ಗಿಡಮೂಲಿಕೆ ಔಷಧಿ: ಕಲಬೆರಕೆ ಬಗ್ಗೆ ಇರಲಿ ಎಚ್ಚರ

7

ಗಿಡಮೂಲಿಕೆ ಔಷಧಿ: ಕಲಬೆರಕೆ ಬಗ್ಗೆ ಇರಲಿ ಎಚ್ಚರ

Published:
Updated:
ಗಿಡಮೂಲಿಕೆ ಔಷಧಿ: ಕಲಬೆರಕೆ ಬಗ್ಗೆ ಇರಲಿ ಎಚ್ಚರ

ಇಂದಿನ ವಿಪರ್ಯಾಸವೆಂದರೆ, ‘ಗಿಡಮೂಲಿಕೆ’ ಎಂಬ ಹೆಸರಿನೊಂದಿಗೆ ಏನನ್ನೇ ಮಾರಿದರೂ, ಮಾರಾಟವಾಗುತ್ತದೆ; ಅದು ಸೌಂದರ್ಯವರ್ಧಕ, ದಂತಮಾರ್ಜಕ, ತೈಲ, ಔಷಧಿ ಅಥವಾ ಮತ್ಯಾವುದೇ ರೂಪದಲ್ಲಿಯೂ ಆಗಿರಬಹುದು.ವಿವಿಧ ಬಹುರಾಷ್ಟ್ರೀಯ ಕಂಪೆನಿಗಳು ಹಲವಾರು ಉತ್ಪನ್ನಗಳಲ್ಲಿ ಗಿಡಮೂಲಿಕೆಗಳ ಬಳಕೆ ಮಾಡಿರುವುದಾಗಿ ಸಾಧಿಸುತ್ತವೆ. ಆದರೆ, ಅದರ ಸತ್ಯಾಸತ್ಯತೆಯ ಬಗ್ಗೆ ಅನುಮಾನಿಸಬೇಕಾಗಿದೆ.  ಭಾರತವು ಆಯುರ್ವೇದದ ಮೂಲನೆಲೆಯಾಗಿದ್ದು, ಆಯುರ್ವೇದವು, ಹಲವು ರೋಗಗಳಿಗೆ ಚಿಕಿತ್ಸೆಯಾಗಿ ಸಸ್ಯಗಳು, ಸಸ್ಯೋತ್ಪನ್ನಗಳನ್ನು ಅವಲಂಬಿಸಿರುವ ಔಷಧಿಯ ಪರ್ಯಾಯ ವ್ಯವಸ್ಥೆಯಾಗಿದೆ. ಭಾರತದಲ್ಲಿ ಗಿಡಮೂಲಿಕೆಗಳನ್ನು ಚಿಕಿತ್ಸಕವಾಗಿ ಬಳಸುವುದಕ್ಕಿಂತ ಹೆಚ್ಚಾಗಿ, ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ಬಳಸುತ್ತೇವೆ. ಚವನಪ್ರಾಶ, ಭೃಂಗರಾಜ ತೈಲದಂತಹ ಬಾಟಲಿಗಳು ಮನೆಗಳ ಕಪಾಟನ್ನು ಅಲಂಕರಿಸಿರುವುದು ಇಲ್ಲಿ ಸರ್ವೇಸಾಮಾನ್ಯ ದೃಶ್ಯ. ಪೌರಸ್ತ್ಯ ದೇಶಗಳ ಬತ್ತಳಿಕೆಯಲ್ಲಿದ್ದ ‘ಅಶ್ವಗಂಧ ಚಹಾ’ದಂತಹ ಗಿಡಮೂಲಿಕೆ ಪಾಕವಿಧಾನಗಳು, ಈಗಾಗಲೇ ಪ್ರಪಂಚದಾದ್ಯಂತ ಜನರಿಗೆ ಪ್ರೀತಿಪಾತ್ರವಾಗಿವೆ.ಗಿಡಮೂಲಿಕೆಯ ಹೆಸರಿನಲ್ಲಿ ಮಾರಲಾಗುತ್ತಿರುವ ಔಷಧಿಗಳು, ಎಷ್ಟು ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳಲು ಇದು ಸುಸಮಯ. ಬೆಂಗಳೂರಿನ ‘ಪರಿಸರ ವಿಜ್ಞಾನ ಮತ್ತು ಪರಿಸರದ ಸಂಶೋಧನೆಗಾಗಿರುವ ಅಶೋಕ ಟ್ರಸ್ಟ್’, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮತ್ತು ಕೆನಡಾದ ಗುವೆಲ್ ವಿಶ್ವವಿದ್ಯಾಲಯದ ಸಂಶೋಧಕರ ಗುಂಪೊಂದು, ದಕ್ಷಿಣ ಭಾರತದಲ್ಲಿ ಬೃಹತ್ ವ್ಯಾಪಾರಕೇಂದ್ರಗಳಲ್ಲಿ ಗಿಡಮೂಲಿಕೆಗಳಾಗಿ ಬಳಸಲಾಗುವ ಪ್ರಭೇದಗಳ ಕಲಬೆರಕೆಯ ಬಗ್ಗೆ ಅಧ್ಯಯನ ಮಾಡಿದ್ದಾರೆ. ಇವುಗಳ ಫಲಿತಾಂಶವು ಮಿತಿಮೀರಿದ ಕಲಬೆರಕೆಯ ಕಠೋರ ಚಿತ್ರವನ್ನು ಚಿತ್ರಿಸುತ್ತದೆ. ಕೆಲವು ವ್ಯಾಪಾರಿ ಕೇಂದ್ರಗಳಲ್ಲಿ ಶೇ 80ಕ್ಕೂ ಹೆಚ್ಚು ಕಲಬೆರಕೆಯಾಗಿದೆ ಎಂಬುದು ಕಟು ಸತ್ಯ.‘ಆಯುರ್ವೇದದಲ್ಲಿ ಯಕೃತ್ತಿನ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುವ ‘ಫಿಲಾಂತಸ್’ ಪ್ರಭೇದಗಳಿಗೆ, ನಾವು ಡಿಎನ್ಎ ಬಾರ್‌ಕೋಡ್‌ಗಳನ್ನು  ಅಭಿವೃದ್ಧಿಪಡಿಸುತ್ತಿದ್ದೆವು. ಆಗ, ‘ಫಿಲಾಂತಸ್ ನಿರುರಿ’ ಎಂಬ ಹೆಸರಿನಲ್ಲಿ ಗಿಡಮೂಲಿಕೆಯೊಂದು ಹೆಚ್ಚಾಗಿ ಮಾರಾಟವಾಗುತ್ತಿತ್ತು; ಅಚ್ಚರಿಯೆಂದರೆ, ಅದು ಭಾರತದಲ್ಲಿ ಕಂಡುಬರದ, ದಕ್ಷಿಣ ಅಮೆರಿಕಾ ಮೂಲದ ಪ್ರಭೇದವಾಗಿತ್ತು; ಇದರ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಿದ ನಂತರ ತಿಳಿದುಬಂದದ್ದು ಏನೆಂದರೆ,  ಅಸಲಿಗೆ ‘ಫಿಲಾಂತಸ್ ನಿರುರಿ’ ಎಂಬ ಹೆಸರಿನಲ್ಲಿ ಮಾರಾಟವಾಗುತ್ತಿದ್ದುದು ‘ಫಿಲಾಂತಸ್ ಅಮಾರಸ್’ ಮತ್ತಿತರ 6 ಪ್ರಭೇದಗಳು! ಆದರೆ, ಈ ಆರು ಪ್ರಭೇದಗಳಲ್ಲಿ ಕೇವಲ  'ಪಿ.ಅಮಾರಸ್' ಮಾತ್ರ ಯಕೃತ್ತಿನ ಕಾಯಿಲೆಗಳ ವಿರುದ್ಧ ಪರಿಣಾಮಕಾರಿ, ಮಿಕ್ಕವೆಲ್ಲಾ ಕಲಬೆರಕೆಗೆ ಬಳಕೆಯಾಗುತ್ತಿತ್ತು’ ಎಂದು ಏಟ್ರಿಯ  ಸಂಶೋಧಕ ಡಾ ಜಿ.ರವಿಕಾಂತ್ ವಿವರಿಸುತ್ತಾರೆ.ಸಂಶೋಧಕರು ಗಮನಿಸಿದಂತೆ ಕಲಬೆರಕೆಯು ಅನುದ್ದೇಶಿತ ತಪ್ಪಾಗಿ ಗುರುತಿಸುವಿಕೆಯಿಂದ ಇರಬಹುದು ಅಥವಾ ಉದ್ದೇಶಪೂರ್ವಕ ದುಷ್ಕೃತ್ಯವಾಗಿರಬಹುದು. ಉದಾಹರಣೆಗೆ ಅಶೋಕ ಮರವನ್ನೇ ಗಮನಿಸಬಹುದು; ಈ ಮರದ ತೊಗಟೆಯು ಬಹುಮುಖಿ ವೈದ್ಯಕೀಯ ಗುಣಲಕ್ಷಣಗಳನ್ನು ಹೊಂದಿದೆ - ಇದು ಉರಿಯೂತವನ್ನು, ಜ್ವರವನ್ನು ಕಡಿಮೆ ಮಾಡುತ್ತದೆ, ಬ್ಯಾಕ್ಟೀರಿಯಾ ವಿರೋಧಿಯಾಗಿ, ನೋವು ನಿವಾರಕದಂತೆ ಕಾರ್ಯನಿರ್ವಹಿಸುತ್ತದೆ, ಪರಾವಲಂಬಿ ಹುಳುಗಳನ್ನು ಕೊಲ್ಲುತ್ತದೆ.ಅಷ್ಟೇ ಅಲ್ಲದೆ, ಇದನ್ನು ಗರ್ಭಾಶಯದ ಅಸ್ವಸ್ಥತೆಗಳ ಚಿಕಿತ್ಸೆಗಾಗಿ  ಮತ್ತು ಆಯುರ್ವೇದ ಔಷಧ ‘ಅಶೋಕಾರಿಷ್ಠಂ’ನಲ್ಲಿ ಮೂಲ ತತ್ವಾಂಶವಾಗಿ ಬಳಸಲಾಗುತ್ತದೆ. ಆದಾಗ್ಯೂ, ಇದರ ಸಂಸ್ಕೃತ ಮತ್ತು ಲ್ಯಾಟಿನ್ ಹೆಸರುಗಳ ನಡುವಣ ಅಸ್ಪಷ್ಟತೆಯಿಂದಾಗಿ, ಅನೇಕ ಆಯುರ್ವೇದ ವೈದ್ಯರು ಅಶೋಕಾ ಮರವನ್ನು ‘ಸಾರಕಾ ಅಸೋಕಾ’ ಎನ್ನುವ ಬದಲು ‘ಸಾರಕಾ ಇಂಡಿಕಾ’ ಎಂದು ತಪ್ಪಾಗಿ ಉಲ್ಲೇಖಿಸುತ್ತಾರೆ. ಇಂತಹ ತಪ್ಪು ತಿಳಿವಳಿಕೆಗಳಿಗೆ ಹಲವಾರು ಉದಾಹರಣೆಗಳಿದ್ದು, ಅನೇಕ ಮೂಲಿಕೆ ಉತ್ಪನ್ನಗಳ ಕಲಬೆರಕೆಗೆ ಇದು ಕಾರಣವಾಗುತ್ತದೆ.ತಪ್ಪಾಗಿ ಗುರುತಿಸಲ್ಪಡುವುದು ಎಷ್ಟು ಕೆಟ್ಟದ್ದೋ, ಅದಕ್ಕಿಂತಲೂ ಅಪಾಯಕಾರಿಯಾದ ಅನಾಚಾರವೇ ಉದ್ದೇಶಪೂರ್ವಕ ಕಲಬೆರಕೆ; ಅಶೋಕಾ ಮರದ ವಿಚಾರದಲ್ಲಿ, ಪೂರೈಕೆಗಿಂತಲೂ ಬೇಡಿಕೆ ಹೆಚ್ಚು. ಕೆಲವೇ ತೋಟಗಳಲ್ಲಿ ಈ ಮರವನ್ನು ಬೆಳೆಸಲಾಗುತ್ತದೆ. ಕಾಡಿನ ಅಶೋಕಾ ಮರಗಳಿಂದ ತೊಗಟೆ ಹೊರತೆಗೆಯುವುದನ್ನು ನಿಷೇಧಿಸಲಾಗಿದೆ. ಹಾಗಾದರೆ, ವ್ಯಾಪಾರಿಗಳಿಗೆ ಈ ತೊಗಟೆಗಳು ಹೇಗೆ ಸಿಗುತ್ತವೆ? 7 ವಿವಿಧ ಮರಗಳ ತೊಗಟೆಯನ್ನು ಅಶೋಕಾ ಮರದ ತೊಗಟೆಯೊಂದಿಗೆ ಕಲಬೆರಕೆ ಮಾಡಲು ದೇಶದಾದ್ಯಂತ ಬಳಸಲಾಗುತ್ತದೆ ಎಂದು ಮತ್ತೊಂದು ಅಧ್ಯಯನವು ಸಾಬೀತು ಪಡಿಸಿತು. ‘ಪಪ್ಪಾಯ ಮರ  ಮತ್ತು ನುಗ್ಗೆ ಮರದ ತೊಗಟೆಯ ಪುಡಿಯನ್ನು ಕಲಬೆರಕಗಳಾಗಿ ಬಳಸಲಾಗುತ್ತದೆ’ ಎನ್ನುತ್ತಾರೆ ಡಾ.ರವಿಕಾಂತ್.

ಹಾಗಾದರೆ, ‘ಅಶೋಕರಿಷ್ಠಾ’ವನ್ನು ಸೇವಿಸಿದಾಗ ನಿಖರವಾಗಿ ಏನನ್ನು ಸೇವಿಸುತ್ತಿದ್ದೇವೆ? ಅರ್ಥಹೀನವಾಗಿ ದೈನಂದಿನ ಬದುಕಿನ ಭಾಗವನ್ನಾಗಸಿಕೊಂಡಿರುವ ‘ಗಿಡಮೂಲಿಕೆ’ಯ ಶಾಂಪೂಗಳು, ಕ್ರೀಮುಗಳ ಕಥೆಯೇನು? ಗಿಡಮೂಲಿಕೆ ಉತ್ಪನ್ನಗಳೊಂದಿಗೆ ವ್ಯವಹರಿಸುವ ಅನೇಕ ಪ್ರಸಿದ್ಧ ಬ್ರ್ಯಾಂಡ್‌ಗಳು,  ಕಚ್ಚಾ ಸಾಮಗ್ರಿಗಳನ್ನು ಬೃಹತ್ ಪ್ರಮಾಣದಲ್ಲಿ ವ್ಯಾಪಾರಿಗಳಿಂದ ಖರೀದಿಸುತ್ತವೆ; ಇಲ್ಲಿ ಕೆಲವರು ತಪ್ಪು ಅರ್ಥೈಸುವಿಕೆಯಿಂದ ಮತ್ತು ಹಲವರು ತಮ್ಮ ನಿರ್ಲಜ್ಜತೆಯಿಂದ, ಕಲಬೆರಕೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಇದು ತೀವ್ರ ಪರಿಣಾಮಗಳನ್ನು ಉಂಟುಮಾಡುತ್ತದೆ. ಹಾಗಾಗಿ, ಗ್ರಾಹಕರು ನಿರೀಕ್ಷಿಸಿದ ಆರೋಗ್ಯ ಪ್ರಯೋಜನಗಳು  ದೊರೆಯದು; ಜೊತೆಗೇ, ಗಂಭೀರ  ಅನಧಿಕೃತ ಅಡ್ಡಪರಿಣಾಮಗಳಿಗೂ ಈಡಾಗಬೇಕಾಗಬಹುದು. ಇಂತಹ ಸಂದರ್ಭಗಳು, ಆಯುರ್ವೇದದ  ಮತ್ತು ಪರ್ಯಾಯ ಔಷಧದ ಇಡೀ ಕ್ಷೇತ್ರದ ವಿರುದ್ಧ ತಪ್ಪು ಗ್ರಹಿಕೆ ಮತ್ತು ಅನ್ಯಾಯದ ಸಿನಿಕತೆಗೆ ದಾರಿ ಮಾಡಿಕೊಡುತ್ತವೆ.ಸಂಶೋಧಕರು, ಕಚ್ಚಾ ಮೂಲಿಕೆ ವ್ಯಾಪಾರದಲ್ಲಿ ಗುಣಮಟ್ಟದ ಭರವಸೆಗಾಗಿ ಒಂದು ರಾಷ್ಟ್ರೀಯ ನೀತಿಯ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಶಿಫಾರಸು ಮಾಡುತ್ತಾರೆ. ‘ಗಿಡಮೂಲಿಕೆ ವ್ಯಾಪಾರವನ್ನು ನಿಯಂತ್ರಿಸುವ ಚೌಕಟ್ಟು ಇಲ್ಲದಿರುವುದರಿಂದ ಈ ಸಮಸ್ಯೆ ಅಸ್ತಿತ್ವದಲ್ಲಿದೆ. ಕಚ್ಚಾ ಮೂಲಿಕೆ ಉತ್ಪನ್ನಗಳ ದೃಢೀಕರಣವನ್ನು ನಿರ್ಣಯಿಸಬಹುದಾದ ಪರಿಣಾಮಕಾರಿ ಯಾಂತ್ರಿಕ ವ್ಯವಸ್ಥೆಯೊಂದು ತಯಾರಾಗಬೇಕು, ನಂತರ, ಅದನ್ನು ವ್ಯಾಪಾರ ನಿಯಂತ್ರಕರೊಂದಿಗೆ ಬೆಸೆಯಬೇಕು’ ಎನ್ನುತ್ತಾರೆ ಡಾ ರವಿಕಾಂತ್.ಗಿಡಮೂಲಿಕೆಗಳ ಡಿಎನ್ಎ ಮತ್ತು ಚಯಾಪಚಯ ಕ್ರಿಯೆಯ ಉತ್ಪನ್ನಗಳ ವಿಶ್ಲೇಷಣೆಗಳನ್ನು ನಡೆಸಿ, ದೃಢೀಕರಿಸಲು ಮತ್ತು ಪ್ರಮಾಣೀಕರಿಸಲು, ರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಪ್ರಯೋಗಾಲಯಗಳು ಸ್ಥಾಪನೆಯಾಗಬೇಕು ಎಂದು ಸಂಶೋಧಕರು ಕರೆ ಕೊಟ್ಟಿದ್ದಾರೆ. ಗಿಡಮೂಲಿಕೆ ವ್ಯಾಪಾರಕ್ಕೆ ಗುರುತಿನ ಪರೀಕ್ಷೆಗಳು ಪೂರ್ವಾಪೇಕ್ಷಿತ ಅಗತ್ಯತೆಯಾಗಬೇಕು.  ‘ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಗೆ ನಾವು ಇದನ್ನು ಈಗಾಗಲೇ ತಿಳಿಸಿದ್ದೇವೆ; ಇಲಾಖೆಯು, ಗಿಡಮೂಲಿಕೆ ಉತ್ಪನ್ನದ ದೃಢೀಕರಣ ವ್ಯವಸ್ಥೆಯನ್ನು ಸ್ಥಾಪಿಸುವ ಯೋಜನೆಯನ್ನು ಹಾಕಿಕೊಂಡಿದೆ’ ಎನ್ನುತ್ತಾರೆ ಅವರು. ಆದರೆ, ಇದು ವಾಸ್ತವದಲ್ಲಿ ಕಾರ್ಯರೂಪಕ್ಕೆ ಬರಲು ಬಹಳವೇ ಸಮಯ ಬೇಕಾಗಬಹುದು.

– ಗುಬ್ಬಿ ಲ್ಯಾಬ್ಸ್‌

(ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿರುವ ಸಾಮಾಜಿಕ ಉದ್ಯಮ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry