ನಮ್ಮ ಮೆಟ್ರೊ: ಹೂಡಿಕೆಗೆ ಖಾಸಗಿ ಕಂಪೆನಿಗಳ ಆಸಕ್ತಿ

7
ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ಜಾರ್ಜ್‌

ನಮ್ಮ ಮೆಟ್ರೊ: ಹೂಡಿಕೆಗೆ ಖಾಸಗಿ ಕಂಪೆನಿಗಳ ಆಸಕ್ತಿ

Published:
Updated:
ನಮ್ಮ ಮೆಟ್ರೊ: ಹೂಡಿಕೆಗೆ ಖಾಸಗಿ ಕಂಪೆನಿಗಳ ಆಸಕ್ತಿ

ಬೆಂಗಳೂರು: ‘ನಮ್ಮ ಮೆಟ್ರೊ’ ಯೋಜನೆ   ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಇದಕ್ಕೆ ಹೂಡಿಕೆ ಮಾಡಲು ಖಾಸಗಿ ಸಂಸ್ಥೆಗಳೂ ಆಸಕ್ತಿ ತೋರುತ್ತಿವೆ  ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದರು.‘ನಮ್ಮ ಮೆಟ್ರೊ’ ಕೆಂಪೇಗೌಡ ನಿಲ್ದಾಣದಲ್ಲಿ ಭಾನುವಾರ ಉತ್ತರ– ದಕ್ಷಿಣ ಕಾರಿಡಾರ್‌ನ ಕಾಮಗಾರಿಗಳನ್ನು ಪರಿಶೀಲಿಸಿದ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.2020ಕ್ಕೆ ಎರಡನೆ ಹಂತ ಪೂರ್ಣ: ‘ಮೆಟ್ರೊ ಯೋಜನೆ  ನಿರಂತರ ಮುಂದುವರಿಯಲಿದೆ. 2020ರ ವೇಳೆಗೆ ಯೋಜನೆಯ ಎರಡನೇ ಹಂತವೂ ಪೂರ್ಣಗೊಳ್ಳಲಿದೆ. ಸಿಲ್ಕ್‌ಬೋರ್ಡ್‌–ಕೆ.ಆರ್‌.ಪುರ ಮಾರ್ಗಕ್ಕೆ ಬಂಡವಾಳ ಕ್ರೋಡೀಕರಿಸಲು ನವೀನ ಹಣಕಾಸು ವಿಧಾನ (ಇನೊವೇಟಿವ್‌  ಫೈನಾನ್ಸಿಂಗ್‌) ಅನುಸರಿಸುತ್ತಿದ್ದೇವೆ. ವಿಮಾನನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಕಲ್ಪಿಸುವುದಕ್ಕೂ ಮಾರ್ಗವನ್ನು ಅಂತಿಮಗೊಳಿಸಿದ್ದೇವೆ. ಶೀಘ್ರವೇ ಇದರ ಕಾಮಗಾರಿಯೂ ಆರಂಭವಾಗಲಿದೆ’ ಎಂದರು.‘ಯೋಜನೆಗೆ ಅನುದಾನ ಕ್ರೋಡೀಕರಣ ಸವಾಲಿನ ವಿಷಯ. ಮೆಟ್ರೊ ಸೇವೆಗೆ ಗ್ರಾಹಕರಿಂದಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿರುವುದರಿಂದ  ನವೀನ ಹಣಕಾಸು ವಿಧಾನದ ಅಡಿ ಹೂಡಿಕೆ ಮಾಡಲು ಅನೇಕ ಖಾಸಗಿ ಕಂಪೆನಿಗಳು ಮುಂದೆಬಂದಿವೆ. ಈ ವಿಧಾನ ಯಶಸ್ವಿಯಾದರೆ ಮೆಟ್ರೊ ಜಾಲವನ್ನು ಇನ್ನಷ್ಟು ವಿಸ್ತರಿಸುವುದು ಸುಲಭವಾಗಲಿದೆ’ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.ನಾಲ್ಕು ನಿಮಿಷಕ್ಕೊಂದು ರೈಲು: ‘ಮೆಟ್ರೊ ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ ಸಂಚಾರ ಆರಂಭವಾದ ಬಳಿಕ ಪ್ರಯಾಣಿಕರ ದಟ್ಟಣೆ ಹೆಚ್ಚಲಿದೆ. ಹಾಗಾಗಿ ಎರಡು ರೈಲುಗಳು ಸಂಚರಿಸುವ ನಡುವಿನ ಅವಧಿಯ ಅಂತರವನ್ನು ಕಡಿಮೆಗೊಳಿಸುತ್ತೇವೆ. ಅಗತ್ಯ ಬಿದ್ದರೆ ಪ್ರತಿ ನಾಲ್ಕು ನಿಮಿಷಕ್ಕೆ ಒಂದು ರೈಲು ಓಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದರು. ಸದ್ಯ ಉತ್ತರ ದಕ್ಷಿಣ ಕಾರಿಡಾರ್‌ನ ನಾಗಸಂದ್ರ– ಸಂಪಿಗೆರಸ್ತೆ ಮಾರ್ಗದಲ್ಲಿ  (ಹಸಿರು ಮಾರ್ಗ) ಸಂಚಾರ ದಟ್ಟಣೆ ಅವಧಿಯಲ್ಲಿ 6 ನಿಮಿಷಕ್ಕೊಂದು ಹಾಗೂ  ಮೈಸೂರು ರಸ್ತೆ– ಬೈಯಪ್ಪನಹಳ್ಳಿ ಮಾರ್ಗದಲ್ಲಿ (ನೇರಳೆ ಮಾರ್ಗ) ದಟ್ಟಣೆ ಅವಧಿಯಲ್ಲಿ ಪ್ರತಿ ನಾಲ್ಕು ನಿಮಿಷಕ್ಕೊಂದು ರೈಲು ಸಂಚರಿಸುತ್ತಿದೆ.ಬೋಗಿಗಳ ಸಂಖ್ಯೆ ಹೆಚ್ಚಳ: ‘ಪ್ರಸ್ತುತ ಮೆಟ್ರೊ ರೈಲು ಮೂರು ಬೋಗಿಗಳನ್ನು ಮಾತ್ರ ಹೊಂದಿದೆ. ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಬೋಗಿಗಳ ಸಂಖ್ಯೆಯನ್ನು ಆರಕ್ಕೆ ಹೆಚ್ಚಿಸುವ ಉದ್ದೇಶವಿದೆ. ಈ ಸಲುವಾಗಿ 150 ಬೋಗಿಗಳ ಖರೀದಿಗೆ ಬಿಇಎಂಎಲ್‌ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಡಿಸೆಂಬರ್‌ ವೇಳೆಗೆ  ಸಂಸ್ಥೆಯು ಬೋಗಿಗಳನ್ನು ಪೂರೈಸಲಿದೆ’ ಎಂದು ಸಚಿವರು ತಿಳಿಸಿದರು.ಮಹಿಳೆಯರಿಗೆ ಬೋಗಿ ಮೀಸಲು: ‘ರೈಲಿನ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ ಬಳಿಕ ಮಹಿಳೆಯರಿಗಾಗಿ ಒಂದು ಬೋಗಿಯನ್ನು ಮೀಸಲಿಡುವ ಉದ್ದೇಶ ಹೊಂದಿದ್ದೇವೆ’ ಎಂದರು. ನಿಗಮವು 50 ರೈಲುಗಳನ್ನು  (150 ಬೋಗಿಗಳನ್ನು) ಹೊಂದಿದೆ. ಈ ಪೈಕಿ  29 ರೈಲುಗಳು ಹಸಿರು ಮಾರ್ಗದಲ್ಲಿ ಹಾಗೂ 21 ರೈಲುಗಳು ನೇರಳೆ ಮಾರ್ಗದಲ್ಲಿವೆ. ಹಸಿರು ಮಾರ್ಗದಲ್ಲಿ ನಿತ್ಯ 6 ರೈಲುಗಳು ಹಾಗೂ ನೇರಳೆ ಮಾರ್ಗದಲ್ಲಿ  18 ರೈಲುಗಳು ಸಂಚರಿಸುತ್ತಿವೆ.ಸಂಚಾರ ದಿಢೀರ್‌ ಸ್ಥಗಿತ– ಆತಂಕ ಅನಗತ್ಯ

ಒಂದೇ ವಾರದಲ್ಲಿ ಮೂರು ಬಾರಿ ಮೆಟ್ರೊ ಸಂಚಾರ ಧಿಡೀರ್‌ ಸ್ಥಗಿತಗೊಂಡ   ಬಗ್ಗೆ ಪ್ರತಿಕ್ರಿಯಿಸಿದ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ‘ಇತ್ತೀಚೆಗೆ ಭಾರಿ ಮಳೆ  ಸುರಿದ ಸಂದರ್ಭದಲ್ಲಿ ನೀರು ಸೋರಿಕೆಯಿಂದ ಹಾಗೂ ಮಿಂಚಿನಿಂದ  ವಿದ್ಯುತ್‌ ಪೂರೈಕೆ ಕೇಬಲ್‌ಗೆ ಹಾನಿ ಉಂಟಾಗಿತ್ತು. ಅದರಿಂದಾಗಿ ವಿವೇಕಾನಂದ ನಿಲ್ದಾಣ ಮತ್ತು ಎಂ.ರಸ್ತೆ ನಡುವೆ ಸಂಚಾರ ಏಕಾಏಕಿ ಸ್ಥಗಿತಗೊಂಡಿತ್ತು. ಈ ಲೋಪವನ್ನು ಸರಿಪಡಿಸಲಾಗಿದೆ’ ಎಂದರು.

‘ಪ್ರತಿ ನಿಲ್ದಾಣದಲ್ಲೂ ತುರ್ತು ಪರಿಸ್ಥಿತಿಯಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸುವ ಸ್ವಿಚ್‌ (ಇಟಿಎಸ್‌)  ಅಳವಡಿಸಲಾಗಿದೆ. ಉತ್ತರ –ದಕ್ಷಿಣ ಕಾರಿಡಾರ್‌ನಲ್ಲಿ ಸಂಪಿಗೆರಸ್ತೆ– ಯಲಚೇನಹಳ್ಳಿ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಲು ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ.  ಶ್ರೀರಾಮಪುರ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಹಾಗೂ ಗೊರಗುಂಟೆಪಾಳ್ಯ ನಿಲ್ದಾಣದ ಬಳಿ ಶನಿವಾರ ರಾತ್ರಿ ರೈಲು ಏಕಾಏಕಿ ಸ್ಥಗಿತಗೊಳ್ಳಲು ಕಾರ್ಮಿಕರು ಇಟಿಎಸ್‌ ಅದುಮಿದ್ದು ಕಾರಣ’ ಎಂದು ಅವರು ವಿವರಿಸಿದರು.ಬಂಡವಾಳ ಹೂಡಿಕೆಗೆ ಉತ್ಸಾಹ: ಎರಡು ತಿಂಗಳಲ್ಲಿ ಒಪ್ಪಂದ

‘ಮೆಟ್ರೊ ಯೋಜನೆಯ ಎರಡನೇ ಹಂತದಲ್ಲಿ ನವೀನ ಹಣಕಾಸು ವಿಧಾನದಲ್ಲಿ  ಬಂಡವಾಳ ಹೂಡಲು  ಇನ್ಫೊಸಿಸ್‌, ಎಂಬಸಿ ಗ್ರೂಪ್‌ ಹಾಗೂ ಆರ್‌ಎಫ್‌ಜಡ್‌ ಕಂಪೆನಿಗಳು ಉತ್ಸಾಹ ತೋರಿಸಿವೆ’ ಎಂದು  ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು.‘ಈ ಕಂಪೆನಿಗಳ ಜೊತೆ ಮಾತುಕತೆ ನಡೆದಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಒಂದೆರಡು ತಿಂಗಳುಗಳಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಒಪ್ಪಂದಕ್ಕೆ ಬರುತ್ತೇವೆ’ ಎಂದರು.‘ಈ ವಿಧಾನದಲ್ಲಿ ಬಂಡವಾಳ ಕ್ರೋಡೀಕರಿಸಲು ವಿವಿಧ ಮಾರ್ಗಗಳನ್ನು ಅನುಸರಿಸಲಾಗುತ್ತದೆ. ಬಂಡವಾಳ ಹೂಡುವವರಿಗೆ ನಿರ್ದಿಷ್ಟ ನಿಲ್ದಾಣಗಳ ನಾಮಕರಣ ಹಕ್ಕು ಬಿಟ್ಟುಕೊಡುತ್ತೇವೆ.  ಸ್ಥಳನಾಮದ ಜೊತೆಗೆ  ಕಂಪೆನಿಯ ಹೆಸರನ್ನು ಸೇರಿಸಲು ಅವಕಾಶವಿದೆ. ಆ ನಿಲ್ದಾಣದ ಜಾಹೀರಾತು

ಹಕ್ಕನ್ನು 30 ವರ್ಷಗಳವರೆಗೆ ಅವರಿಗೆ ಬಿಟ್ಟುಕೊಡುತ್ತೇವೆ’ ಎಂದರು.‘ನಿಲ್ದಾಣದಿಂದ  ಕಂಪೆನಿಯ ಪ್ರಾಂಗಣಕ್ಕೆ ನೇರವಾಗಿ ಸಂಪರ್ಕ ಸೇತುವೆ ನಿರ್ಮಿಸುವುದಕ್ಕೂ ಅವಕಾಶವಿದೆ. ಇದಲ್ಲದೇ ನಿಲ್ದಾಣದಲ್ಲಿ ಲಭ್ಯವಿರುವ

ವಾಣಿಜ್ಯ ಪ್ರದೇಶವನ್ನು ಅವರು 30 ವರ್ಷಗಳವರೆಗೆ ಬಳಸಿಕೊಳ್ಳಬಹುದು’ ಎಂದು ಅವರು ವಿವರಿಸಿದರು.‘ಮೆಟ್ರೊ ನಿಲ್ದಾಣದದಿಂದ 1 ಕಿ.ಮೀ ವ್ಯಾಪ್ತಿಯಲ್ಲಿ ಹೆಚ್ಚುವರಿ ಪ್ರೀಮಿಯಮ್‌ ಫ್ಲೋರ್‌ ಸ್ಪೇಸ್‌ ಇಂಡೆಕ್ಸ್‌ (ಎಫ್‌ಎಸ್‌ಐ) ಮೊತ್ತವನ್ನು  ಪಾವತಿಸಿ   ಕಟ್ಟಡಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಕಲ್ಪಿಸುತ್ತೇವೆ. ಇದು ಕಟ್ಟಡದಲ್ಲಿ ಹೆಚ್ಚುವರಿ ಮಹಡಿ ನಿರ್ಮಿಸಲು ಅವಕಾಶ ಕಲ್ಪಿಸಲಿದೆ.  ಇದರಿಂದ ಸಂಗ್ರಹವಾಗುವ ಮೊತ್ತವನ್ನು ಮೆಟ್ರೊ ಯೋಜನೆಗೆ ಬಳಸಲಾಗುತ್ತದೆ’ ಎಂದು ಅವರು ತಿಳಿಸಿದರು.ಗಂಟೆಗೆ 80 ಕಿ.ಮೀ. ವೇಗದ ಸಂಚಾರಕ್ಕೆ ಅನುಮತಿ: ಖರೋಲ

ಸಂಪಿಗೆ ರಸ್ತೆ– ಯಲಚೇನಹಳ್ಳಿ ಮಾರ್ಗದಲ್ಲಿ ತಾಸಿಗೆ 80 ಕಿ.ಮೀ. ವೇಗದಲ್ಲಿ ರೈಲು ಸಂಚಾರಕ್ಕೆ ಅನುಮತಿ ನೀಡುವಂತೆ ರೈಲು ಸುರಕ್ಷತಾ ಆಯುಕ್ತರನ್ನು ಕೋರಿದ್ದೆವು.  ಅವರು ಒಪ್ಪಿಗೆ ಸೂಚಿಸಿದ್ದಾರೆ’ ಎಂದು ಖರೋಲ ತಿಳಿಸಿದರು.

‘ಈ ಮಾರ್ಗದಲ್ಲಿ ಯಾವುದೇ ಮಹತ್ತರ ಬದಲಾವಣೆಯನ್ನು ಅವರು ಸೂಚಿಸಿಲ್ಲ. ಸುರಂಗ ಮಾರ್ಗದಲ್ಲಿ ನೀರು ಸೋರಿಕೆಯಾಗುತ್ತಿತ್ತು. ಅದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ. ಅಂಗವಿಕಲ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ರ್‌್ಯಾಂಪ್‌ನ ಇಳಿಜಾರಿನ ಪ್ರಮಾಣ ಕಡಿಮೆ ಮಾಡುವಂತೆ ಸೂಚನೆ ನೀಡಿದ್ದಾರೆ.  ಅಗ್ನಿಶಾಮಕ ಪರಿಕರಗಳಿಂದಾಗಿ ಕೆಲವೆಡೆ ಪ್ಲ್ಯಾಟ್‌ಫಾರ್ಮ್‌ ತಲುಪುವ ದಾರಿಯ ಅಗಲ ಕಡಿಮೆಯಾಗಿದೆ. ಇದನ್ನು ಸರಿಪಡಿಸುವಂತೆ ಸಲಹೆ ನೀಡಿದ್ದಾರೆ’ ಎಂದರು.ನೀರು ಸೋರಿಕೆ: ಕೆಂಪೇಗೌಡ ನಿಲ್ದಾಣದಲ್ಲಿ ನಾಗಸಂದ್ರ– ಯಲಚೇನಹಳ್ಳಿ ಮಾರ್ಗದಲ್ಲಿ ಕೆಲವೆಡೆ ನೀರು ಸೋರಿಕೆ ಆಗುತ್ತಿರುವುದು ಕಂಡು ಬಂತು.ಅಂಕಿ ಅಂಶ

‘ನಮ್ಮ ಮೆಟ್ರೊ’ ಕಾರ್ಯಾಚರಣೆಗೆ ತಗಲುವ ಸರಾಸರಿ ವೆಚ್ಚ (ಒಂದು ತಿಂಗಳಿಗೆ) ₹12ಕೋಟಿ

ಬಿಎಂಆರ್‌ಸಿಎಲ್‌ನ ಸರಾಸರಿ ಗಳಿಕೆ (ಒಂದು ತಿಂಗಳಿಗೆ) ​₹10ಕೋಟಿ

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry