ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನೇಹಿತ ಗ್ರೀನ್‌ ಹಿರಿಯ ಸಚಿವ

ಸಚಿವ ಸಂಪುಟ ರಚಿಸಿದ ಬ್ರಿಟನ್‌ ಪ್ರಧಾನಿ ತೆರೆಸಾ ಮೇ
Last Updated 11 ಜೂನ್ 2017, 19:30 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್‌ ಪ್ರಧಾನಿ ತೆರೆಸಾ ಮೇ ಅವರು ಭಾನುವಾರ ಸಚಿವ ಸಂಪುಟವನ್ನು ರಚಿಸಿದ್ದು, ತಮ್ಮ ದೀರ್ಘಕಾಲದ ಮಿತ್ರ ಡೇಮಿಯನ್‌ ಗ್ರೀನ್‌ ಅವರನ್ನು ಹಿರಿಯ ಸಚಿವರಾಗಿ ನೇಮಕ ಮಾಡಿದ್ದಾರೆ. ಈ ಸ್ಥಾನವು ಉಪಪ್ರಧಾನಿ ಹುದ್ದೆಗೆ ಸಮ.

ಉಳಿದಂತೆ, ಹಿಂದಿನ ಸಂಪುಟದಲ್ಲಿದ್ದ ಐವರು ಸಚಿವರನ್ನು ಮುಂದುವರಿಸುವುದಾಗಿ ಹೇಳಿದ್ದ ಅವರು ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ.

ಡೆಮಾಕ್ರಟಿಕ್‌ ಯೂನಿಯನಿಸ್ಟ್ ಪಕ್ಷ ದ (ಡಿಯುಪಿ) ಬೆಂಬಲದೊಂದಿಗೆ ಸರ್ಕಾರ ರಚನೆ ಸಂಬಂಧ ‘ಸ್ಥೂಲ ಒಪ್ಪಂದ’ಕ್ಕೆ ತೆರೆಸಾ ಮುಂದಾಗಿದ್ದಾರೆ.

ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದ ತೆರೆಸಾ ಅವರು ಸರ್ಕಾರ ರಚನೆ ನಿಟ್ಟಿನಲ್ಲಿ ಮೈತ್ರಿ ಮಾರ್ಗದ ಮೂಲಕ ಮುಂದಿನ ಹೆಜ್ಜೆ ಇಟ್ಟಿದ್ದಾರೆ.

ಇದೇ ವೇಳೆ ಜರ್ಮನಿ ಛಾನ್ಸೆಲರ್‌ ಏಂಜೆಲಾ ಮರ್ಕೆಲ್‌ ಶನಿವಾರ ಅವರಿಗೆ ದೂರವಾಣಿ ಕರೆಮಾಡಿ ಮಾತನಾಡಿದ ತೆರೆಸಾ, ಐರೋಪ್ಯ ಒಕ್ಕೂಟದಿಂದ ಹೊರಬರುವ (ಬ್ರೆಕ್ಸಿಟ್‌) ಕುರಿತಂತೆ ಕೆಲ ವಾರಗಳಲ್ಲಿ ಮತ್ತೆ ಪ್ರಕ್ರಿಯೆ ಆರಂಭಿಸುವುದಾಗಿ ಭರವಸೆ ನೀಡಿದ್ದಾರೆ. ಚುನಾವಣೆ ಬಳಿಕ ಬ್ರೆಕ್ಸಿಟ್‌ ಕುರಿತ ಬ್ರಿಟನ್‌ನ ಬದ್ಧತೆ ಬಗ್ಗೆ ಹಲವರು ಅನುಮಾನ ವ್ಯಕ್ತಪಡಿಸಿದ್ದರು.

ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ತೆರೆಸಾ ಮೇ ಅವರ ಕನ್ಸರ್ವೇಟಿವ್‌ ಪಕ್ಷವು ನಿರೀಕ್ಷಿತ ಸ್ಥಾನಗಳನ್ನು ಪಡೆಯುವಲ್ಲಿ ವಿಫಲವಾಗಿತ್ತು. 10 ಸಂಸದರನ್ನು ಹೊಂದಿರುವ ಉತ್ತರ ಐರ್ಲೆಂಡ್‌ನ ಡಿಯುಪಿಯು ಬೆಂಬಲಿಸಿದರೆ ಸರ್ಕಾರ ರಚನೆಯ ಹಾದಿ ಸುಗಮವಾಗಲಿದೆ.

ಕನ್ಸರ್ವೇಟಿವ್‌ ಜತೆಗೂಡಿ ಸರ್ಕಾರ ರಚನೆ ಸಂಬಂಧ ‘ಸ್ಥೂಲ ಒಪ್ಪಂದ’ ರಚನೆಗೆ ಡಿಯುಪಿ ಒಪ್ಪಿಗೆ ಸೂಚಿಸಿದೆ ಎಂದು ತೆರೆಸಾ ವಕ್ತಾರರು ತಿಳಿಸಿದ್ದಾರೆ.
ಡಿಯುಪಿ ಜತೆಗೆ ಅಧಿಕೃತ ಮೈತ್ರಿ ಮೂಲಕ ಸರ್ಕಾರ ನಡೆಸುತ್ತಿಲ್ಲ. ಅಲ್ಪಮತದ ಸರ್ಕಾರಕ್ಕೆ ಡಿಯುಪಿಯು ವಿಶ್ವಾಸದ ಮೂಲಕ ಬೆಂಬಲ ನೀಡುತ್ತಿದೆ ಎಂದು ಅವರು ತಿಳಿಸಿದರು.

ಪುಸ್ತಕ ತಿಂದ ಲೇಖಕ ಮ್ಯಾಥ್ಯೂ
ಲಂಡನ್‌(ಪಿಟಿಐ):
ಚುನಾವಣೆಯಲ್ಲಿ ವಿರೋಧ ಪಕ್ಷ ಲೇಬರ್‌ ಪಾರ್ಟಿ ಶೇ 38ಕ್ಕಿಂತಲೂ  ಕಡಿಮೆ ಮತ ಪಡೆಯಲಿದೆ ಎಂದು ಭವಿಷ್ಯ ನುಡಿದಿದ್ದ ಬ್ರಿಟಿಷ್‌ ಲೇಖಕ ಮ್ಯಾಥ್ಯೂ ಗುಡ್ವಿನ್‌ ಅವರು ಟಿ.ವಿ ವಾಹಿನಿಯ ನೇರ ಪ್ರಸಾರ ಕಾರ್ಯಕ್ರಮದಲ್ಲಿ ತಮ್ಮ ಪುಸ್ತಕವನ್ನು ತಿಂದಿದ್ದಾರೆ.  ‘ಜೆರೆಮಿ ಕಾರ್ಬಿನ್‌ ನೇತೃತ್ವದ ಲೇಬರ್‌ ಪಾರ್ಟಿಗೆ ಚುನಾವಣೆಯಲ್ಲಿ ಶೇ38ಕ್ಕಿಂತ ಹೆಚ್ಚು ಮತ ಲಭಿಸದು. ಒಂದು ಮೇಳೆ ಅಧಿಕ ಮತ ಗಳಿಸಿದರೆ ನಾನು ನನ್ನ ಬ್ರೆಕ್ಸಿಟ್‌ ಕುರಿತ ಪುಸ್ತಕವನ್ನು ತಿನ್ನುತ್ತೇನೆ’ ಎಂದು ಮ್ಯಾಥ್ಯೂ ಅವರು ಕಳೆದ ತಿಂಗಳು ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT