ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಜ್ಜಾಗಿದೆ ದೇಶದ ದೊಡ್ಡ ಮೆಟ್ರೊ ನಿಲ್ದಾಣ

ಏಕಕಾಲದಲ್ಲಿ 20 ಸಾವಿರ ಪ್ರಯಾಣಿಕರ ನಿರ್ವಹಣೆಗೆ ವ್ಯವಸ್ಥೆ
Last Updated 11 ಜೂನ್ 2017, 20:25 IST
ಅಕ್ಷರ ಗಾತ್ರ

ಬೆಂಗಳೂರು: ದೇಶದಲ್ಲೇ ಅತ್ಯಂತ ದೊಡ್ಡದು ಎಂಬ ಹಿರಿಮೆಗೆ ಪಾತ್ರವಾದ ಮೆಜೆಸ್ಟಿಕ್‌ನ ‘ಕೆಂಪೇಗೌಡ ಇಂಟರ್‌ಚೇಂಜ್‌  ಮೆಟ್ರೊ ನಿಲ್ದಾಣ’ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ.

ಈ ನಿಲ್ದಾಣ ಏಕಕಾಲದಲ್ಲಿ 20,000 ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಸಾಮರ್ಥ್ಯ ಹೊಂದಿದೆ. ಈ ನಿಲ್ದಾಣದ ಬಹುತೇಕ ಎಲ್ಲಾ ಕಾಮಗಾರಿಗಳು ಪೂರ್ಣಗೊಂಡಿದ್ದು, ಪ್ರಯಾಣಿಕರಿಗೆ ಆಸನ ವ್ಯವಸ್ಥೆ, ಮಾರ್ಗಸೂಚಿ ಫಲಕಗಳನ್ನು ಅಳವಡಿಸುವ ಸಣ್ಣಪುಟ್ಟ ಕೆಲಸಗಳು ಮಾತ್ರ ಬಾಕಿ ಇವೆ.

ಈ ನಿಲ್ದಾಣಕ್ಕೆ ಬರುವ ರೈಲುಗಳು ನಗರದ ನಾಲ್ಕೂ ದಿಕ್ಕಿನಿಂದ ಪ್ರಯಾಣಿಕರನ್ನು ಹೊತ್ತು ತರಲಿವೆ. ಉತ್ತರ–ದಕ್ಷಿಣ ಕಾರಿಡಾರ್‌ (ಯಲಚೇನಹಳ್ಳಿ– ನಾಗಸಂದ್ರ ಮಾರ್ಗ) ಹಾಗೂ ಪೂರ್ವ ಪಶ್ಚಿಮ ಕಾರಿಡಾರ್‌ (ಬೈಯಪ್ಪನಹಳ್ಳಿ– ಮೈಸೂರು ರಸ್ತೆ ಮಾರ್ಗ) ಪ್ರಯಾಣಿಕರು ಮಾರ್ಗ ಬದಲಾಯಿಸಲು ಈ ನಿಲ್ದಾಣವನ್ನು ಬಳಸಬಹುದು.

‘ಪ್ರಸ್ತುತ ಈ ನಿಲ್ದಾಣ ದಿನವೊಂದಕ್ಕೆ ಸರಾಸರಿ 39,000 ಪ್ರಯಾಣಿಕರನ್ನು ನಿರ್ವಹಣೆ ಮಾಡುತ್ತಿದೆ. ‘ನಮ್ಮ ಮೆಟ್ರೊ’ ಯೋಜನೆಯ ಮೊದಲ ಹಂತದ ಎಲ್ಲಾ ಮಾರ್ಗಗಳಲ್ಲೂ  ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರ ಆರಂಭವಾದ ಬಳಿಕ ಇಲ್ಲಿ ಪ್ರಯಾಣಿಕರ ದಟ್ಟಣೆ  ಮೂರು ಪಟ್ಟು ಹೆಚ್ಚಾಗಲಿದೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ  ಅಧಿಕಾರಿಯೊಬ್ಬರು  ತಿಳಿಸಿದರು. 



‘ಮೊದಲ ಹಂತ ಉದ್ಘಾಟನೆಗೊಂಡ ಬಳಿಕ ಈ ನಿಲ್ದಾಣ ಹೇಗೆ ಕಾರ್ಯನಿರ್ವಹಿಸಲಿದೆ ಎಂಬ ಕುತೂಹಲ ನಮಗೂ ಇದೆ. ಮಾರ್ಗ ಬದಲಾಯಿಸುವಾಗ ಕೆಲವು ಪ್ರಯಾಣಿಕರು ಗೊಂದಲಕ್ಕೆ ಒಳಗಾಗುವುದು ಸಹಜ. ಇದನ್ನು ತಪ್ಪಿಸಲು ನಾವು ಸಾಧ್ಯವಾದಷ್ಟು ಪ್ರಯತ್ನ ಮಾಡಿದ್ದೇವೆ. ಅಗತ್ಯವಿರುವ ಕಡೆ ಮಾರ್ಗಸೂಚಿ ಫಲಕಗಳನ್ನು ಅಳವಡಿಸುತ್ತಿದ್ದೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲ ‘ಪ್ರಜಾವಾಣಿ’ಗೆ ತಿಳಿಸಿದರು.

ಮೆಜೆಸ್ಟಿಕ್‌ನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಕೇಂದ್ರ ಬಸ್‌ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತದೆ. ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವೂ (ನಗರ ರೈಲು  ನಿಲ್ದಾಣ) ಇಲ್ಲಿಂದ  ಕೆಲವೇ ಮೀಟರ್‌ಗಳಷ್ಟು ದೂರದಲ್ಲಿದೆ. ಈ  ನಿಲ್ದಾಣವನ್ನು ಬಳಸುವವರ ಪೈಕಿ ರಾಜಧಾನಿಯಿಂದ  ಬೇರೆ ಊರುಗಳಿಗೆ ಪ್ರಯಾಣಿಸುವವರ ಸಂಖ್ಯೆ  ಹೆಚ್ಚು.     

‘ಈಗಾಗಲೇ ಪ್ರತಿ ಶುಕ್ರವಾರ ಸಂಜೆ ಬಳಿಕ ಹಾಗೂ ಪ್ರತಿ ಸೋಮವಾರ ಮುಂಜಾನೆ ಪ್ರಯಾಣಿಕರ ದಟ್ಟಣೆ ವಿಪರೀತ ಹೆಚ್ಚಳವಾಗುತ್ತದೆ. ಸಾಲು ಸಾಲು ಸರ್ಕಾರಿ ರಜೆಗಳು ಬಂದಾಗಲೂ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತದೆ’ ಎಂದು ನಿಲ್ದಾಣದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಮೆಜೆಸ್ಟಿಕ್‌ನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ ನಿಲ್ದಾಣವೂ ಮೆಟ್ರೊ ನಿಲ್ದಾಣದ ಪಕ್ಕದಲ್ಲೇ ಇದೆ.  ಬಿಎಂಟಿಸಿ ಬಸ್‌ ಬಳಸಿ ನಗರದ ಬೇರೆ ಬೇರೆ ಪ್ರದೇಶಗಳಿಗೆ ತಲುಪುವವರೂ ಈ ನಿಲ್ದಾಣವನ್ನು ಬಳಸುತ್ತಾರೆ. ಹಾಗಾಗಿ ಉಳಿದ ಮೆಟ್ರೊ ನಿಲ್ದಾಣಗಳಿಗಿಂತ ಇಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುತ್ತದೆ.



ಸವಾಲಿನಿಂದ ಕೂಡಿತ್ತು ಕಾಮಗಾರಿ
‘ಈ ನಿಲ್ದಾಣದ ಕಾಮಗಾರಿ ಆರಂಭವಾಗಿದ್ದು 2012ರಲ್ಲಿ. ನಗರದಲ್ಲಿ ಅತ್ಯಂತ ಹೆಚ್ಚು ಜನದಟ್ಟಣೆ ಇರುವ ಪ್ರದೇಶದಲ್ಲಿ ನಾವು ಕಾಮಗಾರಿ ನಡೆಸಬೇಕಾಗಿತ್ತು. ಇಲ್ಲಿ ವಾಹನ ದಟ್ಟಣೆಯೂ ಅಧಿಕ. ಹಾಗಾಗಿ ಕಟ್ಟಡ ಸಾಮಗ್ರಿಗಳನ್ನು  ಇಲ್ಲಿಗೆ ಸಾಗಿಸಲೂ ಹರಸಾಹಸಪಡಬೇಕಾಗಿತ್ತು. ಈ ಸಲುವಾಗಿ ಈ ನಿಲ್ದಾಣದ ಬಹುಪಾಲು ಕೆಲಸವನ್ನು ರಾತ್ರಿ ವೇಳೆಯೇ ನಡೆಸಿದ್ದೇವೆ’ ಎಂದು ಸ್ಮರಿಸಿಕೊಳ್ಳುತ್ತಾರೆ ಮೆಟ್ರೊ ಮುಖ್ಯ ಎಂಜಿನಿಯರ್‌ ಎಸ್.ಎಸ್‌.ಹೆಗಾರೆಡ್ಡಿ.

ನೀರು ಒಸರುವ ಸಮಸ್ಯೆ: ‘ಹಿಂದೆ ಕೆರೆ ಇದ್ದ ಜಾಗವಿದು. ನಾವು ಇಲ್ಲಿ ನೆಲಮಟ್ಟದಿಂದ 70 ಅಡಿಗಳಷ್ಟು ಆಳದಲ್ಲಿ ಕೆಲಸ ಮಾಡಿದ್ದೇವೆ. ಕಾಮಗಾರಿ ನಡೆಸುವಾಗ ನೀರು ಒಸರುವ ಸಮಸ್ಯೆ ಬಹಳ ಇತ್ತು.  ನೀರನ್ನು ಪಂಪ್‌ ಮೂಲಕ ಹೊರಹಾಕಿ ಕೆಲಸ ಮುಂದುವರಿಸಬೇಕಾಗುತ್ತಿತ್ತು. ಮಳೆ ಬಂದರಂತೂ  ಈ ಸಮಸ್ಯೆ ಇನ್ನಷ್ಟು ಹೆಚ್ಚುತ್ತಿತ್ತು’ ಎಂದು ಅವರು ಸ್ಮರಿಸಿದರು.

‘ಬಿರುಸಿನಿಂದ ಕೆಲಸ ನಡೆಯುತ್ತಿದ್ದ ದಿನಗಳಲ್ಲಿ ಏಕಕಾಲದಲ್ಲಿ ಇಲ್ಲಿ 1600 ಕಾರ್ಮಿಕರು ಕೆಲಸ ನಿರ್ವಹಿಸಿದ ಉದಾಹರಣೆ ಇದೆ. ಸಾಮಾನ್ಯವಾಗಿ ಸರಾಸರಿ 650 ಮಂದಿ ಕಾರ್ಯನಿರ್ವಹಿಸುತ್ತಿದ್ದರು’ ಎಂದು ಅವರು ಮೆಲುಕು ಹಾಕಿದರು.

‘ಈ ನಿಲ್ದಾಣ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಗೆ ಸಿದ್ಧವಾಗಿದೆ. ಈ ದಿನಗಳಿಗಾಗಿ ನಾವು ಕಾತರದಿಂದ ಕಾಯುತ್ತಿದ್ದೆವು. ನಗರಕ್ಕೆ ಪ್ರಮುಖ ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಕಾರ್ಯನಿರ್ವಹಿಸಿದ ಹೆಮ್ಮೆ ನಮ್ಮದು’ ಎಂದು ಖುಷಿ ಹಂಚಿಕೊಂಡರು.

ನಿರ್ಮಾಣವಾಗಲಿದೆ ವಾಣಿಜ್ಯ ಸಂಕೀರ್ಣ
ಈ ನಿಲ್ದಾಣ ಮೇಲೆ ಇನ್ನಷ್ಟು ಮಹಡಿಗಳನ್ನು ನಿರ್ಮಿಸಿ ಅವುಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುವ  ಹಾಗೂ  ಕೆಲವು ಮಹಡಿಗಳಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡುವ ಚಿಂತನೆಯನ್ನು ಬಿಎಂಆರ್‌ಸಿಎಲ್‌ ಹೊಂದಿದೆ.

‘ಈ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಯಾವ ರೀತಿಯ ವಾಣಿಜ್ಯ ಚಟುವಟಿಕೆಗೆ ಅವಕಾಶ ಕಲ್ಪಿಸಿದರೆ ಹೆಚ್ಚು ಆದಾಯ ಬರಲಿದೆ, ಯಾವುದಕ್ಕೆ ಬೇಡಿಕೆ ಹೆಚ್ಚು ಇದೆ ಎಂಬುದನ್ನು ನೋಡಿಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ’ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯು.ಎ.ವಸಂತ ರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT