ಮಕ್ಕಳ ಮನೆ: ಸರ್ಕಾರಿ ಶಾಲೆ ಉಳಿಸಲೊಂದು ಸೂತ್ರ

7

ಮಕ್ಕಳ ಮನೆ: ಸರ್ಕಾರಿ ಶಾಲೆ ಉಳಿಸಲೊಂದು ಸೂತ್ರ

Published:
Updated:
ಮಕ್ಕಳ ಮನೆ: ಸರ್ಕಾರಿ ಶಾಲೆ ಉಳಿಸಲೊಂದು ಸೂತ್ರ

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ಮಾದಹಳ್ಳಿ ಶಾಲೆ ಮುಚ್ಚುವ ಹಂತಕ್ಕೆ ಬಂದಿತ್ತು. ಈಗ 5–6 ವರ್ಷಗಳ ಹಿಂದೆ ಈ ಶಾಲೆಯಲ್ಲಿ ಕಲಿಯುವವರ ಸಂಖ್ಯೆ ಕೇವಲ 22 ಇತ್ತು. ಸುತ್ತಲಿನ ಗ್ರಾಮಗಳಾದ ಕಾಗೆಪುರ, ದುಗ್ಗನಹಳ್ಳಿ, ಮಳವಳ್ಳಿಗಳಲ್ಲಿ ಖಾಸಗಿ ಕಾನ್ವೆಂಟ್‌ಗಳು ತಲೆ ಎತ್ತಿದ್ದರಿಂದ ಮಾದಹಳ್ಳಿಯ ಸರ್ಕಾರಿ ಶಾಲೆ ಸೊರಗಿತು. ‘ಅಯ್ಯೋ ಅದರಲ್ಲೇನು ವಿಶೇಷ. ಎಲ್ಲ ಸರ್ಕಾರಿ ಶಾಲೆಗಳಂತೆಯೇ ಇದೂ ಆಯಿತು’ – ಎಂದುಕೊಳ್ಳಬೇಡಿ. ಅಲ್ಲೊಂದು ಪವಾಡ ನಡೆಯಿತು.

ಇದೇ ಶಾಲೆಯಲ್ಲಿ ಓದಿ ಮಂಗಳೂರಿನಲ್ಲಿ ಪ್ರಾಧ್ಯಾಪಕರಾಗಿದ್ದ ಪ್ರೊ. ಭೂಮೀಗೌಡರಿಗೆ ಇದನ್ನು ನೋಡಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರು ಹಳೆಯ ವಿದ್ಯಾರ್ಥಿಗಳ ಸಂಘ ಕಟ್ಟಿದರು. ದಾನಿಗಳನ್ನು ಸಂಪರ್ಕಿಸಿ ಶಾಲೆಯ ಪುನರುಜ್ಜೀವನ ಮಾಡಿದರು. ಜೊತೆಗೆ ಅಂಗನವಾಡಿಯನ್ನು ಈ ಶಾಲೆಯೊಂದಿಗೆ ಸಂಯೋಜಿಸಿ ಎಲ್‌ಕೆಜಿ, ಯುಕೆಜಿ ಆರಂಭಿಸಿದರು. ಒಂದು ಭಾಷೆಯಾಗಿ ಇಂಗ್ಲಿಷನ್ನು ಕಲಿಸಲೂ ಆರಂಭಿಸಿದರು. ಇಂಗ್ಲಿಷ್ ಗೊತ್ತಿಲ್ಲದ ಶಿಕ್ಷಕರಿಗೆ ತರಬೇತಿಯನ್ನೂ ಕೊಡಿಸಿದರು. ಇದರಿಂದ ಪೋಷಕರು ಖಾಸಗಿ ಶಾಲೆಯಿಂದ ತಮ್ಮ ಮಕ್ಕಳನ್ನು ಬಿಡಿಸಿ ಮತ್ತೆ ಈ ಶಾಲೆಗೆ ಸೇರಿಸತೊಡಗಿದರು. ಎಲ್‌ಕೆಜಿ, ಯುಕೆಜಿಯಲ್ಲಿಯೇ 50ಕ್ಕೂ ಹೆಚ್ಚು ಮಕ್ಕಳು ಇದ್ದಾರೆ. ಇದರಿಂದ ಈಗ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ.

ಕೆ.ಆರ್. ಪೇಟೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕಥೆ ಕೂಡ ಹೀಗೆಯೇ ಇದೆ. ಇದು 1910ರಲ್ಲಿಯೇ ಆರಂಭವಾದ  ಶಾಲೆ. ಶತಮಾನಗಳಷ್ಟು ಕಾಲ ಒಳ್ಳೆಯ ಶಿಕ್ಷಣವನ್ನು ನೀಡಿದ ಈ ಶಾಲೆ ಶಿಕ್ಷಣದ ಖಾಸಗೀಕರಣದಿಂದ ನಲುಗಿತ್ತು. ಇಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿತ್ತು. ಈಗ ಇಲ್ಲಿಯೂ ಎಲ್‌ಕೆಜಿ, ಯುಕೆಜಿ ಆರಂಭಿಸಿದ ನಂತರ ವಿದ್ಯಾರ್ಥಿಗಳ ವಲಸೆ ನಿಂತಿದೆ. ಮತ್ತೆ ತನ್ನ ವೈಭವವನ್ನು ಪಡೆದಿದೆ. ಈಗ ಈ ಶಾಲೆಗೆ ಮಕ್ಕಳನ್ನು ಸೇರಿಸಲು ಪೋಷಕರು ಕ್ಯೂನಲ್ಲಿ ನಿಂತಿದ್ದಾರೆ. ಒಂದು ಕಾಲಕ್ಕೆ ಕೇವಲ 130ರಷ್ಟಿದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 650ಕ್ಕೂ ಮೀರಿದೆ.

ಹೊಳಲ್ಕೆರೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಯೂ ಇದೇ ಪ್ರಯೋಗ ಮಾಡಲಾಗಿದೆ. ಈಗ ಇಲ್ಲಿ ಶಾಲಾ ಪ್ರವೇಶಕ್ಕೆ ನೂಕುನುಗ್ಗಲು ಇದೆ. ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೂಕಿನ ಕಿಕ್ಕೇರಿ ಹೋಬಳಿ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿಯೂ ಎಲ್‌ಕೆಜಿ, ಯುಕೆಜಿ ಆರಂಭವಾಗಿದೆ. ಬೈಂದೂರು, ಹೊಸಪೇಟೆ ಮುಂತಾದ ಕಡೆಗಳಲ್ಲಿಯೂ ಇಂತಹ ಪ್ರಯೋಗ ನಡೆದಿದ್ದು ಯಶಸ್ವಿಯಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ, ಕಟ್ಟಡ, ಆಟದ ಮೈದಾನಗಳಿಲ್ಲ, ಒಳ್ಳೆಯ ಶಿಕ್ಷಣ ಸಿಗುತ್ತಿಲ್ಲ, ಆಂಗ್ಲಮಾಧ್ಯಮ ಇಲ್ಲ – ಎನ್ನುವ ಕಾರಣಕ್ಕೆ ಪೋಷಕರು ಅನಿವಾರ್ಯವಾಗಿ ತಮ್ಮ ಮಕ್ಕಳನ್ನು ಶಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಸಾಲ ಸೋಲ ಮಾಡಿಯಾದರೂ ದುಬಾರಿ ಶುಲ್ಕ ನೀಡಿಯಾದರೂ ಮಕ್ಕಳನ್ನು ಖಾಸಗಿ ಶಾಲೆಯಲ್ಲಿಯೇ ಕಲಿಸಬೇಕು ಎನ್ನುವ ಕನಸು ಎಲ್ಲ ಪೋಷಕರಲ್ಲಿ ಮೂಡಿದೆ. ಶಿಕ್ಷಣದ ವ್ಯವಸ್ಥೆಯೇ ಹೀಗಾಗಿದ್ದು ಇದನ್ನು ಬದಲಿಸಲು ಸಾಧ್ಯವೇ ಇಲ್ಲ ಎಂದು ಎಲ್ಲರೂ ಕೈಚೆಲ್ಲ ಕುಳಿತಿರುವಾಗಲೇ ಸಮಾನಶಿಕ್ಷಣಕ್ಕಾಗಿ ಜನಾಂದೋಲನ ಸಂಘಟನೆ ರಾಜ್ಯದ 50ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ‘ಮಕ್ಕಳ ಮನೆ’ಯ ಪ್ರಯೋಗ ಮಾಡಿದೆ.

ಸರ್ಕಾರಿ ಶಾಲೆಗಳಲ್ಲಿ ಪ್ರಿ–ಎಲ್‌ಕೆಜಿ, ಎಲ್‌ಕೆಜಿ, ಯುಕೆಜಿಗಳಿಲ್ಲ. ಪೂರ್ವ ಪ್ರಾಥಮಿಕ ಶಿಕ್ಷಣ ಕೊಡಿಸಬೇಕು ಎಂದರೆ ಅನಿವಾರ್ಯವಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಕಳಿಸಬೇಕು ಎನ್ನುವ ಪರಿಸ್ಥಿತಿ ಇದೆ. ಮೂರು ವರ್ಷ ಮಕ್ಕಳು ಖಾಸಗಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆದು ಒಂದನೇ ತರಗತಿಗೆ ಅವರು ಸರ್ಕಾರಿ ಶಾಲೆಗೆ ಬರುತ್ತಾರೆ ಎನ್ನುವುದನ್ನು ಊಹಿಸಲು ಅಸಾಧ್ಯ. ದುಬಾರಿ ಶುಲ್ಕವಾದರೂ ಅದನ್ನು ಕಟ್ಟಿ ಖಾಸಗಿ ಶಾಲೆಯಲ್ಲಿಯೇ ಮಕ್ಕಳನ್ನು ಮುಂದುವರಿಸಲು ಪೋಷಕರು ಆಲೋಚಿಸುತ್ತಾರೆ. ಇದಕ್ಕೆ ಪರ್ಯಾಯವಾಗಿ ಸರ್ಕಾರಿ ಶಾಲೆಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಿದರೆ ಅಲ್ಲಿನ ಮಕ್ಕಳೂ ಅದೇ ಸರ್ಕಾರಿ ಶಾಲೆಯಲ್ಲಿಯೇ ಮುಂದುವರಿಯುತ್ತಾರೆ ಎಂಬ ಆಲೋಚನೆಯನ್ನು ಹರಿಬಿಟ್ಟು ಅದನ್ನು ಕಾರ್ಯಗತಗೊಳಿಸಲಾಗಿದೆ. ಇದು ಫಲವನ್ನೂ ಕೊಡುತ್ತಿದೆ.

ಸರ್ಕಾರಿ ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣದ ಸೌಲಭ್ಯ ಒದಗಿಸಿದರೆ ಈ ಹಂತದಲ್ಲಿಯೇ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣ ಹೆಚ್ಚಾಗುತ್ತದೆ. ಪೂರ್ವ ಪ್ರಾಥಮಿಕ ಹಂತದ ನಂತರ ಕನಿಷ್ಠ 1ರಿಂದ 5ನೇ ತರಗತಿಯವರೆಗಾದರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿಯೇ ಪೋಷಕರು ಕಲಿಸುತ್ತಾರೆ. ಸರ್ಕಾರಿ ಶಾಲೆಗಳಲ್ಲಿ ‘ಮಕ್ಕಳ ಮನೆ’ ಆರಂಭಿಸಿದರೆ ಅಲ್ಲಿ ಕಲಿಯುವ ಮಕ್ಕಳು ಚಿಕ್ಕವರಾಗಿರುವುದರಿಂದ ಶಾಲೆಯ ಜೊತೆ ಪೋಷಕರ ಸಂಪರ್ಕವೂ ಹೆಚ್ಚಾಗುತ್ತದೆ. ಮಕ್ಕಳ ಶಿಕ್ಷಣದ ಎಲ್ಲ ಚಟುವಟಿಕೆಗಳಲ್ಲಿಯೂ ಪೋಷಕರು ಭಾಗಿಯಾಗಲು ಅನುಕೂಲವಾಗುತ್ತದೆ. ಇದರಿಂದ ಗುಣಮಟ್ಟದ ಕಲಿಕೆಯೂ ಸಾಧ್ಯವಾಗುತ್ತದೆ. ಪೂರ್ವ ಪ್ರಾಥಮಿಕ ಹಂತದಲ್ಲಿ ಮಾಧ್ಯಮ ಯಾವುದು ಎನ್ನುವ ಪ್ರಶ್ನೆಯೇ ಇರುವುದಿಲ್ಲ. ಈ ಹಂತದಲ್ಲಿ ಮಕ್ಕಳಿಗೆ ಯಾವುದೇ ಭಾಷೆಯನ್ನು ಕಲಿಸಿದರೂ ಅವರು ಕಲಿಯುತ್ತಾರೆ. ಈ ಹಂತದಲ್ಲಿಯೇ ಒಂದು ಭಾಷೆಯಾಗಿ ಇಂಗ್ಲಿಷ್ ಅನ್ನೂ ಕಲಿಸಿದರೆ ಮುಂದೆ ಅವರಿಗೆ ಅನುಕೂಲವಾಗುತ್ತದೆ. ಪೋಷಕರು, ಶಾಲೆ, ಶಾಲಾಭಿವೃದ್ಧಿ ಮಂಡಳಿಯ ಜೊತೆ ಸೌಹಾರ್ದ ಸಂಬಂಧ ಏರ್ಪಡುವುದರಿಂದ ಶಾಲೆಯ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ. ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಸಾಮಾಜಿಕ ಜವಾಬ್ದಾರಿಯೂ ಹೆಚ್ಚಾಗುತ್ತದೆ.

ಸರ್ಕಾರಿ ಶಾಲೆ ಮತ್ತು ಪ್ರಾಥಮಿಕ ಶಿಕ್ಷಣವನ್ನು ಗಂಭೀರವಾಗಿ ಪರಿಗಣಿಸಿರುವ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಈಗ ರಾಜ್ಯದಲ್ಲಿ ಮಕ್ಕಳ ಮನೆಯನ್ನು ನಡೆಸುತ್ತಿವೆ. ಆದರೆ ಇದು ಬಹಳ ದಿನ ನಡೆಯಲಾಗದು. ಸರ್ಕಾರವೇ ಇಂತಹ ವ್ಯವಸ್ಥೆಯನ್ನು ರೂಪಿಸಬೇಕು. ಆದರೆ ಅದಕ್ಕೆ ಬದಲಾಗಿ ಈಗಾಗಲೇ ಮಕ್ಕಳ ಮನೆ ನಡೆಸುತ್ತಿರುವ ಕೆಲವು ಶಾಲೆಯ ಮುಖ್ಯೋಪಾಧ್ಯಾಯರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೋಟಿಸ್ ನೀಡಿರುವ ಉದಾಹರಣೆಗಳೂ ಇವೆ. ಇದು ತಕ್ಷಣ ನಿಲ್ಲಬೇಕು. ಅಂಗನವಾಡಿಗಳನ್ನು ಬಳಸಿಕೊಂಡು  ಅಥವಾ ಮಕ್ಕಳ ಮನೆಗೆ ಪ್ರತ್ಯೇಕ ವ್ಯವಸ್ಥೆಯನ್ನು ಮಾಡುವುದರ ಮೂಲಕ ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆಯನ್ನು ಆರಂಭಿಸಬೇಕು. ಆಗ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುವುದಿಲ್ಲ. ಶಾಲೆಗಳನ್ನು ಮುಚ್ಚುವ ಅಗತ್ಯವೂ ಬರುವುದಿಲ್ಲ.

ಶಿಕ್ಷಣ ವ್ಯವಸ್ಥೆ ನಮ್ಮ ರಾಜ್ಯದಲ್ಲಿ ವ್ಯಾಪಾರೀಕರಣಗೊಂಡಿದೆ. ಉಳ್ಳವರಿಗಷ್ಟೇ ಉತ್ತಮ ಶಿಕ್ಷಣ ಎನ್ನುವ ಕಾಲ ಬಂದಿದೆ. ಸಮಾನ ಶಿಕ್ಷಣಕ್ಕಾಗಿ ಪ್ರಬಲವಾದ ಜನಾಂದೋಲನವನ್ನು ಕಟ್ಟಬೇಕಾದ ಪರಿಸ್ಥಿತಿ ಇದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ತಕ್ಕಮಟ್ಟಿಗದರೂ ಸುಧಾರಿಸದೆ ಹೋದರೆ ಗ್ರಾಮೀಣ, ಹಿಂದುಳಿದ, ದಲಿತ ಮಕ್ಕಳ ಪಾಲಿಗೆ ಹಾಗೂ ಹಳ್ಳಿಗಳ ಹೆಣ್ಣುಮಕ್ಕಳಿಗೆ ಶಿಕ್ಷಣ ಎಂಬುದು ಮರೀಚಿಕೆಯಾದೀತು.

‘ಮಕ್ಕಳ ಮನೆ’ ಎನ್ನುವುದು ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಬುನಾದಿ ಇದ್ದಂತೆ. ಇದನ್ನು ಪ್ರತಿ ಸರ್ಕಾರಿ ಶಾಲೆಯಲ್ಲಿಯೂ ಆರಂಭಿಸಬೇಕು. ಇದರ ನಿರ್ವಹಣೆಗಾಗಿ ಸರ್ಕಾರವೇ ಹಣ ನೀಡಬೇಕು. ಗ್ರಾಮ, ಪೋಷಕರು, ಶಿಕ್ಷಕರು, ಶಾಲಾಭಿವೃದ್ಧಿ ಮಂಡಳಿಗಳ ನಡುವೆ ಕಾರ್ಯಕಾರಿ ಅನುಬಂಧ ಇರಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಸಮುದಾಯ ಕೇಂದ್ರವಾಗುತ್ತವೆ. ಸರ್ಕಾರಿ ಶಾಲೆಯ ಶಿಕ್ಷಕರಿಗೆ ಈ ಹಿಂದೆ ಇರುವ ಗೌರವಗಳೂ ಲಭಿಸುತ್ತವೆ. ಮಕ್ಕಳೂ ಒಳ್ಳೆಯ ಶಿಕ್ಷಣವನ್ನು ಪಡೆಯುವುದರ ಮೂಲಕ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುತ್ತಾರೆ.

ನಮ್ಮ ಸಂವಿಧಾನದ ಪ್ರಕಾರ ಎಲ್ಲರಿಗೂ ಕಡ್ಡಾಯ ಮತ್ತು ಉಚಿತ ಶಿಕ್ಷಣವನ್ನು ನೀಡಬೇಕು. ಆದರೆ ಖಾಸಗಿ ಶಾಲೆಗಳನ್ನು ಪ್ರೋತ್ಸಾಹಿಸುವ ಮೂಲಕ ನಾವು ನಮ್ಮ ಸಂವಿಧಾನದ ಆಶಯವನ್ನೇ ಮೂಲೆಗುಂಪು ಮಾಡಿದ್ದೇವೆ. ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಭಾಗ್ಯಲಕ್ಷ್ಮೀ’ ಯೋಜನೆಯ ಪ್ರಕಾರ ಬಾಲಕಿಯೊಬ್ಬಳು 18 ವರ್ಷದವರೆಗೆ ಸರ್ಕಾರಿ ಶಾಲೆಯಲ್ಲಿಯೇ ಕಲಿತಿದ್ದರೆ ಆಕೆಗೆ ರೂ. 50, 000 ನೀಡಲಾಗುತ್ತದೆ. ಪೋಷಕರೆಲ್ಲಾ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳಿಸಿದರೆ ಈ ಯೋಜನೆಯೂ  ನಿಷ್ಫಲವಾಗುತ್ತದೆ.

ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಮಕ್ಕಳ ಮನೆ ಯಶಸ್ವಿಯಾಗಿದೆ. ಆದರೆ ಹೀಗೆ ಬಿಡಿಬಿಡಿಯಾಗಿ ನಡೆಯುವ ಯತ್ನಗಳು ಹೆಚ್ಚು ಫಲಕಾರಿಯಾಗುವುದಿಲ್ಲ. ಲಕ್ಷಾಂತರ ರೂಪಾಯಿ ಶುಲ್ಕ ನೀಡಿ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲು ಇದೇ ಹಣವನ್ನು ಸರ್ಕಾರಿ ಶಾಲೆಗಳಲ್ಲಿಯೇ ತೊಡಗಿಸಿದರೆ ಸರ್ಕಾರಿ ಶಾಲೆಗಳೂ ಉಳಿಯುತ್ತವೆ. ಕನ್ನಡ ಮಾಧ್ಯಮದಲ್ಲಿಯೇ ಶಾಲೆಗಳು ನಡೆಯುವುದರಿಂದ ಕನ್ನಡವೂ ಉಳಿಯುತ್ತದೆ. ಕರ್ನಾಟಕ ಎಂದೆಂದಿಗೂ ಕನ್ನಡಮಯವಾಗಿಯೇ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry