ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದ ಭೌಗೋಳಿಕ ವ್ಯವಸ್ಥೆ ಮೇಲೆ ಅತ್ಯಾಚಾರ

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಆಕ್ರೋಶ
Last Updated 11 ಜೂನ್ 2017, 20:21 IST
ಅಕ್ಷರ ಗಾತ್ರ

ಬೆಂಗಳೂರು: ‘ಈ ನಗರದ ಸಮಸ್ಯೆಗಳು ಎಂದಿಗೂ ಪರಿಹಾರವಾಗುವುದಿಲ್ಲ.  ಏಕೆಂದರೆ ಅಷ್ಟಮಟ್ಟಿಗೆ ಬೆಂಗಳೂರಿನ ಭೌಗೋಳಿಕ ವ್ಯವಸ್ಥೆಯ ಮೇಲೆ ಅತ್ಯಾಚಾರ ನಡೆದಿದೆ’ ಎಂದು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದರು.

ಉದಯಭಾನು ಕಲಾಸಂಘ ತನ್ನ 53ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ಹಮ್ಮಿಕೊಂಡಿದ್ದ ‘ಬೆಂಗಳೂರು ದರ್ಶನದ ಮೂರು ಸಂಪುಟಗಳ ಒಳನೋಟ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಗರದಲ್ಲಿ ನೀರು ನಿರ್ವಹಣಾ ವ್ಯವಸ್ಥೆ ಸರಿಯಾಗಿ ಆಗಬೇಕು ಎಂದು ನಾನು  ಈ ಹಿಂದೆ ಪ್ರಸ್ತಾಪಿಸಿದ್ದೆ. ಇದು ಮೆಟ್ರೊಗಿಂತಲೂ ಮುಖ್ಯ ಎಂದು ಹೇಳಿದ್ದೆ. ಆದರೆ, ಸರ್ಕಾರದ ಆದ್ಯತೆಗಳು ಬೇರೆಯಾದ್ದರಿಂದ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ’ ಎಂದರು.

‘ನಾನು ಅನೇಕ ಭಾಷೆಯ ಪುಸ್ತಕಗಳನ್ನು ಓದಿದ್ದೇನೆ. ಯಾವ ಭಾಷೆಯಲ್ಲಿಯೂ ಒಂದು ಪಟ್ಟಣದ ಕುರಿತು ಸಮಗ್ರ ಚಿತ್ರಣ ನೀಡುವ ಪುಸ್ತಕ ಪ್ರಕಟವಾಗಿಲ್ಲ. ಸಂಪುಟ ಒಂದರಲ್ಲಿ ನಗರದ ಭೌಗೋಳಿಕ ವ್ಯವಸ್ಥೆ, ಸಂಪುಟ ಎರಡರಲ್ಲಿ ಸಾಮಾಜಿಕ ಬದುಕು ಮತ್ತು ಸಂಪುಟ ಮೂರರಲ್ಲಿ ಸಾಂಸ್ಕೃತಿಕ ಲೋಕದ ಕುರಿತು ವಿವರಗಳಿವೆ’ ಎಂದರು.

‘ಇಂತಹ ಪುಸ್ತಕಗಳಲ್ಲಿ ನಗರದ ಸಕಾರಾತ್ಮಕ ಅಂಶವನ್ನು ಮಾತ್ರ ಪ್ರಕಟಿಸಲಾಗುತ್ತದೆ. ಆದರೆ, ಈ ಪುಸ್ತಕ ಭಿಕ್ಷಾಟನೆ, ಕೊಳೆಗೇರಿ ಬದುಕು, ರಸ್ತೆಬದಿ ಅಂಗಡಿಗಳು... ಹೀಗೆ ನಗರದ ವಿವಿಧ ಮುಖಗಳನ್ನು ಬಿಚ್ಚಿಟ್ಟಿದೆ’ ಎಂದು ತಿಳಿಸಿದರು.

‘ಬೆಂಗಳೂರಿನ ವಿಶ್ವಕೋಶವಾಗಿರುವ ಈ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಅದನ್ನು ಮರೆತಿರುವ ಸರ್ಕಾರ ತನ್ನ ಯೋಜನೆಗಳ ಪ್ರಚಾರಕ್ಕೆ ₹50 ಕೋಟಿ ವೆಚ್ಚ ಮಾಡುತ್ತಿದೆ. ಚುನಾವಣೆ ಬರುವ ವೇಳೆಗೆ ಅದು ₹100 ಕೋಟಿಗೆ ತಲುಪಿದರೂ ಆಶ್ಚರ್ಯವಿಲ್ಲ’ ಎಂದು ಕಿಡಿಕಾರಿದರು.

ರಂಗಕರ್ಮಿ ಪ್ರಕಾಶ್‌ ಬೆಳವಾಡಿ, ‘ಬೆಂಗಳೂರು ಹೇಗಿದೆ, ಇಲ್ಲಿನ ಒಳಚರಂಡಿ ವ್ಯವಸ್ಥೆ ಹೇಗಿದೆ ಎಂಬುದನ್ನು ತಿಳಿಯಲು ರಾಜ್ಯ ಸರ್ಕಾರದ ಬಳಿ ಯಾವುದೇ ನಕ್ಷೆ ಇಲ್ಲ ಎಂಬುದೇ ವಿಪರ್ಯಾಸ’ ಎಂದರು.

‘ನಗರದಲ್ಲಿ ನೀರಿನ ಸಂಪರ್ಕ ಜಾಲ ಹೇಗಿದೆ ಎಂಬುದು ಯಾವ ಅಧಿಕಾರಿಗಳಿಗೂ ಗೊತ್ತಿಲ್ಲ. ತಿಳಿಯುವ ಪ್ರಯತ್ನವನ್ನೂ ಅವರು ಮಾಡುವುದಿಲ್ಲ. ಹಾಗಾಗಿಯೇ ವಿಮಾನ ನಿಲ್ದಾಣ ರಸ್ತೆಯಲ್ಲಿ ಮ್ಯಾಜಿಕ್‌ ಬಾಕ್ಸ್‌ ಅಳವಡಿಸಲು ಅಷ್ಟು ಸಮಯ ತೆಗೆದುಕೊಂಡರು. ನಮ್ಮ ಮನೆಗಳಿಗೆ ನೀರು ಬರುವುದೇ ಒಂದು ಮ್ಯಾಜಿಕ್‌’ ಎಂದು ವ್ಯಂಗ್ಯವಾಡಿದರು.

ವಿಜ್ಞಾನ ಲೇಖಕ ನಾಗೇಶ್‌ ಹೆಗಡೆ, ‘ಬೆಂಗಳೂರಿನಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೆರೆಗಳ ಹರಣ ಆಗಿದೆ. ಬೇರೆ ಯಾವ ನಗರದಲ್ಲೂ ಜಲಮೂಲಗಳ ಮೇಲೆ ಈ ರೀತಿಯ ಆಕ್ರಮಣ ನಡೆದಿಲ್ಲ.  

ಲಂಡನ್‌ನಲ್ಲಿ ಬೆಳೆಯುತ್ತಿದ್ದ ಎಲ್ಲಾ ಬೆಳೆಗಳು  ಇಲ್ಲೂ ಬೆಳೆಯುತ್ತಿದ್ದವು. ಅದಕ್ಕಾಗಿಯೇ ಬ್ರಿಟಿಷರಿಗೆ ಈ ನಗರ ಬಹಳ ಇಷ್ಟವಾಗಿತ್ತು. ಸೇಬಿನ ತೋಟಗಳು ಬಹಳಷ್ಟಿದ್ದವು. ಆದರೆ, ಈಗ ಅವೆಲ್ಲ ಮಾಯವಾಗಿ ಲಂಟಾನ, ಪಾರ್ಥೇನಿಯಂನಿಂದ ತುಂಬಿ ಹೋಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT