂರಿನವರೇ ಆಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ವಾಣಿಜ್ಯ ವಿಷಯಗಳಾದ ಅಕೌಂಟ್ಸ್‌ ಹಾಗೂ ಫಿನಾನ್ಸ್‌ಗಳನ್ನು ಕಲಿಯುವವರ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಹೆಚ್ಚಾಗಿದ್ದು, 2015ರಲ್ಲಿ ಕೇವಲ 800 ಭಾರತೀಯ ವಿದ್ಯಾರ್ಥಿಗಳು ಸಿಐಎಂಎನಲ್ಲಿ ಪ್ರವೇಶ ಪಡೆದಿದ್ದರು.

ಈ ಬಗ್ಗೆ ಮಾತನಾಡಿರುವ ಸಿಐಎಂಎನ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ನಾಲ್‌ ಟಾಗೋ, ‘ಭಾರತೀಯ ವಿದ್ಯಾರ್ಥಿಗಳು ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಉತ್ತಮವಾಗಿ ಅಧ್ಯಯನ ನಡೆಸುತ್ತಾರೆ. ಇದು ಉತ್ತಮವಾದ ಬೆಳವಣಿಗೆಯಾಗಿದ್ದು, ಎಲ್ಲಾ ಯುವ ವಿದ್ಯಾರ್ಥಿಗಳು ತಮ್ಮ ದೇಶಕ್ಕೆ ಹಿಂದಿರುಗಿದ ನಂತರ ತಮ್ಮ ಕೌಶಲವನ್ನು ಭಾರತದಲ್ಲಿನ ವ್ಯಾವಹಾರಿಕ ಸಂದರ್ಭಗಳಲ್ಲಿ ಅನ್ವಯಿಸಿಕೊಳ್ಳಲಿ’ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜೈನ್‌ ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ನಿರ್ದೇಶಕ ಹಾಗೂ ನಿಯೋಜಕರಾಗಿರುವ ಈಶ್ವರನ್‌ ಐಯರ್‌ ಅವರು, ‘ಭಾರತದಲ್ಲಿ ಉಳಿದು ವಿದ್ಯಾರ್ಥಿಗಳು ಚಾರ್ಟರ್ಡ್‌ ಅಕೌಂಟ್ಸ್‌ ಕಲಿಯುತ್ತಾ ಗಳಿಸಬಹುದಾದ ಆದಾಯಕ್ಕಿಂತ, ಇಂಗ್ಲೆಂಡಿನಲ್ಲಿ 3 ವರ್ಷ ಶಿಕ್ಷಣದ ಜತೆಗೆ ಪಡೆಯುವ ಕೆಲಸದ ತರಬೇತಿ ಉತ್ತಮ ಎನ್ನುವ ಭಾವನೆ ವಿದ್ಯಾರ್ಥಿಗಳಲ್ಲಿದೆ. ಹಾಗಾಗಿ ಹೆಚ್ಚಿನ ವಿದ್ಯಾರ್ಥಿಗಳು ವಿದೇಶಕ್ಕೆ ತೆರೆಳಿ ಅಧ್ಯಯನ ಮಾಡಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ವಿದ್ಯಾರ್ಥಿಗಳು ಅಂತರ ರಾಷ್ಟ್ರೀಯ ವಿವಿಗಳಲ್ಲಿ ಕಲಿಯುವುದರಿಂದ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತವೆ ಎಂಬ ಭಾವನೆಗಳು ಇವೆ.

‘ಹೆಚ್ಚಿನ ಸಂಖ್ಯೆ ಭಾರತೀಯ ವಿವಿಗಳು ಕೇವಲ ಅಂಕಗಳಿಕೆಯ ದೃಷ್ಟಿಯಿಂದ ಮಾತ್ರವೇ ಶಿಕ್ಷಣ ನೀಡುತ್ತವೆ. ಇಲ್ಲಿ ಸೃಜನಾತ್ಮಕ ಕಲಿಕೆಗೆ ಪ್ರೋತ್ಸಾಹಗಳು ಸಿಗುವುದಿಲ್ಲ. ಶಿಕ್ಷಣ ಯಾವಾಗಲು ವಿದ್ಯಾರ್ಥಿಗಳನ್ನು ಎಲ್ಲಾ ಆಯಾಮಗಳಿಂದಲೂ ಯೋಚಿಸುವುದನ್ನು ಕಲಿಸಬೇಕು. ಭಾರತೀಯ ವಿವಿಗಳು ವಿದೇಶಿ ವಿವಿಗಳ ಜೊತೆಗೆ ತಮ್ಮ ಶೈಕ್ಷಣಿಕ ಯೋಜನೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾ ಉತ್ತಮ ಅವಕಾಶಗಳನ್ನು ಸೃಷ್ಟಿಸುವತ್ತ ಸಾಗಬೇಕು’ ಎನ್ನುತ್ತಾರೆ ತೆರಿಗೆ ವ್ಯವಸ್ಥೆಯ ವಿಶ್ಲೇಷಕರಾದ ಶ್ರೀಕುಮಾರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry