ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀಪಾ ಪ್ರವೇಶಕ್ಕೆ ತಡೆ: ಪ್ರತಿಭಟನೆ

Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರ ಚೆನ್ನೈನಲ್ಲಿರುವ ನಿವಾಸ ಪೋಯೆಸ್‌ ಗಾರ್ಡನ್‌ಗೆ ಪ್ರವೇಶಿಸಲು ಮುಂದಾದ ಜಯಾ ಸೋದರನ ಪುತ್ರಿ ದೀಪಾ ಅವರಿಗೆ ತಡೆಯೊಡ್ಡಿದ ಪ್ರಸಂಗ ಭಾನುವಾರ ನಡೆದಿದೆ.

ಈ ವೇಳೆ ಭದ್ರತಾಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂದು ದೀಪಾ ಅವರು ಆರೋಪಿಸಿದ್ದಾರೆ. ಇದರಿಂದ ಮನೆಮುಂದೆ  ನಾಟಕೀಯ ಬೆಳವಣಿಗೆಗಳು ನಡೆದಿದ್ದು, ತಮ್ಮ ಬೆಂಬಲಿಗರ ಜತೆಗೂಡಿ ದೀಪಾ ಅವರು ಪ್ರತಿಭಟನೆ ನಡೆಸಿದರು.

ಪೋಯೆಸ್‌ ಗಾರ್ಡನ್‌ನ ಪ್ರವೇಶ ದ್ವಾರದಲ್ಲಿರುವ ಜಯಲಲಿತಾ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಸಂಬಂಧ ದೀಪಾ ಅವರು ಭಾನುವಾರ ದಿಢೀರ್‌ ಭೇಟಿ ನೀಡಿದ್ದರು. ಈ ವೇಳೆ ಮಾಲಾರ್ಪಣೆ ಮಾಡಲು ಅವಕಾಶ ನೀಡಲಾಯಿತು. ನಂತರ ಏಕಾಏಕಿ ಮನೆಗೆ ಪ್ರವೇಶಿಸಲು ಮುಂದಾದ ವೇಳೆ  ತಡೆ ಒಡ್ಡಲಾಯಿತು ಎಂದು ಅವರ ಬೆಂಬಲಿಗರು ದೂರಿದ್ದಾರೆ.

‘ಮನೆಗೆ ಭೇಟಿ ನೀಡುವಂತೆ ಖುದ್ದು ದೀಪಕ್‌ ಅವರು ಕರೆಮಾಡಿ ತಿಳಿಸಿದ್ದರು. ಸಹೋದರ ತಿಳಿಸಿದ್ದರಿಂದ ಇಲ್ಲಿಗೆ ಬಂದು ಮಾಲಾರ್ಪಣೆ ಮಾಡಲು ಮುಂದಾದೆ’ ಎಂದು ದೀಪಾ ತಿಳಿಸಿದರು.

‘ಜಯಲಲಿತಾ ಸಾವಿನ ಹಿಂದೆ ಶಶಿಕಲಾ ಜತೆಗೆ ದೀಪಕ್‌ ಕೂಡ ಕೈ ಜೋಡಿಸಿದ್ದಾನೆ’ ಎಂದು ಇದೇ ವೇಳೆ ದೀಪಾ ಅವರು ಆರೋಪ ಮಾಡಿದರು.
‘ಅವರು ಏಕಾಏಕಿ ಮನೆ ಒಳಗೆ ಪ್ರವೇಶಿಸಲು ಮುಂದಾದರು. ಅವರಿಗೆ ಅನುಮತಿ ನೀಡಲು ನಮಗೆ ಅಧಿಕಾರವಿಲ್ಲ. ಆದರೆ ಮನೆಗೆ ಬೀಗ ಹಾಕಿದ್ದರಿಂದ ಅಲ್ಲಿಂದ ಹೊರನಡೆಯುವಂತೆ ತಿಳಿಸಿದೆವು’  ಎಂದು ಪೊಲೀಸರು ತಿಳಿಸಿದ್ದಾರೆ.

ಹಲ್ಲೆ ನಡೆದಿಲ್ಲ: ‘ದೀಪಾ ಅವರ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಅವರು ಭೇಟಿ ನೀಡಿದ ವೇಳೆ ನಾನು ಕೂಡ ಅಲ್ಲೇ ಹಾಜರಿದ್ದೆವು‘ ಎಂದು ಎಐಡಿಎಂಕೆ ಅಮ್ಮಾ ಪಕ್ಷದ ಮುಖಂಡರು ತಿಳಿಸಿದ್ದಾರೆ. ದೀಪಾ ಅವರು ಮನೆಗೆ  ಪ್ರವೇಶಕ್ಕೆ ಯತ್ನಿಸಿದ ಸಂದರ್ಭದಲ್ಲಿ ಅವರ ಸಹೋದರ ದೀಪಕ್‌ ಮನೆಯೊಳಗಿದ್ದರು.

ಹಲ್ಲೆ ನಡೆದಿರುವುದು ನಿಜ: ‘ನನ್ನ ಮೇಲೆ ಹಲ್ಲೆ ನಡೆಸಿರುವುದನ್ನು ಗುರುತಿಸಬಲ್ಲೆ. ಈ ವೇಳೆ ಹಾಜರಿದ್ದ ಟಿವಿ ವಾಹಿನಿ ಸಿಬ್ಬಂದಿ ಮೇಲೂ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಈ ಎಲ್ಲ ಘಟನೆಗೆ ದೀಪಕ್ ಅವರೇ ಕಾರಣ. ಹೀಗಾಗಿ ಶಶಿಕಲಾ ಹಾಗೂ ಸಹೋದರನ ವಿರುದ್ಧ ದೂರು ದಾಖಲಿಸುತ್ತೇನೆ’ ಎಂದು ತಿಳಿಸಿದರು.

ಘಟನೆ ವಿವಾದ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ವರದಿ ಮಾಡಲು ಮುಂದಾದ ಮಾಧ್ಯಮ ಸಿಬ್ಬಂದಿಯನ್ನು ಪೊಲೀಸರು ತಡೆದರು. ಸ್ಥಳದಲ್ಲಿ ಬಿಗುವಿನ ವಾತವರಣ ಸೃಷ್ಟಿಯಾಗುತ್ತಿದ್ದಂತೆಯೇ, ಸ್ಥಳೀಯರು ಹಾಗೂ ಅವರ ವಾಹನಗಳನ್ನು ಮಾತ್ರ ಒಳಗೆ ಬಿಡಲಾಯಿತು. ಉಳಿದಂತೆ ಹೊರಗಿನವರು ಹಾಗೂ ಮಾಧ್ಯಮ ಸಿಬ್ಬಂದಿಯನ್ನು ಒಳಗೆ ಪ್ರವೇಶಿಸದಂತೆ ಪೊಲೀಸರು ತಡೆಹಿಡಿದರು.

ಜಯಲಲಿತಾ ನಿಧನದ ಬಳಿಕ ಕೋಟ್ಯಂತರ ಬೆಲೆಬಾಳುವ ಪೋಯೆಸ್‌ ಗಾರ್ಡನ್‌ಗೆ ಸಂಬಂಧಿಸಿದಂತೆ ಜಯಲಲಿತಾ ಅವರ  ಸಂಬಂಧಿಕರು ಮತ್ತು ಸ್ನೇಹಿತೆ ವಿ.ಕೆ.ಶಶಿಕಲಾ ಬಣದ ನಡುವೆ ಕಿತ್ತಾಟ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT