ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಂಡಿ ಮೇಲಿನ ರಸ್ತೆ ದುರಸ್ತಿ ಮಾಡಿ

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಚರಂಡಿ ಮೇಲಿನ ರಸ್ತೆ ದುರಸ್ತಿ ಮಾಡಿ
ಹೊಂಗಸಂದ್ರ ಮೈಕೋ ಬಡಾವಣೆಯ ನಂದಿನಿ ಹಾಲಿನ ಕೇಂದ್ರದ ಎದುರಿನ ರಸ್ತೆ ಕೆಳಗಿನ ಚರಂಡಿ ಎರಡು ಕಡೆಗೆ ಕುಸಿದಿದ್ದು, 8 ತಿಂಗಳಿಂದಲೂ ವಾಹನ ಮತ್ತು ಪಾದಸಂಚಾರಗಳ ಸಂಚಾರಕ್ಕೆ ಅಡ್ಡಿಯಾಗಿದೆ.

ಚರಂಡಿಯ ಗಬ್ಬು ವಾಸನೆಯಿಂದ ಸುತ್ತಲಿನ ಪರಿಸರ ಹಾಳಾಗಿದೆ.

ರಾತ್ರಿ ಸಮಯ ಇಲ್ಲಿ ಹೊಂಡ ಇರುವುದು ತಿಳಿಯದೆ ವಾಹನ ಸವಾರರು ಹೊಂಡಕ್ಕೆ ಮುಗ್ಗರಿಸುವ ಅಪಾಯವೂ ಇದೆ. ಸಂಬಂಧಪಟ್ಟ ಅಧಿಕಾರಿಗಳಾಗಲೀ, ಬಿಬಿಎಂಪಿ ಸದಸ್ಯರು ಇತ್ತ ಗಮನ ಹರಿಸಿ ಚರಂಡಿ ದುರಸ್ತಿ ಮಾಡುವ ಕೃಪೆ ಮಾಡಬೇಕಾಗಿ ವಿನಂತಿ.
-ನೊಂದ ನಾಗರಿಕರು, ಹೊಂಗಸಂದ್ರ.

**

ನಕಲಿ ಪರಿಸರ ಪ್ರೇಮ
ಬಿಬಿಎಂಪಿ ಪರಿಸರ ದಿನಕ್ಕೆ ದೊಡ್ಡ ಶಾಮಿಯಾನ ಹಾಕಿ ತೋರಿಕೆಗೆಂದು ಕಾರ್ಯಕ್ರಮ ಮಾಡುತ್ತದೆ. ಆದರೆ ಅದೇ ಬಿಬಿಎಂಪಿ ಇನ್ನೊಂದೆಡೆ ಮರಗಳನ್ನು ಕಡಿಯುತ್ತಿದೆ. ಇದು ಬಿಬಿಎಂಪಿಯ ಪರಿಸರ ಕಾಳಜಿ.

ನಗರದ ಮುನೇಶ್ವರ ಬ್ಲಾಕ್‌ನಲ್ಲಿ ಆರೋಗ್ಯವಂತ ಮರವನ್ನು ಬಿಬಿಎಂಪಿ ಕಡಿದು ನೆಲಕ್ಕುರುಳಿಸಿದೆ. ಬಿಬಿಎಂಪಿ ತೋರಿಕೆಯ ಪರಿಸರ ಕಾಳಜಿ ನಿಲ್ಲಿಸಿ ಬೆಂಗಳೂರನ್ನು ಮತ್ತೆ ಉದ್ಯಾನ ನಗರಿ ಮಾಡುವತ್ತ ಗಮನವಹಿಸಲಿ.
-ರಮೇಶ್ ಕದರಪ್ಪ

**

ಬಸ್‌ ಚಾಲಕರ ನಿರ್ಲಕ್ಷ್ಯ
ವಸಂತನಗರ ಬಸ್ ತಂಗುದಾಣಗಳ ಬಳಿ ಹಿಂದುಳಿದ ವರ್ಗಗಳ ಆಯೋಗ ಮತ್ತು ಇತರೆ ಸಾರ್ವಜನಿಕ ಕಚೇರಿಗಳನ್ನು ಹೊಂದಿರುವ ಡಾ.ಅಂಬೇಡ್ಕರ್ ಭವನ, ಜೈನ್‌ ಆಸ್ಪತ್ರೆಗಳು ಇದ್ದು ಇಲ್ಲಿ ಜನಸಂದಣಿ ಹೆಚ್ಚಿಗೆ ಇರುತ್ತದೆ.

ಅವುಗಳಲ್ಲಿ ಕೆಲಸಕ್ಕೆ ಹಾಗೂ ಚಿಕಿತ್ಸೆಗೆಂದು ನಗರದ ವಿವಿಧ ಭಾಗಗಳಿಂದ ಬರುವ ಜನರು ತಮ್ಮ ಬಡಾವಣೆಗಳಿಗೆ ತೆರಳಲು ನಗರ ಸಾರಿಗೆ ಬಸ್ ಹತ್ತಲು ನಾಲ್ಕು ತಂಗುದಾಣಗಳನ್ನು ನಿರ್ಮಿಸಲಾಗಿದೆ. ಶಿವಾಜಿನಗರ, ಕಲ್ಯಾಣನಗರ, ಯಶವಂತಪುರ, ಮಲ್ಲೇಶ್ವರದತ್ತ ಚಲಿಸುವ ಬಸ್‌ಗಳು ತಂಗುದಾಣಗಳ ಬಳಿ ನಿಲ್ಲದೆ ಸುಮಾರು ನೂರಡಿ ದೂರದಲ್ಲಿ ನಿಲ್ಲುವುದರಿಂದ ಪ್ರಯಾಣಿಕರು ಅನಿವಾರ್ಯವಾಗಿ ಅಲ್ಲಿಂದಲೇ ಬಸ್ ಹತ್ತುವಂತಾಗಿದೆ.

ಈ ಬಗ್ಗೆ ಸಂಚಾರಿ ಪೊಲೀಸರಿಗೆ ತಿಳಿಸಿದರೆ ಬಿಎಂಟಿಸಿಗೆ ದೂರು ನೀಡುವಂತೆ ಹೇಳಿತ್ತಾರೆ.  ಕಾರಣ ಬಿಎಂಟಿಸಿ ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸಿ ವಸಂತನಗರದ ತಂಗುದಾಣಗಳ ಬಳಿ ಬಸ್‌ಗಳು ಕಡ್ಡಾಯವಾಗಿ ನಿಲುಗಡೆ ಮಾಡಲು ವ್ಯವಸ್ಥೆ ಮಾಡಿಕೊಡಬೇಕು.  ನಿಯಮ ಪಾಲಿಸದ ಬಸ್ ಚಾಲಕರ ವಿರುದ್ಧ ಕಠಿಣಕ್ರಮ ಜರುಗಿಸುವ ಮೂಲಕ ಪ್ರಯಾಣಿಕರು ತಂಗುದಾಣಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಅವಕಾಶ ಮಾಡಿಕೊಡಲು ಈ ಮೂಲಕ ಬಿಎಂಟಿಸಿ ಅಧಿಕಾರಿಗಳನ್ನು ಕೋರುತ್ತೇನೆ.
-ಬಸವರಾಜ ಹುಡೇದಗಡ್ಡಿ, ರಾಜಾಜಿನಗರ

***

ವಾಹನ ನಿಲುಗಡೆ ತಪ್ಪಲಿ

ನಗರದ ವಿವಿಧ ಬಡಾವಣೆಗಳಲ್ಲಿ ಮನೆಯ ಮಾಲೀಕರು ತಮ್ಮ ತಮ್ಮ ಮನೆಗಳ ಮುಂದೆಯೇ ವಾಹನಗಳನ್ನು ಗಂಟೆಗಟ್ಟಲೆ ಕೆಲವು ಸಲ ಇಡೀ ದಿನ ರಸ್ತೆಯ ಎರಡೂ ಕಡೆಗಳಲ್ಲಿ ನಿಲ್ಲಿಸಿ ಬಿಡುತ್ತಾರೆ. ಇದರಿಂದ ಸುಗಮ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿರುವುದರ ಜೊತೆಗೆ, ಕೆಲವು ಸಲ ಅಪಘಾತಗಳೂ ಸಂಭವಿಸುವುದುಂಟು. 

ಪಾದಚಾರಿಗಳು, ಹಿರಿಯ ನಾಗರಿಕರ ಸಂಚಾರಕ್ಕೂ ತೊಂದರೆಯಾಗುತ್ತಿದೆ. ಮತ್ತು ಪೌರ ಕಾರ್ಮಿಕರು ರಸ್ತೆ ಸ್ವಚ್ಛತಾ ಕಾರ್ಯ ಮಾಡುವಾಗಲೂ ಸಹ ಇದರಿಂದ ಪೂರ್ತಿ ರಸ್ತೆ ಸ್ವಚ್ಛವಾಗದೆ ಈ ವಾಹನಗಳ ಕೆಳಗೆ ಕಸಕಡ್ಡಿ ಶೇಖರಣೆಯಾಗಿ ರಸ್ತೆ ಗಲೀಜಾಗಿರುತ್ತದೆ. ಇವೆಲ್ಲವುಗಳ ನಿವಾರಣೆಗಾಗಿ ವಾಹನ ಚಾಲಕರು ಮತ್ತು ಮಾಲೀಕರು ರಸ್ತೆಯ ಇಕ್ಕೆಲಗಳಲ್ಲಿ ಗಂಟೆಗಟ್ಟಲೆ ವಾಹನವನ್ನು ನಿಲ್ಲಿಸುವುದನ್ನು ತಕ್ಷಣದಿಂದ ತಪ್ಪಿಸಬೇಕು. ಸಂಬಂಧಿಸಿದ ಅಧಿಕಾರಿಗಳು ತಮ್ಮ ಗಮನ ಇತ್ತ ಹರಿಸಿ ರಸ್ತೆಯಲ್ಲಿ ವಾಹನ ನಿಲ್ಲಿಸಿದವರಿಗೆ ದಂಡ ವಿಧಿಸಬೇಕೆಂದು ಮನವಿ.
-ಎ.ಕೆ.ಅನಂತಮೂರ್ತಿ

**

ಗ್ರಂಥಾಲಯ: ವ್ಯವಸ್ಥೆ ಸರಿಪಡಿಸಿ
ಮಲ್ಲೇಶ್ವರದ ಸಾರ್ವಜನಿಕ ಗ್ರಂಥಾಲಯ ನಗರದ ಪ್ರಮುಖ ಗ್ರಂಥಾಲಯಗಳಲ್ಲೊಂದು. ಆದರೆ ಅಲ್ಲಿನ ಈಗಿನ ಸ್ಥಿತಿಯೆಂದರೆ ಇಲ್ಲಿ ಹೇಳುವವರು ಕೇಳುವವರು ಯಾರಾದರೂ ಇದ್ದಾರೋ ಎಂಬಂತಿದೆ. ಬೆಳಗಿನ 8.30ಕ್ಕೆ ಗ್ರಂಥಾಲಯ ಆರಂಭವಾದರೂ 10 ಗಂಟೆಯ ಸುಮಾರಿಗೆ ಸಿಬ್ಬಂದಿ ತಮ್ಮ ಕೆಲಸದ ಜಾಗದಲ್ಲಿ ತಿಂಡಿ ತಿನ್ನುವುದು ಕಂಡು ಬರುತ್ತದೆ.

  ಯಾರಾದರೂ ಇದ್ದುದರಲ್ಲೇ ಸರಿಯಾಗಿ ಕೆಲಸ ಮಾಡುತ್ತಿದ್ದರೆ ಇನ್ನೊಬ್ಬರು ಬಂದು ಕಚೇರಿಗೆ ಸಂಬಂಧಿಸದ (ವೈಯಕ್ತಿಕ) ವಿಷಯಗಳನ್ನು ಪ್ರಸ್ತಾಪಿಸಿ ಹರಟೆ ಹೊಡೆಯುತ್ತಾರೆ. ನೆಲ ಅಂತಸ್ತಿನಲ್ಲೊಂದು ‘ಬ್ರೌಸಿಂಗ್ ಸೆಂಟರ್’ ಇದೆ. ಅದು 10.30ಕ್ಕೆ ಆರಂಭವಾಗುವುದೇ ವಿರಳ. ಇಂಟರ್ನೆಟ್ ಸಂಪರ್ಕ ನಿಧಾನ, ಹಲವು ದಿನ ತಾಂತ್ರಿಕ ತೊಂದರೆ ಎಂದು ಕಾರ್ಯ  ನಿರ್ವಹಿಸುವುದೇ ಇಲ್ಲ. ಅಲ್ಲಿರುವ ಜೆರಾಕ್ಸ್ ಯಂತ್ರ ಕೆಟ್ಟು ಅನೇಕ ದಿನಗಳಾಗಿವೆ.

ವೃತ್ತ ಪತ್ರಿಕಾ ವಿಭಾಗ ಅಸ್ತವ್ಯಸ್ತ ಸ್ಥಿತಿಯಲ್ಲಿರುತ್ತದೆ. ಗ್ರಂಥಾಲಯದ ಮುಖ್ಯಸ್ಥರು ಕೆಳಗೆ  ಬಂದು ಒಮ್ಮೆಯಾದರೂ ಪರಿಶೀಲನೆ ನಡೆಸಿದ್ದು ಕಂಡಿಲ್ಲ. ಗ್ರಂಥಾಲಯ ಇಲಾಖೆಯ ಮುಖ್ಯಸ್ಥರು ಹಠಾತ್ ಭೇಟಿ ನೀಡಲು ಅರ್ಹವಿರುವ ಶಾಖೆ ಇದು.
-ಎಚ್.ಎಸ್. ಮಂಜುನಾಥ್

***
ಮೆಟ್ರೊ ರೈಲಿನಲ್ಲಿ ಕನ್ನಡ ಮಾಯ!
ನಗರದ ದಟ್ಟ ಜನಸಂದಣಿಗೆ ಮೊಟ್ರೊ ವರದಾನವಾಗಿದೆ. ಆದರೆ ಮೆಟ್ರೊನಲ್ಲಿ ದಿನ ಕಳೆದಂತೆ ಕನ್ನಡ ಭಾಷೆ ಮಾಯವಾಗುತ್ತಿದೆ. ಎಲ್‌.ಸಿ.ಡಿ ಪರದೆ ಮೇಲೆ ಬರುವ ಮಾಹಿತಿ ಬಹುತೇಕ ಹಿಂದಿಯಲ್ಲಿ ಇರುತ್ತದೆ. ಪರದೆ ಮೇಲೆ ಬರುವ ಮಾಹಿತಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಇದ್ದು, ಕನ್ನಡ ಭಾಷೆ ಕೆಲವೊಮ್ಮೆ ಮಾತ್ರ ಬರುತ್ತದೆ.

ಇತರೆ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆ ಇಂಗ್ಲಿಷ್‌ ಬಿಟ್ಟರೆ ಬೇರೆ ಯಾವುದೇ ಭಾಷೆಯಲ್ಲಿ ಸಂವಹನ ಇರುವುದಿಲ್ಲ. ನಮ್ಮ ರಾಜ್ಯದಲ್ಲಿ ಯಾಕೆ ಹಿಂದಿ ಹೇರಿಕೆಯಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಯಲ್ಲಿ ಘೋಷಣೆ ಇದ್ದರೆ ಸಾಕು. ಪರಭಾಷಿಕರಿಗೆ, ಕನ್ನಡಿಗರಿಗೆ ಇಬ್ಬರಿಗೂ ಅನುಕೂಲ.

ಇಂದು ಹಿಂದಿ ಭಾಷೆಯ ಸೌಲಭ್ಯ ನೀಡಿದರೆ, ನಾಳೆ ತಮಿಳು, ತೆಲುಗು, ಮಲಯಾಳ ಹೀಗೆ ಕರ್ನಾಟಕದಲ್ಲಿ ಕನ್ನಡವೇ ಇಲ್ಲವಾಗುತ್ತದೆ. ಕನ್ನಡದವರು ಎಲ್ಲಿಗೆ ಹೋಗಬೇಕು?
–ನೊಂದ ಕನ್ನಡತಿ, ನಾಗರಬಾವಿ

**

ಮರ ತೆರವುಗೊಳಿಸಿ
ಮಾಗಡಿ ರಸ್ತೆಯ ಮೆಟ್ರೊ ನಿಲ್ದಾಣದ ಬಳಿ ಮರವೊಂದು ಹಳೆ ಕಟ್ಟಡದ ಮೇಲೆ ಬಿದ್ದು ಇಪ್ಪತ್ತು ದಿನವಾದರೂ ಬಿಬಿಎಂಪಿ ಅದನ್ನು ತೆರವು ಮಾಡುವ ಗೋಜಿಗೆ ಹೋಗಿಲ್ಲ.

ಮರ ಬಿದ್ದಿರುವ ಹಳೆ ಕಟ್ಟಡವು ರಸ್ತೆ ಪಕ್ಕದಲ್ಲಿಯೇ ಇದೆ. ಮರದ ಭಾರಕ್ಕೆ ಕಟ್ಟಡ ಕುಸಿಯುವ ಅಪಾಯವಿದ್ದು, ದಾರಿಹೋಕರ ಪ್ರಾಣಕ್ಕೆ ಎರವಾಗುವ ಸಂಭವವೂ ಇದೆ.

ಹಾಗಾಗಿ ಈ ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಉರುಳಿರುವ ಮರವನ್ನು ತೆರವುಗೊಳಿಸಬೇಕಾಗಿ ಮನವಿ. 
-ಮಧುಸೂದನ್ ಬಿ.ಎಸ್. ವಿದ್ಯಮಾನ್ಯ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT