ಇಲಿ, ಕಾಗೆಯನ್ನು ರಾಷ್ಟ್ರಪ್ರಾಣಿ, ಪಕ್ಷಿ ಮಾಡಲಿ

7
ಹಿಂದಿ ಹೇರಿಕೆ: ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಪಿ.ವಿ.ನಾರಾಯಣ ವ್ಯಂಗ್ಯ

ಇಲಿ, ಕಾಗೆಯನ್ನು ರಾಷ್ಟ್ರಪ್ರಾಣಿ, ಪಕ್ಷಿ ಮಾಡಲಿ

Published:
Updated:
ಇಲಿ, ಕಾಗೆಯನ್ನು ರಾಷ್ಟ್ರಪ್ರಾಣಿ, ಪಕ್ಷಿ ಮಾಡಲಿ

ಬೆಂಗಳೂರು:‘ದೇಶದಲ್ಲಿ ಹುಲಿಗಳಿಗಿಂತ ಇಲಿಗಳು, ನವಿಲುಗಳಿಗಿಂತ ಕಾಗೆಗಳು ಜಾಸ್ತಿ ಇವೆ. ಅವುಗಳನ್ನೇ ರಾಷ್ಟ್ರಪ್ರಾಣಿ, ರಾಷ್ಟ್ರಪಕ್ಷಿಯಾಗಿ ಏಕೆ ಪರಿಗಣಿಸಬಾರದು’

ಕನ್ನಡ ಜನಶಕ್ತಿ ಕೇಂದ್ರವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಲೇಖಕ ಪ್ರೊ.ಜಿ. ಅಬ್ದುಲ್‌ ಬಷೀರ್‌ ಅವರ  ಐದು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಪಿ.ವಿ.ನಾರಾಯಣ ಹೀಗೆ ಪ್ರಶ್ನಿಸಿದರು.

ದೇಶದಲ್ಲಿ ಹಿಂದಿ ಭಾಷೆ ಮಾತನಾಡುವವರು ಹೆಚ್ಚಾಗಿದ್ದಾರೆ. ಹೀಗಾಗಿ ಅದನ್ನು ರಾಷ್ಟ್ರಭಾಷೆ ಮಾಡಬೇಕು ಎಂಬ ವಾದಕ್ಕೆ ಅವರು ಹೀಗೆ ಪ್ರತಿಕ್ರಿಯೆ ನೀಡಿದರು.

‘ಭಾಷೆಗಳ ಆಧಾರದಲ್ಲಿ ರಚನೆಯಾದ ರಾಜ್ಯಗಳಲ್ಲಿ ಆಯಾ ಭಾಷೆಯಲ್ಲೇ ಪ್ರತಿಯೊಂದು ನಡೆಯಬೇಕಾದದ್ದು ನಿಯಮ. ಆದರೆ, ಕೇಂದ್ರ ಸರ್ಕಾರವು ಇದನ್ನು ಗಾಳಿಗೆ ತೂರಿ ಹಿಂದಿ ಭಾಷೆ, ರಾಷ್ಟ್ರೀಯತೆಯನ್ನು ಹೇರಲು ಮುಂದಾಗಿದೆ’ ಎಂದು ದೂರಿದರು.

ಸಾಹಿತಿ ಹಂ.ಪ.ನಾಗರಾಜಯ್ಯ ಮಾತನಾಡಿ, ‘ವ್ಯಾಕರಣ ತಾತ್ಸಾರ ಮಾಡುವ ವಿಷಯವಲ್ಲ. ಭಾಷೆಯ ಸ್ವರೂಪ ಅರ್ಥ ಮಾಡಿಕೊಳ್ಳಬೇಕಾದರೆ ವ್ಯಾಕರಣ ಉತ್ತಮ ಪ್ರವೇಶಿಕೆ ಇದ್ದಂತೆ. ಇಂತಹ ವಿಶಿಷ್ಟ ಕ್ಷೇತ್ರವನ್ನು ಅಬ್ದುಲ್‌ ಬಷೀರ್‌ ಆಯ್ಕೆ ಮಾಡಿಕೊಂಡಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ‘ದೇಶದ ಎಲ್ಲ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ಬರುತ್ತಿದೆ. ಮಾತೃಭಾಷೆ ಮತ್ತು ರಾಜ್ಯಭಾಷೆಗಳಿಗೆ ತೊಂದರೆ ಉಂಟಾಗುತ್ತಿದೆ. ಆಳದಲ್ಲಿ ನಡೆಯುತ್ತಿರುವ ಅನೇಕ ಅಂಶಗಳನ್ನು ಮೇಲ್ಪದರದಲ್ಲಿ ಮಾತ್ರ ನೋಡುತ್ತಿದ್ದೇವೆ. ದೂರಗಾಮಿ ದುಷ್ಪರಿಣಾಮಗಳನ್ನು ಉಂಟು ಮಾಡುವ ಅಂಶಗಳನ್ನು ಮರೆಯುತ್ತಿದ್ದೇವೆ’ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

‘ಈಗ ಜಿಎಸ್‌ಟಿ ಜಾರಿಗೆ ತರುತ್ತಿದ್ದಾರೆ. ನಾಳೆ ಒಂದು ಭಾಷೆ, ಒಂದು ಧರ್ಮ ಎಂದರೆ ಏನು ಮಾಡುತ್ತೀರಿ? ತೆರಿಗೆಗಳನ್ನು ಸರಳೀಕರಣ ಮಾಡುವ ಮೂಲಕ ಆರ್ಥಿಕ ಅಭಿವೃದ್ಧಿ ಮಾಡುವುದಕ್ಕೆ ನನ್ನ ವಿರೋಧವಿಲ್ಲ. ಆದರೆ, ಇದರ ನೆಪದಲ್ಲಿ ರಾಜ್ಯಕ್ಕೆ ಇರುವ ಹಕ್ಕನ್ನು ಕಸಿಯುವುದು ಸರಿಯಲ್ಲ’ ಎಂದರು.

ವಿಜಯ ಸಂಜೆ ಕಾಲೇಜಿನ ಪ್ರೊ.ಶಾಂತರಾಜು, ನಿವೃತ್ತ ಇಂಗ್ಲಿಷ್‌ ಪ್ರಾಧ್ಯಾಪಕ ನೈಷಧಂ ಎಸ್ಸೆ ಅವರು ಕೃತಿಗಳ ಬಗ್ಗೆ ಮಾತನಾಡಿದರು.

****

ಯಾವ ಪುಸ್ತಕಕ್ಕೆ ಎಷ್ಟು ಬೆಲೆ

* ಕನ್ನಡ ಕಲಿಯಿರಿ– ₹370

* ಕಡ್ಡಾಯ ಕನ್ನಡ– ₹150

* ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ– ₹140

* ಶಬ್ದಮಣಿ ದರ್ಪಣ ದೀಪಿಕೆಯ ಸಂಗ್ರಹ– ₹50

* ಮೂರು ಜೀವನ ಚರಿತ್ರೆಗಳು– ₹180

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry