ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಸೆಮಿಫೈನಲ್‌ಗೆ ಭಾರತ ಲಗ್ಗೆ

7
ಮಿಂಚಿದ ಬೂಮ್ರಾ, ಭುವಿ; ಟೂರ್ನಿಯಿಂದ ಹೊರಬಿದ್ದ ದಕ್ಷಿಣ ಆಫ್ರಿಕಾ

ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಸೆಮಿಫೈನಲ್‌ಗೆ ಭಾರತ ಲಗ್ಗೆ

Published:
Updated:
ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ಸೆಮಿಫೈನಲ್‌ಗೆ ಭಾರತ ಲಗ್ಗೆ

ಲಂಡನ್: ಹಾಲಿ ಚಾಂಪಿಯನ್ ಭಾರತ ಕ್ರಿಕೆಟ್ ತಂಡವು ಭಾನುವಾರ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ನಾಲ್ಕರ ಘಟ್ಟಕ್ಕೆ ಪ್ರವೇಶಿಸಿತು.ಭಾರತ ತಂಡವು ಜಸ್‌ಪ್ರೀತ್ ಬೂಮ್ರಾ (28ಕ್ಕೆ2) ಮತ್ತು ಭುವನೇಶ್ವರ್ ಕುಮಾರ್(23ಕ್ಕೆ2) ಅವರ ಅಮೋಘ ಬೌಲಿಂಗ್ ಬಲದಿಂದ ಭಾರತ 8 ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ವಿರುದ್ಧ ಜಯಿಸಿತು. ಎಬಿ ಡಿವಿಲಿಯರ್ಸ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡವು ಟೂರ್ನಿಯಿಂದ ಹೊರಬಿದ್ದಿತು.ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ವಿರಾಟ್ ಕೊಹ್ಲಿಗೆ ಬೌಲರ್‌ಗಳು ನಿರಾಸೆ ಮಾಡಲಿಲ್ಲ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್‌ ಇಲ್ಲಿ ಇರಲಿಲ್ಲ. ಅಮೋಘವಾದ ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆಯಿಂದಾಗಿ ತಂಡವು ಗೆಲುವು ದಾಖಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 44.3 ಓವರ್‌ಗಳಲ್ಲಿ 191 ರನ್‌ ಗಳಿಸಿತು. ಈ ಸಾಧಾರಣ ಗುರಿಯನ್ನು  ಮುಟ್ಟಲು ವಿರಾಟ್ ಕೊಹ್ಲಿ ಬಳಗವು ತಾಳ್ಮೆಯಿಂದ ಆಡಿ 38 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 193 ರನ್‌ ಗಳಿಸಿತು.ಕಳೆದ ಪಂದ್ಯದಲ್ಲಿ ಶತಕ ಗಳಿಸಿದ್ದ ಶಿಖರ್ ಧವನ್ (78; 83ಎ, 12ಬೌಂ, 1ಸಿ) ಮತ್ತು ನಾಯಕ ವಿರಾಟ್ ಕೊಹ್ಲಿ (ಔಟಾಗದೆ 76; 101ಎ, 7ಬೌಂ, 1ಸಿ) ಅರ್ಧಶತಕ ಗಳಿಸಿದರು.ಪರಿಣಾಮಕಾರಿ ಬೌಲಿಂಗ್: ಬೌಲರ್‌ಗಳಿಗೆ ಹೆಚ್ಚು ನೆರವು ದೊರೆಯುತ್ತಿದ್ದ ಕೆನ್ನಿಂಗ್ಟನ್ ಓವಲ್ ಕ್ರೀಡಾಂಗಣದ ಪಿಚ್‌ನಲ್ಲಿ ಜಸ್‌ಪ್ರೀತ್ ಬೂಮ್ರಾ ಮತ್ತು ಭುವನೇಶ್ವರ್ ಕುಮಾರ್ ಮಿಂಚಿದರು.ದಕ್ಷಿಣ ಆಫ್ರಿಕಾ ತಂಡದ ಆರಂಭಿಕ ಜೋಡಿ ಕ್ವಿಂಟನ್ ಡಿ ಕಾಕ್ (53; 72ಎ, 4ಬೌಂ) ಮತ್ತು ಹಾಶೀಮ್ ಆಮ್ಲಾ (35; 54ಎ, 3ಬೌಂ 1ಸಿ) ಅವರು ಉತ್ತಮ ಆರಂಭ ನೀಡಿದರು. ಪವರ್‌ಪ್ಲೇನಲ್ಲಿ ಅವರ ಬೀಸಾಟದಿಂದ ತಂಡವು ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆ ಮೂಡಿತ್ತು. ಇವರ ಜೊತೆಯಾಟ ಮುರಿತಯಲು ನಾಲ್ವರು ಬೌಲರ್‌ಗಳು ನಡೆಸಿದ ಪ್ರಯತ್ನ ಸಫಲವಾಗಲಿಲ್ಲ.ಆದರೆ, 18ನೇ ಓವರ್‌ನಲ್ಲಿ ಆಫ್‌ಸ್ಪಿನ್ನರ್ ಅಶ್ವಿನ್ ಯಶಸ್ಸು ಸಾಧಿಸಿದರು.  ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಅವಕಾಶ ಪಡೆದಿದ್ದ ಆಶ್ವಿನ್ ಎಸೆತವನ್ನು ಹೊಡೆಯುವ ಪ್ರಯತ್ನದಲ್ಲಿ ವಿಕೆಟ್‌ಕೀಪರ್ ಮಹೇಂದ್ರಸಿಂಗ್ ದೋನಿಗೆ ಕ್ಯಾಚಿತ್ತರು.  76 ರನ್‌ಗಳ ಮೊದಲ ವಿಕೆಟ್‌ ಜೊತೆಯಾಟಕ್ಕೆ ತೆರೆಬಿತ್ತು.

ಏಳು ಓವರ್‌ಗಳ ನಂತರ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರು ಕ್ವಿಂಟನ್ ಡಿ ಕಾಕ್ ಅವರನ್ನು ಕ್ಲೀನ್ ಬೌಲ್ಡ್‌ ಮಾಡಿದರು.ಆ ನಂತರವೂ ಫಾಫ್ ಡು ಪ್ಲೆಸಿ (36 ರನ್) ಮತ್ತು ನಾಯಕ ಎ.ಬಿ. ಡಿವಿಲಿಯರ್ಸ್‌ (16 ರನ್) ಅವರು ನಿಧಾನವಾಗಿ ಇನಿಂಗ್ಸ್‌ ಬೆಳೆಸುವತ್ತ ಚಿತ್ತ ನೆಟ್ಟಿದ್ದರು. ಇಬ್ಬರ ನಡುವೆ 24 ರನ್‌ಗಳು ಸೇರಿದ್ದಾಗ ಹಾರ್ದಿಕ್ ಪಾಂಡ್ಯ ಅವರ ಅಮೋಘ ಫೀಲ್ಡಿಂಗ್ ಮತ್ತು ದೋನಿಯ ಕೈಚಳಕಕ್ಕೆ ಎ.ಬಿ. ಡಿವಿಲಿಯರ್ಸ್‌ ರನ್‌ಔಟ್ ಆದರು.  ಇದಾದ ನಂತರ ದಕ್ಷಿಣ ಆಫ್ರಿಕಾ ತಂಡದ ಪತನ ಆರಂಭವಾಯಿತು.ಕೇವಲ 1 ರನ್ ಗಳಿಸಿದ್ದ ಡೇವಿಡ್ ಮಿಲ್ಲರ್ ಅವರು ಬೂಮ್ರಾ ಮತ್ತು ಕೊಹ್ಲಿ ಉತ್ತಮ ಫೀಲ್ಡಿಂಗ್‌ನಲ್ಲಿ ರನ್‌ಔಟ್ ಅದರು. ಮಧ್ಯಮವೇಗಿ ಪಾಂಡ್ಯ ಬೌಲಿಂಗ್‌ನಲ್ಲಿ ಫಾಫ್ ವಿಕೆಟ್ ಹಾರಿತು.ನಂತರ ಜೆ.ಪಿ. ಡುಮಿನಿ (ಔಟಾಗದೆ 20) ಏಕಾಂಗಿ ಹೋರಾಟ ಮಾಡುವ ಯತ್ನ ಮಾಡಿದರು. ಆದರೆ ಇನ್ನೊಂದೆಡೆ ಯಾರ್ಕರ್ ಪರಿಣತ ಬೌಲರ್ ಜಸ್‌ಪ್ರೀತ್ ಅವರು 37ನೇ ಓವರ್‌ನಲ್ಲಿ ಕ್ರಿಸ್ ಮೊರಿಸ್ ಮತ್ತು 42ನೇ ಓವರ್‌ನಲ್ಲಿ ಫೆಲುಕ್ವಾಯೊ ಅವರ ವಿಕೆಟ್ ಕಬಳಿಸಿದರು.ಇನ್ನೊಂದು ಬದಿಯಲ್ಲಿ ತಮ್ಮ ಮೂರನೇ ಸ್ಪೆಲ್ ಆರಂಭಿಸಿದ್ದ  ಭುವನೇಶ್ವರ್ ಕುಮಾರ್ 43ನೇ ಓವರ್‌ನಲ್ಲಿ ಕಗಿಸೊ ರಬಾಡ ಮತ್ತು ಮಾರ್ನ್ ಮಾರ್ಕೆಲ್ ಅವರ ವಿಕೆಟ್ ಪಡೆದು ಮಿಂಚಿದರು. ಕೊನೆಯ ಬ್ಯಾಟ್ಸ್‌ಮನ್ ಇಮ್ರಾನ್ ತಾಹೀರ್ ಕೂಡ ರನ್‌ಔಟ್ ಇನಿಂಗ್ಸ್‌ಗೆ ತೆರೆಬಿತ್ತು.ತಾಳ್ಮೆಯ ಬ್ಯಾಟಿಂಗ್: ಹಸಿರು ಗರಿಕೆಗಳು ಇದ್ದ ಪಿಚ್‌ನಲ್ಲಿ ದಕ್ಷಿಣ ಆಫ್ರಿಕಾದ ಉತ್ತಮ ಬೌಲರ್‌ಗಳಿಗೆ ನೆರವು ಸಿಗುವ ಲಕ್ಷಣಗಳಿದ್ದವು. ಆದ್ದರಿಂದ ಭಾರತದ ಬ್ಯಾಟ್ಸ್‌ಮನ್‌ಗಳು ರನ್‌ ಗಳಿಸಲು ಅವಸರ ಪಡಲಿಲ್ಲ. ಸುಲಭದ ಮೊತ್ತವಿದ್ದರೂ ತಾಳ್ಮೆಯಿಂದ ಆಡಿ ಗುರಿ ಮುಟ್ಟಿದರು.ಟೂರ್ನಿಯ ಎರಡನೇ ಪಂದ್ಯದಲ್ಲಿ  324 ರನ್‌ ಗಳಿಸಿದ್ದ ಭಾರತ ತಂಡವು ಶ್ರೀಲಂಕಾ ಎದುರು ಸೋತಿತ್ತು. ಈ ಪಂದ್ಯದಲ್ಲ ಸೋತಿದ್ದರೆ ಟೂರ್ನಿಯಿಂದ ಹೊರಬೀಳುವ ಅಪಾಯವಿತ್ತು.ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (12 ರನ್) ಅವರನ್ನು ಆರನೇ ಓವರ್‌ನಲ್ಲಿ ಪೆವಿಲಿಯನ್‌ಗೆ ಕಳಿಸಿದ ಮಾರ್ನ್ ಮಾರ್ಕೆಲ್ ಸಂಭ್ರಮಿಸಿದರು. ಅದರ ನಂತರ ದಕ್ಷಿಣ ಆಫ್ರಿಕಾ ಬೌಲರ್‌ಗಳು ಮೆರೆದಾಡಲು ದೆಹಲಿ ಜೋಡಿ ಶಿಖರ್ ಮತ್ತು ಕೊಹ್ಲಿ ಬಿಡಲಿಲ್ಲ.31ನೇ ಓವರ್‌ನವರೆಗೂ ಈ ಜೋಡಿಯು ಬೌಲರ್‌ಗಳ ಬೆವರಿಳಿಸಿತು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ 128 ರನ್‌ಗಳನ್ನು ಸೇರಿಸಿತು.

ಅದರಲ್ಲೂ ಕೊಹ್ಲಿ ನಿಧಾನಗತಿಯಲ್ಲಿ ಬ್ಯಾಟ್ ಮಾಡಿದರು. ಹಾಶೀಮ್ ಅಮ್ಲಾ ಅವರಿಂದ ಒಂದು ಬಾರಿ ಜೀವದಾನ ಪಡೆದ ಅವರು ತಂಡಕ್ಕೆ ರನ್‌ಗಳ ಕಾಣಿಕೆ ನೀಡಿದರು.ಸ್ಪಿನ್ನರ್ ತಾಹೀರ್ ಎಸೆತದಲ್ಲಿ ಧವನ್ ಔಟಾದ ನಂತರ ಬಂದ ಅನುಭವಿ ಆಲ್‌ರೌಂಡರ್ ಯುವರಾಜ್ ಸಿಂಗ್ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್‌ ಬಾರಿಸಿ ಪ್ರೇಕ್ಷಕರನ್ನು ರಂಜಿಸಿದರು. 23 ರನ್‌ ಗಳಿಸಿ ಔಟಾಗದೆ ಉಳಿದ ಯುವರಾಜ್ ವಿಜಯದ ಹೊಡೆತ ಬಾರಿಸಿ ಮಿಂಚಿದರು.*

ಮಲ್ಯ ಅವರನ್ನು ಹೀಯಾಳಿಸಿದ ಪ್ರೇಕ್ಷಕರು

ಭಾರತ–ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ನೋಡಲು ಕ್ರೀಡಾಂಗಣಕ್ಕೆ ಪ್ರವೇಶಿಸಿದ ಉದ್ಯಮಿ ವಿಜಯ್‌ ಮಲ್ಯ ಅವರನ್ನು ಪ್ರೇಕ್ಷಕರು ಹೀಯಾಳಿಸಿದರು.

ವ್ಯಕ್ತಿಯೊಬ್ಬರೊಂದಿಗೆ ಸರ್‌ ಜಾಕ್‌ ಹೋಬ್ಸ್ ಗೇಟ್ ಮೂಲಕ ಮಲ್ಯ ಒಳಗೆ ಬರುತ್ತಿದ್ದಂತೆ ಕೆಲವು ಪ್ರೇಕ್ಷಕರು ‘ಕಳ್ಳ..ಕಳ್ಳ...’ ಎಂದು ಕೂಗಿದರು. ಪ್ರೇಕ್ಷಕರೊಬ್ಬರು ಮಲ್ಯ ಬರುವುದನ್ನು ವಿಡಿಯೋ ಮಾಡಿದರು. ಅಷ್ಟರಲ್ಲಿ ಇನ್ನು ಕೆಲವರು ‘ಅಗೋ ಅಲ್ಲಿ ನೋಡು, ಒಳಗೆ ಕಳ್ಳ ಬರುತ್ತಿದ್ದಾನೆ...ಕಳ್ಳ...’ ಎಂದರು.ಭಾರತದ ವಿವಿಧ ಬ್ಯಾಂಕ್‌ಗಳಿಗೆ ₹ 9 ಸಾವಿರ ಕೋಟಿಯಷ್ಟು ಮೊತ್ತದ ಸಾಲ ಬಾಕಿ ಉಳಿಸಿಕೊಂಡಿರುವ ಮಲ್ಯ ಕಳೆದ ವರ್ಷ ದೇಶ ಬಿಟ್ಟು ಹೋಗಿದ್ದರು. ಇತ್ತೀಚೆಗೆ ವಿರಾಟ್ ಕೊಹ್ಲಿ ಫೌಂಡೇಷನ್ ಏರ್ಪಡಿಸಿದ್ದ ಭೋಜನ ಕೂಟಕ್ಕೆ ಬಂದಿದ್ದ ಮಲ್ಯ ಅವರಿಂದ ಭಾರತ ತಂಡದ ಆಟಗಾರರು ದೂರ ಉಳಿದಿದ್ದರು.

* * *

ದಕ್ಷಿಣ ಆಫ್ರಿಕಾ

191  (44.3  ಓವರ್‌ಗಳಲ್ಲಿ)

ಕ್ವಿಂಟನ್ ಡಿ ಕಾಕ್ ಬಿ ರವೀಂದ್ರ ಜಡೇಜ  53

ಹಾಶೀಮ್ ಆಮ್ಲಾ ಸಿ ಮಹೇಂದ್ರಸಿಂಗ್ ದೋನಿ ಬಿ ಅಶ್ವಿನ್  35

ಫಾಫ್ ಡು ಪ್ಲೆಸಿ ಬಿ ಹಾರ್ದಿಕ್ ಪಾಂಡ್ಯ  36

ಎಬಿ ಡಿವಿಲಿಯರ್ಸ್ ರನ್‌ಔಟ್ (ಪಾಂಡ್ಯ/ದೋನಿ)  16

ಡೇವಿಡ್ ಮಿಲ್ಲರ್ ರನ್‌ಔಟ್ (ಬೂಮ್ರಾ/ಕೊಹ್ಲಿ)  01

ಜೆ.ಪಿ. ಡುಮಿನಿ ಔಟಾಗದೆ  20

ಕ್ರಿಸ್ ಮೊರಿಸ್ ಸಿ ಭುವನೇಶ್ವರ್ ಕುಮಾರ್ ಬಿ ಜಸ್‌ಪ್ರೀತ್ ಬೂಮ್ರಾ  04

ಆ್ಯಂಡಿ ಪೆಹ್ಲುಕುವಾಯೊ ಎಲ್‌ಬಿಡಬ್ಲ್ಯು ಬಿ ಜಸ್‌ಪ್ರೀತ್ ಬೂಮ್ರಾ  04

ಕಗಿಸೊ ರಬಾಡ ಸಿ ಮಹೇಂದ್ರಸಿಂಗ್ ದೋನಿ ಬಿ ಭುವನೇಶ್ವರ್ ಕುಮಾರ್  05

ಮಾರ್ನ್ ಮಾರ್ಕೆಲ್ ಸಿ ವಿರಾಟ್ ಕೊಹ್ಲಿ ಬಿ ಭುವನೇಶ್ವರ್ ಕುಮಾರ್  00

ಇಮ್ರಾನ್ ತಾಹೀರ್ ರನ್‌ಔಟ್ (ಕೊಹ್ಲಿ/ದೋನಿ)  01

ಇತರೆ: (ಲೆಗ್‌ಬೈ 6, ವೈಡ್ 10 ) 16

ವಿಕೆಟ್‌ ಪತನ:  1–76 (ಆಮ್ಲಾ; 17.3), 2–116 (ಡಿ ಕಾಕ್; 24.2), 3–140 (ಡಿವಿಲಿಯರ್ಸ್; 28.2), 4–142  (ಮಿಲ್ಲರ್; 29.1), 5–157 (ಡು ಪ್ಲೆಸಿ; 33.3), 6–167 (ಮಾರಿಸ್; 36.4), 7–178 (ಆ್ಯಂಡಿ; 40.1), 8–184 (ರಬಾಡ; 42.2), 9–184 (ಮಾರ್ಕೆಲ್; 42.3), 10–191 (ಇಮ್ರಾನ್; 44.3).

ಬೌಲಿಂಗ್‌:  ಭುವನೇಶ್ವರ್ ಕುಮಾರ್ 7.3-0-23-2 (ವೈಡ್ 2), ಜಸ್‌ಪ್ರೀತ್ ಬೂಮ್ರಾ  8–0–28–2 (ವೈಡ್ 2), ಆರ್. ಆಶ್ವಿನ್ 9–0–43–1 (ವೈಡ್ 3), ಹಾರ್ದಿಕ್ ಪಾಂಡ್ಯ 10–0–52–1 (ವೈಡ್ 3), ರವೀಂದ್ರ ಜಡೇಜ 10–0–39–1.ಭಾರತ

2ಕ್ಕೆ  193  (38 ಓವರ್‌ಗಳಲ್ಲಿ)

ರೋಹಿತ್ ಶರ್ಮಾ ಸಿ ಕ್ವಿಂಟನ್ ಡಿ ಕಾಕ್ ಬಿ ಮಾರ್ನ್ ಮಾರ್ಕೆಲ್  12

ಶಿಖರ್ ಧವನ್ ಸಿ ಫಾಫ್ ಡು ಪ್ಲೆಸಿ ಬಿ ಇಮ್ರಾನ್ ತಾಹೀರ್  78

ವಿರಾಟ್ ಕೊಹ್ಲಿ ಔಟಾಗದೆ  76

ಯುವರಾಜ್ ಸಿಂಗ್ ಔಟಾಗದೆ  23

ಇತರೆ: (ಲೆಗ್‌ಬೈ 2, ವೈಡ್ 1, ನೋಬಾಲ್ 1)  04

ವಿಕೆಟ್‌ ಪತನ:   23–1 (ರೋಹಿತ್; 5.3), 2–151 (ಧವನ್: 30.1)

ಬೌಲಿಂಗ್‌: ಕಗಿಸೊ ರಬಾಡ 9–2–34–0, ಮಾರ್ನ್ ಮಾರ್ಕೆಲ್ 7–1, 38–1 (ನೋಬಾಲ್ 1), ಆ್ಯಂಡಿ ಫೆಲುಕ್ವಾಯೊ 5–0–25–0, ಕ್ರಿಸ್ ಮಾರಿಸ್ 8–0–40–1 (ವೈಡ್ 1), ಇಮ್ರಾನ್ ತಾಹೀರ್ 6–0–37–1, ಜೆ.ಪಿ. ಡುಮಿನಿ 3–0–17–0.ಫಲಿತಾಂಶ: ಭಾರತಕ್ಕೆ 8 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಜಸ್‌ಪ್ರೀತ್ ಬೂಮ್ರಾ (ಭಾರತ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry