ಗಬ್ಬೆದ್ದು ನಾರುತ್ತಿದೆ ಮಾರುಕಟ್ಟೆ ಸಂಕೀರ್ಣ

7

ಗಬ್ಬೆದ್ದು ನಾರುತ್ತಿದೆ ಮಾರುಕಟ್ಟೆ ಸಂಕೀರ್ಣ

Published:
Updated:
ಗಬ್ಬೆದ್ದು ನಾರುತ್ತಿದೆ ಮಾರುಕಟ್ಟೆ ಸಂಕೀರ್ಣ

ಚಿಕ್ಕಬಳ್ಳಾಪುರ: ಬಾಗಿಲಲ್ಲೆ ಇಲಿ, ಹೆಗ್ಗಣ ಗಳು ತೋಡಿದ ಬಿಲ. ದುರ್ವಾಸನೆ ಹೊರಡಿಸುವ ಶೌಚಾಲಯ, ಸಾರ್ವ ಜನಿಕ ಶೌಚಾಲಯವಾದ ಒಳಾವರಣ, ಅಲ್ಲಲ್ಲಿ ಬಿದ್ದ ಮದ್ಯದ ಬಾಟಲಿಗಳು, ಅರೆ ತೆರೆದ ಬಾಗಿಲುಗಳ ಸಂದಿಯಲ್ಲಿ ಇಣುಕಿ ನೋಡಿದರೆ ಅಸಹ್ಯ ಹುಟ್ಟಿಸುವ ಗಲೀಜು... ಇದು ಭುವನೇಶ್ವರಿ ವೃತ್ತದ ಲ್ಲಿರುವ ನಗರಸಭೆಯ ಮಿನಿ ತರಕಾರಿ ಮಾರುಕಟ್ಟೆ ಸಂಕೀರ್ಣದ ಸಮಸ್ಯೆಗಳು.

‘ರಾಜ್ಯ ಹಣಕಾಸು ನಿಗಮ’ (ಎಸ್ಎಫ್‌ಸಿ) ಮತ್ತು ‘ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣ ಅಭಿವೃದ್ಧಿ ಯೋಜನೆ’ (ಸಿಎಂಎಸ್‌ಎಂಟಿಡಿಪಿ) ಅನುದಾನಗಳಡಿ 2009–10ನೇ ಸಾಲಿನಲ್ಲಿ ನಿರ್ಮಿಸಿದ ಈ ಮಾರುಕಟ್ಟೆ ಸಂಕೀರ್ಣದ ಸದ್ಯದ ಸ್ಥಿತಿ ‘ಕೇಳುವವರಿಲ್ಲದೆ ಮನೆ ಹಾಳು ಬಿತ್ತು’ ಎನ್ನುವಂತಾಗಿದೆ. ನಗರಸಭೆಯ ಎದುರಿನಲ್ಲಿಯೇ ಇರುವ ಮಾರುಕಟ್ಟೆಗೆ ಇಂತಹದೊಂದು ದುರ್ಗತಿ ಒದಗಿರುವುದು ಸ್ಥಳೀಯ ಆಡಳಿತಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಎರಡು ಮಹಡಿಯ ಮಾರುಕಟ್ಟೆಯಲ್ಲಿ ನೆಲ ಮಹಡಿ ಸೇರಿ ಪ್ರತಿಯೊಂದರಲ್ಲಿ ತಲಾ 9ರಂತೆ ಒಟ್ಟು 27 ಮಳಿಗೆಗಳಿವೆ. ನೆಲ ಮಹಡಿಯಲ್ಲಿ, 7 ಎರಡನೇ ಮಹಡಿಯಲ್ಲಿ 3 ಮಳಿಗೆ ಗಳು ಮಾತ್ರ ಹರಾಜಾಗಿವೆ.  ಒಟ್ಟು 17 ಮಳಿಗೆಗಳು ಹಾಳು ಬಿದ್ದ ಸ್ಥಿತಿಯಲ್ಲಿವೆ.

ಹರಾಜಾಗದ ಮಳಿಗೆಗಳ ಬಾಗಿಲುಗಳಿಗೆ ಬೀಗ ಹಾಕಿಲ್ಲ. ಹೀಗಾಗಿ ಬಾಗಿಲು ತೆರೆದುಕೊಂಡಿರುವ ಮಳಿಗೆಗಳ ಒಳಗೆ ಕಸದ ರಾಶಿ ಸಂಗ್ರಹವಾಗುತ್ತಿದೆ. ಅಲ್ಲಲ್ಲಿ ಮದ್ಯಪಾನ ಮಾಡಿರುವ ಕುರುಹುಗಳು ಕಾಣುತ್ತವೆ. ಇಡೀ ಮಾರುಕಟ್ಟೆ ಸಂಕೀರ್ಣಕ್ಕೆ ಒಂದೇ ಒಂದು ಶೌಚಾಲಯವಿದೆ. ಅದು ಕೂಡ ಗಬ್ಬೆದ್ದು ನಾರುತ್ತಿದೆ.

ಎರಡನೇ ಮಹಡಿಯಲ್ಲಿ ಮೂರು ಮಳಿಗೆಗಳನ್ನು ಬಾಡಿಗೆ ಪಡೆದಿರುವ ‘ಟೆಂಕರ್ಸ್‌ ಲೇಡಿಸ್‌ ಡ್ರೆಸ್‌ ಮೇಕರ್ಸ್‌’ ಮಳಿಗೆಯ ಮಾಲೀಕ ಮುರಳಿ ಅವರು ಕಾರ್ಮಿಕರ ಅನುಕೂಲಕ್ಕಾಗಿ ಚಾವಣಿ ಯಲ್ಲಿ ಸ್ವಂತ ಖರ್ಚಿನಲ್ಲಿ ಹೊಸದಾಗಿ ಶೌಚಾಲಯ ನಿರ್ಮಿಸಿದ್ದಾರೆ.

ಸಂಕೀರ್ಣದ ಸ್ವಚ್ಛತೆ ಕಾಪಾಡಬೇಕಾದ ನಗರಸಭೆ ಆರೋಗ್ಯ ಶಾಖೆಯ ಸಿಬ್ಬಂದಿ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎನ್ನುವುದು  ಜನರ ಆರೋಪ. ನಗರಸಭೆಯ ಎದುರಿನಲ್ಲಿಯೇ ಕೂಗಳತೆಯಲ್ಲಿರುವ ಮಾರುಕಟ್ಟೆಯ ಸ್ಥಿತಿ ಹೀಗಿರಬೇಕಾದರೆ ಉಳಿದ ಮಾರುಕಟ್ಟೆಗಳ ಪಾಡೇನು ಎನ್ನುವುದು ಅವರ ಪ್ರಶ್ನೆ.

‘ತರಕಾರಿ ಮಿನಿ ಮಾರುಕಟ್ಟೆ ಕಾಮಗಾರಿ ಕಳಪೆಯಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸದೆಯೇ ಮಳಿಗೆ ಹರಾಜು ಹಾಕಲಾಗಿದೆ.  ನಮಗೆ ಸಾಕಷ್ಟು ಆದಾಯ ಬರಬೇಕು ಅಧಿಕಾರಿಗಳು ಅತ್ತ ಗಮನ ಹರಿಸುತ್ತಿಲ್ಲ’ ಎಂದು ನಗರಸಭೆಯ ಹಿರಿಯ ಸದಸ್ಯ ಎಸ್‌.ಎಂ.ರಫೀಕ್‌ ಬೇಸರ ವ್ಯಕ್ತಪಡಿಸಿದರು.

‘ನಗರಸಭೆಯ ಹೊಸ ಕಟ್ಟಡಗಳನ್ನು ಗುತ್ತಿಗೆದಾರರಿಂದ ಹಸ್ತಾಂತರಿಸಿಕೊಳ್ಳುವ ಎಂಜಿನಿಯರಿಂಗ್ ಶಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅವರು ಪ್ರತಿಯೊಂದು ಕಟ್ಟಡಗಳ ಗುಣಮಟ್ಟ ಮತ್ತು ಸ್ವಚ್ಛತೆಯ ಮೇಲೆ ನಿಗಾ ಇಡಬೇಕು. ಅದು ಅವರ ಕರ್ತವ್ಯ. ಜತೆಗೆ ಕಂದಾಯ ಇಲಾಖೆ ಅಧಿಕಾರಿಗಳು, ಆಯುಕ್ತರ ಜವಾಬ್ದಾರಿ ಕೂಡ ಹೌದು’ ಎನ್ನುತ್ತಾರೆ.

ಬೀದಿ ವ್ಯಾಪಾರಕ್ಕೆ ಕಡಿವಾಣ ಹಾಕದ ನಗರಸಭೆ ಸಂತೆ ಮಾರುಕಟ್ಟೆ ಮತ್ತು ಭುವನೇಶ್ವರ ವೃತ್ತದಲ್ಲಿರುವ ಮಾರುಕಟ್ಟೆ ಸಂಕೀರ್ಣಗಳ ಮಳಿಗೆಗಳನ್ನು ಪದೇ ಪದೇ ಹರಾಜು ಹಾಕಲು ಪ್ರಯತ್ನಿಸುತ್ತಲೇ ಇದೆ. ಬಾಡಿಗೆದಾರರು ಮಾತ್ರ ಮುಂದೆ ಬರುತ್ತಿಲ್ಲ. ನಗರಸಭೆ ಮಳಿಗೆಗಳ ಹರಾಜಿನ ಸದ್ಯದ ಸ್ಥಿತಿ ‘ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು’ ಎಂಬಂತಾಗಿದೆ.

ಎರಡು ಮಾರುಕಟ್ಟೆ ಸಂಕೀರ್ಣಗಳಲ್ಲಿ ಇರುವ 125 ಮಳಿಗೆಗಳನ್ನು ಹರಾಜು ಹಾಕಲು ನಗರಸಭೆ ಕಳೆದ ಐದಾರು ವರ್ಷಗಳಲ್ಲಿ ಈವರೆಗೆ 11 ಬಾರಿ ಹರಾಜು ಪ್ರಕ್ರಿಯೆ ನಡೆಸಿದೆ. ಆದರೆ 56 ಮಳಿಗೆಗಳಿಗೆ ಮಾತ್ರ ಬಾಡಿಗೆದಾರರು ಬಂದಿದ್ದಾರೆ. 69 ಮಳಿಗೆಗಳು ದೂಳು ತಿನ್ನುತ್ತಿವೆ.

‘ನಗರದಲ್ಲಿ ಮಿತಿ ಮೀರಿ ಬೆಳೆಯುತ್ತಿರುವ ರಸ್ತೆ ಬದಿ ವ್ಯಾಪಾರವೇ ನಗರಸಭೆಯ ಬಾಡಿಗೆ ಮಳಿಗೆಗಳಿಗೆ ಕಂಟಕವಾಗುತ್ತಿದೆ. ಇದನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಮಳಿಗೆಗಳಲ್ಲಿಯೇ ವ್ಯಾಪಾರ ಮಾಡಬೇಕು ಎನ್ನುವಂತಹ ಅನಿವಾರ್ಯತೆ ಸೃಷ್ಟಿಸುವವರೆಗೂ ನಗರಸಭೆ ಮಳಿಗೆಗಳಿಗೆ ಬೇಡಿಕೆ ಬರುವುದಿಲ್ಲ’ ಎನ್ನುವುದು ನಗರದ ಅನುಭವಸ್ಥ ವರ್ತಕರ ಅಭಿಪ್ರಾಯ.

ಅಂಕಿ ಅಂಶ

27 ತರಕಾರಿ ಮಿನಿ ಮಾರುಕಟ್ಟೆಯಲ್ಲಿರುವ ಒಟ್ಟು ಮಳಿಗೆಗಳು

10 ಹರಾಜು ಆದ ಮಳಿಗೆಗಳು

17 ಖಾಲಿ ಇರುವ ಮಳಿಗೆಗಳು

* * 

ಮಾರುಕಟ್ಟೆ ಸಂಕೀರ್ಣದ ಒಳಗೆ ಹೋದರೆ ಹೊಟ್ಟೆ ತೊಳೆಸಿದಂತಾಗುತ್ತದೆ ಇಂತಹ ಸ್ಥಿತಿಯಲ್ಲಿ ಯಾವ ವರ್ತಕರು ಬಾಡಿಗೆಗೆ ಮುಂದೆ ಬರುತ್ತಾರೆ.

ಅಶ್ವತ್ಥ್‌, ಸ್ಥಳೀಯ ನಿವಾಸಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry