ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸುಳೆ ಸೇರಿ 3 ಮಕ್ಕಳ ಸಾವು

ಕರಾವಳಿಯಲ್ಲಿ ಬಿರುಸು ಮಳೆ
Last Updated 11 ಜೂನ್ 2017, 20:02 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿಯಾದ್ಯಂತ ಮುಂಗಾರು ಮಳೆ ಬಿರುಸುಗೊಂಡಿದ್ದು ಶಿವಮೊಗ್ಗ ಜಿಲ್ಲೆಯಲ್ಲೂ  ಉತ್ತಮ ಮಳೆಯಾಗುತ್ತಿದೆ.
ಅಲ್ಲದೇ ಕೊಡಗು, ವಿಜಯಪುರ, ಬಾಗಲಕೋಟೆ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲೂ ಸಾಧಾರಣ ಮಳೆ ಆಗಿದೆ.

ಮಳೆಯಿಂದಾಗಿ ವಿವಿಧ ಭಾಗಗಳಲ್ಲಿ ಹಲವು ಅನಾಹುತ, ಅವಘಡಗಳೂ ಸಂಭವಿಸಿವೆ. ಕುಮಟಾ ತಾಲ್ಲೂಕಿನ ದೀವಗಿ ಬಳಿ ಭಾನುವಾರ ಸುರಿದ ಧಾರಾಕಾರ ಮಳೆಯಿಂದ ಮಣ್ಣಿನ ಗುಡ್ಡ ಕುಸಿದು ಮೂರು ಮಕ್ಕಳು ಮೃತಪಟ್ಟಿದ್ದಾರೆ. ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಚತುಷ್ಪಥ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ದೀವಗಿ ಸಮೀಪದ ತಂಡ್ರಕುಳಿಯಲ್ಲಿ ಗುಡ್ಡ ಕುಸಿದು 200 ಮೀಟರ್ ಆಳಕ್ಕೆ ಜಾರಿ ಮನೆಗಳ ಮೇಲೆ ಬಿದ್ದಿದೆ. ಮಣ್ಣಿನಡಿ ಸಿಲುಕಿದ ಭವ್ಯಾ ನಾರಾಯಣ ಅಂಬಿಗ (10), ಯತಿನ್ ನಾರಾಯಣ ಅಂಬಿಗ (8), ಧನುಷ್ ಮಂಜುನಾಥ ಅಂಬಿಗ (10 ತಿಂಗಳು) ಸ್ಥಳದಲ್ಲೇ ಅಸುನೀಗಿದರು. ಗಾಯಗೊಂಡವರ ಪೈಕಿ ಮೂವರ ಸ್ಥಿತಿ ಗಂಭೀರವಾಗಿದೆ.

ನಾರಾಯಣ ಅಂಬಿಗ ಮತ್ತು ಕಮಲಾ ಅಂಬಿಗ ಅವರಿಗೆ ಸೇರಿದ ಮನೆಗಳು ಜಖಂಗೊಂಡಿದ್ದು, ಎಂಟು ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೂಪಾ ಮತ್ತು ನಾರಾಯಣ ಅಂಬಿಗ ದಂಪತಿ ತಮ್ಮ ಎರಡೂ ಮಕ್ಕಳನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದಾರೆ. ಅವರ ತಮ್ಮ ಮಂಜುನಾಥ ಅಂಬಿಗ ಅವರು, ಈ ಅವಘಡದಲ್ಲಿ ತಮ್ಮ ಏಕೈಕ ಪುತ್ರನನ್ನು ಕಳೆದುಕೊಂಡಿದ್ದಾರೆ.

10 ತಾಸು ಹೆದ್ದಾರಿ ಸ್ಥಗಿತ: ಉಡುಪಿ ಜಿಲ್ಲೆಯ ಬೈಂದೂರು ಬಳಿಯ ಒತ್ತಿನೆಣೆ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ (ಮಂಗಳೂರು–ಕಾರವಾರ ಹೆದ್ದಾರಿ) ಒಂದೇ ವಾರದಲ್ಲಿ ಮೂರನೇ ಬಾರಿ ಗುಡ್ಡ ಕುಸಿದು ಭಾನುವಾರ 10 ತಾಸು ವಾಹನ ಸಂಚಾರ ಸ್ಥಗಿತಗೊಂಡಿತು.

ಶನಿವಾರ ರಾತ್ರಿ ಬಿರುಸಿನಿಂದ ಮಳೆ ಸುರಿದುದರಿಂದ ಭಾನುವಾರ ಬೆಳಿಗ್ಗೆ ಮೂರನೇ ಬಾರಿಗೆ ಒತ್ತಿನೆಣೆಯಲ್ಲಿ ಗುಡ್ಡ ಕುಸಿದಿದೆ. ವಾರದ ಹಿಂದಷ್ಟೆ ಇಲ್ಲಿ ಮಣ್ಣಿನ ಗುಡ್ಡ ಕುಸಿದಿತ್ತು.

ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎರಡೂ ರಸ್ತೆಗಳು ಮುಚ್ಚಿದ್ದು, ವಾಹನಗಳು ಪರ್ಯಾಯ ರಸ್ತೆಯ ಮೂಲಕ ಸಂಚರಿಸುವಂತಾಯಿತು.

ಬ್ರಹ್ಮಾವರ ಸಮೀಪದ ಕೊಳಲಗಿರಿ ಪರಾರಿ ಮೂಲಕ ಶೀಂಬ್ರ ಮಣಿಪಾಲಕ್ಕೆ ಸಂಪರ್ಕ ಕಲ್ಪಿಸಲು ಸ್ವರ್ಣ ನದಿಗೆ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿಯ ಸಲಕರಣೆಗಳು ಭಾನುವಾರ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಸುಮಾರು ₹ 20 ಲಕ್ಷ ನಷ್ಟವಾಗಿದೆ. ಶನಿವಾರ ರಾತ್ರಿ ಒಮ್ಮೆಲೇ ನೀರಿನ ಹರಿವು ಹೆಚ್ಚಳವಾದುದರಿಂದ  ಈ ಅನಾಹುತ ಸಂಭವಿಸಿದೆ.

ಹೆದ್ದಾರಿ ಕುಸಿಯುವ ಭೀತಿ: ಬೈಂದೂರು ಸಮೀಪದ ಮರವಂತೆ–ತ್ರಾಸಿ ನಡುವಣ ಮಾರಸ್ವಾಮಿಯ ನದಿ- ಮತ್ತು ಸಮುದ್ರ ತೀರದ ನಡುವೆ ಸಾಗುವ ಚತುಷ್ಪಥ ಹೆದ್ದಾರಿಯಲ್ಲಿ ಮಳೆಯಿಂದಾಗಿ ದೊಡ್ಡ ಬಿರುಕುಗಳು ಮೂಡಿವೆ.

ನದಿಯ ಅಂಚಿನುದ್ದಕ್ಕೆ  ನಿರ್ಮಿಸಿರುವ ಎತ್ತರಿಸಿದ ಹೆದ್ದಾರಿಯ (ಎಲಿವೇಟೆಡ್ ಹೈವೇ) ದಕ್ಷಿಣ ತುದಿಯ ಭಾಗ ಬಾಯ್ದೆರೆದಿದೆ. ಸೇತುವೆಗೆ ಸಂಪರ್ಕ ಕಲ್ಪಿಸಿರುವ ಭಾಗದ 10 ಅಡಿ ಅಗಲದ ರಸ್ತೆ ಯಾವುದೇ ಕ್ಷಣದಲ್ಲಿ ಕುಸಿಯುವ ಭೀತಿ ಎದುರಾಗಿದೆ.

ಮಂಗಳೂರಲ್ಲಿ ಮನೆಗಳಿಗೆ ಹಾನಿ: ಮಂಗಳೂರು ನಗರವೂ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿದ್ದು, ಕೆಲ ಮನೆಗಳಿಗೆ ಹಾನಿಯಾಗಿದೆ.

ಕೊಡಗಿನಲ್ಲಿ ಸಾಧಾರಣ ಮಳೆ: ಕೊಡಗು ಜಿಲ್ಲೆಯಾದ್ಯಂತ ಭಾನುವಾರ ದಿನವಿಡೀ ತುಂತುರು ಮಳೆ ಸುರಿಯಿತು. ಮಡಿಕೇರಿ, ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲಿ ಬೆಳಿಗ್ಗೆ ಮಾತ್ರ ಒಂದು ಗಂಟೆ ಜೋರು ಮಳೆ ಸುರಿಯಿತು. ದಕ್ಷಿಣ ಕೊಡಗಿನ ವಿರಾಜಪೇಟೆ, ಗೋಣಿಕೊಪ್ಪಲು, ಶ್ರೀಮಂಗಲ, ಪೊನ್ನಂಪೇಟೆ, ಕುಟ್ಟ ವ್ಯಾಪ್ತಿಯಲ್ಲಿ ಸಂಜೆ ಮಾತ್ರ ಸಾಧಾರಣ ಮಳೆ ಸುರಿಯಿತು.

ಲಿಂಗನಮಕ್ಕಿಗೆ 6,115 ಕ್ಯುಸೆಕ್ ನೀರು: ಸಾಗರ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಭಾನುವಾರ ಲಿಂಗನಮಕ್ಕಿ ಜಲಾಶಯಕ್ಕೆ 6,115 ಕ್ಯುಸೆಕ್ ನೀರು ಹರಿದುಬಂದಿದೆ. ಜಲಾಶಯ ವ್ಯಾಪ್ತಿಯಲ್ಲಿ 98.2 ಮಿ.ಮೀ ಮಳೆಯಾಗಿದೆ.

ಲಿಂಗನಮಕ್ಕಿ ನೀರಿನ ಗರಿಷ್ಠ ಮಟ್ಟ 1,819 ಅಡಿಯಾಗಿದ್ದು, ಭಾನುವಾರ 1,743 ಅಡಿ ಇದೆ. 

ಒಂದು ಋತುಮಾನದ ಮಳೆ: ‘ಉಡುಪಿ ತಾಲ್ಲೂಕಿನ ಬೈರಂಪಳ್ಳಿಯಲ್ಲಿ ಶನಿವಾರ 38.4 ಸೆಂ.ಮೀ ಹಾಗೂ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ 35.1 ಸೆಂ.ಮೀ ಮಳೆಯಾಗಿದೆ. ಇದು ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಒಂದು ಋತುಮಾನದಲ್ಲಿ ಬೀಳುವ ವಾಡಿಕೆ ಮಳೆಗೆ ಸಮ’ ಎಂದು ಅವರು ತಿಳಿಸಿದರು.

ಭಾನುವಾರ ಎಲ್ಲೆಲ್ಲಿ ಎಷ್ಟು ಮಳೆ? ‘ಉಡುಪಿ ಜಿಲ್ಲೆಯಲ್ಲಿ 16.7 ಸೆಂ.ಮೀ, ಉತ್ತರ ಕನ್ನಡ 12.7, ದಕ್ಷಿಣ ಕನ್ನಡ 11.9, ಶಿವಮೊಗ್ಗ 9.4, ಬೀದರ್‌ 7.8, ಚಿಕ್ಕಮಗಳೂರು 7.49, ಕೊಡಗು 6, ಹಾಸನ ಹಾಗೂ ಕಲಬುರ್ಗಿಯಲ್ಲಿ ತಲಾ 3.7, ಯಾದಗಿರಿ 2.8, ಬೆಳಗಾವಿ 2.25, ಗದಗ 2.1, ರಾಯಚೂರು 1.95, ಬಾಗಲಕೋಟೆ ಹಾಗೂ ವಿಜಯಪುರದಲ್ಲಿ ತಲಾ 1.85, ಕೊಪ್ಪಳ 1.65, ಧಾರವಾಡ 1.5, ಹಾವೇರಿ 1.15 ಸೆಂ.ಮೀ. ಮಳೆಯಾಗಿದೆ’ ಎಂದು ಶ್ರೀನಿವಾಸರೆಡ್ಡಿ ತಿಳಿಸಿದರು.

₹ 4 ಲಕ್ಷ ಪರಿಹಾರ
ಕುಮಟಾ (ಉತ್ತರ ಕನ್ನಡ):
ಗುಡ್ಡ ಕುಸಿದು ಮೂರು ಮಕ್ಕಳು ಮೃತಪಟ್ಟ ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಿದ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಮೃತರ ಕುಟುಂಬಗಳಿಗೆ ತಲಾ ₹ 4 ಲಕ್ಷ ಪರಿಹಾರ ನೀಡುವುದಾಗಿ ಹಾಗೂ ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ಹೇಳಿದರು.

ಶಿರಾಲಿಯಲ್ಲಿ 27 ಸೆಂ.ಮೀ. ಮಳೆ
ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಾಲಿಯಲ್ಲಿ 27 ಸೆಂ.ಮೀ. ಹಾಗೂ ಆಗುಂಬೆಯಲ್ಲಿ 23 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶಿವಮೊಗ್ಗದ ಹೊಸನಗರ,  ಕುಂದಾಪುರದಲ್ಲಿ 18 ಸೆಂ.ಮೀ., ಉಡುಪಿಯ ಕೋಟ, ಕೊಲ್ಲೂರು, ಸಿದ್ದಾಪುರದಲ್ಲಿ 16 ಸೆಂ.ಮೀ.  ಕುಮಟಾದಲ್ಲಿ ಮಂಗಳೂರಿನಲ್ಲಿ 15 ಸೆಂ.ಮೀ., ದಕ್ಷಿಣ ಕನ್ನಡದ ಪಣಂಬೂರು, ಮೂಡುಬಿದಿರೆ, ಕಾರ್ಕಳ ಮತ್ತು ಹೊನ್ನಾವರದಲ್ಲಿ 14 ಸೆಂ.ಮೀ. ಮಳೆಯಾಗಿದೆ.
ಬೆಳ್ತಂಗಡಿಯಲ್ಲಿ 11 ಸೆಂ.ಮೀ., ಧರ್ಮಸ್ಥಳ, ಪುತ್ತೂರು,  ಲಿಂಗನಮಕ್ಕಿಯಲ್ಲಿ 10 ಸೆಂ.ಮೀ., ಅಂಕೋಲಾ ಮತ್ತು  ಶೃಂಗೇರಿಯಲ್ಲಿ 9 ಸೆಂ.ಮೀ., ಶಿವಮೊಗ್ಗದ ಹುಂಚದಕಟ್ಟೆಯಲ್ಲಿ 8 ಸೆಂ.ಮೀ. ಮಳೆಯಾಗಿದೆ.

ಕಾರವಾರ, ಶಿವಮೊಗ್ಗದ ತಾಳಗುಪ್ಪ, ಚಿಕ್ಕಮಗಳೂರಿನ ಕೊಟ್ಟಿಗೆಹಾರ, ಜಯಪುರ, ಕಮರಡ್ಡಿಯಲ್ಲಿ 7 ಸೆಂ.ಮೀ., ದಕ್ಷಿಣ ಕನ್ನಡದ ಮೂಲ್ಕಿ, ಚಿಕ್ಕಮಗಳೂರಿನ ಕಳಸ, ಕೊಪ್ಪದಲ್ಲಿ 6 ಸೆಂ.ಮೀ., ದಕ್ಷಿಣ ಕನ್ನಡದ ಸುಳ್ಯ, ಕೊಡಗಿನ ಭಾಗಮಂಡಲದಲ್ಲಿ 5 ಸೆಂ.ಮೀ. ಮಳೆಯಾಗಿದೆ.

ಇನ್ನೆರಡು ದಿನ ಜೋರು ಮಳೆ ಸಾಧ್ಯತೆ
ಬೆಂಗಳೂರು:
ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇನ್ನೆರಡು ದಿನಗಳವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ.

‘ರಾಜ್ಯದಲ್ಲಿ ನೈರುತ್ಯ ಮುಂಗಾರು ಚುರುಕಾಗಿದೆ. ಶೇ 75ಕ್ಕಿಂತ ಹೆಚ್ಚು ಭಾಗದಲ್ಲಿ ಮಳೆಯಾಗಿದೆ. ರೈತರು ಬಿತ್ತನೆಗೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಕೆಲವೆಡೆ ತುಂತುರು ಮಳೆಯಾಗಲಿದೆ. ಆದರೆ, 2–3 ದಿನಗಳ ಬಳಿಕ ದಕ್ಷಿಣ ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT