ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹಳೀಯರ ಹೆಜ್ಜೆ ಗುರುತು...

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಅದು 1996ರ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯ. ಲಾಹೋರ್‌ನ ಗದಾಫಿ ಕ್ರೀಡಾಂಗಣದಲ್ಲಿ ಆಸ್ಟ್ರೇಲಿಯಾ ಮುಂದಿಟ್ಟ 242 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಶ್ರೀಲಂಕಾ 23 ರನ್‌ ಗಳಿಸುವಷ್ಟರಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ಗಳಿಬ್ಬರನ್ನೂ ಕಳೆದುಕೊಂಡಿತ್ತು. ಆದರೆ ತಂಡ ಗೆಲುವಿನ ವಿಶ್ವಾಸ ಕಳೆದುಕೊಂಡಿರಲಿಲ್ಲ.

ಯಾಕೆಂದರೆ ಆಗ ತಂಡದ ಶಕ್ತಿ ಅಪಾರವಾಗಿತ್ತು. ನಿರೀಕ್ಷೆಯಂತೆ ತಂಡ ಜಯ ಸಾಧಿಸಿತು. ಏಳು ವಿಕೆಟ್‌ಗಳಿಂದ ಗೆದ್ದ ಅರ್ಜುನ ರಣತುಂಗ ಬಳಗದವರು ಪ್ರಶಸ್ತಿ ಎತ್ತಿ ಹಿಡಿದು ಸಂಭ್ರಮಿಸಿದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದು ಕಾಲದಲ್ಲಿ ಎಲ್ಲ ತಂಡಗಳಿಗೂ ಸುಲಭ ತುತ್ತಾಗುತ್ತಿದ್ದ ಶ್ರೀಲಂಕಾ ನಿಧಾನವಾಗಿ ತನ್ನ ಅಸ್ತಿತ್ವ ಸ್ಥಾಪಿಸಿದ ಕಥೆ ಹೇಳಿತ್ತು ಅಂದಿನ ಆ ವಿಜಯೋತ್ಸವ.

ವೆಸ್ಟ್ ಇಂಡೀಸ್‌, ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ ಎತ್ತಿ ಹಿಡಿದಾಗ ಲಂಕಾ  ತಂಡದವರು ಅಚ್ಚರಿಯಿಂದ ನೋಡುತ್ತಿದ್ದರು. ಯಾಕೆಂದರೆ ಆ ಸಂದರ್ಭದಲ್ಲಿ ಈ ತಂಡ ಏಕದಿನ ಕ್ರಿಕೆಟ್‌ನಲ್ಲಿ ಜಯ ಗಳಿಸುವುದು ಅಪರೂಪವಾಗಿತ್ತು. ಏಕದಿನ ಕ್ರಿಕೆಟ್‌ನಲ್ಲಿ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲು ಆರಂಭಿಸಿದ ಮೊದಲ ವರ್ಷ ಆಡಿದ ಮೂರೂ ಪಂದ್ಯಗಳನ್ನು ಸೋತಿದ್ದ ಲಂಕನ್ನರು ನಾಲ್ಕು ವರ್ಷಗಳ ನಂತರ ಮೊದಲ ಜಯದ ಸವಿ ಉಂಡಿದ್ದರು. ಭಾರತ ವಿಶ್ವ ಕಪ್‌ ಗೆದ್ದ ವರ್ಷ ಶ್ರೀಲಂಕಾ ಆಡಿದ 13 ಪಂದ್ಯಗಳಲ್ಲಿ ಮೂರನ್ನು ಮಾತ್ರ ಗೆದ್ದಿತ್ತು. ಆ ದಶಕದಲ್ಲಿ ತಂಡ ಒಟ್ಟು 100 ಪಂದ್ಯಗಳನ್ನು ಆಡಿತ್ತು. ಗೆದ್ದದ್ದು ಕೇವಲ 24ರಲ್ಲಿ ಮಾತ್ರ. 1982ರಲ್ಲಿ ಅರ್ಜುನ ರಣತುಂಗ, 1984ರಲ್ಲಿ ಅರವಿಂದ ಡಿ’ಸಿಲ್ವಾ, 1986ರಲ್ಲಿ ರೋಷನ್‌ ಮಹಾನಾಮ, ಹಷನ್ ತಿಲಕರತ್ನೆ ಮುಂತಾದವರು ಪದಾರ್ಪಣೆ ಮಾಡಿ ನೆಲೆಯೂರುತ್ತಿದ್ದ ಕಾಲ ಅದಾಗಿತ್ತು. ಇದರ ಬೆನ್ನಲ್ಲೇ ಸನತ್ ಜಯಸೂರ್ಯ ಅವರಂಥ ಆಟಗಾರರು ತಂಡಕ್ಕೆ ಪ್ರವೇಶಿಸಿದರು. ಇದು ಈ ತಂಡದ ಸುವರ್ಣಕಾಲದ ಉದಯಕ್ಕೆ ಕಾರಣವಾಯಿತು; ಸಿಂಹಳೀಯರು ಬೇರೆ ತಂಡಗಳಿಗೆ ಸಿಂಹಸ್ವಪ್ನವಾಗತೊಡಗಿದರು.

ಕೊಲಂಬೊ ಕ್ರಿಕೆಟ್‌ ಕ್ಲಬ್‌ನಿಂದ...

ಶ್ರೀಲಂಕಾದಲ್ಲಿ ಕ್ರಿಕೆಟ್‌ ಪರ್ವ ಆರಂಭಗೊಂಡದ್ದು 1832ರ ಸಂದರ್ಭದಲ್ಲಿ. ಕೊಲಂಬೊ ಕ್ರಿಕೆಟ್ ಕ್ಲಬ್‌ ಎಂಬ ಹೆಸರಿನಲ್ಲಿ ಇಲ್ಲಿ ಕ್ರಿಕೆಟ್‌ ಅಂಬೆಗಾಲು ಇರಿಸಿತು. 1880ರಲ್ಲಿ ಸಿಲೋನ್‌ ರಾಷ್ಟ್ರೀಯ ಕ್ರಿಕೆಟ್ ತಂಡ ಅಸ್ತಿತ್ವಕ್ಕೆ ಬಂದ ನಂತರ ಇಲ್ಲಿನ ಕ್ರಿಕೆಟಿಗರು ಹೆಚ್ಚು ಬೆಳಕಿಗೆ ಬಂದರು. ಆದರೂ ಪ್ರಥಮ ದರ್ಜೆ ಕ್ರಿಕೆಟ್‌ ಆಡಲು ಇಲ್ಲಿನವರು ಮತ್ತೂ ನಾಲ್ಕು ದಶಕ ಕಾಯಬೇಕಾಗಿ ಬಂತು. 1965ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಸಹ ಸದಸ್ಯತ್ವ ಲಭಿಸಿತು. 1972ರಲ್ಲಿ ಶ್ರೀಲಂಕಾ ತಂಡ ಎಂದು ಮರುನಾಮಕರಣ ಆದ ನಂತರ ಈ ದೇಶದ ಕ್ರಿಕೆಟ್‌ನ ಛಾಯೆ ಬದಲಾಯಿತು. 1975ರಲ್ಲಿ ವಿಶ್ವಕಪ್‌ನಲ್ಲೂ ಪಾಲ್ಗೊಂಡಿತು. 1982ರಲ್ಲಿ ಟೆಸ್ಟ್ ಮಾನ್ಯತೆ ಪಡೆದ ಎಂಟನೇ ರಾಷ್ಟ್ರವಾಯಿತು ಶ್ರೀಲಂಕಾ. ಟೆಸ್ಟ್‌ನಲ್ಲೂ ಏಕದಿನ ಕ್ರಿಕೆಟ್‌ನಲ್ಲೂ ಈ ದೇಶದ ಮೊದಲ ಜಯ ಭಾರತದ ವಿರುದ್ಧ ಆಗಿತ್ತು.

2002ರಲ್ಲಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದೊಂದಿಗೆ ಜಂಟಿ ವಿಜೇತವಾದ ತಂಡ 2014ರಲ್ಲಿ ವಿಶ್ವ ಟ್ವೆಂಟಿ–20 ಟೂರ್ನಿಯ ಪ್ರಶಸ್ತಿಯನ್ನೂ ತನ್ನದಾಗಿಸಿತು. 2009 ಮತ್ತು 2012ಲ್ಲಿ ವಿಶ್ವ ಟ್ವೆಂಟಿ–20ಯ  ರನ್ನರ್‌ ಅಪ್‌ ಕೂಡ ಆಯಿತು. 2007 ಮತ್ತು 2011ರಲ್ಲಿ ವಿಶ್ವಕಪ್‌ ಕ್ರಿಕೆಟ್‌ನಲ್ಲೂ ರನ್ನರ್‌ ಅಪ್‌ ಆಗಿತ್ತು. 2009ರಿಂದ 2014ರ ಅವಧಿಯಲ್ಲಿ ಪ್ರಮುಖ ಆರು ಟೂರ್ನಿಗಳ ಸೆಮಿಫೈನಲ್‌ ಘಟ್ಟಕ್ಕೆ ಏರಿತ್ತು ಈ ತಂಡ. ಈ ಎಲ್ಲ ಸಾಧನೆಗಳ ನಡುವೆ ದಾಖಲೆಗಳು ಕೂಡ ತಂಡದ ಮಡಿಲಿಗೆ ಸೇರಿದವು. ಸನತ್ ಜಯಸೂರ್ಯ, ಅರವಿಂದ ಡಿ ಸಿಲ್ವಾ, ಮಾಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶನ್‌, ಚಮಿಂದ ವಾಸ್‌, ಮುತ್ತಯ್ಯ ಮುರಳೀಧರನ್‌ ಮುಂತಾದವರು ದಾಖಲೆಗಳಿಗೆ ಕಾರಣವಾದರು.

ಇಂಥ ತಂಡ ಈಗ ಪ್ರಭಾವಿ ಆಟಗಾರರ ಅನುಪಸ್ಥಿತಿ ಎದುರಿಸುತ್ತಿದೆ. ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನ ಹೊಂದಿರುವ ತಂಡ  ಏಕದಿನ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದೆ. ಆದರೂ ಒತ್ತಡವಿಲ್ಲದೆ ಆಡಿ ಗೆಲ್ಲುವ ಕಲೆಯನ್ನು ಲಂಕನ್ನರು ಇನ್ನೂ ಉಳಿಸಿಕೊಂಡಿದ್ದಾರೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ವಿರುದ್ಧ ಜಯ ಗಳಿಸಿ ಇದನ್ನು ಸಾಬೀತು ಮಾಡಿದ್ದಾರೆ.

ಚಾಂಪಿಯನ್ಸ್ ಟ್ರೋಫಿಯ

ಏಳು–ಬೀಳು:  ಚಾಂಪಿಯನ್ಸ್‌ ಟ್ರೋಫಿ (ಈ ಹಿಂದೆ ಐಸಿಸಿ ನಾಕೌಟ್ ಟೂರ್ನಿ)ಯಲ್ಲೂ ಶ್ರೀಲಂಕಾ ಉತ್ತಮ ಸಾಧನೆ ಮಾಡಿದೆ. ಏಳು–ಬೀಳುಗಳನ್ನೂ ಕಂಡಿದೆ. 1998ರ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ರಣತುಂಗ ಔಟಾಗದೆ ಗಳಿಸಿದ 90 ರನ್‌, 2000ರಲ್ಲಿ ಕ್ವಾರ್ಟರ್‌ ಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಆವಿಷ್ಕ ಗುಣವರ್ಧನೆ ಗಳಿಸಿದ 132 ರನ್‌, 2006ರಲ್ಲಿ ಜಿಂಬಾಬ್ವೆ ವಿರುದ್ಧ ಉಪುಲ್ ತರಂಗ ಗಳಿಸಿದ 110 ರನ್‌, 2006ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಪರ್ವೇಜ್‌ ಮೆಹರೂಫ್‌ 14 ರನ್‌ಗಳಿಗೆ ಆರು ವಿಕೆಟ್ ಉರುಳಿಸಿದ್ದು, ನ್ಯೂಜಿಲೆಂಡ್ ವಿರುದ್ಧ ಮುತ್ತಯ್ಯ 23 ರನ್‌ಗಳಿಗೆ 4 ವಿಕೆಟ್ ಕಬಳಿಸಿದ್ದು, ದಕ್ಷಿಣ ಆಫ್ರಿಕಾ ವಿರುದ್ಧ ಮಾಲಿಂಗ 53 ರನ್‌ಗಳಿಗೆ 4 ವಿಕೆಟ್‌ ಪಡೆದದ್ದು, 2013ರಲ್ಲಿ ನ್ಯೂಜಿಲೆಂಡ್ ವಿರುದ್ಧ ಮಾಲಿಂಗ 34 ರನ್‌ಗಳಿಗೆ 4 ವಿಕೆಟ್‌ ಪಡೆದದ್ದು, ದಕ್ಷಿಣ ಆಫ್ರಿಕಾ ವಿರುದ್ಧ ತಲಕರತ್ನೆ ದಿಲ್ಶನ್‌ ಗಳಿಸಿದ 106 ರನ್‌, 2000ದ ಕ್ವಾರ್ಟರ್‌ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ 108 ರನ್‌ಗಳ ಗೆಲುವು, 2002ರಲ್ಲಿ ಪಾಕಿಸ್ತಾನ ವಿರುದ್ಧ ಎಂಟು ವಿಕೆಟ್‌ಗಳ ಜಯ, ಆಸ್ಟ್ರೇಲಿಯಾ ವಿರುದ್ಧ ಏಳು ವಿಕೆಟ್‌ಗಳ ಜಯ, 2006ರಲ್ಲಿ ಜಿಂಬಾಬ್ವೆ ವಿರುದ್ಧ 144 ರನ್‌ಗಳ ಜಯ, ವೆಸ್ಟ್‌ ಇಂಡೀಸ್ ವಿರುದ್ಧ ಒಂಬತ್ತು ವಿಕೆಟ್ ಜಯ...ಹೀಗೆ ಈ ಟೂರ್ನಿಯಲ್ಲಿ ತಂಡ ಅನೇಕ ಮೈಲಿಗಲ್ಲುಗಳನ್ನು ನೆಟ್ಟಿದೆ.

(2017ರ ಚಾಂಪಿಯನ್ಸ್‌ ಟ್ರೋಫಿಯ ಮೊದಲು)

ಹೊಸಬರ ಮೇಲೆ ನಿರೀಕ್ಷೆಯ ಭಾರ

1975ರ ಅವಧಿಯಲ್ಲಿ ಬೆಳಕಿಗೆ ಬಂದ ದಂಡೆನಿಯಾಗೆ ಡಿ’ಸಿಲ್ವಾ, ಸುನಿಲ್‌ ವೆಟ್ಟಿಮುನಿ, ಅಜಿತ್ ಡಿ’ಸಿಲ್ವಾ, ರಾಯ್‌ ಲೂಕ್‌ ಡಿಯಾಸ್‌, ಎಡ್ವರ್ಡ್ ರಂಜಿತ್ ಫರ್ನಾಂಡೊ ಮುಂತಾದವರಿಂದ ಆರಂಭಗೊಂಡ ಶ್ರೀಲಂಕಾ ಕ್ರಿಕೆಟ್‌ನ ವಾಮನ ರೂಪದ ಹೆಜ್ಜೆ ಗುರುತು ತ್ರಿವಿಕ್ರಮ ಸ್ವರೂಪ ಪಡೆದು ಆಕಾಶದೆತ್ತರಕ್ಕೆ ಏರಿದ್ದು ಅರ್ಜುನ ರಣತುಂಗ, ಅರವಿಂದ ಡಿ’ಸಿಲ್ವಾ ಮತ್ತಿತರರ ಕಾಲದಲ್ಲಿ. ಇದರ ನಡುವೆ ಸುಶಿಲ್‌ ಫರ್ನಾಂಡೊ ಅವರಂಥವರು ಮಿಂಚಿ ಮಾಯವಾಗಿದ್ದರು. ಆರಂಭದ ದಶಕಗಳಲ್ಲಿ ಶ್ರೀಲಂಕಾ ತಂಡದಲ್ಲಿ ಯಾರೂ ಹೆಚ್ಚು ಪಂದ್ಯಗಳನ್ನು ಆಡಲಿಲ್ಲ. ಒಂದು, ಮೂರು, ಐದು, ಎಂಟು...ಹೀಗೆ ಸೀಮಿತ ಪಂದ್ಯಗಳನ್ನು ಆಡಿ ಹೊರನಡೆದವರೇ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿ ದಂಡೆನಿಯಾಗೆ, ರಾಯ್‌ ಲೂಕ್, ದುಲೀಪ್‌ ಮೆಂಡಿಸ್‌ ಮುಂತಾದವರು 25ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿ ತಂಡಕ್ಕೆ ‘ಸ್ಥಿರತೆ’ ತಂದುಕೊಡಲು ನೆರವಾದರು. 80ರ ನಂತರ ಸಿಂಹಳೀಯರ ತಂಡದಲ್ಲಿ ಆಟಗಾರರು ನೆಲೆಯೂರುವ ಪದ್ಧತಿ ಆರಂಭವಾಯಿತು. ಅನುರಸಿರಿ, ಅಶಾಂತ ಡಿ’ಮೆಲ್‌, ಕುರುಪ್‌, ಲ್ಯಾಬ್ರೋಯ್‌ ಮುಂತಾದವರು ಈ ಸಂದರ್ಭದಲ್ಲಿ ಗಮನ ಸೆಳೆದರು. 1982ರಲ್ಲಿ ಅರ್ಜುನ ರಣತುಂಗ, 1984ರಲ್ಲಿ ಅರವಿಂದ ಡಿ’ಸಿಲ್ವಾ, 1986ರಲ್ಲಿ ರೋಷನ್‌ ಮಹಾನಾಮ, ಹಷನ್ ತಿಲಕರತ್ನೆ, 1989ರಲ್ಲಿ ಜಯಸೂರ್ಯ ಮುಂತಾದವರ ಪ್ರವೇಶವಾಯಿತು. ಮರ್ವಾನ್ ಅಟ್ಟಪಟ್ಟು, ಉಪುಲ್‌ ಚಂದನ, ರಸೆಲ್ ಅರ್ನಾಲ್ಡ್‌, ಕುಮಾರ ಧರ್ಮಸೇನ, ಕಲುವಿತರಣ, ಮುತ್ತಯ್ಯ ಮುರಳೀಧರನ್‌, ಚಮಿಂದಾ ವಾಸ್‌ ಮುಂತಾದವರಿಂದ ಇನ್ನಷ್ಟು ಶಕ್ತಿ ವೃದ್ಧಿಸಿಕೊಂಡ ತಂಡಕ್ಕೆ 2000ನೇ ಇಸವಿಯ ಆಸುಪಾಸಿನಲ್ಲಿ ಮಾಹೇಲ ಜಯವರ್ಧನೆ, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶನ್‌, ನುವಾನ್ ಕುಲಶೇಖರ, ಪರ್ವೇಜ್‌ ಮಹರೂಫ್‌, ಲಸಿತ್ ಮಾಲಿಂಗ ಆಂಜೆಲೊ ಮ್ಯಾಥ್ಯೂಸ್‌, ಅಜಂತಾ ಮೆಂಡಿಸ್‌, ತಿಸಾರ ಪೆರೇರ ಮುಂತಾದವರು ಶಕ್ತಿವರ್ಧಕದಂತಾದರು. ಹಳೆಯ ಆಟಗಾರರ ಅನುಪಸ್ಥಿತಿಯನ್ನು ಇವರು ಮರೆಸಿದರು.

ಆದರೆ ಮುರಳೀಧರನ್, ದಿಲ್ಶನ್‌, ಜಯವರ್ಧನೆ, ಸಂಗಕ್ಕಾರ ಮುಂತಾದವರು ನಿವೃತ್ತಿಯಾಗುವುದರೊಂದಿಗೆ ತಂಡದ ಯಶಸ್ಸು ಕುಂದುತ್ತ ಸಾಗಿತು. ಕಳೆದ ವರ್ಷ ಆಡಿದ 19 ಪಂದ್ಯಗಳಲ್ಲಿ ಆರನ್ನು ಮಾತ್ರ ಗೆದ್ದಿರುವ ತಂಡ ಈ ವರ್ಷ ಚಾಂಪಿಯನ್ಸ್ ಟ್ರೋಫಿಗಿಂತ ಮುನ್ನ ಆಡಿದ ಒಂಬತ್ತು ಪಂದ್ಯಗಳಲ್ಲಿ ಒಂದನ್ನು ಮಾತ್ರ ಗೆದ್ದಿದೆ. ಸದ್ಯ ತಂಡದಲ್ಲಿ ಎಂಟು ಮಂದಿ ಹಿರಿಯ ಆಟಗಾರರು ಇದ್ದಾರೆ. ಆದರೆ ಇವರ ಪೈಕಿ ಹೆಚ್ಚಿನವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಗೂ ಮುನ್ನ 178 ಪಂದ್ಯಗಳನ್ನು ಆಡಿರುವ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್‌, 200 ಪಂದ್ಯ ಆಡಿರುವ ಉಪನಾಯಕ ಉಪುಲ್ ತರಂಗ ಅವರೊಂದಿಗೆ ನುವಾನ ಕುಲಶೇಖರ (181), ದಿನೇಶ್ ಚಾಂದಿಮಲ್‌ (124), ತಿಸ್ಸಾರ ಪೆರೇರಾ (117), ಚಾಮರ ಕಪುಗೇಡೆರ (98) ಹಾಗೂ ಸುರಂಗಾ ಲಕ್ಮಲ್‌ (62) ತಂಡಕ್ಕೆ ಆಧಾರವಾಗಿದ್ದಾರೆ. ಹೊಸಬರ ಪೈಕಿ ಸೀಕ್ಕುಗೆ ಪ್ರಸನ್ನ (34) ಮತ್ತ ಕುಶಾಲ್‌ ಮೆಂಡಿಸ್‌ (26) ಬಿಟ್ಟರೆ ಉಳಿದವರು ಆಡಿದ ಪಂದ್ಯಗಳ ಸಂಖ್ಯೆ 20 ದಾಟಲಿಲ್ಲ. ಹೀಗಾಗಿ ಇವರೆಲ್ಲರೂ ಬಲವೃದ್ಧಿಸಿಕೊಳ್ಳುವ ವರೆಗೆ ಹಳಬರ ಶಕ್ತಿಯನ್ನು ಬಳಸಿಕೊಳ್ಳಬೇಕಾದ ಅನಿವಾರ್ಯ ಸ್ಥಿತಿ ತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT