7

ಮೌಲ್ಯ ಆಧರಿತ ಖರೀದಿಗೆ ಆದ್ಯತೆ

ಕೆ. ಜಿ. ಕೃಪಾಲ್
Published:
Updated:

ಷೇರುಪೇಟೆ ಸಂವೇದಿ ಸೂಚ್ಯಂಕ ಈ ವಾರವೂ ಸಾರ್ವಕಾಲಿಕ ದಾಖಲೆ ಮಟ್ಟ ತಲುಪಿತು. ಮಂಗಳವಾರ 31,430 ಅಂಶಗಳ ದಾಖಲೆ ನಿರ್ಮಿಸಿದೆ.  ಷೇರುಪೇಟೆಯಲ್ಲಿ ಸುದ್ದಿ ಸಮಾಚಾರಗಳು, ಬೆಳವಣಿಗೆಗಳು ಮಿಂಚಿನ ವೇಗದಲ್ಲಿ ಪ್ರಭಾವ ಬೀರುತ್ತವೆ. ಸೋಮವಾರ ಮಧ್ಯಂತರ ಚಟುವಟಿಕೆಯಲ್ಲಿ ಟೈಟಾನ್ ಕಂಪೆನಿ ಷೇರು ₹566 ರ ವಾರ್ಷಿಕ ಗರಿಷ್ಠಕ್ಕೆ ಜಿಗಿಯಿತು. ಅಂದರೆ ಒಂದೇ ದಿನ ಸುಮಾರು ₹94 ರಷ್ಟು ಏರಿಕೆ ದಾಖಲಿಸಿದೆ.  ಹಾಗೆಯೇ ಬ್ರಿಟಾನಿಯಾ ಇಂಡಸ್ಟ್ರೀಸ್  ದಿನದ ಆರಂಭಿಕ ಕ್ಷಣಗಳಲ್ಲಿ ₹3,575ರ ಸಮೀಪದಿಂದ ₹3,711 ರ ಸಮೀಪಕ್ಕೆ ಜಿಗಿಯಿತು. ಒಂದು ಕಂಪೆನಿ ಚಿನ್ನದ ಬಿಸ್ಕತ್ತನ್ನು ಮತ್ತೊಂದು ತಿನ್ನುವ ಬಿಸ್ಕತ್ತನ್ನು ಒದಗಿಸುತ್ತದೆ.   ಈ ಎರಡೂ ಪದಾರ್ಥಗಳ ಮೇಲೆ ಜಿಎಸ್‌ಟಿ ದರ ನಿಗದಿಯಾಗಿರುವುದೇ ಗಮನಾರ್ಹ ಏರಿಕೆಗೆ ಪ್ರಮುಖ ಕಾರಣ.  ಒಂದರ ಮೇಲೆ ಶೇ 3 ರಷ್ಟಾದರೆ ಮತ್ತೊಂದರ  ಮೇಲೆ ಶೇ18 ನಿಗದಿ ಪಡಿಸಲಾಗಿದೆ.  ಜಿಎಸ್‌ಟಿ ದರವು  ಕಡಿಮೆ ಇರುವುದು ಕಂಪೆನಿಗಳ ಲಾಭಗಳಿಕೆಗೆ ಪ್ರೋತ್ಸಾಹದಾಯಕ ಎಂಬ ಅಂಶವು ಮುಂಚೂಣಿಯಲ್ಲಿದೆ.  ಆದರೆ ಮಂಗಳವಾರ ಈ ಷೇರಿನ ಬೆಲೆಗಳು ಸುಮಾರು 30 ರೂಪಾಯಿಗಳಷ್ಟು ಟೈಟಾನ್ ಕಂಪೆನಿ ಕುಸಿತ ಕಂಡರೆ ಪಿ ಸಿ ಜುವೆಲ್ಲರ್ಸ್ ಸಹ  ₹28 ರೂಪಾಯಿಗಳಷ್ಟು ಕುಸಿದು ನಂತರ ಸ್ವಲ್ಪ ಚೇತರಿಕೆ ಕಂಡವು.

ಮಂಗಳವಾರ ಮುಂಜಾನೆ 10.30 ರವರೆಗೂ ಸ್ವಲ್ಪ ಏರಿಕೆಯಿಂದ ₹202ಸಮೀಪ ವಹಿವಾಟಾಗುತ್ತಿದ್ದ ಫಾರ್ಮಾ ವಲಯದ ಬ್ಲಿಸ್‌ (Bliss G V S Pharma) ಜಿವಿಎಸ್ ಫಾರ್ಮಾ  ಕಂಪೆನಿಯ ಷೇರಿನ ಬೆಲೆಯೂ ₹160.70ಕ್ಕೆ ಏಕಮುಖವಾಗಿ ಕುಸಿಯಿತು. ಇದಕ್ಕೆ ಕಾರಣವೇ ತಿಳಿಯದಾಯಿತು.  ಆದರೆ ದಿನದ ಅಂತ್ಯದಲ್ಲಿ ಕಂಪೆನಿಯು ಸಮಜಾಯಿಷಿ ನೀಡಿ ಯಾವುದೇ ಮಹತ್ತರವಾದ ಬೆಳವಣಿಗೆಯಿರದೆ ಎಲ್ಲವೂ ಸಹಜಮಯವಾಗಿದೆ ಎಂದಿದೆ.   ಆದರೆ ಷೇರಿನ ಬೆಲೆ ಮಾತ್ರ ದಿನದ ಕನಿಷ್ಠ ಆವರಣ ಮಿತಿಯಲ್ಲಿತ್ತು.  ಬ್ಲಿಸ್‌  ಜಿವಿ ಎಸ್ ಫಾರ್ಮಾ ಕಂಪೆನಿಯ ಷೇರಿನ ಬೆಲೆಯು ಬುಧವಾರ ಆರಂಭಿಕ ಕ್ಷಣಗಳಲ್ಲಿ ₹129ರ ಸಮೀಪಕ್ಕೆ ಕುಸಿದು ನಂತರ ಚೇತರಿಕೆಯಿಂದ ₹173 ರವರೆಗೂ ಏರಿಕೆ ಕಂಡು ₹169 ರ ಸಮೀಪ ಕೊನೆಗೊಂಡಿದೆ.ಫಾರ್ಮಾ ವಲಯದ ಕ್ಯಾಡಿಲ್ಲ ಹೆಲ್ತ್ ಕೇರ್, ಅಮೆರಿಕೆಗೆ ರಫ್ತು ಮಾಡಬೇಕಾದ ಮೋರಯಾ ಘಟಕದ ಮಾತ್ರೆಗಳ ಉತ್ಪಾದನೆ ಒಂದಕ್ಕೆ  ಅಮೆರಿಕದ ಎಫ್‌ಡಿಎ  ಸಮ್ಮತಿಸಿದೆ ಎಂಬ ಕಾರಣಕ್ಕೆ ಷೇರಿನ ಬೆಲೆ ₹490 ರ ಸಮೀಪದಿಂದ ₹542 ರವರೆಗೂ ಏರಿಕೆ ಪಡೆದು ನಂತರ ₹532 ರ ಸಮೀಪ ಕೊನೆಗೊಂಡಿದೆ.  ಅಂದರೆ ಈ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ₹417 ರ ಸಮೀಪದಿಂದ ₹548 ರವರೆಗೂ ಜಿಗಿತ ಕಂಡಿರುವುದು ಸುಮಾರು ಶೇ25 ಕ್ಕೂ  ಹೆಚ್ಚಿನ ಏರಿಕೆ ಗಳಿಸಿದಂತಾಗಿದೆ.  ಇದು ಮೌಲ್ಯಾಧಾರಿತ ಖರೀದಿಸುವಿಕೆಯ ಮಹತ್ವವಾಗಿದೆ. 

ಬಹಳ ದಿನಗಳ ನಂತರ ಫಾರ್ಮಾ ವಲಯದ ಕಂಪೆನಿಗಳಲ್ಲಿ  ಚೇತರಿಕೆ ಕಂಡಿದೆ.  ಬಯೋಕಾನ್ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ ₹885 ರಿಂದ ₹1029 ರವರೆಗೂ ಏರಿಕೆ ಕಂಡಿದೆ.  ಅಂದರೆ ಪ್ರತಿ ಷೇರಿಗೆ ಎರಡರಂತೆ ಬೋನಸ್ ಷೇರು ಪ್ರಕಟಿಸಿದ ನಂತರ ₹1,188 ರವರೆಗೂ ಏರಿಕೆ ಕಂಡಿದ್ದ ಈ ಕಂಪೆನಿ ಷೇರು ₹885 ಕುಸಿದು  ಶರವೇಗದಲ್ಲಿ ಚೇತರಿಕೆ ಕಂಡಿರುವುದು ಪೇಟೆ ಒದಗಿಸಬಹುದಾದ ಅವಕಾಶಗಳನ್ನು ತಿಳಿಸುತ್ತದೆ.  ಬಹಳಷ್ಟು ಕುಸಿತ ಕಂಡಿದ್ದಂತಹ ಸಿಪ್ಲಾ ಕಂಪೆನಿಯ ಷೇರು ಸಹ ಒಂದು ತಿಂಗಳಲ್ಲಿ ₹479 ರ ಸಮೀಪದಿಂದ ₹555 ರವರೆಗೂ ಏರಿಕೆ ಕಂಡಿರುವುದು,  ಡಾ. ರೆಡ್ಡಿಸ್ ಲ್ಯಾಬೊರೇಟರೀಸ್ ಷೇರು ₹2,382 ರ ಸಮೀಪದಿಂದ ₹2,664 ರವರೆಗೂ ಚೇತರಿಕೆ ಕಂಡಿರುವುದು–  ಬೆಲೆಗಳು ಕುಸಿತದಲ್ಲಿದ್ದಾಗ ಖರೀದಿಸಿದರೆ ಯಾವ ಮಟ್ಟದ ಲಾಭದ ಇಳುವರಿಯನ್ನು ಪಡೆಯಬಹುದು ಎಂಬುದನ್ನು ತೋರಿಸುತ್ತದೆ.

ಈ ತಿಂಗಳ 19 ರಿಂದ ಸಾರ್ವಜನಿಕ ವಲಯದ ಗೆಲ್ ಇಂಡಿಯಾ ಷೇರು ಸಂವೇದಿ ಸೂಚ್ಯಂಕದಿಂದ ಹೊರ ಬರಲಿರುವ ಸುದ್ದಿಯು ಈ ಷೇರಿನ ಬೆಲೆಯನ್ನು ₹380 ರ ಸಮೀಪಕ್ಕೆ ಕುಸಿಯುವಂತೆ ಮಾಡಿದೆ.  ಈ ಕಂಪೆನಿಯು ಪ್ರತಿ ಷೇರಿಗೆ ₹2.70 ರ ಲಾಭಾಂಶ ಪ್ರಕಟಿಸಿದ್ದು, ನಿಗದಿತ ದಿನ ಪ್ರಕಟವಾಗಬೇಕಾಗಿದೆ. 

ಜೀವ ವಿಮಾ ಕಾರ್ಪೊರೇಷನ್‌ನ ಮುಖ್ಯಸ್ಥರು ವ್ಯಕ್ತಪಡಿಸಿದ ವಿಚಾರವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಅತ್ಯಗತ್ಯ. ಅವರ ಪ್ರಕಾರ ಪೇಟೆಗಳು ಕುಸಿತದಲ್ಲಿದ್ದಾಗಲಾಗಲಿ ಅಥವಾ ಏರಿಕೆಯಲ್ಲಿರುವುದಾಗಲಿ ಎರಡೂ ಸಂದರ್ಭಗಳು ಉತ್ತಮ ಅವಕಾಶ ಕಲ್ಪಿಸಿಕೊಡುತ್ತವೆ. ಕುಸಿತದಲ್ಲಿದ್ದಾಗ ಉತ್ತಮ ಕಂಪೆನಿಗಳ ಷೇರುಗಳನ್ನು ಖರೀದಿಸಲು ಅವಕಾಶ. ಏರಿಕೆಯಲ್ಲಿದ್ದಾಗ ಲಾಭದ ನಗದೀಕರಣ ಮಾಡಿಕೊಳ್ಳಲು ಅವಕಾಶ.   ಇದು ವಿಶೇಷವಾಗಿ ಇಂದಿನ ದಿನಗಳಲ್ಲಿ ಹೂಡಿಕೆದಾರರು ಅಳವಡಿಸಿಕೊಳ್ಳಬೇಕಾದ ಸಿದ್ಧಾಂತ.ಒಟ್ಟಾರೆ ಕೇವಲ ಹನ್ನೊಂದು ಅಂಶಗಳ ಹಾನಿಗೊಳಗಾದ ಸಂವೇದಿ ಸೂಚ್ಯಂಕ ಸ್ಥಿರತೆ ಕಂಡುಕೊಂಡರೆ, ಮಧ್ಯಮ ಶ್ರೇಣಿ ಸೂಚ್ಯಂಕ 72 ಅಂಶಗಳ ಮತ್ತು ಕೆಳಮಧ್ಯಮ ಶ್ರೇಣಿ ಸೂಚ್ಯಂಕ 238 ಅಂಶಗಳ ಏರಿಕೆ ಕಂಡುಕೊಂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ₹601 ಕೋಟಿ ಹಣ ಹೂಡಿಕೆ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ₹883 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಅಂದರೆ ಈ ವಿತ್ತೀಯ ಸಂಸ್ಥೆಗಳು  ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಷೇರುಗಳತ್ತ ಹೆಚ್ಚು ಒಲವು ತೋರಿವೆ ಎಂದಾಯಿತು.  ಪೇಟೆಯ ಬಂಡವಾಳ ಮೌಲ್ಯವು ₹126.28 ಲಕ್ಷ ಕೋಟಿಗೆ ಇಳಿದಿದೆ.ಹೊಸ ಸಮೂಹ: ಮುಂಬೈ ಷೇರು ವಿನಿಮಯ ಕೇಂದ್ರದ ವಿಚಕ್ಷಣಾ ಕಾರ್ಯದಲ್ಲಿ, ಹೂಡಿಕೆದಾರರ  ಹಿತರಕ್ಷಣೆಯ ದೃಷ್ಟಿಯಿಂದ ಷೇರುಗಳನ್ನು ಟ್ರೇಡ್ ಟು ಟ್ರೇಡ್ ಗುಂಪಿಗೆ ವರ್ಗಾಯಿಸುವುದು, ಅವರ್ಣಮಿತಿಯನ್ನು ನಿಯಂತ್ರಿಸುವುದು, ಇವುಗಳಲ್ಲದೆ ಗ್ರೇಡೆಡ್ ಸರ್ವೇಲನ್ಸ್ ಕ್ರಮ ಗಳನ್ನು ಅಳವಡಿಸಿಕೊಂಡಿದೆ.  

ಇಷ್ಟೆಲ್ಲಾ ಇದ್ದರೂ ಅನೇಕ ಕಂಪೆನಿಗಳ ಷೇರುಗಳ ಬೆಲೆಗಳು  ಯಾವುದೇ  ಕಾರ್ಪೊರೇಟ್ ಬೆಳವಣಿಗೆಗಳಿಲ್ಲದೆ, ತಮ್ಮ ಆರ್ಥಿಕ ಸಾಧನೆಗೆ ಸಂಬಂಧವಿಲ್ಲದ ರೀತಿ ಅಂದರೆ ಮೂಲಭೂತ ಸಂಗತಿಗಳಾದ ಪ್ರತಿ ಷೇರಿನ ಗಳಿಕೆ, ಬೆಲೆ ಗಳಿಕೆ ಅನುಪಾತ, ಷೇರಿನ ಪುಸ್ತಕ ಮೌಲ್ಯಗಳಿಗೆ ಸಂಬಂಧವಿಲ್ಲದ ರೀತಿ ಷೇರಿನ ದರ  ಏರಿಕೆ ಮತ್ತು ಅಗಾಧ ಪ್ರಮಾಣದ ವಹಿವಾಟಿನ ಗಾತ್ರ ಕಾಣುವಂತಹ ಷೇರುಗಳ ಮೇಲೆ ವಿಶೇಷ ಗಮನಹರಿಸುವ ಸಲುವಾಗಿ  ಒಂದು ಹೊಸ ಸಮೂಹವನ್ನು ‘ಎಸ್ + ಫ್ರೇಮ್ ವರ್ಕ್’ ರಚಿಸಿ ಜೂನ್ 14 ರಿಂದ ಜಾರಿಗೊಳಿಸಲಿದೆ.  ಷೇರುಗಳ ವಹಿವಾಟು ನಡೆಸುವಾಗ ವಿಶೇಷ ಎಚ್ಚರಿಕೆ ವಹಿಸಿ ಯೋಗ್ಯತೆ ಆಧಾರದಮೇಲೆ ನಡೆಸಬೇಕೆಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.ವಾರದ ವಿಶೇಷ

ಸಾಮಾನ್ಯವಾಗಿ ಒಂದು ಕಂಪೆನಿಯ ಷೇರು ಒಂದು ಕಾರಣಕ್ಕೆ ಲಾಭ ಗಳಿಸಿಕೊಟ್ಟಲ್ಲಿ ಮತ್ತೊಂದು ಕಂಪೆನಿಯು ಅದೇ ಕಾರಣಕ್ಕೆ ಲಾಭ ಗಳಿಸಿಕೊಡ ಬಹುದೆಂಬ ಚಿಂತನೆ ಹೂಡಿಕೆದಾರ ರಲ್ಲಿರುತ್ತದೆ.  ಒಂದು ಕಂಪೆನಿ ಬೋನಸ್ ಷೇರು ಪ್ರಕಟಿಸಿ ಈ ಕಾರಣ ಏರಿಕೆ ಪ್ರದರ್ಶಿಸಿದರೆ ಮತ್ತೊಂದು ಕಂಪೆನಿ ಬೋನಸ್ ಷೇರು ಪ್ರಕಟಿಸಿದಾಗ ಅದೇ ಕಾರಣಕ್ಕೆ ಲಾಭ ಗಳಿಸಿಕೊಡಬಹುದೆಂದು ಭಾವಿಸುವುದು ಸರಿಯಲ್ಲ. 

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಕಂಪೆನಿ ಇತ್ತೀಚೆಗಷ್ಟೇ ತನ್ನ ಷೇರುದಾರರಿಂದ ಪ್ರತಿ ಷೇರಿಗೆ ₹2,850 ರಂತೆ ಹಿಂದಕ್ಕೆ ಖರೀದಿಸಿತು.  ಈ ಮರು ಖರೀದಿಯ ಅಂತಿಮಗೊಂಡ ನಂತರದ ದಿನ ಷೇರಿನ ಬೆಲೆಯು ₹2,700 ನ್ನು ದಾಟಿ ಈ ಪ್ರಕ್ರಿಯೆಯನ್ನು ಸ್ವಾಗತಿಸಿತು.  ಆದರೆ  ಆಯಿಲ್ ಇಂಡಿಯಾ ಕಂಪೆನಿ ತನ್ನ ಷೇರುದಾರರಿಂದ ಪ್ರತಿ ಷೇರಿಗೆ ₹340 ರಂತೆ ಹಿಂದೆ ಕೊಳ್ಳುವ ಯೋಜನೆಯು ಜೂನ್ 5 ರಂದು ಕೊನೆಗೊಂಡಿತು. ಆದರೆ ಷೇರಿನ ಬೆಲೆಯು ₹286 ರ ಸಮೀಪಕ್ಕೆ ಕುಸಿಯಿತು. ಅಂದರೆ ಒಂದು ಕಂಪೆನಿಯ ಷೇರು ಹಿಂದೆಕೊಳ್ಳುವಿಕೆಗೆ ಪೇಟೆ ಸ್ವಾಗತಿಸಿದರೆ ಮತ್ತೊಂದು ಕಂಪೆನಿಯ ಷೇರು ಹಿಂಕೊಳ್ಳುವಿಕೆಗೆ ಬೆಂಬಲ  ವ್ಯಕ್ತ ಪಡಿಸಿಲ್ಲ.ಪೇಟೆಯಲ್ಲಿ ಅವಕಾಶಗಳು ಸೃಷ್ಟಿಯಾದರೂ ಅವುಗಳನ್ನು ಅನುಕೂಲಕ್ಕಷ್ಟೇ ಪರಿವರ್ತಿಸಿಕೊಳ್ಳುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು.  ಸಾರ್ವಜನಿಕ ವಲಯದ ಪೆಟ್ರೋನೆಟ್ ಎಲ್‌ಎನ್‌ಜಿ ಕಂಪೆನಿಯು ಪ್ರತಿ ಷೇರಿಗೆ ₹5 ರ ಲಾಭಾಂಶ ಮ 1:1 ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಈ ವಾರ ಷೇರಿನ ಬೆಲೆಯೂ ₹421 ರ ವರೆಗೂ ಬೆಲೆ ಇಳಿಕೆಯಾಗಿ ನಂತರ ಎರಡೇ  ದಿನಗಳಲ್ಲಿ  ಚೇತರಿಸಿಕೊಂಡು ₹454 ಸಮೀಪಕ್ಕೆ ಏರಿಕೆ ಕಂಡು ಮತ್ತೆ ಜಿ ಡಿಎಫ್ ಇಂಟರ್ ನ್ಯಾಷನಲ್ ಸಂಸ್ಥೆಯು 7.50 ಕೋಟಿ ಷೇರುಗಳನ್ನು ಮಾರಾಟಮಾಡಿದ ಕಾರಣ ₹427ರವರೆಗೂ ಇಳಿದು ₹433 ರ ಸಮೀಪ ವಾರಾಂತ್ಯಕಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry