ಬಿಎಂಟಿಸಿ ಪ್ರಯಾಣಿಕರಿಗೆ 17ರಿಂದ ಸ್ಮಾರ್ಟ್ ಕಾರ್ಡ್‌

7

ಬಿಎಂಟಿಸಿ ಪ್ರಯಾಣಿಕರಿಗೆ 17ರಿಂದ ಸ್ಮಾರ್ಟ್ ಕಾರ್ಡ್‌

Published:
Updated:
ಬಿಎಂಟಿಸಿ ಪ್ರಯಾಣಿಕರಿಗೆ 17ರಿಂದ ಸ್ಮಾರ್ಟ್ ಕಾರ್ಡ್‌

ಬೆಂಗಳೂರು:  ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಇದೇ 17ರಿಂದ ಪ್ರಯಾಣಿಕರಿಗೆ ಸ್ಮಾರ್ಟ್ ಕಾರ್ಡ್‌ ವಿತರಿಸಲಿದೆ.

ಆರಂಭಿಕ ಹಂತದದಲ್ಲಿ ವಾಯುವಜ್ರ (ವಿಮಾನ ನಿಲ್ದಾಣ ಮಾರ್ಗ), ವಜ್ರ ಬಸ್‌ಗಳ ಪ್ರಯಾಣಿಕರಿಗೆ ಈ ಕಾರ್ಡ್‌ ನೀಡಲಾಗುತ್ತದೆ. ಹಂತ ಹಂತವಾಗಿ ಎಲ್ಲ ಬಸ್‌ಗಳಿಗೆ ಇದನ್ನು ವಿಸ್ತರಿಸಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಯಾಣಿಕರಿಗೆ ನಗದುರಹಿತ ಸೇವೆ ಒದಗಿಸಲು 2015ರಿಂದ  ಬಿಎಂಟಿಸಿ ಸಿದ್ಧತೆ ನಡೆಸುತ್ತಿದೆ. 2016ರ ಸೆಪ್ಟೆಂಬರ್‌ನಲ್ಲಿ ಸ್ಮಾರ್ಟ್‌ ಕಾರ್ಡ್‌ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಂಸ್ಥೆ ಈ  ಹಿಂದೆ ಪ್ರಕಟಿಸಿತ್ತು. ಅದನ್ನು ಜನವರಿಗೆ ಮುಂದೂಡಲಾಗಿತ್ತು. ವ್ಯವಸ್ಥೆಯಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆ ಇದ್ದ ಕಾರಣ ಸ್ವಲ್ಪ ವಿಳಂಬವಾಯಿತು ಎಂಬುದು ಅಧಿಕಾರಿಗಳ ಸಮಜಾಯಿಷಿ.

ಯಾವುದಕ್ಕೆ ಉಪಯೋಗ:  ಈ ಕಾರ್ಡ್‌ ಬಿಎಂಟಿಸಿ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರದೆ, ಮೆಟ್ರೊ  ಪ್ರಯಾಣಕ್ಕೆ, ವಾಹನ ನಿಲುಗಡೆ ಶುಲ್ಕ ಪಾವತಿಗೆ ಹಾಗೂ ವ್ಯಾಪಾರಿ ಮಳಿಗೆಗಳಲ್ಲಿ ಪಾವತಿಗೂ ಬಳಕೆಯಾಗಲಿದೆ. 

‘ನಗದುರಹಿತ ಸೇವೆಗೆ ಸ್ಮಾರ್ಟ್‌ಕಾರ್ಡ್‌ ಬಳಕೆ ಹೊಸತಲ್ಲ. ಸಾಮಾನ್ಯವಾಗಿ ಸೇವಾ ಸಂಸ್ಥೆಗಳು, ಆ ಸಂಸ್ಥೆಯ ಬಳಕೆಗೆ ಮಾತ್ರ ಸೀಮಿತವಾಗಿ ಸ್ಮಾರ್ಟ್‌ಕಾರ್ಡನ್ನು ಅಭಿವೃದ್ಧಿಪಡಿಸುತ್ತವೆ.

ಗ್ರಾಹಕರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ನಾವು ಓಪನ್‌ಲೂಪ್‌ ಸ್ಮಾರ್ಟ್‌ ಕಾರ್ಡ್‌ ಅಭಿವೃದ್ಧಿಪಡಿಸಿದ್ದೇವೆ. ನಿಗದಿತ ಮೊತ್ತವನ್ನು ರಿಚಾರ್ಜ್‌ ಮಾಡಿ ಇದನ್ನು ಇತರ ಪಾವತಿಗಳಿಗೂ ಬಳಸಬಹುದು’ ಎಂದು ಅವರು ಮಾಹಿತಿ ನೀಡಿದರು.ಇದು ಕಳೆದುಹೋದರೆ ಪ್ರಯಾಣಿಕರು ಚಿಂತೆ ಮಾಡಬೇಕಿಲ್ಲ. ಇತರರು ಬಳಸದಂತೆ ಇದನ್ನು ಬ್ಲಾಕ್‌ ಮಾಡಿಸಬಹುದು  ಎಂದು ಅಧಿಕಾರಿಗಳು ಹೇಳುತ್ತಾರೆ.

‘ಮೆಟ್ರೊ ರೈಲು ನಿಗಮ ಈಗಾಗಲೇ ತನ್ನದೇ ಸ್ಮಾರ್ಟ್‌ಕಾರ್ಡ್‌ ಹೊಂದಿದೆ. ಬಿಎಂಟಿಸಿ ಸ್ಮಾರ್ಟ್‌ಕಾರ್ಡ್‌ನ್ನು ಮೆಟ್ರೊಗೂ ಬಳಸುವ ಬಗ್ಗೆ ಮಾತುಕತೆ ನಡೆದಿದೆ’ ಎಂದರು.

****

ಪ್ರಯೋಜನಗಳೇನು?

l  ಬಿಎಂಟಿಸಿ ಆದಾಯ ಸೋರಿಕೆಗೆ ಕಡಿವಾಣ ಬೀಳಲಿದೆ.

l  ಸ್ಮಾರ್ಟ್‌ಕಾರ್ಡನ್ನು ವಿದ್ಯುನ್ಮಾನ ಟಿಕೆಟ್‌ ಯಂತ್ರಕ್ಕೆ (ಇಟಿಎಂ) ಸ್ಪರ್ಶಿಸಿದಾಗ ನಿಗದಿತ ಮೊತ್ತ ಕಡಿತವಾಗುತ್ತದೆ. ಇದರ ಬಳಕೆಯೂ ಸುಲಭ.

l  ಎಟಿಎಂ ಕಾರ್ಡ್‌ನ ಗಾತ್ರದಲ್ಲಿರುವ ಇದನ್ನು ಒಯ್ಯುವುದು ಸುಲಭ.

l  ನಿರ್ವಾಹಕರ ಮೇಲಿನ ಒತ್ತಡವನ್ನೂ ಕಡಿಮೆಯಾಗಲಿದೆ.

l  ವಿವಿಧ ಉದ್ದೇಶಗಳಿಗೆ ಬಳಸಲು ಅವಕಾಶ ಇರುವುದರಿಂದ ಇದು ಹೆಚ್ಚು ಗ್ರಾಹಕಸ್ನೇಹಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry