ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮನ್ನಾ, ಉಚಿತ ಶಿಕ್ಷಣ: ಗಂಭೀರ ಚಿಂತನೆ

ಮಹಿಳಾ ವಿ.ವಿ ನಾಮಕರಣ: ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುವುದಾಗಿ ಪ್ರಕಟಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ವಿಜಯಪುರ: ‘ರೈತರ ಸಾಲ ಮನ್ನಾ ಹಾಗೂ ಎಲ್ಲ ವರ್ಗದ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಉನ್ನತ ಶಿಕ್ಷಣ ನೀಡುವ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಸಿರುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಉಚಿತ ಶಿಕ್ಷಣ ನೀಡುವ ಉನ್ನತ ಶಿಕ್ಷಣ ಇಲಾಖೆಯ ಪ್ರಸ್ತಾವ ಈಗಾಗಲೇ ನನ್ನ ಬಳಿ ಬಂದಿದೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಭಾನುವಾರ ಇಲ್ಲಿ ಮಹಿಳಾ (ಅಕ್ಕಮಹಾದೇವಿ) ವಿಶ್ವವಿದ್ಯಾಲಯದ ನಾಮಕರಣ ಸಮಾರಂಭದಲ್ಲಿ ಹೇಳಿದರು.

ಸರ್ಕಾರದ ಸಾಧನೆಗಳನ್ನು ಅವರು ವಿವರಿಸುತ್ತಿದ್ದ ಸಂದರ್ಭ, ನೆರೆದಿದ್ದ ಜನಸ್ತೋಮ ಸಾಲಮನ್ನಾಕ್ಕೆ ಆಗ್ರಹಿಸಿತು. ‘ಈ ಸಮಾರಂಭದಲ್ಲೂ ಕೇಳೋದಾ?’ ಎಂದು ಅವರು ಪ್ರತಿಕ್ರಿಯಿಸಿದ್ದಕ್ಕೆ, ಮತ್ತೊಮ್ಮೆ ಕೂಗು ಜೋರಾಗಿ ಕೇಳಿ ಬಂತು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಸಾಲ ಮನ್ನಾಕ್ಕೆ ನನ್ನ ವಿರೋಧವಿಲ್ಲ. ಎಲ್ಲರಿಗೂ ಅನುಕೂಲವಾಗಲಿ ಎಂದು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುತ್ತಿದ್ದೆ’ ಎನ್ನುತ್ತಿದ್ದಂತೆಯೇ, ನೆರೆದಿದ್ದ ಜನರು, ‘ಅವರ ವಿಷಯ ಬೇಡ. ನೀವು ಮಾಡಿ...’ ಎಂದು ಒತ್ತಾಯಿಸಿದರು. ಆಗ ‘ಈ ನಿಟ್ಟಿನಲ್ಲಿ ಗಂಭೀರವಾಗಿ ಚಿಂತಿಸುತ್ತಿರುವೆ. ಶೀಘ್ರದಲ್ಲೇ ಸಕಾರಾತ್ಮಾಕ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದರು.

ವಿ.ವಿ.ಗೆ ಮಹನೀಯರ ಹೆಸರು: ಇಲ್ಲಿಯ ‘ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ’ಕ್ಕೆ ‘ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ’ ಎಂದು ಮರು ನಾಮಕರಣ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ನಾನು ಧನ್ಯ’ ಎಂದ ಸಿದ್ದರಾಮಯ್ಯ, ‘ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಿಗೆ ಮಹನೀಯರ ಹೆಸರಿಡುವ ಬೇಡಿಕೆ ಕೇಳಿ ಬರುತ್ತಿದೆ. ಈ ನಿಟ್ಟಿನಲ್ಲಿ ಕಲಬುರ್ಗಿಯಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಡಾ. ಬಾಬಾಸಾಹೇಬ್‌ ಅಂಬೇಡ್ಕರ್‌ ಹೆಸರಿಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿರುವೆ. ಕಲಬುರ್ಗಿಯ ಗುಲ್ಬರ್ಗಾ ವಿಶ್ವವಿದ್ಯಾಲಯಕ್ಕೆ ಬಸವೇಶ್ವರರ ಹೆಸರಿಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

‘ಇದಲ್ಲದೇ ಕನಕದಾಸ, ಸಂತ ಶಿಶುನಾಳ ಷರೀಫ, ಮಹಾಪುರುಷ ವಾಲ್ಮೀಕಿ ಅವರ ಹೆಸರನ್ನು ವಿವಿಧ ವಿಶ್ವವಿದ್ಯಾಲಯಗಳಿಗೆ ಇಡಬೇಕು ಎಂಬ ಬೇಡಿಕೆ ಜನರಿಂದ ಕೇಳಿ ಬರುತ್ತಿದೆ. ಈ ಕುರಿತು ಪರಿಶೀಲಿಸಲಾಗುತ್ತಿದೆ’ ಎಂದರು.

ಗದಗ–ಡಂಬಳದ ತೋಂಟದಾರ್ಯ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿ, ‘ಗದುಗಿನಲ್ಲಿ ಪರಿಸರ ವಿಶ್ವವಿದ್ಯಾಲಯ ಸ್ಥಾಪಿಸಿ’ ಎಂದು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಕ್ಕೆ, ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ‘ಮಾತು ಕೊಟ್ಟರೆ ಅದರಂತೆ ನಡೆಯಬೇಕು.

‘ಗದಗದಲ್ಲಿ ಈಗಾಗಲೇ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸಿದ್ದೇವೆ. ಒಂದು ವಿ.ವಿ. ಆರಂಭಕ್ಕೆ ಸಾಕಷ್ಟು ಜಾಗ, ದುಡ್ಡು ಬೇಕಾಗುತ್ತದೆ. ಆದರೂ ನಿಮ್ಮ ಮನವಿ ಪರಿಶೀಲಿಸೋಣ’ ಎಂದು ಭರವಸೆ ನೀಡಿದರು.

****
ಮುಖ್ಯಮಂತ್ರಿ, ಸಚಿವರನ್ನು ಹೊಗಳಿದ ಸ್ವಾಮೀಜಿಗಳು...
ಆಶೀರ್ವಚನ ನೀಡಿದ ಸುತ್ತೂರು  ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚಿತ್ರದುರ್ಗದ ಮುರಾಘಾ ಶರಣರು, ಗದಗದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವರನ್ನು ಹೊಗಳಿದರು.

ಸುತ್ತೂರು ಸ್ವಾಮೀಜಿ ‘ನುಡಿದಂತೆ ನಡೆದವರು’ ಎಂದರೆ, ಮುರುಘಾ ಶರಣರು ‘ಇದೊಂದು ಐತಿಹಾಸಿಕ ಸಮಾರಂಭ. ಇದರಲ್ಲಿ ಭಾಗಿಯಾಗಲು ಭಾಗ್ಯ ಬೇಕು. 900 ವರ್ಷಗಳ ಹಿಂದೆ ಬಸವೇಶ್ವರರು ಮಾಡಿದ ಕ್ರಾಂತಿಯನ್ನು ಸಿದ್ದರಾಮಯ್ಯ ಇದೀಗ ಮಾಡುತ್ತಿದ್ದಾರೆ. ನಮ್ಮ ಬೆಂಬಲ ನಿಮಗಿದೆ’ ಎಂದರು.

ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ, ಉನ್ನತ ಶಿಕ್ಷಣ ಸಚಿವರ ಸಾಧನೆಗಳನ್ನು ಬಣ್ಣಿಸುವ ಜತೆಗೆ ‘ಸಿ.ಎಂ ಭಾಳ ಶಾಣ್ಯಾರಿದ್ದಾರ....’ ಎಂದರು.

****
ದಶಕದ ಕನಸು ಸಾಕಾರಗೊಂಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನನ್ನ ಅಭಿಲಾಷೆ ಪೂರೈಸಿದೆ. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಉಡುತಡಿ ಯಲ್ಲಿ ಎಂಟು ಎಕರೆ ಜಾಗ ದಾನ ನೀಡುವೆ
ಲೀಲಾದೇವಿ ಆರ್.ಪ್ರಸಾದ್, ಮಾಜಿ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT