ಕರ್ನಾಟಕ ಶಾಸ್ತ್ರೀಯ ಸಂಗೀತ ವಜ್ರ ಇದ್ದಂತೆ

7
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರೊಂದಿಗೆ ವಿದುಷಿ ನೀಲಾ ಸಂವಾದ

ಕರ್ನಾಟಕ ಶಾಸ್ತ್ರೀಯ ಸಂಗೀತ ವಜ್ರ ಇದ್ದಂತೆ

Published:
Updated:
ಕರ್ನಾಟಕ ಶಾಸ್ತ್ರೀಯ ಸಂಗೀತ ವಜ್ರ ಇದ್ದಂತೆ

ಬೆಂಗಳೂರು: ‘ಕರ್ನಾಟಕ ಶಾಸ್ತ್ರೀಯ ಸಂಗೀತವು ವಜ್ರ ಇದ್ದಂತೆ. ನಿಜವಾದ ಕಲೆ ಇರುವವರು ಮಾತ್ರ ಅದನ್ನು ಪಡೆದುಕೊಳ್ಳುತ್ತಾರೆ’ ಎಂದು ವಿದುಷಿ ನೀಲಾ ರಾಮಗೋಪಾಲ್‌ ಹೇಳಿದರು.

ನೆನಪಿನೋಕುಳಿ ಅಂಗವಾಗಿ ರವೀಂದ್ರ ಕಲಾಕ್ಷೇತ್ರ ಸಾಂಸ್ಕೃತಿಕ ಸಮಿತಿಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಸಂಗೀತ ನಾಟಕ ಅಕಾಡೆಮಿ ಪುರಸ್ಕೃತರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಾರುಕಟ್ಟೆಯಲ್ಲಿ ಸಿಗುವ ಬದನೆಕಾಯಿಯನ್ನು ಯಾರು ಬೇಕಾದರೂ ಖರೀದಿಸಬಹುದು. ಆದರೆ, ವಜ್ರವನ್ನು ಕಡಿಮೆ ಜನ ಖರೀದಿಸುತ್ತಾರೆ. ಅದೇ ರೀತಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರುಶಿಖರದಲ್ಲಿ ಕೆಲವೇ ಮಂದಿ ಕಾಣಿಸುತ್ತಾರೆ. ಇದಕ್ಕಾಗಿ ಹತ್ತಾರು ವರ್ಷಗಳ ಕೃಷಿ ಮಾಡಿರುತ್ತಾರೆ’ ಎಂದರು.

‘ಒಬ್ಬ ಗುರುವಿನ ಬಳಿ ಕನಿಷ್ಠ 10 ವರ್ಷಗಳವರೆಗೆ ಸಂಗೀತವನ್ನು ಅಭ್ಯಾಸ ಮಾಡಬೇಕು. ಒಬ್ಬರನ್ನು ಅನುಕರಣೆ ಮಾಡುವುದಕ್ಕಿಂತ ತಮ್ಮದೇ ಶೈಲಿಯನ್ನು ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಸುಗಮ ಸಂಗೀತದ ಕಲಾವಿದೆ ರತ್ನಮಾಲಾ ಪ್ರಕಾಶ್‌ ಮಾತನಾಡಿ, ‘ಈ ಪ್ರಕಾರವನ್ನು ಗುರುತಿಸಿ ಮೊದಲ ಬಾರಿಗೆ ಪ್ರಶಸ್ತಿ ನೀಡಲಾಗಿದೆ. ಇದು ನನಗೆ ಸಂದ ಪ್ರಶಸ್ತಿಯಲ್ಲ. ಸುಗಮ ಸಂಗೀತಕ್ಕೆ ಸಿಕ್ಕ ಮನ್ನಣೆ’ ಎಂದರು.

‘ಈ ಕ್ಷೇತ್ರದಲ್ಲಿ ತುಂಬಾ ಪ್ರತಿಭೆಗಳು ಇದ್ದಾರೆ. ಆದರೆ, ಎಲ್ಲರಿಗೂ ಶಾಸ್ತ್ರೀಯ ಸಂಗೀತದ ತಳಪಾಯ ಬೇಕು. ಗುರುವಿನ ಮಾರ್ಗದರ್ಶನ ಪಡೆದು, ಮತ್ತಷ್ಟು ಕರಗತ ಮಾಡಿಕೊಂಡು ಹಾಡಬೇಕು’ ಎಂದು ಸಲಹೆ ನೀಡಿದರು.

ಸೂತ್ರದ ಬೊಂಬೆಯಾಟದ ಕಲಾವಿದ ದತ್ತಾತ್ರಯ ಅರಳಿಕಟ್ಟೆ ಮಾತನಾಡಿ, ‘ಸೂತ್ರದ ಬೊಂಬೆಯಾಟವನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಖುಷಿಯಾಗಿದೆ. ಈ ಕ್ಷೇತ್ರದಲ್ಲಿ ಮತ್ತಷ್ಟು ಕೆಲಸ ಮಾಡಲು ಹುಮ್ಮಸ್ಸು ಬಂದಿದೆ’ ಎಂದರು.

‘ಬೊಂಬೆಯಾಟದ ಕಲಾವಿದರಿಗೆ ವಿದ್ಯಾಭ್ಯಾಸ ಕಡಿಮೆ. ಇದರಿಂದ ಹೊಸತನವನ್ನು ರೂಢಿಸಿಕೊಂಡು ಪ್ರದರ್ಶನ ನೀಡುತ್ತಿಲ್ಲ. ಆದರೆ, ನಾನು ಸೂತ್ರದಬೊಂಬೆಯಾಟಕ್ಕೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿದ್ದೇನೆ. ಇದರಿಂದ ಪ್ರೇಕ್ಷಕರ ಮನಗೆಲ್ಲುವುದು ಸಾಧ್ಯವಾಗಿದೆ’ ಎಂದು ತಿಳಿಸಿದರು.

‘ಯಾವುದೇ ಕಲಾ ಪ್ರಕಾರದ ಮೂಲ ಸತ್ವ ಅಧ್ಯಾತ್ಮ. ಜನರಂಜನೆ, ಮನರಂಜನೆ, ಆತ್ಮರಂಜನೆ ಮಾಡುವುದು ಕಲೆಯ ಉದ್ದೇಶವಾಗಿದೆ’ ಎಂದರು.

****

‘ಕಲಾವಿದರಿಗೆ ಮನ್ನಣೆ’

ಸಂವಾದವನ್ನು ನಡೆಸಿಕೊಟ್ಟ ವೀಣಾ ವಾದಕಿ ಸುಮಾ ಸುಧೀಂದ್ರ ಮಾತನಾಡಿ, ‘ಸಂಗೀತ ನಾಟಕ ಅಕಾಡೆಮಿಯು 1952ರಲ್ಲಿ ಸ್ಥಾಪನೆಯಾದರೂ 2000ರವರೆಗೆ ರಾಜ್ಯದ ಸಂಗೀತಗಾರರಿಗೆ ಪ್ರಶಸ್ತಿಗಳು ಬಂದಿದ್ದು ಕಡಿಮೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಪ್ರಶಸ್ತಿಗಳು ಸಿಗುತ್ತಿವೆ. ಇದಕ್ಕೆ ಕಾರಣ, ಅಕಾಡೆಮಿಯ ಕಾರ್ಯಕಾರಿ ಮಂಡಳಿಯಲ್ಲಿ ರಾಜ್ಯದ ಪ್ರತಿನಿಧಿಗಳು ಇದ್ದಾರೆ. ಅವರು ಪ್ರತಿಭೆಗಳನ್ನು ಗುರುತಿಸುತ್ತಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry