ನಾಲ್ಕೇ ತಿಂಗಳಿನಲ್ಲಿ ₹32.88 ಕೋಟಿ ಸಂಗ್ರಹ

7
ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಳ lಹತ್ತು ವರ್ಷಕ್ಕೆ ಹೋಲಿಸಿದರೆ 2017ರಲ್ಲೇ ಅತ್ಯಧಿಕ ಪ್ರಕರಣ

ನಾಲ್ಕೇ ತಿಂಗಳಿನಲ್ಲಿ ₹32.88 ಕೋಟಿ ಸಂಗ್ರಹ

Published:
Updated:
ನಾಲ್ಕೇ ತಿಂಗಳಿನಲ್ಲಿ ₹32.88 ಕೋಟಿ ಸಂಗ್ರಹ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಪಟ್ಟಂತೆ ಈ ವರ್ಷ ಅತ್ಯಧಿಕ ಪ್ರಕರಣಗಳು ದಾಖಲಾಗಿದ್ದು, ನಾಲ್ಕೇ ತಿಂಗಳಿನಲ್ಲೇ ₹32.88 ಕೋಟಿ ದಂಡ ಸಂಗ್ರಹವಾಗಿದೆ.

2017ರ ಜ. 1ರಿಂದ ಮೇ 31ರವರೆಗೆ 37.19 ಲಕ್ಷ ಪ್ರಕರಣಗಳನ್ನು ಸಂಚಾರ ಪೊಲೀಸರು ದಾಖಲಿಸಿಕೊಂಡಿದ್ದಾರೆ.

‘2008ರಲ್ಲಿ 20.79 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಆಗ ₹ 29.50 ಕೋಟಿ ದಂಡ ಸಂಗ್ರಹವಾಗಿತ್ತು. 2016ರಲ್ಲಿ ಪ್ರಕರಣಗಳ ಸಂಖ್ಯೆ 91.80 ಲಕ್ಷವಾಗಿದ್ದು, ₹ 66.97 ಕೋಟಿ ದಂಡ ಸಂಗ್ರಹಿಸಿದ್ದೆವು’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿ ತಿಳಿಸಿದರು.

‘ಈ ವರ್ಷ ಸಂಚಾರ ನಿಯಮ ಉಲ್ಲಂಘನೆಯ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಹೀಗೆ ಮುಂದುವರಿದರೆ ವರ್ಷದ ಅಂತ್ಯಕ್ಕೆ ದಂಡದ ಪ್ರಮಾಣ ₹100 ಕೋಟಿ ದಾಟುವ ಸಾಧ್ಯತೆ ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ಪರವಾನಗಿ ಇಲ್ಲದೆ ಚಾಲನೆ, ವೇಗದ ಚಾಲನೆ, ಟಿಂಟೆಡ್‌ ಗ್ಲಾಸ್‌, ವಿಮೆ ಇಲ್ಲದಿರುವುದು, ಹೆಲ್ಮೆಟ್‌ ಧರಿಸದಿರುವುದು, ನಿರ್ಬಂಧಿತ ಪ್ರದೇಶದಲ್ಲಿ ಹಾರ್ನ್‌ ಬಳಕೆಯ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ಅದರಲ್ಲೇ ಹೆಚ್ಚು ದಂಡವೂ ಸಂಗ್ರಹವಾಗಿದೆ’ ಎಂದು ಹೇಳಿದರು.

‘ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲೂ ಎಚ್ಚರಿಕೆ ಸಂದೇಶಗಳನ್ನು ಪ್ರಕಟಿಸುತ್ತಿದ್ದೇವೆ. ಆದರೂ ಉಲ್ಲಂಘನೆ ಪ್ರಕರಣಗಳು ಕಡಿಮೆಯಾಗುತ್ತಿಲ್ಲ’ ಎಂದು ತಿಳಿಸಿದರು.

ಪ್ರಕರಣ ದಾಖಲಿಸಿಕೊಂಡವರ ಪೈಕಿ 16ರಿಂದ 24 ವರ್ಷದ ಯುವಕ–ಯುವತಿಯರೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

‘ಮಕ್ಕಳಿಗೆ ಪೋಷಕರು ವಾಹನಗಳು ಕೊಡಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ. ಅಂಥ ಕೆಲ ವಿದ್ಯಾರ್ಥಿಗಳ ಪೋಷಕರನ್ನು ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದೇವೆ’ ಎಂದರು.

15 ಸಾವಿರ ಪರವಾನಗಿ ರದ್ದು: ‘ಮೂರಕ್ಕೂ ಹೆಚ್ಚು ಬಾರಿ ನಿಯಮ ಉಲ್ಲಂಘಿಸಿದ್ದ 15 ಸಾವಿರ ಚಾಲಕರ ಪರವಾನಗಿ ರದ್ದು ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ವಿಚಾರಣೆ ನಡೆಯುತ್ತಿದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry