ಸೆಪ್ಟೆಂಬರ್‌ನಿಂದ ಮೈಸೂರು–ಚೆನ್ನೈ ನಡುವೆ ವಿಮಾನ

7
‘ಉಡಾನ್‌’ ಯೋಜನೆಯಡಿ ಸಚಿವಾಲಯದಿಂದ ಅಗ್ಗದ ವಿಮಾನ ಸಂಪರ್ಕ

ಸೆಪ್ಟೆಂಬರ್‌ನಿಂದ ಮೈಸೂರು–ಚೆನ್ನೈ ನಡುವೆ ವಿಮಾನ

Published:
Updated:
ಸೆಪ್ಟೆಂಬರ್‌ನಿಂದ ಮೈಸೂರು–ಚೆನ್ನೈ ನಡುವೆ ವಿಮಾನ

ಮೈಸೂರು: ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ ‘ಉಡಾನ್‌’ ಯೋಜನೆಯಡಿ ಇಲ್ಲಿಂದ ಸೆಪ್ಟೆಂಬರ್‌ನಲ್ಲಿ ಮೈಸೂರು–ಚೆನ್ನೈ ನಡುವಣ ವಿಮಾನ ಹಾರಾಟ ಆರಂಭವಾಗಲಿದೆ.ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ. ಅದಕ್ಕಾಗಿ ಏರ್‌ ಒಡಿಶಾ ಹಾಗೂ ಟರ್ಬೊ ಮೇಘಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಯೋಜನೆಗೆ ಸಚಿವಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಜತೆ ಕರ್ನಾಟಕ ಹಾಗೂ ತಮಿಳುನಾಡು ಒಪ್ಪಂದ ಮಾಡಿಕೊಂಡಿವೆ.ಒಂದು  ಗಂಟೆಯ ಪ್ರಯಾಣಕ್ಕೆ ಟಿಕೆಟ್‌ ದರ ₹ 2,500 ಇರಲಿದೆ. ಇದು ಅಂದಾಜು 500 ಕಿ.ಮೀವರೆಗೆ ಅನ್ವಯವಾಗಲಿದೆ. ವಿಮಾನಯಾನ ಸಂಸ್ಥೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಣಕಾಸಿನ ನೆರವು ಪಡೆಯಲಿವೆ.‘ಎರಡು ಖಾಸಗಿ ಸಂಸ್ಥೆಗಳು ಚೆನ್ನೈ–ಮೈಸೂರು–ಚೆನ್ನೈ ನಡುವೆ ನಿತ್ಯ ಸೇವೆ ಒದಗಿಸಲಿವೆ. ಮುಂದಿನ ದಿನಗಳಲ್ಲಿ ಬೇರೆ ಸ್ಥಳಗಳಿಗೂ ಸಂಪರ್ಕ ಕಲ್ಪಿಸಲಿದೆ’ ಎಂದು ಮಂಡಕಳ್ಳಿ ವಿಮಾನ ನಿಲ್ದಾಣ ನಿರ್ದೇಶಕ ಮನೋಜ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಟರ್ಬೊ ಮೇಘಾ ಸಂಸ್ಥೆಯು ಹೈದರಾಬಾದ್‌–ವಿಜಯವಾಡ–ಕಡಪ–ಚೆನ್ನೈ, ಚೆನ್ನೈ–ಸೇಲಂ–ಚೆನ್ನೈ, ಚೆನ್ನೈ–ಮೈಸೂರು–ಚೆನ್ನೈ, ಚೆನ್ನೈ–ಕಡಪ–ವಿಜಯವಾಡ–ಹೈದರಾಬಾದ್‌ ಮಾರ್ಗದಲ್ಲಿ ಸಂಪರ್ಕ ವ್ಯವಸ್ಥೆ ಒದಗಿಸಲಿದೆ. ಏರ್‌ ಒಡಿಶಾ ಸಂಸ್ಥೆಯು ಚೆನ್ನೈ–ಪುದುಚೇರಿ–ಸೇಲಂ–ಬೆಂಗಳೂರು–ಸೇಲಂ–ಪುದುಚೇರಿ–ಚೆನ್ನೈ, ಚೆನ್ನೈ–ನೈವೇಲಿ–ಚೆನ್ನೈ, ಚೆನ್ನೈ–ಕಡಪ–ಬೆಂಗಳೂರು–ಕಡಪ–ಚೆನ್ನೈ, ಚೆನ್ನೈ–ಮೈಸೂರು–ಚೆನ್ನೈ ಮಾರ್ಗದಲ್ಲಿ ಸಂಪರ್ಕ ಕಲ್ಪಿಸಲಿದೆ.ಮೂರು ಬಾರಿ ರದ್ದಾಗಿತ್ತು

ಮೈಸೂರಿನಲ್ಲಿ ವಿಮಾನ ಯಾನ ಪುನರಾರಂಭ ವಾಗುತ್ತಿರುವುದು ನಾಲ್ಕನೇ ಬಾರಿ. ಮೊದಲ ಬಾರಿ 2010ರ ಮಾರ್ಚ್‌ನಲ್ಲಿ ಕಿಂಗ್‌ಫಿಷರ್‌ ಸಂಸ್ಥೆ ಮೈಸೂರು–ಬೆಂಗಳೂರು ಮಾರ್ಗದಲ್ಲಿ ವಿಮಾನ ಸಂಪರ್ಕ ಆರಂಭಿಸಿತ್ತು. ಪ್ರಯಾಣಿಕರ ಕೊರತೆಯಿಂದ 2011ರ ಅಕ್ಟೋಬರ್‌ನಲ್ಲಿ ಸ್ಥಗಿತಗೊಳಿಸಿತ್ತು.

2013ರ ಜನವರಿಯಲ್ಲಿ ಸ್ಪೈಸ್‌ ಜೆಟ್‌ ಸಂಸ್ಥೆಯು ಸಂಪರ್ಕ ಆರಂಭಿಸಿತ್ತು. ನಷ್ಟದ ಕಾರಣ ವೊಡ್ಡಿ 2014ರ ಅಕ್ಟೋಬರ್‌ನಲ್ಲಿ ರದ್ದುಗೊಳಿಸಿತ್ತು.

2015ರ ಸೆಪ್ಟೆಂಬರ್‌ನಲ್ಲಿ ಏರ್‌ ಇಂಡಿಯಾ ಸಂಸ್ಥೆಯ ‘ಅಲಯನ್ಸ್‌ ಏರ್‌’ ಮೈಸೂರು–ಬೆಂಗಳೂರು ಮಾರ್ಗದಲ್ಲಿ ಸೇವೆ ಆರಂಭಿಸಿತ್ತು. ಆದರೆ, ಅದು ಮೂರೇ ತಿಂಗಳಲ್ಲಿ ಸ್ಥಗಿತಗೊಂಡಿತ್ತು.

*

ಸೆಪ್ಟೆಂಬರ್‌ನಲ್ಲಿ ಮೈಸೂರಿನಿಂದ  ವಿಮಾನಯಾನ ಸೌಲಭ್ಯ  ಆರಂಭವಾಗಲಿದೆ. ಹಾರಾಟದ ಸಮಯ ಇನ್ನೂ ನಿಗದಿಯಾಗಿಲ್ಲ.

ಮನೋಜ್‌ ಕುಮಾರ್‌,

ನಿರ್ದೇಶಕ,

ಮಂಡಕಳ್ಳಿ ವಿಮಾನ ನಿಲ್ದಾಣ, ಮೈಸೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry