ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲೆ ಬಸವನ ಒಡ್ಡೋಲಗ

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಶ್ರಾವಣಮಾಸ ಹತ್ತಿರಬಂದಂತೆ ನಗರದ  ಬೀದಿ ಬೀದಿಗಳಲ್ಲಿ ಓಲಗ ಊದುತ್ತಾ, ಡೋಲು ಬಾರಿಸುತ್ತಾ ರಾಜ ಗಾಂಭೀರ್ಯದಲ್ಲಿ ನಡೆಯುವ  ಶೃಂಗರಿಸಿದ ‘ಹೋರಿ-ಬಸವ’ನಿಗೆ ಕಡಿವಾಣ ಹಾಕಿ ಹಿಂಬಾಲಿಸುತ್ತಾ ಸಾಗುವ ಪರಿಚಾರಕರ ಒಡ್ಡೋಲಗ ಸರ್ವೇಸಾಮಾನ್ಯ.

ಆಚೀಚೆ ಮನೆಯ ಹಿರಿಯರು, ಮಹಿಳೆಯರು, ಗೆಜ್ಜೆ–ಗಂಟೆಗಳ ಹಾರ,  ಕೋಡಿಗೆ ರಂಗಿನ ಟೇಪು, ಬೆನ್ನ ಮೇಲೆ ಬಣ್ಣಬಣ್ಣದ ವಸ್ತ್ರಗಳ ಹೊದಿಕೆ, ಕುತ್ತಿಗೆಗೆ ನವಿರಾದ ದಾರದ ಸರಪಳಿ, ಹೂವಿನ ಹಾರ ಇತ್ಯಾದಿ  ಶೃಂಗಾರಗೊಂಡ ಬಸವನನ್ನು  ದೈವೀ ಸ್ವರೂಪದ ನಂದಿ  ಎಂದೇ ಪರಿಗಣಿಸುತ್ತಾ ಅರಿಶಿನ ಕುಂಕುಮ ಹಚ್ಚಿ, ಹೂ ಹಣ್ಣು , ಅಕ್ಕಿ – ಕಾಳು, ಬೆಲ್ಲ, ತರಕಾರಿ ಇತ್ಯಾದಿಯನ್ನು  ಸಮರ್ಪಿಸುವುದೂ ನಡೆದು ಬಂದ ರೂಢಿ.

ಕಾಡುವ ಸಮಸ್ಯೆಯನ್ನು ಮನದಲ್ಲೇ ನೆನೆದು  ಬಸವನ  ಮೇಲ್ವಿಚಾರಕನ ಮೂಲಕ ಪ್ರಶ್ನೆ ಕೇಳಿ, ಅದು  ಎತ್ತಿದ ತಲೆಯನ್ನು ‘ಹೂಂ, ಹೂಂ’ ಎಂದಂತೆ ಎರಡು ಬಾರಿ ಮೇಲೆ  ಕೆಳಗೆ ತೂಗಿಸಿದಾಗ ಸಾಂತ್ವನ ಪಡೆಯುವ ಆ ಮಂದಿಗೆ ಅದೇನೋ ಸಮಾಧಾನ!

ತಲತಲಾಂತರದಿಂದ ಬಂದ ಈ ಸಂಸ್ಕೃತಿ ಇನ್ನೂ  ಪ್ರಚಲಿತವಾಗಿರುವುದಕ್ಕೆ ಆ ಹೋರಿ- ಕೆಲವೊಮ್ಮೆ ಆಕಳುಗಳನ್ನೂ ಸಧೃಡವಾಗಿ ಸಾಕುತ್ತಿರುವ; ಕೃಷ್ಣಗೊಲ್ಲ ಜನಾಂಗದ ಕುಟುಂಬಗಳು ಕಾರಣ.

ಕುರಿ, ಕೋಳಿಯನ್ನೂ ಸಾಕಿ, ಬಿಡುವಿನ ವೇಳೆಯಲ್ಲಿ ಚಾಕು-ಚೂರಿ ಹರಿತ, ಸಣ್ಣಪುಟ್ಟ ಮರ-ಗಾರೆ ಕೆಲಸ, ಮದುವೆ ಸಂದರ್ಭದಲ್ಲಿ ಓಲಗ ಊದುವುದು  ಇತ್ಯಾದಿಗಳಲ್ಲಿ ಜೀವನೋಪಾಯಕ್ಕಾಗಿ ತೊಡಗಿಸಿಕೊಂಡರೂ, ಹಿರಿಯರಿಂದ ಬಂದ ಈ ಸಂಪ್ರದಾಯವನ್ನು ಮುಂದುವರಿಸಲು ದೇಶ ಸುತ್ತುತ್ತಾರೆ.

ಅವರ ಮೂಲ ಇರುವುದು ಆಂಧ್ರಪ್ರದೇಶದ  ಕಡಪಾ, ಪ್ರಕಾಶಂ ಜಿಲ್ಲೆಗಳ ಹಳ್ಳಿಗಳು. ಬಿಸಿಲಿನ ಬೇಗೆ ಹೆಚ್ಚುತ್ತಿದ್ದಂತೆ, ಊರು ಬಿಟ್ಟು ಗಡಿಯಂಚಿನ  ಕರ್ನಾಟಕದ ಕೋಲಾರ, ಚಿಕ್ಕಬಳ್ಳಾಪುರದ ಬೀದಿ ಸುತ್ತಿ, ನಂತರ ಬೆಂಗಳೂರಿನ ಆಶ್ರಯ ಅರಸಿ  ಚಿಕ್ಕ ಲಾರಿ ಏರಿ ಬರುವುದು, ಸ್ವಲ್ಪ ಹಣಗಳಿಸಿ ದೀಪಾವಳಿಯ ನಂತರ ವಾಪಸ್‌  ಊರುಸೇರುವುದು ಇವರ ಜೀವನಕ್ರಮ.

ನಗರದ ಕೆರೆಕೋಡಿಪಾಳ್ಯ, ಕೊಡಿಗೆಹಳ್ಳಿಯ ಖಾಲಿ ನಿವೇಶನಗಳಲ್ಲಿ ವಾಸಕ್ಕೆ ಬಾಡಿಗೆಗೆ ಜಾಗ ಪಡೆದು ತಾತ್ಕಾಲಿಕ ಶೆಡ್ ಕಟ್ಟಿ ಟಿಕಾಣಿ ಹೊಡೆದು, ಮುಂಜಾನೆಯಿಂದ ಸಂಜೆಯವರೆಗೆ ಕಾಲ್ನಡಿಗೆಯಲ್ಲಿ ಸುತ್ತಿ ಜನ ಕೊಟ್ಟ ವಸ್ತ್ರ, ಕಾಳು-ಕಡಿ, ಹಣ ಇತ್ಯಾದಿ ಗಳಿಕೆಯನ್ನು ಸಂಗ್ರಹಿಸುವ ಈ ‘ಕೋಲೆಬಸವ’ ತಂಡದವರು, ಭಿಕ್ಷಾಟನೆ ಮಾಡುವವರಲ್ಲ. ತಮ್ಮದೂ ಒಂದು   ಸಾಂಪ್ರದಾಯಿಕ  ಕೈಂಕರ್ಯವೆಂದೇ ಅವರ ನಂಬಿಕೆ.

ಅಂತಹದ್ದೊಂದು ಕೋಲೆ ಬಸವ ತಂಡದ  ಈ ದೃಶ್ಯವನ್ನು ಇತ್ತೀಚೆಗೆ ಒಂದು ಮುಂಜಾನೆ ರಾಜರಾಜೇಶ್ವರಿ ನಗರದ ಬಿಇಎಂಎಲ್ ಬಡಾವಣೆಯ  ತಮ್ಮ ಮನೆಯ ಬಳಿ ರಸ್ತೆಯಲ್ಲಿ  ಕಂಡು  ಕ್ಯಾಮೆರಾದಲ್ಲಿ ಸೆರೆಹಿಡಿದವರು ಕೆ. ಪ್ರಸನ್ನಕುಮಾರ್. 

ಆರೇಳು ತಿಂಗಳಿಂದ ಪ್ರಕೃತಿ ಹಾಗೂ ವ್ಯಕ್ತಿ ಛಾಯಾಗ್ರಹಣದಲ್ಲಿ ಪ್ರವೃತ್ತಿ ಬೆಳೆಸಿಕೊಂಡಿರುವ ಅವರು, ವೃತ್ತಿಯಲ್ಲಿ ಖಾಸಗಿ ಸಂಸ್ಥೆಯೊಂದರಲ್ಲಿ ಹಣಕಾಸು ವಿಭಾಗದಲ್ಲಿ ಮುಖ್ಯ ಅಧಿಕಾರಿ.

ಅವರು ಬಳಸಿದ ಕ್ಯಾಮೆರಾ ನಿಕಾನ್ ಆ3000,  ಲೆನ್ಸ್ 50–200  ಎಂ.ಎಂ.

ಇತರೆ ವಿವರ ಇಂತಿವೆ: ಲೆನ್ಸ್ ಫೋಕಲ್ ಲೆಂನ್ತ್ 55 ಎಂ.ಎಂ., ಅಪರ್ಚರ್  ಜಿ 5.6,  ಷಟರ್ ವೇಗ  1/125  ಸೆಕೆಂಡ್, ಐ.ಎಸ್.ಒ 100 .
ಈ ಛಾಯಾಚಿತ್ರದೊಂದಿಗೆ ಅವಲೋಕಿಸಬಹುದಾದ ತಾಂತ್ರಿಕ ಮತ್ತು ಕಲಾತ್ಮಕ ವಿಶ್ಲೇಷಣೆ ಇಂತಿವೆ:

* ಈ ಬಗೆಯ  ಬೀದಿ ಛಾಯಾಚಿತ್ರಗಳನ್ನು (ಸ್ಟ್ರೀಟ್ ಫೋಟೋಗ್ರಫಿ) ವಸ್ತುವಿಗೆ  ಸಮೀಪವಾಗಿ ಹೋಗಿ ವಿಸ್ತಾರ ಗ್ರಹಣ ಮಸೂರದಲ್ಲಿ (ಎಕ್ಸ್‌ಟ್ರಾ ವೈಡ್ ಆ್ಯಂಗಲ್) ಸೆರೆಹಿಡಿಯುವವರೇ ಹೆಚ್ಚು.    ಅಂತಹ ಚಿತ್ರಗಳು ಅಂತರ ಭಾಸದ ವಕ್ರತೆಯ (ಪರ್ಸ್ಪೆಕ್ಟಿವ್ ಡಿಸ್ಟಾರ್ಶನ್) ಪರಿಣಾಮವಾಗಿ ಚೌಕಟ್ಟಿನ ಅಂಚುಗಳಲ್ಲಿನ ಲಂಬ ರೇಖೆಗಳು ಮತ್ತು ವಸ್ತುಭಾಗಗಳು ಬಾಗಿದಂತಾಗಿ, ಚಿತ್ರದ ಸ್ವಾಭಾವಿಕತೆಗೆ ಭಂಗವಾಗುತ್ತದೆ.

* ಇಲ್ಲಿ 55 ಎಂ.ಎಂ. ಅಂದರೆ ನಾರ್ಮಲ್ ಲೆನ್ಸ್‌ನಷ್ಟೇ  ಫೋಕಲ್ ಲೆನ್ತ್‌ ಬಳಕೆ ಆಗಿರುವುದರಿಂದ, ಛಾಯಾಚಿತ್ರಕಾರ    ಸುಮಾರು 25 ಅಡಿಗಳಷ್ಟು ದೂರದಲ್ಲಿ ಕ್ಯಾಮೆರಾ ಹಿಡಿದಿದ್ದಾರೆ ಎಂದರ್ಥ.  

* ಹಾಗಾಗಿ ಬಸವನಿಂದ ಹಿಡಿದು ಇತರರೆಲ್ಲರೂ, ಹಿನ್ನೆಲೆಯ ಭಾಗಗಳೂ ಸೇರಿ ಸಮರ್ಪಕವಾಗಿ ಹಾಗೂ  ಉತ್ತಮ ಫೋಕಸ್ ಕೂಡಾ ಆಗಿ ಸೆರೆಹಿಡಿಯಲ್ಪಟ್ಟಿವೆ.

* ಚಿತ್ರದಲ್ಲಿ ಎಲ್ಲರೂ ನಡಿಗೆಯಲ್ಲಿರುವುದರಿಂದ,  ಹೆಚ್ಚಿನ ಷಟರ್ ವೇಗದ ಅಳವಡಿಕೆ ಸೂಕ್ತವಾಗಿದೆ.  

* 1/100  ಸೆಕೆಂಡ್‌ಗಿಂತ ಕಡಿಮೆಯಾದರೆ ಚಲನೆಯಾಗುವ ಭಾಗಗಳು   ಮಂದವಾಗುತ್ತವೆ, ಅಂತೆಯೇ ನಡಿಗೆಯಲ್ಲದೇ ಓಟದ ಸಂದರ್ಭವಾಗಿದ್ದರೆ,  1/250 ಸೆಕೆಂಡಿಗೂ ಹೆಚ್ಚು ವೇಗ ಇರಬೇಕು.

* ಮುಂಜಾನೆಯ ತಿಳಿ ಪ್ರಖರ ಸೂರ್ಯ ಬೆಳಕಿನ ಸಂದರ್ಭವಾದ್ದರಿಂದ, ಐ.ಎಸ್.ಒ. 100 ಸೆನ್ಸಿಟಿವಿಟಿಯು, ಚಿತ್ರಕ್ಕೆ ಉತ್ತಮವಾದ  ಹಿಗ್ಗಿಸಬಲ್ಲ ಪ್ರಥಕ್ಕರಣ ಗುಣವನ್ನು (ಹೆಚ್ಚಿನ ರೆಸಲ್ಯೂಷನ್‌)  ದೊರಕಿಸಿದೆ.

* ಜೊತೆಯಲ್ಲಿ, ವರ್ಣ ಪ್ರಸರಣ ಕೂಡಾ (ಟೋನಲ್ ಡಿಸ್ಟ್ರಿಬ್ಯೂಶನ್) ಹದವಾಗಿದೆ.

* ಈ ಕಾರಣಗಳಿಂದ, ಒಮ್ಮೆ ಈ ಚಿತ್ರವನ್ನು  ದೊಡ್ಡದಾದ ಅಳತೆಗೆ ಪ್ರದರ್ಶನಕ್ಕೋ,  ಜಾಹಿರಾತಿಗೋ  ಅಥವಾ ಇತರ ಕಾರಣಕ್ಕೋ ಮುದ್ರಿಸುವುದಿದ್ದರೆ, ಆಗ ಈ ಗುಣಾಂಶ ತುಂಬಾ ಸಹಕಾರಿ.

* ತ್ವರಿತವಾಗಿ ಕ್ಲಿಕ್ಕಿಸಿದರೂ, ತುಸುದೂರದಿಂದ ಸೆರೆಹಿಡಿದ ದೃಶ್ಯ ಇದಾದ್ದರಿಂದ  ಮತ್ತು ಮೂವರು ಕಲಾಕಾರರೂ ತಮ್ಮ ತಮ್ಮ ಪ್ರಕ್ರಿಯೆಗಳಲ್ಲಿ ಸಹಜವಾಗಿ ತೊಡಗಿಸಿಕೊಂಡಿರುವುದರಿಂದ, ಒಟ್ಟಾರೆ ಚಿತ್ರದ ಜೀವಂತಿಕೆಯು (ವೈಟಾಲಿಟಿ)  ಕಲಾತ್ಮಕತೆಯ ಅಂಶವನ್ನು ಇಮ್ಮಡಿಗೊಳಿಸಿದೆ.

* ಕಲಾತ್ಮಕವಾದ ಮತ್ತೊಂದು ಅಂಶವೆಂದರೆ, ಸಮತೋಲನ. ಇಲ್ಲಿ, ಚೌಕಟ್ಟಿನ ಎಡಭಾಗವು ಬಲಿಷ್ಟವಾದ ವರ್ಣರಂಜಿತ ಬಸವ ಮತ್ತು ವಾಲಗಕಾರನಿಂದ ಭಾರವಾಗಿ, ನೋಡುಗನ ಕಣ್ಣುಗಳನ್ನು ಆಕಡೆಗೇ ಎಳೆಯುವುದು ಸಹಜ.

* ಬಲದಂಚಿನ ಹಿನ್ನೆಲೆಯಲ್ಲಿ ಡೋಲಕ್ ಬಾರಿಸುತ್ತಿರುವ ಸಹ ಕಲಾವಿದ ಮತ್ತು ಅವನ ಕೆಂಪು ಅಂಗಿ, ಚಿತ್ರದ ಒಟ್ಟಾರೆ ಸಮತೋಲನವನ್ನು  ಕಾಯ್ದುಕೊಂಡಿದೆ.
ಮೇಲಿನ ಗುಣಾತ್ಮಕ ಅಂಶಗಳಿಂದ ಪ್ರಸನ್ನಕುಮಾರ್ ಅವರ ಈ ಪ್ರಯತ್ನ, ಸೃಜನಶೀಲ ಛಾಯಾಚಿತ್ರ ಕೃತಿಯೆಂದು ಗಮನಿಸಬಹುದು.

**

ಕೆ.ಎಸ್.ರಾಜಾರಾಮ್
email: ksrajaram173@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT