ರದ್ದಿ ಸಮಸ್ಯೆಗೆ ಪರಿಹಾರ ಈ ಆ್ಯಪ್

7

ರದ್ದಿ ಸಮಸ್ಯೆಗೆ ಪರಿಹಾರ ಈ ಆ್ಯಪ್

Published:
Updated:
ರದ್ದಿ ಸಮಸ್ಯೆಗೆ ಪರಿಹಾರ ಈ ಆ್ಯಪ್

ಬೆಂಗಳೂರಿನ ಹೇಮಂತ್ ಜಾಡೆ ಮತ್ತು ಗೆಳೆಯರು ಸ್ಥಾಪಿಸಿರುವ ‘ರಿಕವರ್ ಹ್ಯಾಬಿಟಾಟ್‌’ ಸ್ಟಾರ್ಟ್‌ ಅಪ್‌  ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಓಲ್ಡ್‌ ರದ್ದಿ ಸೋಲ್ಡ್‌’ (ಓಆರ್‌ಎಸ್‌) ಆ್ಯಪ್ ರದ್ದಿ ಪೇಪರ್‌ಗಳ ವಿಲೇವಾರಿಗೆ ಉತ್ತಮ ಪರಿಹಾರ  ಒದಗಿಸಿದೆ.

ಈ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ವಿಳಾಸ ನಮೂದಿಸಿ, ರದ್ದಿ ಪಡೆಯಲು ಬರಬೇಕಾದ ಸಮಯ ನಮೂದಿಸಿದರೆ ಸಾಕು. ಓಆರ್‌ಎಸ್‌ ತಂಡ ನಿಮ್ಮ ಮನೆಬಾಗಿಲಿಗೆ ಬಂದು ರದ್ದಿ ಖರೀದಿ ಮಾಡಿ ತೂಕಕ್ಕೆ ತಕ್ಕಷ್ಟು ಹಣವನ್ನೂ ನೀಡುತ್ತದೆ.

ಹೇಮಂತ್ ಜಾಡೆ ಈ ಸಂಸ್ಥೆಯ ಹಿಂದಿರುವ ಪ್ರಮುಖ ವ್ಯಕ್ತಿ, ಇವರು ತನ್ನ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಈ ಆ್ಯಪ್ ಅಭಿವೃದ್ಧಿಗೆ ಕೈ ಹಾಕಿದರು.

ವ್ಯಾಪಾರ ಹಿನ್ನೆಲೆಯುಳ್ಳ ಕುಟುಂಬದವರೇ ಆದ ಹೇಮಂತ್‌ಗೆ ಈ ರೀತಿಯ ಯೋಜನೆ ಹೊಳೆದದ್ದು ಆಶ್ಚರ್ಯವೇನಲ್ಲ.

ಪ್ರಕೃತಿಪ್ರೇಮಿ ಹೇಮಂತ್ ಬೆಂಗಳೂರಿನ ಹೊರಮಾವು ಕೆರೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಕೊಂಡಿದ್ದಾಗ. ಕೆರೆಯಲ್ಲಿ ಸಾಕಷ್ಟು  ಮರುಬಳಕೆಯಾಗಬಹುದಾದ ತ್ಯಾಜ್ಯ ಕಂಡಿತು ಆಗ ಹೊಳೆದದ್ದೇ ಓಲ್ಡ್‌ ರದ್ದಿ ಸೋಲ್ಡ್‌ ಆ್ಯಪ್‌.

ಪ್ರಸ್ತುತ 1500 ಡೌನ್‌ಲೋಡ್‌ಗಳನ್ನು ಓಆರ್‌ಎಸ್‌ ಆ್ಯಪ್‌ ಕಂಡಿದೆ. 300 ಮನೆಗಳು ನಿಯಮಿತವಾಗಿ ಇವರಿಗೆ ರದ್ದಿ ಮಾರುತ್ತಿದ್ದಾರಂತೆ. ಆ್ಯಪ್‌ನಲ್ಲಿಯೇ ಯಾವ ರೀತಿಯ ರದ್ದಿಗೆ ಎಷ್ಟು ಹಣ ಎಂಬುದನ್ನು ನಮೂದಿಸಿದ್ದಾರೆ. ಆಧುನಿಕ ತೂಕ ಯಂತ್ರದ ಮೂಲಕ ತೂಕ ಮಾಡಿ ಹಣ ನೀಡಲಾಗುತ್ತದೆ. ಹಣವನ್ನು ನೇರವಾಗಿ ಗ್ರಾಹಕರ ಖಾತೆಗೆ ವರ್ಗಾಯಿಸಲಾಗುತ್ತದೆ. ಹಣ ಬೇಡವೆಂದಾದರೆ ಆ ಹಣವನ್ನು ಗ್ರಾಹಕರು ಶಿಕ್ಷಣ ಸಂಸ್ಥೆಗೆ ದಾನವಾಗಿ ನೀಡುವ ಅವಕಾಶವೂ ಇದೆ. ರದ್ದಿ ಪಡೆದುಕೊಂಡ ನಂತರ ಅದನ್ನು ವಿಂಗಡಿಸಿ ತ್ಯಾಜ್ಯ ಮರುಬಳಕೆ ಮಾಡುವ ಸಂಸ್ಥೆಗಳಿಗೆ ಮಾರಾಟ ಮಾಡುತ್ತಾರೆ ಇವರು.

ಪ್ರಸ್ತುತ ಬೆಂಗಳೂರು ನಗರದಲ್ಲಿ ಮಾತ್ರ ಕಸ ಸಂಗ್ರಹಿಸುತ್ತಿದ್ದಾರೆ. ‘ಕಡಿಮೆ ಮನೆಗಳಿಂದ ಕಸ ಸಂಗ್ರಹಿಸುತ್ತಿರುವುದರಿಂದ ಪ್ರಸ್ತುತ ಸಂಸ್ಥೆ ನಷ್ಟದಲ್ಲಿದೆ, ಆದರೆ ಪರಿಸರ ಉಳಿಸುವ ಎಡೆ ನಮ್ಮ ಈ ಕಾರ್ಯ ಒಂದು ಕಿರು ಹೆಜ್ಜೆಯಾದ್ದರಿಂದ ನಷ್ಟವಾದರೂ ತೂಗಿಸಿಕೊಂಡು ಹೋಗುತ್ತಿದ್ದೇವೆ’ ಎನ್ನುತ್ತಾರೆ ಹೇಮಂತ್ ಜಾಡೆ.

ಆ್ಯಪ್‌ ಬಳಸುವುದು ಹೀಗೆ..

ಪ್ಲೇಸ್ಟೋರ್‌ನಿಂದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ನಿಮ್ಮ ಇಮೇಲ್ ಮತ್ತು ಮೊಬೈಲ್‌ ನಂ. ನೀಡಿ ಸೈನ್‌ಇನ್ ಆಗಬೇಕು. ನಂತರ ನಿಮ್ಮ ಲೊಕೇಶನ್ ಆಯ್ಕೆ ಮಾಡಿಕೊಳ್ಳಬೇಕು. ರದ್ದಿ ಹೊತ್ತೊಯ್ಯಲು ಓಆರ್‌ಎಸ್ ಸಿಬ್ಬಂದಿ ಬರಬೇಕಾದ ಸಮಯ ಮತ್ತು ದಿನಾಂಕ ನಮೂದಿಸಿದರೆ ಆಯ್ತು.

(ಹೇಮಂತ್‌)

ಆ್ಯಪ್‌ನಲ್ಲಿ ಸಾಕಷ್ಟು ಉಪಯುಕ್ತ ಆಯ್ಕೆಗಳನ್ನು ನೀಡಲಾಗಿದೆ. ನಿಮ್ಮ ಹಳೆಯ ಶೆಡ್ಯೂಲ್‌, ಇಲ್ಲಿಯವರೆಗೆ ನೀವು ಮಾರಿರುವ ರದ್ದಿ ಮತ್ತು ಗಳಿಸಿರುವ ಮೊತ್ತವನ್ನು ನೋಡುವ ಅವಕಾಶ ಆ್ಯಪ್‌ನಲ್ಲಿದೆ. ಆ್ಯಪ್‌ನಲ್ಲಿ ನೀಡಿರುವ ವ್ಯಾಲೆಟ್‌ನಲ್ಲಿ ನಿಮ್ಮ ಮೊತ್ತ ಕ್ರೋಢೀಕರಣವಾಗುತ್ತದೆ. ಅಗತ್ಯ ಬಂದಾಗ ಅದನ್ನು ಬ್ಯಾಂಕ್‌ ಖಾತೆಗೆ ವರ್ಗ ಮಾಡಿಕೊಳ್ಳಬಹುದು. ಉಳಿದಂತೆ ಆ್ಯಪ್‌ ಬಗ್ಗೆ ಮಾಹಿತಿ ನೀಡುವ ಆಯ್ಕೆ, ಸಂಸ್ಥೆಯನ್ನು ಸಂಪರ್ಕಿಸುವ ಆಯ್ಕೆ, ಗೌಪ್ಯತೆ ನೀತಿ ಮಾಹಿತಿ ಆಯ್ಕೆಗಳನ್ನು ನೀಡಲಾಗಿದೆ. ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದ್ದರೆ ಅದರ ಚಿತ್ರ ತೆಗೆದು ಕಳುಹಿಸುವ ಅವಕಾಶವೂ ಆ್ಯಪ್‌ನಲ್ಲಿ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry