ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಾಣವಾಗಿ 6 ವರ್ಷವಾದರೂ ತೆರೆಯದ ಶಾಲೆ!

1945ರಲ್ಲಿ ಸ್ಥಾಪನೆಯಾಗಿದ್ದ ಈ ಶಾಲೆ
Last Updated 11 ಜೂನ್ 2017, 20:23 IST
ಅಕ್ಷರ ಗಾತ್ರ

ಬೆಂಗಳೂರು: ಹಲಸೂರಿನ ಜೋಗುಪಾಳ್ಯದಲ್ಲಿರುವ ಸುಬ್ಬಯ್ಯ ರೆಡ್ಡಿ ಹಿರಿಯ ಪ್ರಾಥಮಿಕ ಶಾಲೆ ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಂಡು ಆರು ವರ್ಷಗಳು ಕಳೆದಿವೆ. ಆದರೆ, ಆ ಶಾಲೆಯಲ್ಲಿ ಕಲಿಯುವ ಭಾಗ್ಯ ಮಾತ್ರ ಮಕ್ಕಳಿಗೆ ಇನ್ನೂ ಒದಗಿಲ್ಲ.

ನಗರದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಒಂದೊಂದಾಗಿಯೇ ಮುಚ್ಚುತ್ತಿವೆ. ಸುಸಜ್ಜಿತ ಕಟ್ಟಡ ಇದ್ದರೂ ಈ ಶಾಲೆ ಪ್ರಾರಂಭವಾಗಿಲ್ಲ. ‘ಬಿಬಿಎಂಪಿಯೂ ನಿರ್ಲಕ್ಷ್ಯ ವಹಿಸಿದೆ’ ಎಂದು ಸುತ್ತಮುತ್ತಲಿನ ನಿವಾಸಿಗಳು ಆರೋಪಿಸಿದ್ದಾರೆ.

ಸ್ವಾತಂತ್ರ್ಯಪೂರ್ವದಲ್ಲಿ ನಿರ್ಮಾಣಗೊಂಡಿದ್ದ ಈ ಶಾಲಾ ಕಟ್ಟಡ ಸಂಪೂರ್ಣ ಶಿಥಿಲಗೊಂಡಿತ್ತು. 2006ರಲ್ಲಿ ಬಂದ ಭಾರಿ ಮಳೆಗೆ ಕಟ್ಟಡ ಹಾನಿಯಾಗಿದ್ದರಿಂದ ಆಗ ಅದನ್ನು ಮುಚ್ಚಲಾಯಿತು. ನಂತರ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2008ರಲ್ಲಿ ಕಟ್ಟಡ ಪುನರ್‌ ನಿರ್ಮಾಣಕ್ಕೆ ಟೆಂಡರ್‌ ನೀಡಿತ್ತು.

2011ರಲ್ಲೇ ಕಟ್ಟಡ ಕಾಮಗಾರಿ ಮುಕ್ತಾಯಗೊಂಡಿದೆ. ಆದರೆ, ಗುತ್ತಿಗೆದಾರರಿಗೆ ಹಣ ಪಾವತಿ ಮಾಡದೆ, ಸುಸಜ್ಜಿತವಾಗಿ ನಿರ್ಮಿಸಿರುವ ಶಾಲೆಗೆ ಉದ್ಘಾಟನೆಯ ಯೋಗ ಬಂದಿಲ್ಲ. ಹಣ ಪಾವತಿಸುವವರೆಗೆ ಬೀಗ ಕೊಡುವುದಿಲ್ಲ ಎಂದು ಗುತ್ತಿಗೆದಾರ ಪಟ್ಟು ಹಿಡಿದಿದ್ದಾರೆ.

ಇಕ್ಕಟ್ಟಿನಲ್ಲಿ 82 ಮಕ್ಕಳಿಗೆ ಪಾಠ: ಈ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ ಸುಮಾರು 82 ಮಕ್ಕಳು ಕಲಿಯುತ್ತಿದ್ದಾರೆ. ನೂತನ ಶಾಲಾ ಕಟ್ಟಡಕ್ಕೆ ಬೀಗ ಜಡಿದಿರುವುದರಿಂದ ಪಕ್ಕದಲ್ಲಿರುವ ಪ್ರೌಢಶಾಲೆಯಲ್ಲಿ ಜಾಗ ಪಡೆದು ಎರಡೇ ಕೊಠಡಿಗಳಲ್ಲಿ ಎಲ್ಲಾ ಮಕ್ಕಳನ್ನು ಕೂಡಿ ಹಾಕಿ ಪಾಠ ಮಾಡಲಾಗುತ್ತಿದೆ.
‘ಇದರಿಂದ ಕೆಲವು ಮಕ್ಕಳು ಗೈರು ಹಾಜರಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ’ ಎಂದು ಶಿಕ್ಷಕಿಯೊಬ್ಬರು ತಿಳಿಸಿದರು.

ಏಕೈಕ ಕನ್ನಡ ಮಾಧ್ಯಮ ಶಾಲೆ: 1945ರಲ್ಲಿ ನಿರ್ಮಾಣಗೊಂಡಿದ್ದ ಈ ಶಾಲೆ ಆರಂಭದಲ್ಲಿ ಸಾವಿರಾರು ಮಕ್ಕಳು ಕಲಿಯುತ್ತಿದ್ದರು. ಹಲಸೂರು, ಜೋಗುಪಾಳ್ಯದ ಸುತ್ತಮುತ್ತಲಿನ ಬಡಾವಣೆಗಳ ಪೈಕಿ ಕನ್ನಡ ಮಾಧ್ಯಮದ ಏಕೈಕ ಹಿರಿಯ ಪ್ರಾಥಮಿಕ ಶಾಲೆ ಇದಾಗಿತ್ತು.

ಶಾಲೆ ಪ್ರಾರಂಭಿಸಬೇಕೆಂದು ಹಳೆಯ ವಿದ್ಯಾರ್ಥಿಗಳು ಮತ್ತು ಅಲ್ಲಿನ ಸ್ಥಳೀಯರು ಹೋರಾಟ ಮಾಡುತ್ತಿದ್ದರೂ ಪಾಲಿಕೆ ಮಾತ್ರ ಕಿವಿಮುಚ್ಚಿಕೊಂಡು ಕುಳಿತಿದೆ. ಈ ಶಾಲೆಯ ಅಕ್ಕಪಕ್ಕದಲ್ಲಿರುವ ಉರ್ದು ಮತ್ತು ತಮಿಳು ಶಾಲೆಗಳು ಅಚ್ಚುಕಟ್ಟಾಗಿ ನಡೆಯುತ್ತಿವೆ ಎಂದು ಸ್ಥಳೀಯರು ಹೇಳುತ್ತಾರೆ.

₹36 ಲಕ್ಷ ಬಾಕಿ ನೀಡಬೇಕಿದೆ
‘ಶಾಲೆ ಕಟ್ಟಡವನ್ನು ಸಂಪೂರ್ಣವಾಗಿ ಹೊಸದಾಗಿಯೇ ನಿರ್ಮಿಸಬೇಕೆಂದು ₹86 ಲಕ್ಷಕ್ಕೆ ಬಿಬಿಎಂಪಿ ಗುತ್ತಿಗೆ ನೀಡಿತ್ತು. 2011ರಲ್ಲಿ ಕಾಮಗಾರಿ ಪೂರ್ಣಗೊಳಿಸಿ ಬಿಲ್‌ ನೀಡಲು ಎಂಜಿನಿಯರ್‌ಗೆ ಕೇಳಿದರೆ ಅವರು ಬಿಲ್‌ ಕೊಡಲಿಲ್ಲ. ಬಿಬಿಎಂಪಿಗೆ ಅಲೆದಾಡಿ 2015ರಲ್ಲಿ ₹60 ಲಕ್ಷ ಹಣ  ಬಿಡುಗಡೆಯಾಯಿತು’ ಎಂದು ಗುತ್ತಿಗೆ ಪಡೆದ ಸಿ. ಬಾಬು ತಿಳಿಸಿದರು.

‘ಪೂರ್ತಿ ಹಣ ಬಿಡುಗಡೆಯಾಗಬೇಕೆಂದರೆ ₹1 ಲಕ್ಷ ನೀಡಬೇಕು ಎಂದು ಪಾಲಿಕೆ ಎಂಜಿನಿಯರ್ ಒಬ್ಬರು ಲಂಚ ಕೇಳಿದರು. ಕೊಡುವುದಿಲ್ಲ ಎಂದಿದ್ದರಿಂದ ಅವರು ಹಣ ಬಿಡುಗಡೆ ಮಾಡಲಿಲ್ಲ. ಕೊನೆಗೆ ಬೇರೆ ಎಂಜಿನಿಯರ್ ಬಂದರು. ಹಣ ಬರುತ್ತದೆ ಎಂಬ ಭರವಸೆಯೊಂದಿಗೆ ಉಳಿದ ಶೇ 20ರಷ್ಟು ಪೂರ್ತಿಗೊಳಿಸಿದೆವು. ಆದರೆ ಬಾಕಿ ಬರಬೇಕಿದ್ದ ₹ 36 ಲಕ್ಷ ಇದುವರೆಗೂ ಬಂದಿಲ್ಲ. ಸಂಬಂಧಪಟ್ಟವರಿಗೆ ಕೇಳಿದರೆ, ಬರುತ್ತದೆ  ಎನ್ನುತ್ತಿದ್ದಾರೆ. ಹೀಗಾಗಿ ಬೀಗ ಹಾಕಿದ್ದೇನೆ.ನನಗೆ ಬಿಬಿಎಂಪಿಯಿಂದ ಪೂರ್ತಿ ಹಣ ಸಿಕ್ಕ ನಂತರವೇ ನಾನು ಬೀಗ ಕೊಡುವುದು’ ಎಂದರು.

ನೂತನ ಶಾಲಾ ಕಟ್ಟಡದ ವಿಶೇಷತೆ
* 8,000 ಅಡಿ ವಿಸ್ತೀರ್ಣ
* 11 ಸುಸಜ್ಜಿತ ತರಗತಿಗಳ ಕೊಠಡಿ
*  ಪ್ರತಿ ತರಗತಿಯಲ್ಲೂ ಗುಣಮಟ್ಟದ ಕಪ್ಪು ಬೋರ್ಡ್‌
*  ಪ್ರತಿ ಕೊಠಡಿಗೂ ತಲಾ ಎರಡು ಫ್ಯಾನ್‌ ಹಾಗೂ ಟ್ಯೂಬ್‌ಲೈಟ್‌

*  ನೀರಿಗಾಗಿ ಬೋರ್‌ವೆಲ್ ಹಾಗೂ ನೀರು ಸಂಗ್ರಹಕ್ಕಾಗಿ ಬಾವಿ ವ್ಯವಸ್ಥೆ
*  ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ಪ್ರತ್ಯೇಕ ಶೌಚಾಲಯ
*  ಶಾಲೆ ಮುಂಭಾಗದಲ್ಲಿ ದೊಡ್ಡ ಆಟದ ಮೈದಾನ
* * *
ಈಗಾಗಲೇ ಮೇಯರ್‌ ಮತ್ತು ನಾನು ಶಾಲೆಯನ್ನು ಪರಿಶೀಲಿಸಿದ್ದೇವೆ. ಬಾಕಿ ಪಾವತಿ ಬಗ್ಗೆ ಶೀಘ್ರ ತೀರ್ಮಾನಿಸಿ ಶಾಲೆಯನ್ನು ಆರಂಭಿಸುತ್ತೇವೆ.
ಎಸ್.ಜಿ. ರವೀಂದ್ರ 
ವಿಶೇಷ ಆಯುಕ್ತರು, ಬಿಬಿಎಂಪಿ (ಶಿಕ್ಷಣ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT